ದೇಶವೀಗ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳು ಜನರ ಪಾಲಿಗೆ ತೀರಾ ಸಂಕಷ್ಟಕಾರಕವಾಗಲಿದೆ ಎಂದು ಕೆಲವು ಆರ್ಥಿಕ ತಜ್ಞರೆನಿಸಿಕೊಂಡವರು ಹೇಳಿಕೆ, ಲೇಖನಗಳ ಮೂಲಕ ಎಚ್ಚರಿಸುತ್ತಲೇ ಇದ್ದಾರೆ. ಎಚ್ಚರಿಸುತ್ತಿದ್ದಾರೆ ಅನ್ನುವುದಕ್ಕಿಂತ ಹೆದರಿಸುತ್ತಿದ್ದಾರೆ ಎಂದು ಹೇಳಿದರೆ ಅದು ಸರಿಯಾದೀತು. ಆದರೆ ಸಾರ್ವಜನಿಕರ ವ್ಯವಹಾರ ಭರಾಟೆ ನೋಡಿದರೆ ಅವರೇನೂ ಈ ಆರ್ಥಿಕ ಹಿಂಜರಿತದಿಂದ ಕಂಗಾಲಾದವರಂತೆ ಕಾಣಿಸುತ್ತಿಲ್ಲ. ಅವರೇನಾದರೂ ಕಂಗಾಲಾಗಿದ್ದರೆ ಅದು ಈ ಕಾರಣಕ್ಕಂತೂ ಅಲ್ಲ. ಅವರು ನಿಜವಾಗಿ ಕಂಗಾಲಾಗಿರುವುದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಮೋಟಾರು ವಾಹನ ಕಾಯ್ದೆಯ ಬೆದರು ಗುಮ್ಮನಿಗೆ!
ನೂತನ ಮೋಟಾರ್ ವಾಹನ ಕಾಯ್ದೆಯು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ದುಬಾರಿ ಮೊತ್ತದ ದಂಡ ಪಾವತಿಸಬೇಕೆಂದು ಜಾರಿಗೊಳಿಸಿರುವ ಕ್ರಮಗಳು ವಾಹನ ಚಾಲಕರನ್ನು ಹೈರಾಣನ್ನಾಗಿಸಿದೆ. ದೇಶಾದ್ಯಂತ ಈ ನೂತನ ಕಾಯ್ದೆ ವಿರುದ್ಧ ಒಂದು ರೀತಿಯ ಅಹಿಂಸಾತ್ಮಕ ಪ್ರತಿಭಟನೆಯೇ ನಡೆದಿದೆ. ಜೊತೆಗೆ ಸಂಚಾರ ಪೊಲೀಸರು (ಟ್ರಾಫಿಕ್ ಪೊಲೀಸ್) ಮತ್ತು ಪ್ರಜೆಗಳ ನಡುವೆ ಸಂಘರ್ಷದ ಪರಿಸ್ಥಿತಿಯನ್ನೂ ನಿರ್ಮಿಸಿದೆ. ಸರ್ಕಾರ ತಂದಿರುವ ಕಾನೂನನ್ನು ಜಾರಿ ಮಾಡುವುದಷ್ಟೇ ಸಂಚಾರಿ ಪೊಲೀಸರ ಕರ್ತವ್ಯ. ಹೆಲ್ಮ್ಮೆಟ್ ರಹಿತ, ಲೈಸೆನ್ಸ್ ಇಲ್ಲದ, ಅಪಾಯಕಾರಿ ಚಾಲನೆ ಮಾಡುವ, ಮಾಲಿನ್ಯ ನಿಯಮ ಉಲ್ಲಂಘಿಸುವ, ನೋಂದಣಿಯೇ ಇಲ್ಲದ, ಆಂಬುಲೆನ್ಸ್ಗೆ ದಾರಿ ಬಿಡದ, ಆತುರಾತುರವಾಗಿ ತಲಪಬೇಕೆಂದು ಪಾದಚಾರಿಗಳ ದಾರಿಯಲ್ಲೇ ವಾಹನ ಓಡಿಸುವ ವಾಹನ ಸವಾರರಿಗೆ ಸ್ಥಳದಲ್ಲೇ ಹಿಡಿದು ಭಾರೀ ದಂಡ ವಿಧಿಸುವ ಅನಿವಾರ್ಯ ಒತ್ತಡಕ್ಕೆ ಪೊಲೀಸರು ಸಿಲುಕಿದ್ದಾರೆ. ಹೆಲ್ಮೆಟ್ ಧರಿಸಿರದಿದ್ದರೆ 1000 ರೂ., ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ರೂ. (ಪುನರಾವರ್ತಿಸಿದರೆ 15 ಸಾವಿರ ರೂ. ಮತ್ತು 2 ವರ್ಷ ಜೈಲು ಶಿಕ್ಷೆ), ಲೈಸೆನ್ಸ್ ಇಲ್ಲದಿದ್ದರೆ 5 ಸಾವಿರ ರೂ., ಆಂಬುಲೆನ್ಸ್ ದಾರಿ ಮಾಡಿಕೊಡದಿದ್ದರೆ 10 ಸಾವಿರ ರೂ., ಅತಿವೇಗದ ಚಾಲನೆಗೆ 1 ಸಾವಿರ ರೂ., ಓವರ್ಲೋಡಿಂಗ್ಗೆ 20 ಸಾವಿರ ರೂ. (ಅನಂತರ ಪ್ರತಿ ಟನ್ಗೆ 2 ಸಾವಿರ ರೂ), ದ್ವಿಚಕ್ರ ವಾಹನದಲ್ಲಿ ಓವರ್ ಲೋಡಿಂಗ್ ಮಾಡಿದರೆ 2 ಸಾವಿರ ರೂ. ಹಾಗೂ 3 ತಿಂಗಳು ಚಾಲನಾ ಪರವಾನಗಿ ರದ್ದು, ರೇಸಿಂಗ್ ಮಾಡಿದರೆ 5 ಸಾವಿರ ರೂ., ಹೀಗೆ ದಂಡ ಹಾಗೂ ಶಿಕ್ಷೆಯ ಪ್ರಮಾಣ ತಲೆ ತಿರುಗುವಂತಿದೆ. ಇತ್ತೀಚೆಗೆ ನಿಯಮ ಮೀರಿ ಸರಕು ತುಂಬಿದ ಲಾರಿ ಚಾಲಕರೊಬ್ಬರಿಗೆ ರಾಜಸ್ಥಾನ ಪೊಲೀಸರು 1.50 ಲಕ್ಷ ರೂ. ದಂಡ ವಿಧಿಸಿದ್ದಾರೆ. ಮರುದಿನ ನ್ಯಾಯಾಲಯದಲ್ಲಿ ಆ ಚಾಲಕರು ಈ ದಂಡವನ್ನು ಪಾವತಿಸಿದ್ದೂ ಆಗಿದೆ. ಇದು ಬಹುಶಃ ದೇಶದಲ್ಲೇ ಈ ವರೆಗೆ ಸಂಚಾರಿ ನಿಯಮ ಉಲ್ಲಂಘಿಸಿದ ಓರ್ವ ವ್ಯಕ್ತಿಯಿಂದ ವಸೂಲಿ ಮಾಡಲಾದ ಗರಿಷ್ಠ ಪ್ರಮಾಣದ ದಂಡ ಇರಬಹುದು.
ಸಂಚಾರಿ ನಿಯಮ ಉಲ್ಲಂಘನೆಗೆ ಈ ಪರಿಯ ಭಾರೀ ದಂಡ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಸತ್ತೆವೋ ಕೆಟ್ಟೆವೋ ಎಂದು ವಿಮೆ, ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ, ಚಾಲನಾ ಪರವಾನಗಿ ಪಡೆಯಲು ಮುಗಿಬಿದ್ದಿದ್ದಾರೆ. ಹೀಗಾಗಿ ಎಲ್ಲೆಡೆ ಆರ್ಟಿಓ ಕಚೇರಿಗಳಲ್ಲಿ ಜನಜಾತ್ರೆಯೇ ನೆರೆದಿದೆ. ಇಷ್ಟು ದಿನಗಳ ಕಾಲ ಭಣಗುಡುತ್ತಿದ್ದ ಮಾಲಿನ್ಯ ತಪಾಸಣಾ ಕೇಂದ್ರಗಳು ಮತ್ತು ವಾಹನ ವಿಮೆ ಕಚೇರಿಗಳಿಗೆ ಈಗ ಭರ್ಜರಿ ಬೇಡಿಕೆ!
