ಕಾರ್ಕಳ: ಪೆರ್ವಾಜೆ ಮಹಾಲಿಂಗೇಶ್ವರ ದೇವಳದಲ್ಲಿ ಎ.6ರಿಂದ ಎ.16ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.
ಶಿಲಾಮಯ ಗರ್ಭಗೃಹ, ಸುತ್ತುಪೌಳಿಯ ನೂತನ ದೇಗುಲ ಸಮರ್ಪಣೆ, ಪುನರ್ಪ್ರತಿಷ್ಠೆ, ಅಷ್ಟಬಂಧ ಸಹಸ್ರಕಲಶಾಭಿಷೇಕ ಸಹಿತ ಬ್ರಹ್ಮಕಲಶ ಪುಣ್ಯೋತ್ಸವ, ಧಾರ್ಮಿಕ ಸಭಾಭವನದ ಉದ್ಘಾಟನೆ ಹಾಗೂ ವಾರ್ಷೀಕ ಜಾತ್ರಾ ಮಹೋತ್ಸವ ನಡೆಯಲಿದೆ. ಎ.8 ರಂದು ಪುನರ್ಪ್ರತಿಷ್ಠೆ, ಎ.11ರಂದು ಬ್ರಹ್ಮಕಲಶೋತ್ಸವದ ಜತೆ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಬ್ರಹ್ಮಕಲಶದ ಸಂಕಲ್ಪ:
ಸುಮಾರು ೧೫೦೦ ವರ್ಷಗಳಿಗಿಂತಲೂ ಪುರಾತನವಾಗಿರುವ ಪೆರ್ವಾಜೆ ಮಹಾಲಿಂಗೇಶ್ವರ ದೇವಳವು ಉಡುಪಿ ಜಿಲ್ಲೆಯ ಕಾರ್ಕಳ ಕಸ್ಬಾ ಗ್ರಾಮದಲ್ಲಿ ಕಾರ್ಕಳ ಪೇಟೆಯಿಂದ 1ಮೈಲುಗಳಷ್ಟು ದೂರದಲ್ಲಿರುವ ಪುಣ್ಯಕ್ಷೇತ್ರವಾಗಿದ್ದು, ನಿತ್ಯವೂ ಶಿವನ ಆರಾಧನೆಯಾಗುತ್ತಿದೆ. ದೇವಳದ ಎಡಭಾಗ ಹಾಗೂ ಬಲಭಾಗದಲ್ಲಿ ನಾಗಸಾನಿಧ್ಯ, ರಕ್ತೇಶ್ವರಿ ಹಾಗೂ ಪರಿವಾರ ದೈವಗಳು ಮತ್ತು ಕೊಡಮಣಿತ್ತಾಯ ಕುಕ್ಕಿನಂತಾಯ ಮತ್ತು ಬೈದರ್ಕಳ ದೇವಗಳು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿದೆ.
ಭಕ್ತರ ಸಕಲ ಅಭಿಷ್ಟಗಳನ್ನು ಪೂರೈಸುತ್ತಾ ಊರ ಮತ್ತು ಪರವೂರಿನ ಅಸಂಖ್ಯಾತ ಭಕ್ತರ ಭಕ್ತಿಯ ನೆಲೆಯಾಗಿರುವ ಈ ಕ್ಷೇತ್ರದಲ್ಲಿ ಉತ್ಸವಾದಿ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗಿದೆ. ಐದು ವರ್ಷಗಳಿಂದ ಪ್ರತಿ ಸೋಮವಾರ ಭಕ್ತರ ನೆರವಿನೊಂದಿಗೆ ಪ್ರಸಾದ ರೂಪದಲ್ಲಿ ಅನ್ನದಾನವನ್ನು ಯಶಸ್ವೀಯಾಗಿ ನೆರವೇರಿಸಲಾಗುತ್ತಿದೆ.
ದೇವಸ್ಥಾನದ ಹಿನ್ನೆಲೆ:
ಸುಮಾರು 1500 ವರ್ಷಗಳ ಹಿಂದೆ ಖರಾಸುರನೆಂಬ(ಖರ ಮಹರ್ಷಿ) ಸನ್ಯಾಸಿಯು ಭಗವಾನ್ ಈಶ್ವರನ ಭಕ್ತನಾಗಿದ್ದು ದೇವರನ್ನು ತನ್ನ ಭಕ್ತಿಯ ತಪಸ್ಸಿನಿಂದ ಒಲಿಸಿ ಈ ಸ್ಥಳದಲ್ಲಿ ಪ್ರತಿಷ್ಠೆ ಮಾಡಿದ್ದನೆಂದೂ ಪ್ರಶ್ನೆಯಿಂದ ತಿಳಿದು ಬಂದಿದೆ.
ದೇವಸ್ಥಾನದ ಪಶ್ಚಿಮ(ವಾಯುವ್ಯ) ಭಾಗವು ಖರ ಮಹರ್ಷಿಯ ತಪೋಭೂಮಿಯಾಗಿತ್ತೆಂದೂ ಈ ಸ್ಥಳದಲ್ಲಿಯೇ ದೇವರ ಪ್ರತಿಷ್ಠಾ ಸಂಕಲ್ಪ ಮಾಡಿರುವುದು, ಇದೇ ಸ್ಥಳದಲ್ಲಿ ಕೆರೆಯೊಂದು ಇತ್ತೆಂದೂ(ಪ್ರಸ್ತುತ ಈ ಕೆರೆ ಪಾಳು ಬಿದ್ದಿದೆ) ಮೂಲಬಿಂಬವು ಇದೇ ಕೆರೆಯಲ್ಲಿ ಇರುವ ಸಾಧ್ಯತೆ ಇರುವುದಾಗಿಯೂ, ಈಗಿರುವ ದೇವರ ಬಿಂಬವು ತದನಂತರ ಪ್ರತಿಷ್ಠೆಯಾಗಿರುವ ಬಿಂಬವಾಗಿರುತ್ತದೆಂದು ತಿಳಿದು ಬಂದಿದೆ. ಪ್ರಸ್ತುತ ದೇವರ ಆಡಳಿತ ಮಂಡಳಿ ಹಾಗೂ ಊರ ಗಣ್ಯರು ಮತ್ತು ಸಹೃದಯ ಭಕ್ತರಲ್ಲಿ, ವಾಸ್ತು ತಜ್ಞರಲ್ಲಿ ಚರ್ಚಿಸಿ ದೇವರ ಗರ್ಭಗುಡಿ, ತೀರ್ಥಮಂಟಪ ಹಾಗೂ ಸುತ್ತುಪೌಳಿಯನ್ನು ಹಿಂದಿನ ವಿನ್ಯಾಸದೊಂದಿಗೆ ಸಂಪೂರ್ಣ ಶಿಲಾಮಯಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.