ಮಂಗಳೂರಿನಲ್ಲಿ ‘ವೀ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ “ಇ-ಸ್ವಚ್ಛ ಭಾರತ್” ಎಂಬ ವಿಶಿಷ್ಟ ಹಾಗೂ ಅಪೂರ್ವ ಇ-ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇ-ತ್ಯಾಜ್ಯ ಅಥವಾ ಇಲೆಕ್ಟ್ರಾನಿಕ್ ವೇಸ್ಟ್ ಕುರಿತಂತೆ ಜಾಗೃತಿಯನ್ನು ಜನರಲ್ಲಿ ಮೂಡಿಸುವುದರ ಜೊತೆಗೆ ಇ-ತ್ಯಾಜ್ಯಗಳ ಪ್ರಮಾಣವನ್ನು ತಗ್ಗಿಸುವುದು, ಅವುಗಳ ಪುನರ್ ಬಳಕೆ ಮಾಡುವಿಕೆ ಮೂಲಕ ಈ ಕಾರ್ಯವನ್ನು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿಸುವ ಉದ್ದೇಶ ಈ ಯೋಜನೆಗಿದೆ. ಇ-ಸ್ವಚ್ಛ ಭಾರತ್ ಯೋಜನೆಯನ್ನು ಅಕ್ಟೋಬರ್ 2 ರಂದು ಉದ್ಘಾಟಿಸಲಾಗುತ್ತಿದೆ.
ಈ ವಿಶಿಷ್ಟ ವಿನೂತನ ಕಾರ್ಯಕ್ರಮದ ಅಡಿಯಲ್ಲಿ ನಗರದ 200 ಅಪಾರ್ಟ್ಮೆಂಟ್ಗಳಿಗೆ ಭೇಟಿ ನೀಡಿ ಇ-ತ್ಯಾಜ್ಯ ಸಂಗ್ರಹಣಾ ದಿನದ ಮಾಹಿತಿಯಿರುವ ಪೋಸ್ಟರನ್ನು ಅಲ್ಲಿನ ನೋಟಿಸ್ ಬೋರ್ಡಿನಲ್ಲಿ ಅಂಟಿಸಲು ಕಾರ್ಯಕ್ರಮದ ಆಯೋಜಕರು ನಿರ್ಧರಿಸಿದ್ದಾರೆ. ನಿರ್ದಿಷ್ಟವಾಗಿ ಸೂಚಿತ ದಿನದಂದು ಅಲ್ಲಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸಲಿದ್ದಾರೆ ಮತ್ತು ಸಂಗ್ರಹಿಸಿದ ಇ-ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ಮರುಬಳಕೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಭಾಗವಾಗಿದೆ.
ಇ-ತ್ಯಾಜ್ಯಕ್ಕೆ ವಸ್ತುಗಳನ್ನು ನೀಡಿ ಆ ಮೂಲಕ ಯೋಜನೆಗೆ ಬೆಂಬಲ ಸೂಚಿಸುವ ಎಲ್ಲರಿಗೂ ಸೈಬರ್ ಸೇಫ್ ಗರ್ಲ್ ಪುಸ್ತಕದ ಪ್ರತಿಯನ್ನು ನೀಡಲು ನಿರ್ಧಾರ ಮಾಡಲಾಗಿದೆ. ಅತೀ ಹೆಚ್ಚು ಇ-ತ್ಯಾಜ್ಯ ನೀಡಿದವರಿಗೆ ಶ್ಲಾಘನಾ ಪ್ರಮಾಣಪತ್ರ ನೀಡಲಾಗುತ್ತಿದೆ.
