ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬುಧವಾರ ಶ್ರೀನಗರಕ್ಕೆ ತೆರಳಿದ್ದಾರೆ. ಮೂಲಗಳ ಪ್ರಕಾರ ಅಲ್ಲಿ ಅವರು ಎರಡು ಮೂರು ದಿನಗಳ ಕಾಲ ತಂಗಲಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಅವರು ಜಮ್ಮು ಕಾಶ್ಮೀರಕ್ಕೆ ನೀಡುತ್ತಿರುವ ಎರಡನೆಯ ಭೇಟಿ ಇದಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮೋದಿಯವರು ಭಾಷಣವನ್ನು ಮಾಡುವುದಕ್ಕೂ ಮುನ್ನ ಕಣಿವೆಯ ತಳಮಟ್ಟದ ಸ್ಥಿತಿಗತಿಯ ಬಗ್ಗೆ ಅವರಿಗೆ ವರದಿಯನ್ನು ನೀಡುವ ಸಲುವಾಗಿ ದೋವಲ್ ಶ್ರೀನಗರಕ್ಕೆ ಭೇಟಿಯನ್ನು ನೀಡಿದ್ದಾರೆ ಎನ್ನಲಾಗಿದೆ.
ಜಮ್ಮು ಕಾಶ್ಮೀರದಲ್ಲಿನ ನಿರಂತರ ಬೆಳವಣಿಗೆಯ ಹಿನ್ನಲೆಯಲ್ಲಿ ಅಜಿತ್ ದೋವಲ್ ಅವರು ಮೋದಿಯವರೊಂದಿಗೆ ಅಮೆರಿಕಾಗೆ ಭೇಟಿಯನ್ನು ನೀಡಿಲ್ಲ ಎಂದು ಹೇಳಲಾಗಿದೆ. ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿ ಬೆಳವಣಿಗೆಯ ಮೇಲೂ ಕಣ್ಣಿಡುವ ಜವಾಬ್ದಾರಿಯನ್ನು ದೋವಲ್ ಅವರಿಗೆ ವಹಿಸಲಾಗಿದೆ.
ದೋವಲ್ ಅವರು ಕೇವಲ ಭದ್ರತಾ ಪರಿಸ್ಥಿತಿಗಳನ್ನು ಅವಲೋಕನ ಮಾಡುತ್ತಿಲ್ಲ, ಅಲ್ಲಿನ ರಾಜಕೀಯ ಬೆಳವಣಿಗೆಯ ಬಗ್ಗೆಯೂ ಅವರು ಪರಿಶೀಲನೆಗಳನ್ನು ನಡೆಸುತ್ತಿದ್ದಾರೆ.
ಗಡಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆಯ ಮಟ್ಟದಲ್ಲಿ ಹೆಚ್ಚಳವಾಗುತ್ತಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ, ದೋವಲ್ ಅವರು ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭದ್ರತಾ ಗ್ರಿಡ್ನಲ್ಲಿನ ಅಂತರವನ್ನು ಹೇಗೆ ಮುಚ್ಚಬೇಕು ಎಂಬುದರ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ.
ಕಳೆದ ಎರಡು ತಿಂಗಳಲ್ಲಿ 60 ಭಯೋತ್ಪಾದಕರು ಭಾರತಕ್ಕೆ ನುಸುಳಲು ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವರ್ಷದ ಮೊದಲ ಏಳು ತಿಂಗಳಲ್ಲಿ ಕೇವಲ 35 ಭಯೋತ್ಪಾದಕರಿಗೆ ಮಾತ್ರ ಭಾರತೀಯ ಭೂಪ್ರದೇಶಕ್ಕೆ ನುಸುಳಲು ಸಾಧ್ಯವಾಗಿತ್ತು.
ಆಗಸ್ಟ್ 5 ರ ನಂತರ ದೋವಲ್ ಅವರು ಶ್ರೀನಗರಕ್ಕೆ ನೀಡಿದ ಎರಡನೇ ಭೇಟಿ ಇದಾಗಿದೆ. ಆಗಸ್ಟ್ 5ರಂದು ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿತು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.
ದೋವಲ್ ತಮ್ಮ ಮೊದಲ ಭೇಟಿಯ ಸಮಯದಲ್ಲಿ, ಕಣಿವೆಯಲ್ಲಿ 11 ದಿನಗಳ ಕಾಲ ತಂಗಿದ್ದರು. ಆ ಅವಧಿಯಲ್ಲಿ ಯಾವುದೇ ಹಿಂಸಾಚಾರ ನಡೆಯದಂತೆ ಅವರು ಖಚಿತಪಡಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.