ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವುದೇ ನಮ್ಮ ಹಬ್ಬಗಳ ವೈಶಿಷ್ಟ್ಯ. ಪ್ರತಿಯೊಂದು ಹಬ್ಬದ ಹಿನ್ನೆಲೆಯಲ್ಲಿಯೂ ಪುರಾಣದ ಒಂದು ಕಥೆ ತಳಕುಹಾಕಿಕೊಂಡಿರುತ್ತದೆ. ದೇಶದ ಉದ್ದಗಲಕ್ಕೂ ಇರುವ ದೇವಾಲಯಗಳು ಹೇಗೆ ಜನರಲ್ಲಿ ಧಾರ್ಮಿಕ ಮನೋಭಾವವನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯೋ ಹಾಗೆಯೇ ಹಬ್ಬಗಳ ಆಚರಣೆಗಳು ನಮ್ಮ ಕೆಲವು ಪರಂಪರಾಗತ ಸಂಪ್ರದಾಯಗಳನ್ನು, ಆ ಮೂಲಕ ಮೈಗೂಡಿಸಿಕೊಂಡಿರುವ ಸಂಸ್ಕೃತಿಯನ್ನು ಪರಿಚಯಿಸುತ್ತಾ, ಬೆಳೆಸುತ್ತಾ ಬರುವುದರೊಂದಿಗೆ ಒಂದು ರೀತಿಯಲ್ಲಿ ಸಾಮಾಜಿಕ ಸಾಮರಸ್ಯವನ್ನು ತರುವ ಕಾರ್ಯವನ್ನೂ ಮಾಡುತ್ತವೆ.
ನವರಾತ್ರಿ ಹಿಂದೂಗಳ ಬಹುದೊಡ್ಡ ಹಬ್ಬಗಳಲ್ಲಿ ಒಂದು. ದೇಶದ ಹಲವು ಭಾಗಗಳಲ್ಲಿ ಬೇರೆ ಬೇರೆ ಹಿನ್ನೆಲೆಗಳೊಂದಿಗೆ ಇದರ ಆಚರಣೆ ನಡೆಯುತ್ತದೆ. ದುಷ್ಟತನದ ಮೇಲೆ ಶಿಷ್ಟತೆಯ ವಿಜಯವನ್ನು ಸಾರುವ ಸಂಕೇತವೇ ಎಲ್ಲದರ ಹಿನ್ನೆಲೆಯೂ ಆಗಿದೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಪ್ರಾರಂಭವಾಗಿ ದಶಮಿಯವರೆಗೆ ಹತ್ತುದಿನಗಳು, ಒಂಬತ್ತು ರಾತ್ರಿ ನಡೆಯುವ ಈ ಉತ್ಸವಕ್ಕೆ ದಸರಾ, ನವರಾತ್ರಿಯೆಂಬ ಹೆಸರುಗಳಿವೆ. ಮೊದಲ ಮೂರು ರಾತ್ರಿಗಳು ಮಹಾಕಾಳಿಗೂ, ಮಧ್ಯದ ಮೂರು ರಾತ್ರಿಗಳು ಮಹಾಲಕ್ಷ್ಮಿಗೂ, ಕೊನೆಯ ಮೂರು ರಾತ್ರಿಗಳು ಮಹಾಸರಸ್ವತಿಗೂ ವಿಶೇಷವಾದ ಪೂಜಾರಾಧನೆಗಳು ಈ ಸಂದರ್ಭದಲ್ಲಿ ಸಲ್ಲುತ್ತವೆ. ಎಲ್ಲವೂ ಆದಿಶಕ್ತಿಯ ಮೂರು ರೂಪಗಳೇ ಆಗಿರುವುದು ಇದರ ವಿಶೇಷ.
ನಮ್ಮ ಪ್ರತಿಯೊಂದು ಹಬ್ಬದ ಆಚರಣೆಯಲ್ಲಿಯೂ ಪ್ರಾದೇಶಿಕ ಭಿನ್ನತೆಯ ವೈಶಿಷ್ಟ್ಯಗಳು ವ್ಯಕ್ತವಾಗುತ್ತವೆ. ಅಂತೆಯೇ ಈ ನವರಾತ್ರಿಯೂ ಕೂಡ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪೌರಾಣಿಕ ಕತೆಗಳನ್ನು ಆಧರಿಸುವುದನ್ನು ಕಾಣುತ್ತೇವೆ. ಪ್ರಮುಖವಾಗಿ ರಾಮಾಯಣ, ಮಹಾಭಾರತದ ಘಟನೆಗಳನ್ನು ಇವು ಆಧರಿಸಿಕೊಂಡಿವೆ. 10ನೇ ದಿನವಾದ ವಿಜಯದಶಮಿಯಂದು ಕರೆಯುವ ದಿನವು ರಾವಣನನ್ನು ರಾಮನು ವಧೆ ಮಾಡಿದ ಸಂದರ್ಭ ಮತ್ತು ಗೋಗ್ರಹಣದಲ್ಲಿ ಅರ್ಜುನನು ಕೌರವ ಸೈನ್ಯವನ್ನು ಹೊಡೆದು ಓಡಿಸಿದ ಸಂದರ್ಭ ಎರಡಕ್ಕೂ ಸಂಕೇತವೆಂದು ಸಂಭ್ರಮದಿಂದ ಆಚರಿಸುವ ವಿಜಯೋತ್ಸವವಾಗಿದೆ.
ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲೆಲ್ಲ ಶ್ರೀರಾಮನ ವಿಜಯಕ್ಕೆ ಪ್ರಾಧಾನ್ಯ ನೀಡಿ ರಾವಣ ಸಂಹಾರದ ಸಂಗತಿಯನ್ನು ರಾಮಲೀಲಾ ಎಂಬ ಹೆಸರಿನೊಂದಿಗೆ ಈ ನವರಾತ್ರಿಯ ಸಂದರ್ಭದಲ್ಲಿ ದಶಹರ ಎಂದು ಹತ್ತು ತಲೆಯ ರಾವಣನ ವಧೆಯಾಗುವುದನ್ನು ನಾಟಕಾದಿಗಳ ಮೂಲಕ ಕಂಡು ಸಂಭ್ರಮಿಸಿ ಆಚರಣೆ ಮಾಡುತ್ತಾರೆ. ಬಂಗಾಳದಲ್ಲಿ ಕಾಳಿಮಾತೆಯ (ದುರ್ಗಾಮಾತೆಯ) ಆರಾಧನೆಯನ್ನು ಒಂಬತ್ತು ರಾತ್ರಿಗಳು ಬಹಳ ನಿಷ್ಠೆಯಿಂದ ಮಾಡುತ್ತಾರೆ. ಸಾತ್ವಿಕ ಆಹಾರದ ಸೇವನೆ ಅಥವಾ ಕೆಲವರು ಕೇವಲ ದ್ರವಾಹಾರ ಮಾತ್ರ ಸೇವಿಸುತ್ತಾರೆ.
ಕರ್ನಾಟಕದಲ್ಲಿ ದಸರಾ ಹಬ್ಬವನ್ನು ನಾಡಹಬ್ಬವೆಂದು ಪರಿಗಣಿಸಲಾಗಿದೆ. ವಿಜಯನಗರದ ಅರಸರ ಕಾಲದಿಂದಲೇ ಪ್ರಾರಂಭವಾದ ಈ ಹಬ್ಬದ ಆಚರಣೆಯನ್ನು ಮೈಸೂರ ಅರಸರು ಮುಂದುವರೆಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಂತೂ ಈ ವಿಜಯದಶಮಿ ಉತ್ಸವ ಜಗದ್ವಿಖ್ಯಾತವಾಯಿತು. ದೇಶ, ವಿದೇಶಗಳಿಂದ ಪ್ರವಾಸಿಗರು ಬಂದು ದಸರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಾಡಿಕೆಯಾಯಿತು. ಒಂಬತ್ತು ದಿನಗಳು ಅರಮನೆಯು ವಿಶೇಷವಾಗಿ ಅಲಂಕಾರಗೊಂಡು ಸಾವಿರಾರು ದೀಪಗಳು ಝಗಮಗಿಸುತ್ತಾ ಪ್ರವಾಸಿಗರಿಗೆ ಅತ್ಯಾನಂದ ಉಂಟುಮಾಡುತ್ತದೆ. ರಾಜರ ಒಡ್ಡೋಲಗ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜ್ಯದ ಹಾಗೂ ಹೊರರಾಜ್ಯಗಳ ವಿದ್ವಾಂಸರಿಗೆ ಕಲಾವಿದರಿಗೆ ಆಹ್ವಾನವಿತ್ತು ಅವಕಾಶಗಳನ್ನು ನೀಡುವುದು, ವಿವಿಧ ರೀತಿಯ ಕ್ರೀಡಾಸ್ಪರ್ಧೆಗಳು, ಮಲ್ಲಯುದ್ಧದ ಸ್ಪರ್ಧೆ ಮುಂತಾದ ಹತ್ತಾರು ಚಟುವಟಿಕೆಗಳು