ತ್ಯಾಜ್ಯ ವಿಂಗಡನೆ ಮತ್ತು ತ್ಯಾಜ್ಯ ನಿರ್ಮೂಲನೆಯ ಅರಿವು ಈಗ ಎಲ್ಲಾ ಕಡೆಗಳಲ್ಲೂ ಮೂಡಿದೆ. ಬೆಂಗಳೂರಿನ ಸ್ಟಾರ್ಟ್ಅಪ್ವೊಂದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಮನೆ ಬಾಗಿಲಿಗೇ ಬಂದು ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಗ್ರಹ ಮಾಡುತ್ತಿದೆ. ಮಾತ್ರವಲ್ಲ, ಹೀಗೆ ಸಂಗ್ರಹ ಮಾಡಿದ ತ್ಯಾಜ್ಯಕ್ಕಾಗಿ ಅದು ಹಣವನ್ನೂ ನೀಡುತ್ತದೆ.
2016ರ ಅಕ್ಟೋಬರ್ ತಿಂಗಳಿನಲ್ಲಿ ನವೀನ್ ಎಂಬುವವರು ತಮ್ಮ ಐದು ಮಂದಿ ಸ್ನೇಹಿತರ ಜೊತೆ ಸೇರಿ ಸ್ಥಾಪನೆ ಮಾಡಿದ್ದ ಖಾಲಿಬಾಟಲ್ ಎಂಬ ಸ್ಟಾರ್ಟ್ಅಪ್ ಈಗ ಪ್ರತಿ ತಿಂಗಳು 5 ಲಕ್ಷ ಜನರಿಂದ ಸಂಗ್ರಹ ಮಾಡಿದ 13 ಟನ್ಗಳಷ್ಟು ತ್ಯಾಜ್ಯವನ್ನು ಮರು ಬಳಕೆ ಮಾಡುತ್ತಿದೆ. ಸರ್ಕಾರಿ ದೃಢೀಕೃತ ಮರುಬಳಕೆ ಘಟಕಗಳಲ್ಲೇ ಇದು ತ್ಯಾಜ್ಯಗಳನ್ನು ಮರುಬಳಕೆ ಮಾಡುತ್ತಿದೆ.
ಖಾಲಿಬಾಟಲ್ ವಿಶೇಷವೆಂದರೆ, ಅದು ಮನೆ ಬಾಗಿಲಿಗೆ ಬಂದು ತ್ಯಾಜ್ಯವನ್ನು ಸಂಗ್ರಹ ಮಾಡುತ್ತದೆ, ಮಾತ್ರವಲ್ಲ ಹೀಗೆ ಸಂಗ್ರಹ ಮಾಡಿದ ತ್ಯಾಜ್ಯಕ್ಕೆ ಹಣವನ್ನೂ ನೀಡುತ್ತದೆ. ಕಾರ್ಪೋರೇಟ್ ಮನೆಗಳಿಗೆ ‘ಸ್ಟಾರ್ ಪಾರ್ಟ್ನರ್’ ಸೇವೆಯನ್ನು ಮತ್ತು ಆನ್ಲೈನ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಅನ್ನು ಇದು ಹೊಂದಿದೆ. ಒಂದು ಕೆಜಿ ತ್ಯಾಜ್ಯಕ್ಕೆ ಈ ಸ್ಟಾರ್ಟ್ಅಪ್ ರೂ. 12 ರಿಂದ ರೂ. 13 ತನಕ ಹಣವನ್ನು ಪಾವತಿ ಮಾಡುತ್ತದೆ. ವ್ಯಕ್ತಿಗಳಿಂದ, ಅಪಾರ್ಟ್ಮೆಂಟ್ ಮುಂತಾದ ಕಡೆಗಳಿಂದಲೂ ಇವರು ಕಸವನ್ನು ಕಲೆಕ್ಟ್ ಮಾಡುತ್ತಾರೆ, ಇದಕ್ಕೆ ‘ಗ್ರೀನ್ ಸ್ಕ್ವ್ಯಾಡ್’ ಎಂದು ಹೆಸರಿಟ್ಟಿದ್ದಾರೆ. ಇಲ್ಲಿನ ಗ್ರಾಹಕರು ನೀಡುವ ಒಂದು ಕೆಜಿ ತ್ಯಾಜ್ಯಕ್ಕೆ ಇವರು ರೂ.8 ನೀಡುತ್ತಾರೆ.