ಸಂಚಾರಿ ನಿಯಮ ಉಲ್ಲಂಘನೆಗೆ ಪೊಲೀಸರು ವಿಸುತ್ತಿರುವ ಭಾರೀ ದಂಡದ ಕುರಿತು ಸಾಕಷ್ಟು ಜೋಕುಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಜೋಕುಗಳನ್ನು ತೇಲಿ ಬಿಟ್ಟವರು ದಂಡ ಕಟ್ಟಿದ ಫಲಾನುಭವಿಗಳೋ ಅಥವಾ ಬೇರೆಯ ವಿಘ್ನಸಂತೋಷಿಗಳೋ ಎಂಬುದು ಮಾತ್ರ ಗೊತ್ತಾಗಿಲ್ಲ! ಸಂಚಾರಿ ಪೊಲೀಸನೊಬ್ಬನಿಗೆ ಒಬ್ಬ ವ್ಯಕ್ತಿ ಚಾಲನಾ ಪರವಾನಗಿ, ಮಾಲಿನ್ಯ ತಪಾಸಣಾ ಪ್ರಮಾಣಪತ್ರ, ವಿಮೆ ಪತ್ರ ಇತ್ಯಾದಿ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತೋರಿಸುತ್ತಾನೆ. ಸಂಚಾರಿ ಪೊಲೀಸಪ್ಪನಿಗೆ ಸಮಾಧಾನವಾಯ್ತು. ಎಲ್ಲ ಸರಿಯಾಗಿದೆ. ಆದರೆ ನಿಮ್ಮ ಬೈಕ್ ಎಲ್ಲಿ ಎಂದು ಕೇಳಿದ ಎಂದು ಕೇಳಿದಾಗ ಬೈಕ್ ಸವಾರ, “ಎಲ್ಲ ದಾಖಲೆಗಳು ಸರಿಯಾಗಿವೆ ಎಂದು ನೀವು ಒಪ್ಪಿದರೆ ಅನಂತರ ಬೈಕ್ ಅನ್ನು ಮನೆಯಿಂದ ರಸ್ತೆಗೆ ಇಳಿಸೋಣವೆಂದುಕೊಂಡಿರುವೆ” ಎಂದು ಹೇಳಿದ. ಪೊಲೀಸಪ್ಪ ಆತನ ಉತ್ತರ ಕೇಳಿ ಬೇಸ್ತುಬಿದ್ದ! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಜೋಕೋಂದರ ಸ್ಯಾಂಪಲ್ ಇದು. ಇಲ್ಲಿ ಬರೆಯಲಾಗದ ಇನ್ನೂ ಕೆಲವು ಅಶ್ಲೀಲ ಜೋಕುಗಳೂ ಹರಿದಾಡುತ್ತಿವೆ. ಗುಜರಾತಿನಲ್ಲೊಬ್ಬ ವಾಹನ ಸವಾರ ತನ್ನ ಹೆಲ್ಮೆಟ್ಗೆ ವಾಹನ ಪರವಾನಗಿ, ವಿಮೆ, ಮಾಲಿನ್ಯ ತಪಾಸಣಾ ಪ್ರಮಾಣಪತ್ರ ಇತ್ಯಾದಿ ಎಲ್ಲ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಅಂಟಿಸಿಕೊಂಡೇ ಸಂಚಾರಿ ಪೊಲೀಸರೆದುರಿಗೆ ಪ್ರಯಾಣಿಸಿದಾಗ ಪೊಲೀಸರೇ ಸುಸ್ತು! ತನ್ನನ್ನು ತಡೆದು ಪೊಲೀಸರು ವಿಚಾರಿಸಿ ತೊಂದರೆ ನೀಡುವ ಕಷ್ಟವೇ ಬೇಡ ಎಂದು ಆ ವಾಹನ ಸವಾರ ಹೂಡಿದ ತಂತ್ರ ಇದು! ಇನ್ನು ಕೆಲವು ಸೋಮಾರಿಗಳು ಸಂಚಾರಿ ಪೊಲೀಸರ ಸಹವಾಸವೇ ಬೇಡ ಎಂದು ದ್ವಿಚಕ್ರ ವಾಹನಗಳನ್ನು ಮನೆಯಲ್ಲೇ ಪಾರ್ಕ್ ಮಾಡಿ, ಸಿಟಿಬಸ್, ಮೆಟ್ರೋ, ಕ್ಯಾಬ್ಗಳಲ್ಲಿ ಸಂಚಾರಕ್ಕೆ ಅಣಿಯಾಗಿದ್ದೂ ಇದೆ. ಒಟ್ಟಾರೆ ನೂತನ ಮೋಟಾರ್ ವಾಹನ ಕಾಯ್ದೆ ಇಡೀ ದೇಶದಲ್ಲಿ ಮಿಂಚಿನ ಸಂಚಲನವನ್ನೇ ಸೃಷ್ಟಿಸಿರುವುದು ನಿಜ.
