ಭಾರತೀಯ ರೈಲ್ವೆಯು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ರೈಲ್ವೇ ನಿರ್ಮಿಸಿದ ಭಾರತದ ಅತೀ ಉದ್ದದ ವಿದ್ಯುದ್ದೀಕೃತ ರೈಲ್ವೇ ಸುರಂಗವು ಕೇವಲ ಎಂಜಿನಿಯರಿಂಗ್ ಅದ್ಭುತ ಮಾತ್ರವಲ್ಲ, ಅದು ರೈಲ್ವೆ ನೆಟ್ವರ್ಕ್ನಾದ್ಯಂತದ ಸರಕು ಸಾಗಣೆಯ ಚಿತ್ರಣವನ್ನೇ ಬದಲಾಯಿಸಿಬಿಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆಂಧ್ರಪ್ರದೇಶದ ಓಬುಲಾವರಿಪಲ್ಲಿ ವೆಂಕಟಾಚಲಂ – ಕೃಷ್ಣಪಟ್ಟಣಂ ಬಂದರು ಮಧ್ಯದ ನಡುವೆ 112 ಕಿ.ಮೀ ಉದ್ದದ ಬ್ರಾಡ್ ಗೇಜ್ (ಬಿಜಿ) ಮಾರ್ಗದಲ್ಲಿ 6.7 ಕಿಲೋಮೀಟರ್ ಉದ್ದದ ಅತಿ ಉದ್ದದ ವಿದ್ಯುದ್ದೀಕೃತ ರೈಲ್ವೆ ಸುರಂಗವನ್ನು ನಿರ್ಮಾಣ ಮಾಡಲಾಗಿದ್ದು, ಇದು ಭಾರೀ ಹಣಕಾಸು ಪ್ರಯೋಜನಗಳನ್ನು ಈಗಾಗಲೇ ನೀಡಲು ಆರಂಭಿಸಿದೆ. ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾದಾಗಿನಿಂದ ಭಾರತೀಯ ರೈಲ್ವೆಯು ಪ್ರತಿ ಕೋಲ್ ರೇಕ್ಗಳಿಗೆ ಸುಮಾರು 7.5 ಲಕ್ಷ ರೂ.ಗಳನ್ನು ಉಳಿಸುತ್ತಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುದುರೆ ಲಾಳಾಕೃತಿಯ ಈ ಸುರಂಗವನ್ನು ನ್ಯೂ ಆಸ್ಟ್ರಿಯನ್ ಟನಲಿಂಗ್ ಮೆಥಡ್ (ಎನ್ಎಟಿಎಂ) ಮೂಲಕ 6,600 ಮೀಟರ್ ಉದ್ದದಲ್ಲಿ ನಿರ್ಮಿಸಲಾಗಿದೆ. ನಿರ್ಮಿಸಿದ ಸುರಂಗದ ಒಟ್ಟು ನಿರೀಕ್ಷಿತ ವೆಚ್ಚ 437 ಕೋಟಿ ರೂಪಾಯಿ ಆಗಿದೆ. ಆದರೆ ಈ ಇಡೀ ಬ್ರಾಡ್ಗೇಜ್ ಲೈನ್ ಯೋಜನೆಗೆ 1,993 ಕೋಟಿ ರೂಪಾಯಿ ವ್ಯಯವಾಗಿದೆ. ಸುರಂಗಕ್ಕೆ 10 ಮೀಟರ್ ಅಂತರದಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ.
