ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಸಮುದಾಯ ನಮ್ಮನ್ನು ನಂಬುತ್ತಿಲ್ಲ, ನಮ್ಮನ್ನು ಗಂಭೀರ ರಾಷ್ಟ್ರ ಎಂದು ಪರಿಗಣಿಸುತ್ತಿಲ್ಲ, ಕಾಶ್ಮೀರದ ವಿಷಯದ ಬಗೆಗಿನ ನಮ್ಮ ವಾದವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಪಾಕಿಸ್ಥಾನದ ಆಂತರಿಕ ಸಚಿವ ಇಜಾಝ್ ಅಹ್ಮದ್ ಶಾ ಅವರು ಹತಾಶೆ ತೋಡಿಕೊಂಡಿದ್ದಾರೆ. ಅವರ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಪಾಕಿಸ್ಥಾನಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ.
ಕಾಶ್ಮೀರದ ವಿಷಯ ಬಗೆಗಿನ ಪಾಕಿಸ್ಥಾನದ ನಿರೂಪಣೆಯನ್ನು ಒಪ್ಪಲು ಅಂತಾರಾಷ್ಟ್ರೀಯ ಸಮುದಾಯ ಸಿದ್ಧವಿಲ್ಲ ಎಂದಿರುವ ಅವರು, ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಆಡಳಿತಗಾರರು ಈ ವಿಷಯದಲ್ಲಿ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದಾರೆ. ಪಾಕಿಸ್ಥಾನದ ಇಮೇಜ್ಗೆ ಧಕ್ಕೆ ತಂದಿದ್ದಾರೆ ಎಂದು ಅಹ್ಮದ್ ಶಾ ಆರೋಪಿಸಿದ್ದಾರೆ.
“ಜನರು ನಮ್ಮನ್ನು ನಂಬುತ್ತಿಲ್ಲ, ಅಂತಾರಾಷ್ಟ್ರೀಯ ಸಮುದಾಯ ಕೂಡ ನಮ್ಮನ್ನು ನಂಬುತ್ತಿಲ್ಲ. ಭಾರತ ಜಮ್ಮು ಕಾಶ್ಮೀರದಲ್ಲಿ ಕರ್ಫ್ಯೂ ವಿಧಿಸಿದೆ, ಅಲ್ಲಿನ ಜನರಿಗೆ ಔಷಧಿಗಳನ್ನು ನೀಡುತ್ತಿಲ್ಲ ಎಂದು ನಾವು ಹೇಳುತ್ತೇವೆ. ಆದರೆ ಜನ ನಮ್ಮನ್ನು ನಂಬುವುದಿಲ್ಲ, ಆದರೆ ಅವರನ್ನು ನಂಬುತ್ತಾರೆ. ಆಡಳಿತಗಾರರು ಈ ದೇಶವನ್ನು ನಾಶ ಮಾಡಿದ್ದಾರೆ. ಪಾಕಿಸ್ಥಾನದ ಹೆಸರನ್ನು ಹಾಳುಗೆಡವಿದ್ದಾರೆ. ನಮ್ಮನ್ನು ಗಂಭೀರ ದೇಶ ಎಂದು ಜನರು ಪರಿಗಣಿಸುತ್ತಿಲ್ಲ” ಎಂದು ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಹ್ಮದ್ ಶಾ ಹೇಳಿದ್ದಾರೆ.
ಪಾಕಿಸ್ಥಾನದ ಪ್ರಧಾನಿ ಖಾನ್, ಬೆನಜೀರ್ ಭುಟ್ಟೋ, ಪರ್ವೇಜ್ ಮುಷರಫ್ ಮತ್ತು ಇತರರು ಆಡಳಿತ ಗಣ್ಯರು ಕೂಡ ಈ ಆರೋಪಕ್ಕೆ ಭಾಗಿದಾರರೇ ಎಂಬ ಪ್ರಶ್ನೆಗೆ, “ಎಲ್ಲರೂ ಜವಾಬ್ದಾರರು. ಪಾಕಿಸ್ಥಾನ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ” ಎಂದಿದ್ದಾರೆ.
ಆಡಳಿತಾರೂಢ ಇಮ್ರಾನ್ ಖಾನ್ ಸರ್ಕಾರವು ತನ್ನ ಕಾಶ್ಮೀರ ನಿರೂಪಣೆಯ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ಪಾಕಿಸ್ಥಾನದ ಮಂತ್ರಿಯೊಬ್ಬರು ಹೇಳಿಕೊಂಡಿರುವುದು ಅಲ್ಲಿನ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.