ನೂತನ ವಾಹನ ಕಾಯ್ದೆ ಭ್ರಷ್ಟಾಚಾರಕ್ಕೆ ಇನ್ನಷ್ಟು ದಾರಿ ಮಾಡಿಕೊಡುವಂತಿದೆ ಎಂಬ ಆರೋಪವನ್ನೂ ಸುಲಭವಾಗಿ ತಳ್ಳಿ ಹಾಕುವಂತಿಲ್ಲ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಈಗಿನ ಹೊಸ ನಿಯಮದಂತೆ ದುಬಾರಿ ದಂಡ ವಿಧಿಸಬೇಕು. ಆದರೆ ಪೊಲೀಸರು ದಂಡ ಕಟ್ಟುವ ಆರ್ಥಿಕ ಸಾಮರ್ಥ್ಯ ಇಲ್ಲದ ಸವಾರರ ಬಳಿ, ಅವರ ಜೇಬಿನಲ್ಲಿದ್ದಷ್ಟನ್ನೂ ಕಿತ್ತುಕೊಂಡು ಕಳಿಸಿ ಭ್ರಷ್ಟಾಚಾರವೆಸಗುತ್ತಿದ್ದಾರೆ ಎಂಬ ಆರೋಪ ಜೋರಾಗಿ ಕೇಳಿ ಬಂದಿದೆ. ಹೀಗಾಗದಿರುವಂತೆ, ಪೊಲೀಸರ ಕಾರ್ಯವೈಖರಿ ಪಾರದರ್ಶಕವಾಗಿರಬೇಕೆಂಬ ಉದ್ದೇಶಕ್ಕಾಗಿ ಬಾಡಿ ಕ್ಯಾಮೆರಾಗಳನ್ನು ತರಿಸಲಾಗಿದೆ. ಆದರೆ ಅವುಗಳ ಸೂಕ್ತ ಬಳಕೆಯಾಗದಿರುವುದು ಸಂಚಾರಿ ಪೊಲೀಸರ ಕರ್ತವ್ಯ ನಿರ್ವಹಣೆಯ ಬಗ್ಗೆ ಗುಮಾನಿ ಮೂಡಿಸಿದೆ. ಬೆಂಗಳೂರಿನಲ್ಲಿ ಸುಮಾರು 2 ಸಾವಿರದಷ್ಟು ಸಂಚಾರಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರೂ ಕೇವಲ 50 ಬಾಡಿ ಕ್ಯಾಮೆರಾಗಳನ್ನು ತರಿಸಲಾಗಿದೆ. ಆದರೆ ಆ 50 ಬಾಡಿ ಕ್ಯಾಮೆರಾಗಳನ್ನೂ ಬಳಸಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಬಾಡಿ ಕ್ಯಾಮೆರಾ ಬಳಸಿದರೆ, ಪೊಲೀಸರು ವಿಧಿಸುವ ದಂಡಕ್ಕೆ ಸೂಕ್ತ ರಶೀತಿ ಕೊಡುತ್ತಾರೋ ಇಲ್ಲವೋ ಅಥವಾ ವಾಹನ ಸವಾರರ ಬಳಿ ಎಷ್ಟಿದೆಯೋ ಅಷ್ಟು ಹಣವನ್ನು ಕಸಿದುಕೊಂಡು ಜೇಬಿಗಿಳಿಸುತ್ತಾರೋ ಎಂಬುದು ದಾಖಲಾಗುತ್ತದೆ. ಪೊಲೀಸರ ಕರ್ತವ್ಯ ನಿರ್ವಹಣೆ ಪಾರದರ್ಶಕವಾಗಿರದಿದ್ದರೆ ತಕ್ಕ ಕ್ರಮ ಕೈಗೊಳ್ಳಲಾಗುವುದೆಂದು ಉನ್ನತ ಪೊಲೀಸ್ ಅಧಿಕಾರಿಗಳೇನೋ ಎಚ್ಚರಿಸಿದ್ದಾರೆ. ಆದರೆ ವಾಹನ ಸವಾರರಿಂದ ವಸೂಲಾಗುವ ಅನಧಿಕೃತ ಮೊತ್ತದಲ್ಲಿ ಅವರಿಗೂ ಒಂದು ಪಾಲು ಸಿಗುವುದಾದರೆ ಅವರು ನೀಡುವ ‘ಎಚ್ಚರಿಕೆ’ ಕೇವಲ ಬೂಟಾಟಿಕೆಯಾಗಬಹುದಲ್ಲವೆ?
