ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಒಂದಲ್ಲ ಒಂದು ದಿನ ನಾವು ಅದರ ಮೇಲೆ ನ್ಯಾಯಯುತ ಅಧಿಕಾರವನ್ನು ಹೊಂದಿಯೇ ಹೊಂದುತ್ತೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಬಗ್ಗೆ ಭಾರತ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಅದು ನಮ್ಮ ಆಂತರಿಕ ವಿಷಯ ಮತ್ತು ಮುಂದೆಯೂ ಅದು ಆಂತರಿಕವಾಗಿಯೇ ಇರುತ್ತದೆ ಎಂದಿದ್ದಾರೆ.
“ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ ಮತ್ತು ಒಂದು ದಿನ ಅದರ ನ್ಯಾಯಯುತ ಅಧಿಕಾರವನ್ನು ನಾವು ಪಡೆಯುತ್ತೇವೆ” ಎಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಕೆಲ ದಿನಗಳ ಹಿಂದೆ ಇದೇ ರೀತಿಯ ಮಾತುಗಳನ್ನಾಡಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಭಾರತ ರದ್ದುಪಡಿಸಿದ ನಂತರ ಪಾಕಿಸ್ಥಾನ ಕೊತಕೊತ ಕುದಿಯುತ್ತಿದೆ, ಇದನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿಸುವ ಪ್ರಯತ್ನ ನಡೆಸುತ್ತಿದೆ. ಆದರೆ ಭಾರತ ಅದರ ವರ್ತನೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಬದಲಾಗಿ ಪಿಓಕೆಯನ್ನು ವಶಕ್ಕೆ ಪಡೆಯುತ್ತೇವೆ ಎಚ್ಚರಿಕೆಯನ್ನು ಆ ರಾಷ್ಟ್ರಕ್ಕೆ ನೀಡುತ್ತಿದೆ.
370ನೇ ರದ್ಧತಿ ಕ್ರಮದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆ ಹಾಳಾಗುತ್ತಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿರುವ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಜೈಶಂಕರ್ ಅವರು, “ಜನರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅರ್ಹರಾಗಿದ್ದಾರೆ. ಆದರೆ 370ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿತ್ತು ಎಂಬ ಬಗ್ಗೆ ಯಾರೊಬ್ಬರೂ ವರದಿ ಮಾಡಿದ್ದನ್ನು ನಾನು ನೋಡಿಯೇ ಇಲ್ಲ” ಎಂದಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಜನರು ಏನು ಹೇಳುತ್ತಾರೆಂದು ಚಿಂತಿಸಬೇಡಿ. 1972 ರಿಂದ ಭಾರತದ ನಿಲುವು ಸ್ಪಷ್ಟವಾಗಿದೆ” ಎಂದಿದ್ದಾರೆ.
ಹೋಸ್ಟನ್ನಲ್ಲಿ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, “ಈ ಕಾರ್ಯಕ್ರಮವನ್ನು ಪಾಕಿಸ್ಥಾನ ಮಾತ್ರವಲ್ಲ ಇಡೀ ಜಗತ್ತೇ ನೋಡುತ್ತದೆ. ಅಮೆರಿಕನ್ ಭಾರತೀಯರು ಏನು ಸಾಧಿಸಿದ್ದಾರೆ ಎಂಬುದರಿಂದ ಪಾಠವನ್ನು ಕಲಿಯುತ್ತದೆ. ಇಲ್ಲಿ ಹಲವು ಸಂದೇಶಗಳು ರವಾನೆಯಾಗಲಿದೆ, ಪಾಕಿಸ್ಥಾನಿಯರು ತಾವೇನಾಗಲು ಬಯಸುತ್ತೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವಂತಹ ಸಂದೇಶವೇ ಇರಲಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.