ಕಾರ್ಕಳ: ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡಲಾಗುವ ಎಲ್ಲಾ ರೀತಿಯ ಸೇವೆಗಳನ್ನು ತಾಲೂಕು ಕಚೇರಿ ಕಟ್ಟಡದ ಒಂದೇ ಸೂರಿನಡಿ ಪಡೆಯಲು ಅನುಕೂಲ ಮಾಡಿಕೊಡುವ ಉದ್ದೇಶವನ್ನು ರಾಜ್ಯ ಸರಕಾರ ಹಮ್ಮಿಕೊಂಡಿದ್ದು, ಅದಕ್ಕಾಗಿ ಈ ವರ್ಷ ಜಾರಿಗೆ ತಂದಿರುವ ಹೊಸ ಯೋಜನೆ ಅದು ’ಪಡಸಾಲೆ’.
ಸಾರ್ವಜನಿಕರು ವಿವಿಧ ಉದ್ದೇಶಗಳಿಗಾಗಿ ತಾಲೂಕು ಕಚೇರಿಯಿಂದ ಪಡೆಯಬೇಕಾಗಿರುವ ದಾಖಲೆಗಳಿಗಾಗಿ ತಾಲೂಕು ಕಚೇರಿಯಲ್ಲಿ ವಿವಿಧ ಶಾಖೆಗಳಿಗೆ ಅಲೆದಾಡಬೇಕಾಗಿರುವುದು ಅನಿವಾರ್ಯ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಆಹಾರ ಶಾಖೆಗೆ, ದೃಢೀಕೃತ ನಕಲಿಗಾಗಿ ದಾಖಲೆ ಕೊಠಡಿಗೆ, ಪಹಣಿ ಪತ್ರ ಹಾಗೂ ಹಕ್ಕು ಬದಲಾವಣೆಗಾಗಿ ಅರ್ಜಿ ಸಲ್ಲಿಸಲು ಭೂಮಿ ಶಾಖೆಗೆ, ಸರ್ವೇ ದಾಖಲೆಗಾಗಿ ಸರ್ವೇ ಇಲಾಖೆಗೆ, ವಿವಿಧ ಸೇವೆಗಳ ಪ್ರಮಾಣ ಪತ್ರ ಪಡೆಯಲು ಅಟಲ್ಜೀ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾಗುತ್ತದೆ.
ಆದರೆ ಇದೀಗ ಅಗತ್ಯ ದಾಖಲೆಗಳಿಗಾಗಿ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರಕಾರವು ಪ್ರಸಕ್ತ ಸಾಲಿನಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದೇ ಎಲ್ಲಾ ದಾಖಲೆಗಳನ್ನು ಪಡೆಯಲು, ಅರ್ಜಿ ಸಲ್ಲಿಸಲು ಹಾಗೂ ಬಳಿಕ ಅಂತಿಮ ದಾಖಲೆಗಳನ್ನು ಪಡೆಯಲು ನಿರ್ಮಿಸಿದ ವ್ಯವಸ್ಥೆಯೇ ಪಡಸಾಲೆ.
ಪಡಸಾಲೆಯಲ್ಲಿ ಐದು ಕೌಂಟರ್ಗಳ ವ್ಯವಸ್ಥೆಯಿದೆ. ಒಂದು ಕೌಂಟರ್ನಲ್ಲಿ ಪಡಿತರ ಚೀಟಿ ಸಂಬಂಧಿತ ಅರ್ಜಿ, ಇನ್ನೊಂದು ಕೌಂಟರ್ನಲ್ಲಿ ಆಧಾರ್ ಸಂಬಂಧಿತ ಅರ್ಜಿ, ಉಳಿದ ಮೂರು ಕೌಂಟರ್ಗಳಲ್ಲಿ ನಾಡಕಚೇರಿ, ಭೂಮಿ, ಮೋಜಿಣಿ, ಸರ್ವೇ ಮತ್ತು ದೃಢೀಕೃತ ನಕಲುಗಳ ವ್ಯವಸ್ಥೆ. ಜತೆಗೆ ಉಪತಹಶೀಲ್ದಾರರ ಕೊಠಡಿ ಮತ್ತು ಜೆರಾಕ್ಸ್ ಕೊಠಡಿಗೆ ಅಗತ್ಯವಾದ ಸ್ಥಳ. ಪ್ರತೀ ಕೌಂಟರ್ಗಳಲ್ಲಿನ ಸೇವೆ, ಪಡಸಾಲೆಯಲ್ಲಿ ನೀಡಲಾಗುವ ಸೇವೆಗಳ ವಿವರ, ನಿಗದಿಪಡಿಸಿದ ಕಾಲಾವಧಿ ಅಳವಡಿಸಬೇಕಾಗಿದೆ.