ಇ-ತ್ಯಾಜ್ಯ ಕುರಿತಂತೆ ಇರುವ ಹಲವು ನಿಯಮಾವಳಿಗಳ ಕುರಿತಂತೆಯೂ ಜಾಗೃತಿ ಮೂಡಿಸುವ ಉದ್ದೇಶ ಈ ಸಂಘಟನೆಗಿದೆ. ಇ-ತ್ಯಾಜ್ಯದ ಕುರಿತಾದ ನಿಯಮಾವಳಿಗಳನ್ನು ರೂಪಿಸುವುದು ಪ್ರಾಥಮಿಕವಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಎಮ್ಒಇಎಫ್ಸಿಸಿ) ಸಚಿವಾಲಯದ ಜವಾಬ್ದಾರಿಯಾಗಿದೆ. ಇ-ತ್ಯಾಜ್ಯ ಸಮರ್ಪಕ ನಿರ್ವಹಣೆಗಾಗಿ ಇ-ತ್ಯಾಜ್ಯ ನಿರ್ವಹಣಾ ನಿಯಮಗಳು 2011, ಇ-ತ್ಯಾಜ್ಯ ನಿರ್ವಹಣಾ ನಿಯಮಗಳು 2016 ಹಾಗೂ ಇ-ತ್ಯಾಜ್ಯ ನಿರ್ವಹಣಾ ನಿಯಮಗಳ ತಿದ್ದುಪಡಿ 2018 ಇವುಗಳಿವೆ. ಹೆಚ್ಚುವರಿಯಾಗಿ ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಗಳೂ ಕೇಂದ್ರ ಸಚಿವಾಲಯದ ನಿಯಮಾವಳಿಗಳ ಸಮರ್ಪಕ ಜಾರಿಗೆ ಕ್ರಮ ಕೈಗೊಳ್ಳುತ್ತವೆ.
ಇಲೆಕ್ಟ್ರಾನಿಕ್ ತ್ಯಾಜ್ಯ ಅಥವಾ ಇ-ವೇಸ್ಟ್ ಕುರಿತು ಒಂದಿಷ್ಟು ಮಾಹಿತಿ
ಒಡೆದು ಹೋದ ಅಥವಾ ಬಳಕೆಗೆ ಯೋಗ್ಯವಲ್ಲದ ಇಲೆಕ್ಟ್ರಾನಿಕ್ ವಸ್ತುಗಳು ಹಾಗೂ ಸಾಧನಗಳನ್ನು ಇಲೆಕ್ಟ್ರಾನಿಕ್ ವೇಸ್ಟ್ ಅಥವಾ ಇ-ವೇಸ್ಟ್ ಎಂದು ಕರೆಯಲಾಗುತ್ತದೆ. ಇಂದು ತಂತ್ರಜ್ಞಾನ ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಅವಿಭಾಜ್ಯ ಅಂಗದಂತೆ ಜೊತೆಗಿದೆ. ಈ ಹಿಂದೆ ಹಲವು ಉತ್ಪನ್ನಗಳಲ್ಲಿ ಇರದೇ ಇದ್ದ ಸೆಮಿ-ಕಂಡಕ್ಟರ್ಗಳು ಹಾಗೂ ಸೆನ್ಸರ್ಗಳು ಈಗಿನ ಉಪಕರಣಗಳಲ್ಲಿ ಹೆಚ್ಚಾಗಿ ಅಡಕವಾಗಿರುವುದರಿಂದ ಅಂಗೈಯಲ್ಲಿ ಕೊಂಡೊಯ್ಯಬಹುದಾದ ಮಾನಿಟರ್ಗಳು, ನಮ್ಮ ಮನೆಗಳನ್ನು ಸ್ಮಾರ್ಟ್ ಹೋಂಗಳನ್ನಾಗಿ ಮಾಡುವ ಅಂತರ್ಜಾಲಾಧಾರಿತ ಟಿವಿ ಪರದೆಯಲ್ಲೂ ಈ ಕಂಡಕ್ಟರ್ಗಳು ಇದ್ದೇ ಇರುತ್ತವೆ. ವಿದ್ಯುತ್ ಹಾಗೂ ವಿದ್ಯುನ್ಮಾನ ಉತ್ಪನ್ನಗಳ (ಇಲೆಕ್ಟ್ರಿಕಲ್ ಎಂಡ್ ಇಲೆಕ್ಟ್ರಾನಿಕ್ ಇಕ್ವಿಪ್ಮೆಂಟ್-ಇಇಇ) ಬಳಕೆ ಹೆಚ್ಚಾಗಿರುವುದರಿಂದ ಅವುಗಳಿಂದ ಉತ್ಪತ್ತಿಯಾಗುವ ಇಲೆಕ್ಟ್ರಾನಿಕ್ ವೇಸ್ಟ್ (ಇ-ವೇಸ್ಟ್) ಕೂಡ ಜಾಗತಿಕವಾಗಿ ಏರುತ್ತಲೇ ಇದೆ.