ಖಾಲಿಬಾಟಲ್ ವೆಬ್ಸೈಟ್ ಅಥವಾ ಸ್ಟಾರ್ಟ್ಅಪ್ ವಾಟ್ಸಾಪ್ ಸಂಖ್ಯೆ (+91 89705-89701) ನಲ್ಲಿ ಗ್ರಾಹಕರು ತಮ್ಮ ಸ್ಥಳದಲ್ಲಿ ಯಾವ ಸಮಯದಲ್ಲಿ ತ್ಯಾಜ್ಯ ಸಂಗ್ರಹ ಮಾಡಬೇಕು ಎಂಬುದನ್ನು ನಮೂದಿಸಬಹುದಾಗಿದೆ. ಅದಕ್ಕೆ ಅನುಗುಣವಾಗಿ ಇವರು ಬಂದು ತ್ಯಾಜ್ಯ ಸಂಗ್ರಹ ಮಾಡುತ್ತಾರೆ.
ತ್ಯಾಜ್ಯ ನೀಡಲು ಬಯಸುವ ಗ್ರಾಹಕರು ತಮ್ಮ ತ್ಯಾಜ್ಯಕ್ಕೆ ಹಣ ಪಡೆಯುವ ಆಯ್ಕೆಯನ್ನು ಅಥವಾ ಹಣ ಪಡೆಯದಿರುವ ಆಯ್ಕೆಯನ್ನು ಮಾಡಬಹುದು. ಹಣವನ್ನು ತೆಗೆದುಕೊಳ್ಳಲು ನಿರಾಕರಿಸುವ ಮೂಲಕ ಉತ್ತಮ ಉದ್ದೇಶಕ್ಕೆ ಕೊಡುಗೆಯನ್ನು ನೀಡಬಹುದಾಗಿದೆ.
ಖಾಲಿಬಾಟಲ್ ಪ್ಲಾಸ್ಟಿಕ್, ಕಾರ್ಡ್ಬೋರ್ಡ್, ಪತ್ರಿಕೆಗಳು, ಸಡಿಲ ಹಾಳೆಗಳು, ಹಳೆಯ ಪುಸ್ತಕಗಳು, ತಾಮ್ರದ ಬ್ಯಾಟರಿಗಳು ಮತ್ತು ಅಲ್ಯೂಮಿನಿಯಂನಂತಹ ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ಆದರೆ, ಹೆಚ್ಚಿನ ಮರುಬಳಕೆ ಘಟಕಗಳ ಕೊರತೆ ಇರುವ ಕಾರಣಕ್ಕೆಇವರುಗಳು ಥರ್ಮೋಕಾಲ್, ಪೀಠೋಪಕರಣಗಳು ಮತ್ತು ಬಟ್ಟೆಗಳಂತಹ ವಸ್ತುಗಳನ್ನು ಸಂಗ್ರಹಿಸುವುದಿಲ್ಲ.
ಮೊದಮೊದಲು ಸೈಕಲ್ ಅಂಗಡಿಗಳು, ರೆಸ್ಟೋರೆಂಟ್ಗಳು, ಅಪಾರ್ಟ್ಮೆಂಟ್ಗಳು ಮತ್ತು ಸಮುದಾಯ ಸಭಾಂಗಣಗಳಂತಹ ಸ್ಥಳೀಯ ಸಮುದಾಯವನ್ನು ಸಂಪರ್ಕಿಸಿ ಇವರು ತ್ಯಾಜ್ಯ ಸಂಗ್ರಹ ಮಾಡುತ್ತಿದ್ದರು. ನಂತರ ದೊಡ್ಡ ದೊಡ್ಡ ಮಳಿಗೆಗಳನ್ನು ಸಂಪರ್ಕಿಸಿ ಅಲ್ಲಿನ ನಿರ್ವಾಹಕರು, ಶಾಲೆಗಳು, ಕಾಲೇಜುಗಳನ್ನು ಸಂಪರ್ಕಿಸಿ ಅಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ತ್ಯಾಜ್ಯ ಸಂಗ್ರಹಣೆಯ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಇದೀಗ ಇವರ ಕಾರ್ಯಕ್ಕೆ ಬಾಯಿಯಿಂದ ಬಾಯಿಯ ಪ್ರಚಾರ ಸಿಕ್ಕಿದ್ದು, ಜನರು ಮುಂದೆ ಬಂದು ತ್ಯಾಜ್ಯಗಳನ್ನು ನೀಡುತ್ತಿದ್ದಾರೆ.
ಖಾಲಿಬಾಟಲ್ ಈಗ ಪ್ರತಿ ತಿಂಗಳು 36 ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಸಮುದಾಯಗಳಿಗೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹ ಮಾಡುತ್ತಿದೆ. ತ್ಯಾಜ್ಯ ಸಂಗ್ರಹವು ಪ್ರತಿ 15 ದಿನಗಳಿಗೊಮ್ಮೆ ನಡೆಯುತ್ತದೆ.