ಸೌತ್ ಸೆಂಟ್ರಲ್ ರೈಲ್ವೆ (ಎಸ್ಸಿಆರ್) ಮುಖ್ಯ ಪಿಆರ್ ಅಧಿಕಾರಿ ಸಿ.ಎಚ್. ರಾಕೇಶ್ ಅವರ ಪ್ರಕಾರ, ಕೃಷ್ಣಪಟ್ಟಣಂ ಬಂದರಿನಿಂದ ಕಬ್ಬಿಣದ ಅದಿರು, ಸುಣ್ಣದ ಕಲ್ಲುಗಳು ಮತ್ತು ರಸಗೊಬ್ಬರಗಳನ್ನು ಸರಕು ರೈಲುಗಳಲ್ಲಿ ತುಂಬಿಸಿ ದೇಶದ ಪಶ್ಚಿಮ ಭಾಗಗಳಿಗೆ ರಫ್ತು ಮಾಡಲಾಗುತ್ತಿದೆ. ಪ್ರಸ್ತುತ ಸರಕು ರೈಲುಗಳು ಓಬುಲಾವರಿಪಲ್ಲಿ ವೆಂಕಟಾಚಲಂ ಮತ್ತು ಕೃಷ್ಣಪಟ್ಟಣಂ ನಡುವೆ ಹೊಸದಾಗಿ ನಿರ್ಮಿಸಲಾದ ಬಿಜಿ ಮಾರ್ಗದ ಮೂಲಕ ಚಲಿಸುತ್ತವೆ, ಈ ಮಾರ್ಗವು ಚೆರ್ಲೋಪಲ್ಲಿ ಮತ್ತು ರಾಪುರು ನಿಲ್ದಾಣಗಳ ನಡುವೆ ನಿರ್ಮಿಸಲಾದ ಅತಿ ಉದ್ದದ ವಿದ್ಯುದ್ದೀಕೃತ ಸುರಂಗವನ್ನೂ ಒಳಗೊಂಡಿದೆ.
43 ತಿಂಗಳ ದಾಖಲೆಯ ಸಮಯದಲ್ಲಿ ಸುರಂಗ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಸ್ಸಿಆರ್ ವಲಯವು ಆಗಸ್ಟ್ 30, 2019 ರಂದು ಓಬುಲಾವರಿಪಲ್ಲಿ ವೆಂಕಟಾಚಲಂ ಮತ್ತು ಕೃಷ್ಣಪಟ್ಟಣಂ ಬಂದರು ನಡುವೆ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಂದಿನಿಂದಲೂ ಸರಕು ಸಾಗಣೆ ಕಾರ್ಯವು ಸುರಂಗದ ಮೂಲಕ ನಡೆಯುತ್ತಿದೆ. ಸಾಗಾಣೆ ಆರಂಭವಾದ ದಿನದಿಂದಲೂ ಕಲ್ಲಿದ್ದಲು, ರಸಗೊಬ್ಬರ, ಕಬ್ಬಿಣದ ಅದಿರು ಮತ್ತು ಸುಣ್ಣದ ಕಲ್ಲುಗಳ ಮೂಲಕ ರೈಲ್ವೆ ಸಚಿವಾಲಯವು ಮೂಲ ಸರಕು ಸಾಗಣೆಯಲ್ಲಿ ಪ್ರತಿ ರೇಕ್ಗೆ ಲಕ್ಷಾಂತರ ಹಣವನ್ನು ಉಳಿಸುತ್ತಿದೆ. ಎಸ್ಸಿಆರ್ ವಲಯದ ಪ್ರಕಾರ, ಹಳೆಯ ಮತ್ತು ಹೊಸ ಮಾರ್ಗದಲ್ಲಿ ಪ್ರತಿ ಟನ್ ಮೂಲ ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿದೆ. ಪ್ರಮುಖ ವ್ಯತ್ಯಾಸವೆಂದರೆ.
🔹 ಕಲ್ಲಿದ್ದಲು ಸಾಗಾಣೆಯಲ್ಲಿ ಪ್ರತಿ ರೇಕ್ ಸರಕು ಸಾಗಣೆಯ ವ್ಯತ್ಯಾಸವು 3 ಲಕ್ಷ ರೂ.ಗಳಿಂದ 7.5 ಲಕ್ಷ ರೂ.
🔹 ರಸಗೊಬ್ಬರದಲ್ಲಿ ಪ್ರತಿ ರೇಕ್ ಸರಕು ಸಾಗಣೆಯ ವ್ಯತ್ಯಾಸವು 1.5 ಲಕ್ಷ ರೂ.ಗಳಿಂದ 2.5 ಲಕ್ಷ ರೂ.
🔹 ಕಬ್ಬಿಣದ ಅದಿರಿಗೆ ಪ್ರತಿ ರೇಕ್ ಸಾಗಣೆಯ ವ್ಯತ್ಯಾಸವು ಸುಮಾರು 6 ಲಕ್ಷ ರೂ.