ಇ-ವೇಸ್ಟ್ ವಸ್ತುಗಳೆಂದರೆ ಬೆಲೆ ಬಾಳುವಂತಹ ವಸ್ತುಗಳು ಅಥವಾ ಮರುಬಳಕೆ ಮಾಡಬಹುದಾದ ರ್ಯಾಮ್ ಹಾಗೂ ಲ್ಯಾಪ್ಟಾಪ್ಗಳೂ ಇರಬಹುದು. ಆದರೆ ಅಪಾಯಕಾರಿ ವಸ್ತುಗಳಾದ ಕ್ಯಾಥೋಡ್ ರೇ ಟ್ಯೂಬ್ ಮಾನಿಟರ್ಗಳನ್ನು ವಿಲೇವಾರಿ ಮಾಡುವಾಗ ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಬಳಕೆಗೆ ಅನರ್ಹವಾದ ಇ-ವೇಸ್ಟ್ ಎಂದು ವಿಲೇವಾರಿಯಾಗುವ ವಸ್ತುಗಳೆಂದರೆ ಕಂಪ್ಯೂಟರ್ಗಳು, ಟಿವಿಗಳು, ಸ್ಟೀರಿಯೋ, ಕಾಪಿಯರ್ ಹಾಗೂ ಫ್ಯಾಕ್ಸ್ ಮಶಿನ್ಗಳು.
ಇಲೆಕ್ಟ್ರಾನಿಕ್ ತ್ಯಾಜ್ಯ ಭಾರತದಲ್ಲಿ ಗಂಭೀರ ಆರೋಗ್ಯ ಮತ್ತು ಪರಿಸರ ಸಂಬಂಧಿತ ವಿಚಾರವಾಗಿ ಹೊರಹೊಮ್ಮುತ್ತಿದೆ. ಭಾರತ “ಜಗತ್ತಿನ ಆರನೇ ಅತಿ ದೊಡ್ಡ ಇ-ತ್ಯಾಜ್ಯ ಉತ್ಪಾದಕ’ ದೇಶವಾಗಿದೆ ಆಶ್ಚರ್ಯವಾಗಬಹುದು. ಅಂದಾಜು 2 ಮಿಲಿಯನ್ ಟನ್ ಇ-ತ್ಯಾಜ್ಯ ದೇಶದಲ್ಲಿ ಉತ್ಪಾದನೆಯಾಗುತ್ತಿದೆ ಹಾಗೂ ಮಾಹಿತಿ ಸಿಗದಷ್ಟು ಪ್ರಮಾಣದ ಇ-ತ್ಯಾಜ್ಯಗಳು ಜಗತ್ತಿನ ಇತರ ದೇಶಗಳಿಂದ ಆಮದಾಗುತ್ತಿವೆ. ವಾರ್ಷಿಕವಾಗಿ ಇ-ತ್ಯಾಜ್ಯಗಳಲ್ಲಿ ಕಂಪ್ಯೂಟರ್ ಸಾಧನಗಳ ಪಾಲು ಶೇ. 70 ರಷ್ಟಿದ್ದರೆ, ಶೇ. 12ರಷ್ಟು ಇ-ತ್ಯಾಜ್ಯಗಳು ಟೆಲಿಕಾಂ ಕ್ಷೇತ್ರದಿಂದ, ಶೇ 8ರಷ್ಟು ಇ-ತ್ಯಾಜ್ಯಗಳು ವೈದ್ಯಕೀಯ ಪರಿಕರಗಳಿಂದ ಹಾಗೂ ಶೇ. 7ರಷ್ಟು ಇಲೆಕ್ಟ್ರಾನಿಕ್ ಸಾಮಗ್ರಿಗಳಿಂದ ಉತ್ಪತ್ತಿಯಾಗುತ್ತವೆ. ಸರಕಾರಿ, ಸಾರ್ವಜನಿಕ ರಂಗದ ಹಾಗೂ ಖಾಸಗಿ ರಂಗದ ಕಂಪೆನಿಗಳಿಂದ ಶೇ. 75ರಷ್ಟು ಇ-ತ್ಯಾಜ್ಯಗಳನ್ನು ಉತ್ಪತ್ತಿಯಾದರೆ, ಖಾಸಗಿ ಜನರು ಉತ್ಪತ್ತಿ ಮಾಡುವ ಇ-ತ್ಯಾಜ್ಯ ಪ್ರಮಾಣ ಶೇ 16ರಷ್ಟಾಗಿದೆ.
