ದುಬೈ: ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಅಲ್ಲಿ ಹೂಡಿಕೆಯನ್ನು ಮಾಡಲು ಸಾಕಷ್ಟು ಭಾರತೀಯರು ಮುಂದೆ ಬರುತ್ತಿದ್ದಾರೆ. ಅಂತಹವರ ಪೈಕಿ ಕರ್ನಾಟಕದ ಖ್ಯಾತ ಉದ್ಯಮಿ ಬಿ.ಆರ್ ಶೆಟ್ಟಿಯವರೂ ಒಬ್ಬರು. ಕಾಶ್ಮೀರದಲ್ಲಿ ಬೃಹತ್ ಫಿಲ್ಮ್ ಸಿಟಿಯೊಂದನ್ನು ಆರಂಭಿಸಲು ಅವರು ನಿರ್ಧರಿಸಿದ್ದಾರೆ.
ಅರೇಬಿಯನ್ ಬ್ಯುಸಿನೆಸ್ ಎಂಬ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಬಿ.ಆರ್.ಶೆಟ್ಟಿ ಅವರು, ‘ಜಮ್ಮು ಕಾಶ್ಮೀರ ಅತ್ಯಂತ ರಮಣೀಯವಾದ ಪ್ರಾಕೃತಿಕ ಸೌಂದರ್ಯ ತುಂಬಿರುವ ಪ್ರದೇಶ. ಅಲ್ಲಿ ಫಿಲ್ಮ್ ಸಿಟಿಯೊಂದನ್ನು ಆರಂಭಿಸಲು ನಾನು ಬಯಸುತ್ತಿದ್ದೇನೆ. ಇದರಿಂದ ಚಿತ್ರ ನಿರ್ಮಾಣಗಾರರು ಅಲ್ಲಿಗೆ ಬಂದು ಚಿತ್ರಗಳನ್ನು ಚಿತ್ರೀಕರಿಸಬಹುದಾಗಿದೆ. ಇದರಿಂದ ಪ್ರವಾಸೋದ್ಯಮ ಉತ್ತೇಜನದ ಜೊತೆಗೆ ಅಭಿವೃದ್ಧಿಯೂ ನಡೆಯಲಿದೆ” ಎಂದಿದ್ದಾರೆ.
ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಸುಮಾರು 3,000 ಎಕರೆಯಷ್ಟು ಜಾಗದ ಅಗತ್ಯವಿದೆ ಎಂದಿರುವ ಅವರು, ಈಗಾಗಲೇ ಜಾಗ ನೀಡುವ ಆಫರ್ಗಳು ಬಂದಿವೆ’ ಎಂದು ಹೇಳಿದ್ದಾರೆ.
ಆಗಸ್ಟ್ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ 7 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಬಿ.ಆರ್. ಶೆಟ್ಟಿ ಹೇಳಿಕೊಂಡಿದ್ದರು. ಅದರಂತೆ ಇಂದು ಅವರು ಫಿಲ್ಮ್ ಸಿಟಿ ಸ್ಥಾಪನೆಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸಂವಿಧಾನದ 370ನೇ ಮತ್ತು 35ಎ ವಿಧಿ ಕಾಶ್ಮೀರದ ಜನರಿಗೆ ವಿಶೇಷ ಅಧಿಕಾರವನ್ನು ಕಲ್ಪಿಸಿತ್ತು. ಕಾಶ್ಮಿರದ ನಿವಾಸಿಗಳನ್ನು ಹೊರತುಪಡಿಸಿ ಅನ್ಯ ರಾಜ್ಯದವರಿಗೆ ಆಸ್ತಿಗಳನ್ನು ಖರೀದಿಸಲು ಯಾವ ಅವಕಾಶಗಳೂ ಇರಲಿಲ್ಲ. ಆದರೀಗ ಮೋದಿ ಸರ್ಕಾರ ಆ ರಾಜ್ಯದ ವಿಶೇಷಾಧಿಕಾರವನ್ನು ಹಿಂಪಡೆದು, ಅದನ್ನು ಎರಡು ರಾಜ್ಯಗಳಾಗಿ ವಿಭಜನೆ ಮಾಡಿದೆ.
ಸರ್ಕಾರದ ಈ ನಿರ್ಧಾರವು ಆ ರಾಜ್ಯಕ್ಕೆ ಅವಕಾಶಗಳ ಬಾಗಿಲನ್ನೇ ತೆರೆದಿದೆ. ಕರ್ನಾಟಕ, ಮಹಾರಾಷ್ಟ್ರಗಳು ಅಲ್ಲಿ ಹೂಡಿಕೆ ಮಾಡಲು ತುದಿಗಾಗಲಲ್ಲಿ ನಿಂತಿವೆ. ಅನೇಕ ಉದ್ಯಮಿಗಳೂ ಅಲ್ಲಿ ಉದ್ಯಮ ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.