ನಡೆಯುತ್ತವೆ. ಒಂಬತ್ತನೆಯ ದಿನ ಅರಮನೆಯ ಆಯುಧಶಾಲೆಯಲ್ಲಿ ಆಯುಧಗಳನ್ನು ಪೂಜಿಸಿ, ವಿಜಯದಶಮಿಯಂದು ಮಹಾರಾಜರು ಆನೆಯ ಮೇಲೆ ಕುಳಿತು, ಜಂಬೂಸವಾರಿ ಹೊರಟು ಬನ್ನಿ ಮಂಟಪವನ್ನು ತಲುಪಿ ಅಲ್ಲಿನ ಬನ್ನಿ ಮರವನ್ನು ಪೂಜಿಸುವ ಸಂಪ್ರದಾಯದ ಆಚರಣೆಯಂತೂ ಜಗತ್ಪ್ರಸಿದ್ದವೇ ಎನ್ನಬಹುದು. ಜಂಬೊ ಎಂಬ ಶಬ್ದಕ್ಕೆ ಇಂಗ್ಲೀಷಿನಲ್ಲಿ ಆನೆ ಎಂಬ ಅರ್ಥವೂ ಇರುವುದರಿಂದ ಜಂಬೂಸವಾರಿ ಎಂಬ ಹೆಸರು ಬಂದಿರಬಹುದು. ಆ ಸಮಯದಲ್ಲಿ ಮೆರವಣಿಗೆಯಲ್ಲಿ ನಾಡಿನೆಲ್ಲೆಡೆಯಿಂದ ಅಲ್ಲಿನ ವೈಶಿಷ್ಟ್ಯವನ್ನು (ಐತಿಹಾಸಿಕ, ಸಾಂಸ್ಕೃತಿಕ ಇತ್ಯಾದಿ) ಸಾರುವ ಸ್ತಬ್ಧ ಚಿತ್ರಗಳು, ಸೈನ್ಯದ ವಿವಿಧ ಪ್ರಕಾರಗಳು, ವಿದ್ಯಾರ್ಥಿ ವೃಂದದ ಎನ್.ಸಿ.ಸಿ, ಸ್ಕೌಟ್ಸ್, ಗೈಡ್ಸ್ ತಂಡಗಳು ಎಲ್ಲವೂ ಸಾಗುತ್ತಾ ಆ ವರ್ಣರಂಜಿತ ದೃಶ್ಯ ಕಣ್ಣಿಗೆ ಹಬ್ಬವನ್ನೇ ಉಂಟುಮಾಡುತ್ತದೆ.
ನಾಡರಸರ ಈ ವೈಭವ ಮಾತ್ರವಲ್ಲದೆ ನವರಾತ್ರಿಯ ಮತ್ತೊಂದು ಪ್ರಮುಖ ಆಕರ್ಷಕ ಸಂಪ್ರದಾಯವೆಂದರೆ ಮನೆ ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಒಂಬತ್ತು ದಿನಗಳು ಸಡಗರ ಪಡುವುದು, ರಾಮಾಯಣ, ಮಹಾಭಾರತ, ಭಾಗವತದ ಕಥೆಗಳನ್ನು ಆಧರಿಸಿ ಗೊಂಬೆಗಳನ್ನು ಅಲಂಕರಿಸಿ ಮೆಟ್ಟಿಲು ಮೆಟ್ಟಿಲುಗಳಲ್ಲಿ ಜೋಡಿಸಿ, ಪೂಜಿಸುವುದಲ್ಲದೆ ವಿಶೇಷವಾಗಿ ಹೆಣ್ಣುಮಕ್ಕಳು ಹೊಸ ಬಟ್ಟೆ ಧರಿಸಿ ಪರಸ್ಪರರ ಮನೆಗಳಿಗೆ ಹೋಗುವುದು, ಅಲ್ಲಿನ ಗೊಂಬೆಗಳನ್ನು ಕಂಡು ಆನಂದಿಸುತ್ತಾ ಗೆಳತಿಯರನ್ನು ತಮ್ಮ ಮನೆಗೆ ಕರೆತರುವುದು ವಿಶೇಷವಾಗಿ ಮಾಡಿದ ತಿಂಡಿಯ ಬಾಗಿನಗಳನ್ನು ವಿನಿಮಯ ಮಾಡುತ್ತಾ ಸಂಭ್ರಮಿಸುವುದು ಎಲ್ಲವೂ ನವರಾತ್ರಿಯ ವಿಶೇಷವೇ.