ಭಾರತದಲ್ಲಿ ಜನವರಿ 2018ರ ಹೊತ್ತಿಗೆ 1.012 ಬಿಲಿಯನ್ ಮೊಬೈಲ್ ಸಂಪರ್ಕಗಳಿದ್ದವು ಹಾಗೂ ಈ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ವರ್ಲ್ಡ್ ಇಕನಾಮಿಕ್ ಫೋರಂನ ಜನವರಿ 2019 ವರದಿಯ ಪ್ರಕಾರ ಇ-ತ್ಯಾಜ್ಯ ಅತ್ಯಂತ ಕ್ಷಿಪ್ರವಾಗಿ ಹೆಚ್ಚಾಗುತ್ತಿರುವ ತ್ಯಾಜ್ಯವಾಗಿದ್ದು 2018ರಲ್ಲಿ ಉತ್ಪತ್ತಿಯಾದ ಇ-ತ್ಯಾಜ್ಯ ಪ್ರಮಾಣ 48.5 ಮಿಲಿಯನ್ ಟನ್ ಆಗಿದೆ.
ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಪ್ಲ್ಯಾಟಿನಂ, ಲೀಥಿಯಂ, ಕೊಬಾಲ್ಟ್ ಹೀಗೆ ವಿವಿಧ ಲೋಹದ ವಸ್ತುಗಳು ಅಡಕವಾಗಿದ್ದು ಇವುಗಳನ್ನು ರೀಸೈಕಲ್ ಮಾಡುವ ಮೂಲಕ ಮತ್ತೆ ಪಡೆಯಬಹುದಾಗಿದೆ. ಆದರೆ ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಹಾನಿಕಾರಕ ಘನ ಲೋಹಗಳಾದ ಸೀಸ, ಪಾದರಸ, ಕಾಡ್ಮೀನಿಯಂ, ಬೆರಿಲಿಯಂ, ಪಿವಿಸಿ ಪ್ಲಾಸ್ಟಿಕ್, ವಿಷಕಾರಿ ರಾಸಾಯನಿಕಗಳಿದ್ದು ಇವುಗಳು ಮನುಷ್ಯರ ಆರೋಗ್ಯಕ್ಕೆ ಹಾನಿಯುಂಟು ಮಾಡುವುದರ ಜತೆಗೆ ಪರಿಸರದ ಮೇಲೆಯೂ ದುಷ್ಪರಿಣಾಮ ಬೀರುತ್ತವೆ. ಮುಖ್ಯವಾಗಿ ಇ-ತ್ಯಾಜ್ಯಗಳಿಂದ ಮಕ್ಕಳು ಹೆಚ್ಚು ಅಪಾಯ ಎದುರಿಸುವ ಸಾಧ್ಯತೆಯಿದೆ. ಹಲವು ಮಕ್ಕಳು ದಿನಂಪ್ರತಿಯೆಂಬಂತೆ ತಮ್ಮ ಮನೆಗಳಲ್ಲಿಯೇ ನಡೆಯಬಹುದಾದ ಅಸುರಕ್ಷಿತ ರಿಸೈಕ್ಲಿಂಗ್ ಕ್ರಿಯೆಗಳಿಂದ ಇ-ತ್ಯಾಜ್ಯಗಳು ಹೊರಸೂಸುವ ಹಾನಿಕಾರಕ ಅಂಶಗಳಿಂದ ಅಥವಾ ಮನೆಯ, ಶಾಲೆ ಅಥವಾ ಆಟವಾಡುವ ಸ್ಥಳದ ಸಮೀಪವಿರುವ ಇ-ತ್ಯಾಜ್ಯ ಗುಂಡಿಗಳಿಂದಲೂ ದುಷ್ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ.