ಇತರ ವ್ಯವಸ್ಥೆಗಳು:
ಸಾರ್ವಜನಿಕರಿಗೆ ಬರೆಯಲು ಅನುಕೂಲವಾಗುವಂತೆ ಗೋಡೆಗೆ ಹಲಗೆ ಜೋಡಣೆ, ಆಸನದ ವ್ಯವಸ್ಥೆ, ಮೊಬೈಲ್ ಚಾರ್ಜರ್ ಯೂನಿಟ್ಗಳಿವೆ.
ಮಿನಿ ವಿಧಾನ ಸೌಧದ ಹೆಸರಿನಲ್ಲಿ ಹೆಚ್ಚಿನ ತಾಲೂಕುಗಳಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ತಮಗೆ ಅಗತ್ಯವಿರುವ ಕಚೇರಿಯನ್ನು ಹುಡುಕಿಕೊಂಡು ಹೋಗಲು ಬಹಳಷ್ಟು ಸಮಯ ತಗಲುತ್ತದೆ. ಕೆಲವೆಡೆ ಈ ಬಗ್ಗೆ ಸೂಚನಾ ಫಲಕಗಳಿದ್ದರೆ, ಕೆಲವೆಡೆ ಇಲ್ಲ. ಸೂಕ್ತ ಮಾಹಿತಿಯೂ ಇಲ್ಲ. ಗ್ರಾಮೀಣ ಜನತೆ ಕಚೇರಿ ಹುಡುಕಲು ಕಷ್ಟ ಪಡುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಪಡಸಾಲೆ ವ್ಯವಸ್ಥೆ ಅತ್ಯಂತ ಸೂಕ್ತವಾಗಿದೆ. ಇತರ ವ್ಯವಸ್ಥೆಗಳಂತೆ ಈ ವ್ಯವಸ್ಥೆಯೂ ತಾತ್ಕಾಲಿಕವಾಗಿರದೆ ನಿರಂತರವಾಗಿ ಮುಂದುವರೆಯಬೇಕೆನ್ನುವುದು ಜನತೆಯ ಹಂಬಲ.
ಲಭ್ಯವಿರುವ ಸೇವೆಗಳು:
ಪಹಣಿ ವಿತರಣೆ, ಖಾತೆ ಬದಲಾವಣೆಗಾಗಿ ಅರ್ಜಿ ಸ್ವೀಕರಿಸುವುದು, ಮ್ಯುಟೇಶನ್ ಆದೇಶ ವಿತರಿಸುವುದು, ಮ್ಯುಟೇಶನ್ ನಕ್ಷೆಗಾಗಿ ಅರ್ಜಿ ಸ್ವೀಕರಿಸುವುದು ಹಾಗೂ ನಕ್ಷೆ ವಿತರಿಸುವುದು. ಜಾತಿ, ಆದಾಯ ಮತ್ತಿತರ ಸೇವೆಗಳ ದೃಢೀಕೃತ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸ್ವೀಕರಿಸುವುದು ಹಾಗೂ ಪ್ರಮಾಣ ಪತ್ರ ವಿತರಿಸುವುದು (ನಾಡ ಕಚೇರಿ ಸೇವೆಗಳು), ವಿಧವಾ, ವೃದ್ಧಾಪ್ಯ, ಅಂಗವಿಕಲ ವೇತನ, ಮೈತ್ರಿ ಮನಸ್ವಿನಿ ಮುಂತಾದ ಪಿಂಚಣಿ ಮಂಜೂರಾತಿಗೆ ಅರ್ಜಿ ಸ್ವೀಕರಿಸುವುದು ಮತ್ತು ಮಂಜೂರಾತಿ ಆದೇಶ ಪತ್ರ ವಿತರಿಸುವುದು, ಹೊಸ ಆಧಾರ್ ಕಾರ್ಡ್ಗಳಿಗಾಗಿ ನೋಂದಣಿ, ತಿದ್ದುಪಡಿ ಮಾಡಲು, ಇ ಆಧಾರ್ ಕಾರ್ಡ್ಗಳಿಗಾಗಿ ಅರ್ಜಿ ಸ್ವೀಕರಿಸುವುದು, ಪಡಿತರ ಚೀಟಿಗೆ ಅರ್ಜಿ ಸ್ವೀಕರಿಸುವುದು, ಸಾಮಾನ್ಯ ಅರ್ಜಿಗಳನ್ನು ಸ್ವೀಕರಿಸುವುದು ಮೊದಲಾದವು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.