ಪಣಜಿ: ಗಾಂಧಿ ಜಯಂತಿಯ ಅಕ್ಟೋಬರ್ 2 ರಿಂದ ಗೋವಾದ ಸರ್ಕಾರಿ ಕಚೇರಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಕ್ಕೊಳಪಡಿಸಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಆಡಳಿತ ಗುರುವಾರ ಸುತ್ತೋಲೆಯನ್ನು ಹೊರಡಿಸಿದೆ.
ಸರ್ಕಾರಿ ಕಛೇರಿಯ ಆವರಣ, ಕ್ಯಾಂಟೀನ್ ಮತ್ತು ಕಾರ್ಯಕ್ರಮಗಳಲ್ಲಿ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ತಟ್ಟೆಗಳು ಮತ್ತು ಕಪ್ಗಳನ್ನು ಬಳಸುವುದನ್ನು ಅಕ್ಟೋಬರ್ 2 ರಿಂದ ನಿಷೇಧಿಸಲಾಗುತ್ತಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಗೋವಾ ಸರ್ಕಾರದ ಪ್ರಧಾನ ಆಡಳಿತ ಇಲಾಖೆ ಈ ಸುತ್ತೋಲೆಯನ್ನು ಹೊರಡಿಸಿದ್ದು, ಸರ್ಕಾರಿ ಆವರಣದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕೆಂದು ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆಯನ್ನು ನೀಡಲಾಗಿದೆ,
“ಸರ್ಕಾರಿ ಕಚೇರಿಗಳಲ್ಲಿನ ಸಭೆಗಳು ಮತ್ತು ಕಾರ್ಯಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು, ತಟ್ಟೆಗಳನ್ನು, ಲೋಟಗಳನ್ನು ಬಳಸುವುದನ್ನು ಅಕ್ಟೋಬರ್ 2 ರಿಂದ ನಿಷೇಧ ಮಾಡಲು ಗೋವಾ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಎಲ್ಲಾ ಕಚೇರಿಗಳಿಗೂ ಏಕ-ಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳ, ತಟ್ಟೆಗಳ ಬಳಕೆಯನ್ನು ನಿಲ್ಲಿಸುವಂತೆ ನಿರ್ದೇಶಿಸಲಾಗಿದೆ. ಕಚೇರಿಗಳ ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ನೀರು ಮತ್ತು ಇತರ ವಸ್ತುಗಳನ್ನು ಒದಗಿಸಲು ಪರಿಸರ ಸ್ನೇಹಿ ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸುವಂತೆ ಸೂಚಿಸಲಾಗಿದೆ” ಎಂದು ಪ್ರಧಾನ ಆಡಳಿತ ಇಲಾಖೆಯ ಕಾರ್ಯದರ್ಶಿ ಶ್ರೀಪಾದ್ ಅರ್ಲೆಕರ್ ಅವರು ಸಹಿ ಮಾಡಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಏಕ-ಬಳಕೆಯ ಪ್ಲಾಸ್ಟಿಕ್ನ ಅಪಾಯಗಳ ಬಗ್ಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಪ್ರತಿಪಾದಿಸುತ್ತಲೇ ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಗೋವಾ ಸರ್ಕಾರ ಮಹತ್ವದ ಹೆಜ್ಜೆಯನ್ನೇ ಮುಂದಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.