ಇಲೆಕ್ಟ್ರಾನಿಕ್ ವಸ್ತುಗಳ ತಯಾರಕರು ತಮ್ಮ ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ಕಚ್ಛಾ ವಸ್ತುಗಳ ಕೊರತೆ ಎದುರಿಸಿದಾಗ ಎಸೆಯಲ್ಪಟ್ಟ ಸಾಧನಗಳಿಂದ ಲಭ್ಯ ಬಿಡಿ ಭಾಗಗಳನ್ನು ಬಳಸುತ್ತಾರೆ- ಅರ್ಬನ್ ಮೈನಿಂಗ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆ ಆರ್ಥಿಕವಾಗಿ ಹಾಗೂ ಪರಿಸರಕ್ಕೂ ಸಹ್ಯ. ಇ-ತ್ಯಾಜ್ಯಗಳಿಂದ ನಡೆಸುವ ಅರ್ಬನ್ ಮೈನಿಂಗ್ ಪ್ರಕ್ರಿಯೆಗೆ ಹೋಲಿಸಿದಾಗ ಗಣಿಗಳಿಂದ ತಾಮ್ರ, ಚಿನ್ನ ಹಾಗೂ ಅಲ್ಯುಮಿನಿಯಂ ಪಡೆಯುವುದಕ್ಕಿಂತ ಕಾರ್ಯಕ್ಕೆ 13 ಪಟ್ಟು ಹೆಚ್ಚು ವೆಚ್ಚ ತಗಲುತ್ತದೆ.
ಇ-ತ್ಯಾಜ್ಯವನ್ನು ನಿರ್ಮೂಲನೆಗೊಳಿಸಲು ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ‘ವೀ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಸೈಹಾದ್ರಿ ಕಾಲೇಜ್ ಆಫ್ ಇಂಜಿನೀಯರಿಂಗ್ ಆಂಡ್ ಮ್ಯಾನೇಜ್ಮೆಂಟ್ನ ಪ್ರೊಫೆಸರ್ ಡಾ. ಅನಂತ್ ಪ್ರಭು ಜಿ, ವಿಕಾಸ್ ಕಾಲೇಜಿನ ಟ್ರಸ್ಟಿ ಜೆ ಕೊರಗಪ್ಪ, ವಿ ಆರ್ ಯುನೈಟೆಡ್ನ ಅಧ್ಯಕ್ಷ ಅಜ್ಫಾರ್ ರಝ್ಹಾಕ್, ರಕ್ಷಿತ್ ಶೆಟ್ಟಿ, ವಿ ಆರ್ ಯುನೈಟೆಡ್ನ ಸಲಹೆಗಾರರಾದ ಶ್ರೀ ಕೃಷ್ಣ ಶೆಟ್ಟಿ, ರಾಜೇಶ್ ಕೆ ಆರ್ ಮತ್ತಿತರರು ಸೇರಿ “ಇ-ಸ್ವಚ್ಛ ಭಾರತ್” ಎಂಬ ವಿಶಿಷ್ಟ ಯೋಜನೆಯನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.