ದಂಡದ ಪ್ರಮಾಣ ವಿಪರೀತವಾಗಿದೆಯೆಂದು ಜನರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ದಂಡದ ಪ್ರಮಾಣವನ್ನು ಶೇ. 50 ರಿಂದ ಶೇ. 90 ರವರೆಗೂ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಗುಜರಾತ್ ಮಾದರಿಯನ್ನೇ ಅನುಸರಿಸಿ, ಕರ್ನಾಟಕದಲ್ಲೂ ದಂಡದ ಮೊತ್ತದಲ್ಲಿ ಗಮನಾರ್ಹ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ರಾಜಸ್ಥಾನದಲ್ಲೂ ದಂಡದ ಮೊತ್ತ ಇಳಿಸಲು ಚಿಂತನೆ ನಡೆದಿದೆ. ಆದರೆ ಮಮತಾ ದೀದಿ ನೇತೃತ್ವದ ಪಶ್ಚಿಮ ಬಂಗಾಲದಲ್ಲಿ ಮಾತ್ರ ಕೇಂದ್ರದ ನೂತನ ಮೋಟಾರ್ ವಾಹನ ಕಾಯ್ದೆಯನ್ನು ಜಾರಿಗೊಳಿಸುವ ಗೋಜಿಗೇ ಹೋಗಿಲ್ಲ. ಕೇಂದ್ರದ ಯಾವುದೇ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸಕೂಡದೆಂಬ ಹಠಕ್ಕೆ ಮಮತಾ ದೀದಿ ಸರ್ಕಾರ ಬಿದ್ದಂತಿದೆ.
ದಂಡದ ಪ್ರಮಾಣವನ್ನು ಕಡಿತಗೊಳಿಸಿದ ಗುಜರಾತ್ನ ಬಿಜೆಪಿ ಸರ್ಕಾರದ ಕ್ರಮದ ಬಗ್ಗೆ, ನೂತನ ಕಾಯ್ದೆಯ ರೂವಾರಿಯೂ ಆಗಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ತೀವ್ರ ಖತಿಗೊಂಡಿದ್ದಾರೆ. ಪ್ರತಿವರ್ಷ 1.50 ಲಕ್ಷ ಜನ ರಸ್ತೆ ಅವಘಡದಿಂದ ಸಾಯುತ್ತಿರುವ ಬಗ್ಗೆ ನಿಮಗೆ ಚಿಂತೆ ಇಲ್ಲವೆ? ಎಂದು ಕಿಡಿಕಾರಿದ್ದಾರೆ. ನೂತನ ನಿಯಮಗಳು ಹಣಮಾಡುವ ಉದ್ದೇಶದಿಂದ ರೂಪಿಸಿದ್ದಲ್ಲ, ಬದಲಿಗೆ ಲಕ್ಷಾಂತರ ಜನರ ಜೀವ ಉಳಿಸುವ ಕಾಳಜಿ ಹೊಂದಿದೆ ಎಂಬ ಗಡ್ಕರಿಯವರ ಹೇಳಿಕೆಯನ್ನು ಒಪ್ಪಬೇಕಾದುದೇ.