ಆಂಧ್ರ, ತಮಿಳುನಾಡಿನಲ್ಲೂ ಕೂಡ ಗೊಂಬೆ ಕೂರಿಸುವ ಸಂಪ್ರದಾಯವಿದೆ. ಬೊಮ್ಮಕೋಲು, ಗೊಲ್ಲು ಎಂದು ತಮಿಳುನಾಡಿನಲ್ಲಿ ಕರೆದರೆ ಆಂಧ್ರದಲ್ಲಿ ಬೊಮ್ಮಲಕೊಲುವು ಎನ್ನುತ್ತಾರೆ. ಗುಜರಾತಿನಲ್ಲಿ ಒಂಬತ್ತೂ ದಿನಗಳು ನೃತ್ಯೋತ್ಸವ ನಡೆಸುತ್ತಾರೆ.
ನವರಾತ್ರಿಯ ಒಂಬತ್ತು ದಿನಗಳು ಕೆಲವು ಕಡೆ ದುರ್ಗಾ ಸಪ್ತಶತಿಯ ಪಾರಾಯಣವೂ ಮತ್ತೆ ಕೆಲವು ಕಡೆ ರಾಮಾಯಣದ ಪಾರಾಯಣವೂ, ನಡೆಯುತ್ತದೆ. ಮೈಸೂರಿನಲ್ಲಿ ನಡೆಯುವ ಜಂಬೂಸವಾರಿಯಲ್ಲಿ ಈಗ (ಅಂದರೆ ಮಹಾರಾಜರು ಮೆರವಣಿಗೆಯಲ್ಲಿ ಸಾಗುತ್ತಿದ್ದುದಕ್ಕೆ ಬದಲಾಗಿ) ಕನ್ನಡ ಭುವನೇಶ್ವರಿಯನ್ನು ಕೊಂಡೊಯ್ಯುವ ಪರಿಪಾಠವಿದ್ದು ನಾಡಹಬ್ಬದಲ್ಲಿ ನಾಡದೇವಿಯ ಉತ್ಸವವೆಂದು ಆಚರಿಸಲಾಗುತ್ತದೆ. ಚಾಮುಂಡೇಶ್ವರಿಯು ಮಹಿಷಾಸುರನೆಂಬ ದೈತ್ಯನನ್ನು ಸಂಹಾರ ಮಾಡಿ ದುಷ್ಟಶಕ್ತಿಯನ್ನು ನಾಶಮಾಡಿದ ದಿನವೆಂದೂ ಕೂಡ ಈ ವಿಜಯದಶಮಿಯ ದಿನವನ್ನು ಗುರುತಿಸಲಾಗುತ್ತದೆ. ಆದಿಶಕ್ತಿ, ಜಗನ್ಮಾತೆಯ ಎಲ್ಲ ಮಂದಿರಗಳಲ್ಲಿ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ನಡೆಯುತ್ತದೆ. ಶೃಂಗೇರಿ, ಕೊಲ್ಲೂರು, ಕೊಲ್ಲಾಪುರಗಳಲ್ಲಿ ವಿಶೇಷವಾಗಿ ಸಂಗೀತ, ಪ್ರವಚನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ನವರಾತ್ರಿಯ ಹಬ್ಬವೆಂದರೆ ಧಾರ್ಮಿಕ, ಸಾಂಸ್ಕೃತಿಕ ಉತ್ಸವಗಳ ಸಮ್ಮಿಲನ. ನಾಡಹಬ್ಬವೆಂದು ಶಾಲಾಕಾಲೇಜುಗಳಿಗೆ ರಜೆಯ ಸಂಭ್ರಮ. ಗೊಂಬೆಗಳ ಹಬ್ಬವೆಂದು ಹೆಣ್ಣುಮಕ್ಕಳಿಗೆ ಸಡಗರ. ತಮ್ಮಲ್ಲಿನ ಕಲಾಪ್ರತಿಭೆಯನ್ನು ಗೊಂಬೆಗಳನ್ನು ಅಲಂಕರಿಸಿ, ಅಣಿಗೊಳಿಸಿ ಪ್ರದರ್ಶಿಸಲು ಮಹಿಳೆಯರ ಉತ್ಸಾಹ. ಮನದ ಕಲ್ಮಶಗಳನ್ನು ತೊಳೆದು ಶುದ್ಧಿಗೊಳಿಸಿ ಸಂಸ್ಕಾರ ಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುವ ಈ ನವರಾತ್ರಿ ಹಬ್ಬದ ಕಾಲ ಪ್ರಾಕೃತಿಕವಾಗಿ ಕೂಡ ಶ್ರೀಮಂತಿಕೆಯಿಂದ ಕೂಡಿರುವಂತಹುದು. ಮಳೆ, ಬೆಳೆ ಸಮೃದ್ಧವಾಗಿರುತ್ತ ರೈತಾಪಿ ಜನರೂ ಸಹ ಉಲ್ಲಾಸದಿಂದ ಹಬ್ಬವನ್ನು ಆಚರಿಸುವ ಕಾಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.