ಧರ್ಮ ಇರುವುದು ಮಾನವ ಸಮುದಾಯದ ಶೋಷಣೆಗೆ ಅಲ್ಲ. ಮೇಲು-ಕೀಳು, ಬಡವ, ಬಲ್ಲಿದ ಎಂಬ ಭೇದ ಭಾವ ಸೃಷ್ಟಿಸಲಲ್ಲ. ಹುಟ್ಟಿದ ಪ್ರತಿ ಜೀವಿಗೂ ಆತ್ಮ ಗೌರವದ ಬದುಕನ್ನು ನೀಡುವುದೇ ನಿಜವಾದ ಧರ್ಮದ ಸಾರ. ಅದೇ ಹಿಂದೂ ಧರ್ಮದ ಅಂತಃಸತ್ವ ಎಂದು ಭಾರತದ ಪುಣ್ಯ ಭೂಮಿಯಲ್ಲಿ ಜನಿಸಿದ ಅದೆಷ್ಟೋ ಮಹಾತ್ಮರು ಸಾರಿ ಸಾರಿ ಹೇಳಿದ್ದಾರೆ. ಆದರೆ…?
ಭಾರತ ಮಾತೆಯ ಮಡಿಲಲ್ಲಿ ಅದೆಷ್ಟೋ ಪುಣ್ಯ ಪುರುಷರು, ಮಹಾತ್ಮರು, ಸಂತರು ಜನ್ಮ ತಾಳಿ ಕೆಳ ಸಮುದಾಯದ ಉದ್ಧಾರಕ್ಕೆ ಶ್ರಮಿಸಿದರು. ಆದರೂ ಪರಂಪರೆ, ಸಂಪ್ರದಾಯ, ದೇವರು-ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅಮಾನವೀಯತೆಗಳನ್ನು ಸಂಪೂರ್ಣ ತೊಡೆದು ಹಾಕಲು ಅವರಿಂದಲೂ ಸಾಧ್ಯವಾಗಲಿಲ್ಲ. ಹಿಂದೂ ಧರ್ಮದಲ್ಲಿ ತಾವೇ ಸರ್ವಶ್ರೇಷ್ಠರೆಂದು ಸ್ವಯಂ ಘೋಷಿಸಿಕೊಂಡ ಬೆರಳೆಣಿಕೆಯಷ್ಟಿದ್ದ ಒಂದು ವರ್ಗ, ಹಿಂದೂ ಧರ್ಮದಲ್ಲಿ ಬಹುಸಂಖ್ಯಾತರಾಗಿದ್ದ ಕೆಳವರ್ಗದವರನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಮನುಷ್ಯತ್ವವನ್ನೇ ಮರೆತ ಆ ವರ್ಗ ಕೆಳಸಮುದಾಯದವರು ತಮ್ಮೆದುರು ಬಟ್ಟೆ ಹಾಕಿಕೊಂಡು ಹೋಗಬಾರದು, ಸ್ತ್ರೀಯರೂ ಕೂಡ ಎದೆಯ ಮೇಲೆ ಬಟ್ಟೆ ಹಾಕುವಂತಿಲ್ಲ ಎಂಬ ಅನಾಗರಿಕ, ಕ್ರೂರ ಪದ್ಧತಿಯನ್ನು ಹೇರಿ ಮಾನವ ಸಮುದಾಯ ತಲೆ ತಗ್ಗಿಸುವಂತಹ ಸಂಪ್ರದಾಯವನ್ನು ಹುಟ್ಟು ಹಾಕಿದ್ದರು. ಕೆಳವರ್ಗದವರು ಶಿಕ್ಷಣ ಸಂಸ್ಥೆ, ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ. ದೇವರನ್ನು ಪೂಜಿಸಬಾರದು. ಸರ್ಕಾರಿ ಉದ್ಯೋಗ ಪಡೆಯುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ಮಹಾಪಾಪವೆಂದು ಬಿಂಬಿಸಿ, ಅವರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿ, ಅವರ ಆತ್ಮಗೌರವದ ಬದುಕಿಗೆ ಚ್ಯುತಿಯನ್ನುಂಟು ಮಾಡಿದ್ದರು. ಬೇರೆ ಯಾವುದೇ ಮತ-ಧರ್ಮದಲ್ಲಿ ಇಂತಹ ಕ್ರೂರವಾದ ಜಾತಿ ಪದ್ಧತಿ, ಅಸಮಾನತೆ, ಅಸ್ಪ್ರಶ್ಯತೆ ಕಂಡು ಬರುವುದಿಲ್ಲ. ಇಂತಹ ಅಸಮಾನತೆ, ಅಮಾನವೀಯ ಪದ್ಧತಿ, ಅಸ್ಪೃಶ್ಯತೆಯಿಂದ ನೊಂದ ಅನೇಕ ಹಿಂದೂ ಕುಟುಂಬಗಳು ಅನ್ಯ ಧರ್ಮಗಳಲ್ಲಿ ತಮಗೆ ಆತ್ಮಗೌರವದ ಬದುಕು ದೊರೆಯುತ್ತದೆಂದು ಮತಾಂತರಗೊಂಡಿರುವುದು ವಿಷಾದನೀಯ. ಅಂದು ತುಳುನಾಡಿನಲ್ಲಿ ಬಿಲ್ಲವರು ಸೇರಿದಂತೆ, ಕೆಳವರ್ಗದವರು ಆರ್ಯ ಸಮಾಜ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದು ಈಗ ಇತಿಹಾಸ. ಆದರೆ ಇದಕ್ಕೆ ಕಾರಣ ಯಾರು..?
ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಅಸ್ಪೃಶ್ಯರು, ಶೋಷಿತರು, ಹಿಂದುಳಿದ ಸಮುದಾಯದ ಉದ್ಧಾರಕ್ಕೆ ಅವತರಿಸಿದ ಪುಣ್ಯ ಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳು ನೊಂದ ಜನಸಮುದಾಯದಲ್ಲಿ ಸಮಾನತೆಯ ಜ್ಯೋತಿ ಬೆಳಗಿಸಿದರು. ಜಾತಿ- ಮತ- ಧರ್ಮದ ತಾರತಮ್ಯದಿಂದ ಶೋಷಿತರಿಗೆ ಆತ್ಮಸ್ಥೈರ್ಯದ ಬದುಕು ನೀಡಿದ ಶ್ರೀ ನಾರಾಯಣ ಗುರುಗಳು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಬೇರೂರಿದ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಿ ಆ ತನಕ ಯಾರೂ ಮಾಡದ ಧಾರ್ಮಿಕ ಪರಿವರ್ತನೆಗೆ ನಾಂದಿ ಹಾಡಿದರು.
ಶೋಷಿತರ ಬದುಕಿನಲ್ಲಿ ನವ ಮನ್ವಂತರದ ಸೂರ್ಯೋದಯವಾಯಿತು
ಅಂದು ಹಿಂದೂ ಧರ್ಮದಲ್ಲಿದ್ದ ಅಮಾನವೀಯ ಪದ್ಧತಿಗಳು, ಧಾರ್ಮಿಕ ಸಾಮಾಜಿಕ ಶೋಷಣೆ, ಅಸಮಾನತೆಯಿಂದ ನಲುಗಿಹೋಗಿದ್ದ ಬಹುಸಂಖ್ಯಾತ ಕೆಳವರ್ಗದ ಸಮುದಾಯದ ಬಾಳಲ್ಲಿ ಆತ್ಮಸ್ಥೈರ್ಯ, ನವಚೈತನ್ಯ ತುಂಬಿ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಸೂರ್ಯೋದಯಕ್ಕಾಗಿ ಈ ಸಮಾಜ ಕಾತರದಿಂದ ಕಾಯುತ್ತಿತ್ತು.