ನೂತನ ಮೋಟಾರ್ ವಾಹನ ಕಾಯ್ದೆಯ ನಿಯಮಗಳು ಸಂಚಾರಿ ನಿಯಮ ಉಲ್ಲಂಘನೆ ಕಡಿವಾಣ ಹಾಕುವ ಉದ್ದೇಶ ಹೊಂದಿವೆಯೇ ಹೊರತು ಇದೇನೂ ಆದಾಯ ಸಂಗ್ರಹದ ಯೋಜನೆಯಲ್ಲ ಎಂಬ ಸಚಿವರ ಮಾತೇನೋ ಸರಿ. ತಮಿಳುನಾಡಿನಲ್ಲಿ ಹೊಸ ನಿಯಮ ಜಾರಿಯಾದ ಬಳಿಕ ಅಪಘಾತ ಪ್ರಮಾಣದಲ್ಲಿ ಶೇ. 28 ರಷ್ಟು ಇಳಿಕೆಯಾಗಿರುವುದು ಇದಕ್ಕೊಂದು ನಿದರ್ಶನ. ಆದರೆ ಏಕಾಏಕಿ, ಭಾರೀ ಮೊತ್ತದ ದಂಡ ವಿಧಿಸುವ ಬದಲು ಸಾರ್ವಜನಿಕರಿಗೆ ಅಸಹನೀಯವೆನ್ನಿಸದ ಪ್ರಮಾಣದ ಕಡಿಮೆ ದಂಡ ವಿಧಿಸುವುದು ಸೂಕ್ತ. ಇದರರ್ಥ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೂ ಪರವಾಗಿಲ್ಲ ಎಂದು ಖಂಡಿತ ಅಲ್ಲ. ಸಂಚಾರಿ ನಿಯಮಗಳನ್ನು – ಯಾರೇ ಆಗಿರಲಿ, ಅವರು ಎಷ್ಟೇ ಶ್ರೀಮಂತರಾಗಿರಲಿ, ರಾಜಕೀಯವಾಗಿ ಪ್ರಭಾವಿಗಳೇ ಇರಲಿ – ಅವರೆಲ್ಲ ತಪ್ಪದೆ ಪಾಲಿಸಲೇಬೇಕು. ನಮ್ಮ ಜೀವದ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಉಳಿದವರ ಜೀವಗಳೂ ನಿಯಮಪಾಲನೆಯಿಂದ ಸುರಕ್ಷಿತವಾಗಿರಬಹುದಾದರೆ ನಾವೇಕೆ ನಿಯಮಗಳನ್ನು ಸುಮ್ಮ ಸುಮ್ಮನೆ ಉಲ್ಲಂಘಿಸಬೇಕು?
ಆದರೆ ಇನ್ನೂ ಒಂದು ಮಹತ್ವದ ವಿಷಯದ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು. ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಭಾರೀ ಪ್ರಮಾಣದ ದಂಡ ವಿಧಿಸಿ ಕಡಿವಾಣ ಹಾಕುತ್ತಿರುವುದೇನೋ ಸರಿ. ಆದರೆ ರಸ್ತೆಗಳೇ ಸರಿಯಿಲ್ಲದೆ, ಹೊಂಡಗುಂಡಿಗಳಿಂದ ತುಂಬಿದ್ದರೆ, ರಸ್ತೆಗಳು ಅವ್ಯವಸ್ಥೆಯ ಆಗರವಾಗಿದ್ದರೆ ಆಗ ರಸ್ತೆ ನಿಯಮಗಳನ್ನು ಪಾಲಿಸಿಯೂ ಅಪಘಾತಗಳು ಆಗದೇ ಇರಲು ಸಾಧ್ಯವೆ? ಇಂತಹ ಅಸಮರ್ಪಕ ರಸ್ತೆಗಳಿಂದಾಗಿ ಪ್ರತಿವರ್ಷ 1,37,000 ಜನರು ನಮ್ಮ ದೇಶದಲ್ಲಿ ಸಾವಿಗೀಡಾಗುತ್ತಿದ್ದಾರೆ ಎಂಬ ಅರಿವು ಸರ್ಕಾರಕ್ಕಿದೆಯೇ? ಪ್ರತಿ ಗಂಟೆಗೆ ಭಾರತದಲ್ಲಿ ರಸ್ತೆ ಅಪಘಾತದಿಂದ 16 ಮಂದಿ ಸಾವಿಗೀಡಾಗುತ್ತಿದ್ದಾರೆ. ಪ್ರತಿನಿತ್ಯ ಭಾರತದಲ್ಲಿ 1214 ರಸ್ತೆ ಅಪಘಾತದಲ್ಲಿ ಮಡಿಯುತ್ತಿದ್ದಾರೆ. ದೇಶಾದ್ಯಂತ ಉತ್ತಮ ಸಂಚಾರ ಯೋಗ್ಯ ರಸ್ತೆಗಳಿದ್ದರೆ ಈ ಸಾವಿನ, ಅಪಘಾತದ ಪ್ರಮಾಣ ಕಡಿಮೆಯಾಗಬಹುದಲ್ಲವೆ?
ನೂತನ ಸಂಚಾರ ನಿಯಮಗಳಷ್ಟೇ ಸಾಲದು, ಉತ್ತಮ ರಸ್ತೆಗಳ ನಿರ್ಮಾಣವೂ ಆಗಬೇಕು. ಅದರ ಹೊಣೆಯೂ ಸರ್ಕಾರದ್ದು.
✍ ದು.ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.