ಖಾಲಿಬಾಟಲ್ ತ್ಯಾಜ್ಯವನ್ನು ಸಂಗ್ರಹ ಮಾಡುವುದು ಮಾತ್ರವಲ್ಲ, ಈ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿನ ಮನೆಕೆಲಸದವರಿಗೆ ಮತ್ತು ಸ್ವಚ್ಛತಾ ಸಿಬ್ಬಂದಿಗೆ ತ್ಯಾಜ್ಯ ವಿಂಗಡನೆ, ನಿರ್ಮೂಲನೆಯ ಬಗ್ಗೆ ಶಿಕ್ಷಣವನ್ನೂ ನೀಡುತ್ತದೆ ಮತ್ತು ನಿವಾಸಿಗಳಿಗೆ ಜಾಗೃತಿ ಸಭೆಗಳನ್ನು ಆಯೋಜಿಸುತ್ತದೆ. ತ್ಯಾಜ್ಯವನ್ನು ಹೇಗೆ ಬೇರ್ಪಡಿಸಬೇಕು ಮತ್ತು ನಿರ್ವಹಿಸಬೇಕು ಎಂಬುದನ್ನು ಕಲಿಸಿಕೊಡುತ್ತದೆ.
ತಾವು ಸಂಗ್ರಹಿಸಿದ ಪ್ರತಿ ವಸ್ತುವೂ ಮರುಬಳಕೆಯಾಗಿದೆ ಎಂಬುದನ್ನು ಖಾಲಿ ಬಾಟಲ್ ತಂಡ ಖಚಿತಪಡಿಸಿಕೊಳ್ಳುತ್ತದೆ. 2017 ರಲ್ಲಿ ಇದು ತ್ಯಾಜ್ಯ ಮರುಬಳಕೆಗಾಗಿ ಬಿಬಿಎಂಪಿಯೊಂದಿಗೆ ಕೈಜೋಡಿಸಿತ್ತು. ಬಿಬಿಎಂಪಿಯ ಎರಡು ಒಣ ತ್ಯಾಜ್ಯ ಕೇಂದ್ರಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಇದು ಹೊಂದಿದೆ ಮತ್ತು ಈ ತ್ಯಾಜ್ಯವನ್ನು ವಿವಿಧ ವಾರ್ಡ್ಗಳಿಂದ ಸಾಗಿಸುವ ಸುಮಾರು 36 ವಾಹನಗಳನ್ನು ಕೂಡ ಇದು ನಿರ್ವಹಿಸುತ್ತದೆ. ಈ ಪ್ರತಿಯೊಂದು ವಾಹನವು ಸುಮಾರು 400 ಕೆಜಿ ಕಸವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಖಾಲಿಬಾಟಲ್ ತಂಡವು ತ್ಯಾಜ್ಯಗಳನ್ನು ಮರುಬಳಕೆ ಘಟಕಗಳಿಗೆ ಕಳುಹಿಸುವ ಮೊದಲು ರಟ್ಟು, ಕಾಗದ, ಪ್ಲಾಸ್ಟಿಕ್, ಗಾಜು ಮುಂತಾದ ವಸ್ತುಗಳನ್ನು ಬೇರ್ಪಡಿಸುತ್ತದೆ. ಹೀಗೆ ಬೇರ್ಪಡಿಸುವುದು ಅತೀ ಅಗತ್ಯ ಎಂದು ನವೀನ್ ಹೇಳುತ್ತಾರೆ. ಪ್ಲಾಸ್ಟಿಕ್ಗಳಲ್ಲಿ ವಿಭಿನ್ನ ಶ್ರೇಣಿಗಳಿವೆ, ಅವುಗಳ ರಿಸೈಕಲ್ಗೆ ಪ್ರತ್ಯೇಕ ಪ್ರಕ್ರಿಯೆ ಇದೆ. ಉದಾಹರಣೆಗೆ, ಈ ವಸ್ತುಗಳನ್ನು ಮರುಬಳಕೆ ಘಟಕಗಳಿಗೆ ಕಳುಹಿಸುವ ಮೊದಲು ತೆಳ್ಳನೆಯ ಪ್ಲಾಸ್ಟಿಕ್ ಚೀಲಗಳನ್ನು (ಸಿಂಗಲ್ ಯೂಸ್ ಪ್ಲಾಸ್ಟಿಕ್) ಪಿಇಟಿ ಬಾಟಲಿಗಳಿಂದ ಪ್ರತ್ಯೇಕವಾಗಿ ಇಡಲಾಗುತ್ತದೆ ಎಂದು ಅವರು ಹೇಳುತ್ತಾರೆ. ಪ್ಲಾಸ್ಟಿಕ್ ಬಾಟಲಿಗಳಂತಹ ವಸ್ತುಗಳನ್ನು ಬಣ್ಣವನ್ನು ಆಧರಿಸಿ ಮತ್ತೆ ಬೇರ್ಪಡಿಸಲಾಗುತ್ತದೆ, ಪಾರದರ್ಶಕ ಪ್ಲಾಸ್ಟಿಕ್ಗೆ ಕೆ.ಜಿ.ಗೆ 23 ರಿಂದ 24 ಇದೆ ಎನ್ನುತ್ತಾರೆ.