ಆ ದಿನ ಓಣಂ ಹಬ್ಬದ ಸಂಭ್ರಮ ಎಲ್ಲೆಡೆ ಪಸರಿಸಿತ್ತು. ಕೇರಳದ ತಿರುವನಂತಪುರದಿಂದ 10 ಕಿ.ಮಿ ದೂರದ ಬಡಗುಳ್ಳ ಚೆಂಬಳತಿ ಗ್ರಾಮದಲ್ಲಿ ಮೇಡಯಿಲ್ಲ್ನ ವಯಾಲ್ವಾರತ್ ಬೀಡಿನಲ್ಲಿ ಈಳವ ಸಮಾಜದ ಶ್ರೀ ಮಾಡನ್ಆಶನ್ ಮತ್ತು ಕುಟ್ಟಿಯಮ್ಮ ದಂಪತಿಗಳಿಗೆ ಮಲೆಯಾಳಿ ಶತವರ್ಷ 1030 (ಕ್ರಿ.ಶ 1855) ಓಣಂ ಹಬ್ಬದ ಸಂಭ್ರಮದಲ್ಲಿ ಶತಭಿಷ ನಕ್ಷತ್ರದ ಶುಭ ಘಳಿಗೆಯಲ್ಲಿ ಮಹಾಪುರುಷನೊಬ್ಬನ ಜನನವಾಯಿತು. ಆ ಪುಣ್ಯ ಘಳಿಗೆಯಲ್ಲಿ ಶೋಷಿತರ ಬಾಳಲ್ಲಿ ಆವರಿಸಿದ ಅಂಧಕಾರವನ್ನು ಕಳೆದು ಬೆಳಕನ್ನು ನೀಡುವ ಸೂರ್ಯೋದಯವಾಯಿತು. ಆ ಅಸಾಮಾನ್ಯ ಮಗು ಜನಿಸಿದಾಗ ಮತ್ತು ಚಿಕ್ಕದಿರುವಾಗ ಅತ್ತಿದ್ದನ್ನು ಯಾರೂ ಕೇಳಲೇ ಇಲ್ವಂತೆ. ಮಗು ಹುಟ್ಟು ಮೌನಿ. ಜಗದೋದ್ಧಾರಕನಾಗಿ ಜನಿಸಿದ ಆ ಮುದ್ದು ಪುಟಾಣಿಗೆ ನಾರಾಯಣ ಎಂದು ನಾಮಕರಣ ಮಾಡಿ ಮುದ್ದಿನಿಂದ ನಾಣು ಎಂದು ಕರೆದರು.
ಬೆಳೆಯ ಸಿರಿ ಮೊಳಕೆಯಲ್ಲೇ ಎನ್ನುವಂತೆ ಬಾಲಕ ನಾಣು ಅಪ್ರತಿಮ ಪ್ರತಿಭಾ ಸಂಪನ್ನನಾಗಿ, ಆಧ್ಯಾತ್ಮಿಕ ಚಿಂತನೆಯ ತುಡಿತದಿಂದ ಬಾಲ್ಯದಲ್ಲೇ ಅಪಾರವಾದ ವಿದ್ಯಾಸಂಪನ್ನತೆಯನ್ನು ಪಡೆದ. ರಾಮಾಯಣ, ಮಹಾಭಾರತ, ಪುರಾಣ ಸೇರಿದಂತೆ ವಿವಿಧ ಧರ್ಮಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ. ನುರಿತ ವೈದ್ಯ ಪಂಡಿತರಾಗಿದ್ದ ತಮ್ಮ ಸೋದರ ಮಾವನವರಿಂದ ವೈದ್ಯಕೀಯ ಗ್ರಂಥಗಳ ಅಭ್ಯಾಸದ ಜತೆಗೆ ಮದ್ದಿನ ಗಿಡ ಮೂಲಿಕೆಗಳ ಪರಿಚಯ ಮತ್ತು ಔಷಧಗಳ ತಯಾರಿಕೆಯನ್ನು ಅವುಗಳನ್ನು ಉಪಯೋಗಿಸುವ ವಿಧಾನವನ್ನು ಕಲಿತುಕೊಂಡನು. ಬಡವ, ಬಲ್ಲಿದ, ಮೇಲು ಕೀಳು ಎನ್ನದೆ ಎಲ್ಲರೊಂದಿಗೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು.
ಹಿಂದೂ, ಮುಸ್ಲಿಂ, ಕ್ರಿಸ್ತ ಹೀಗೆ ಎಲ್ಲಾ ಮತ ಧರ್ಮದವರೊಂದಿಗೆ ಬೆರೆತು ಅವರ ಧರ್ಮಗ್ರಂಥ ಅಧ್ಯಯನ ಮಾಡುವ ಜತೆಗೆ ಯೋಗ ಶಿಕ್ಷಣ, ಸಂಸ್ಕೃತ ಅಧ್ಯಯನದೊಂದಿಗೆ, ಕೇವಲ ಬ್ರಾಹ್ಮಣರಿಂದ ಅರ್ಥೈಸಿಕೊಳ್ಳಲಾಗುತ್ತಿದ್ದ ವೇದ ಉಪನಿಷತ್ಗಳನ್ನು ಅಧ್ಯಯನ ಮಾಡಿ ಧರ್ಮ ಸೂಕ್ಷ್ಮವನ್ನು ಅರ್ಥೈಸಿಕೊಂಡು ತನ್ನ ಜ್ಞಾನ ಭಂಡಾರವನ್ನು ತುಂಬಿಸಿಕೊಂಡು ಮುಂದೆ ಜನರಿಂದ ನಾಣು ಆಶಾನ್ ಎಂದು ಕರೆಸಿಕೊಂಡರು.