🔹 ಸುಣ್ಣದ ಕಲ್ಲಿಗೆ ಪ್ರತಿ ರೇಕ್ ವ್ಯತ್ಯಾಸವು ಸುಮಾರು 5.25 ಲಕ್ಷ ರೂ.
ಈ ಪ್ರತಿಯೊಂದು ಸರಕುಗಳ ಸಾಗಣೆ ವೆಚ್ಚದ ಉಳಿತಾಯದಲ್ಲಿನ ವ್ಯತ್ಯಾಸಕ್ಕೆ ಪ್ರಮುಖ ಕಾರಣ ಓಬುಲಾವರಿಪಲ್ಲಿ ಮತ್ತು ಕೃಷ್ಣಪಟ್ಟಣಂ ಬಂದರಿನ ನಡುವಿನ ಹೊಸ ಬಿಜಿ ಮಾರ್ಗ. ಸರಕು ಸಾಗಣೆ ರೈಲುಗಳು ವೆಂಕಟಾಚಲಂನಿಂದ ನೇರವಾಗಿ ಬರಲು ಈ ಮಾರ್ಗ ಅನುವು ಮಾಡಿಕೊಡುತ್ತದೆ. ಈ ಮೊದಲು, ಈ ಮಾರ್ಗ ಇಲ್ಲದೇ ಇದ್ದ ಸಂದರ್ಭದಲ್ಲಿ ಸರಕು ಸಾಗಣೆ ರೈಲುಗಳು ದೇಶದ ಪಶ್ಚಿಮ ಭಾಗಗಳಿಗೆ ಪ್ರಯಾಣಿಸಲು ಹೆಚ್ಚಿನ ಸಮಯವನ್ನು ಮತ್ತು ದೂರವನ್ನು ತೆಗೆದುಕೊಳ್ಳುತ್ತಿದ್ದವು. ಆದರೆ, ಈಗ ಸುರಂಗದಿಂದಾಗಿ ವೆಂಕಟಾಚಲಂ ಮತ್ತು ಓಬುಲಾವರಿಪಲ್ಲಿ ನಡುವಿನ ದೂರವನ್ನು 72 ಕಿ.ಮೀ.ವರೆಗೆ ಇಳಿಸಲಾಗಿದೆ, ಇದು ಪ್ರಯಾಣದ ಸಮಯವನ್ನು 10 ಗಂಟೆಯಿಂದ 5 ಗಂಟೆಗಳವರೆಗೆ ಇಳಿಸಿದೆ. ಮಾತ್ರವಲ್ಲ ಪ್ರತಿ ಸರಕುಗಳ ಮೇಲಿನ ಸರಕು ಸಾಗಣೆಯ ವೆಚ್ಚವನ್ನು ಕಡಿಮೆ ಮಾಡಿದೆ.
ಇದು ಈ ಮಾರ್ಗದಲ್ಲಿ ಸರಕು ಸಾಗಣೆಯ ಪ್ರಮಾಣವನ್ನೂ ಹೆಚ್ಚಿಸಲು ಕಾರಣವಾಗಿದೆ. ಗುಂಟಕಲ್ ವಿಭಾಗದಿಂದ ಕೃಷ್ಣಪಟ್ಟಣಂ ಕಡೆಗೆ ಹೋಗುವ ರೈಲುಗಳ ಅಂತರವನ್ನು ಈ ಮಾರ್ಗವು ಕಡಿಮೆಗೊಳಿಸಿದೆ ಮತ್ತು ಓಬುಲಾವರಿಪಲ್ಲಿ ರೇನಿಂಗುಂಟ ಗುಡೂರ್ ವಿಭಾಗದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿದೆ. ಗುಂಟಕಲ್ ವಿಭಾಗದ ಹಿರಿಯ ಡಿಸಿಎಂ ಪ್ರಶಾಂತ್ ಕುಮಾರ್ ಅವರ ಪ್ರಕಾರ, ಪ್ರಸ್ತುತ ಸರಾಸರಿ 12 ಸರಕು ರೈಲುಗಳು ಬಿಜಿ ಟ್ರ್ಯಾಕ್ನ ಸಿಂಗಲ್ ಲೈನ್ ವಿಭಾಗದ ಮೂಲಕ ಪ್ರತಿದಿನವೂ ಹಾದು ಹೋಗುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.