ನಗರವನ್ನು ಸ್ವಚ್ಛವಾಗಿಡುವುದು ಮಾತ್ರವಲ್ಲದೇ, ಖಾಲಿಬಾಟಲ್ ತಂಡ ಶಾಲೆಯನ್ನು ತೊರೆದವರನ್ನು ಕೆಲಸಕ್ಕೂ ನೇಮಕ ಮಾಡಿಕೊಳ್ಳುತ್ತಿದೆ. ಬಡತನದ ಹಿನ್ನಲೆಯಲ್ಲಿರುವವರಿಗೆ ಕೆಲಸ ನೀಡಿ ಅವರ ಕುಟುಂಬಕ್ಕೆ ಆಧಾರವಾಗುತ್ತಿದೆ.
ಖಾಲಿಬಾಟಲ್ ನಗರದ ಇತರ ಸ್ಟಾರ್ಟ್ಅಪ್ಗಳೊಂದಿಗೆ ತನ್ನ ಪ್ಲಾಟ್ಫಾರ್ಮ್ ಅನ್ನು ತಮ್ಮ ಅಪ್ಲಿಕೇಶನ್ಗಳಲ್ಲಿ ಸಂಯೋಜಿಸಲು ಮತ್ತು ಹೆಚ್ಚಿನ ಪ್ರಚಾರವನ್ನು ಪಡೆಯಲು ಮಾತುಕತೆಯನ್ನು ನಡೆಸುತ್ತಿದೆ. ಪ್ರಸ್ತುತ, 14 ಜನರ ತಂಡದೊಂದಿಗೆ, ಖಾಲಿಬಾಟಲ್ ಸುಮಾರು 51,2340 ನೋಂದಾಯಿತ ಗ್ರಾಹಕರನ್ನು ಹೊಂದಿದೆ. ಸರಾಸರಿ, ಇದು ತಿಂಗಳಲ್ಲಿ 13 ಟನ್ ತ್ಯಾಜ್ಯ ಮತ್ತು ವರ್ಷದಲ್ಲಿ 156 ಟನ್ ತ್ಯಾಜ್ಯವನ್ನು ಮರುಬಳಕೆ ಮಾಡುತ್ತಿದೆ.
ತ್ಯಾಜ್ಯ ಬೇರ್ಪಡಿಸುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಒಂದು ಸವಾಲು ಎಂದು ನವೀನ್ ಇನ್ನೂ ನಂಬಿದ್ದಾರೆ. ಮುಂದಿನ ವರ್ಷದ ಆರಂಭದ ವೇಳೆಗೆ ಮಂಗಳೂರು ಮತ್ತು ಚೆನ್ನೈನಲ್ಲಿ ಖಾಲಿಬಾಟಲ್ ಕಾರ್ಯಾಚರಣೆಯನ್ನು ವಿಸ್ತರಿಸಲು ಅವರು ಯೋಜಿಸಿದ್ದಾರೆ. ಮಂಗಳೂರಿನಿಂದ ಸಾಕಷ್ಟು ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಆ ನಗರವನ್ನು ಆಯ್ಕೆ ಮಾಡಲಾಗಿದೆ ಎಂದು ನವೀನ್ ಹೇಳಿದ್ದಾರೆ.
“ಸರಿಯಾದ ಜ್ಞಾನ ಮತ್ತು ತಂತ್ರಜ್ಞಾನದಿಂದ, ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಾನು ನಂಬುತ್ತೇನೆ. ಪರಿಸರವನ್ನು ಸೂಕ್ತ ರೀತಿಯಲ್ಲಿ ರಕ್ಷಿಸಲು ಈ ವಲಯದ ಎಲ್ಲರೊಂದಿಗೂ ಕೈಜೋಡಿಸಲು ನಾವು ಸಂತೋಷಪಡುತ್ತೇವೆ” ಎಂದು ಅವರು ಹೇಳುತ್ತಾರೆ.
ಕಸದಿಂದ ರಸವನ್ನು ತೆಗೆಯುವ ಉದ್ದೇಶದಿಂದ ಆರಂಭವಾದ ಖಾಲಿ ಬಾಟಲ್ ಸ್ಟಾರ್ಟಅಪ್ ತ್ಯಾಜ್ಯ ನಿರ್ವಹಣೆಯನ್ನು ಹೇಗೆ ವಾಣಿಜ್ಯೀಕರಣಗೊಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇದರ ಕಾರ್ಯ ನಿಜಕ್ಕೂ ಪ್ರಶಂಸನೀಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.