ಈ ನಡುವೆ ಮನೆಯವರು ಆಯುರ್ವೆದ ವೈದ್ಯರ ಮಗಳ ಜತೆ ನಾರಾಯಣನ ಮದುವೆ ಸಿದ್ಧತೆ ನಡೆಸಿದರು. ನಾರಾಯಣ ಮದುವೆಗೆ ಸ್ಪಷ್ಟವಾದ ಒಪ್ಪಿಗೆ ನೀಡದಿದ್ದರೂ ಮದುವೆ ನಡೆದೇಹೋಯಿತು. ಇಷ್ಟೆಲ್ಲ ಆಗುವಾಗ ರಾಮಾಯಣ ಕಾವ್ಯದ ಓದಿನಲ್ಲಿ ಅವರು ಮುಳುಗಿಹೋಗಿದ್ದರು. ಮದುವೆ ಆದರೂ ಸಂಬಂಧ ಬೆರೆಯಲಿಲ್ಲ. ನಾರಾಯಣನ ಲೋಕವೇ ಬೇರೆಯಾಯಿತು. ಮನೆಯವರನ್ನೆಲ್ಲಾ ಕರೆದು ‘ನನ್ನ ಜನ್ಮದ ಉದ್ದೇಶ ಬೇರೆ ಇದೆಯೆಂದೂ ಇದಕ್ಕೆ ಅಡ್ಡಿಪಡಿಸಬಾರದೆಂದೂ’ ಹೇಳಿ ಸಂಪೂರ್ಣವಾಗಿ ಸಂಸಾರತ್ಯಾಗ ಮಾಡಿ ಲೋಕಾಯನದತ್ತ ಹೊರಟರು.
ಪರಿವ್ರಾಜಕ-ತತ್ತ್ವಶೋಧಕ
ಊರನ್ನು ಬಿಟ್ಟು ಎಲ್ಲೆಂದರಲ್ಲಿ ಅಲೆದಾಡಿದರು. ಅವರು ಸಿಕ್ಕಸಿಕ್ಕ ಹಳ್ಳಿಗಳಲ್ಲಿ ಹುಡುಗರಿಗೆ ಆಧ್ಯಾತ್ಮಿಕ ಬೋಧನೆಯನ್ನು ಮಾಡಿದರು. 1884 ರಲ್ಲಿ ತಂದೆ ತೀರಿಕೊಂಡಾಗ ಅವರಿಗಿದ್ದ ಮನೆಯ ಸಂಬಂಧ ಪೂರಾ ಕಿತ್ತುಹೋಯಿತು. ಈಗ ಸತ್ಯದ ಹುಡುಕಾಟ ಪ್ರಾರಂಭಿಸಿದರು. ಒಂದು ದಿನ ಅಣಿಯಾರ್ ಎಂಬ ಸ್ಥಳದಲ್ಲಿ ಚಟ್ಟಂಬಿಸ್ವಾಮಿಗಳ ಪರಿಚಯವಾಯಿತು. ಚಟ್ಟಂಬಿಸ್ವಾಮಿಗಳು ನಾಯರ್ ಜಾತಿಗೆ ಸೇರಿದವರು. ಇವರಿಬ್ಬರ ಸ್ನೇಹಕ್ಕೆ ಜಾತಿ ಅಡ್ಡಿಬರಲಿಲ್ಲ. ನಾರಾಯಣಗುರು ತಮ್ಮ ಜಾತಿಭಾವನೆಯನ್ನು ಎಂದೋ ಕಳೆದುಕೊಂಡಿದ್ದರು. ಚಟ್ಟಂಬಿಸ್ವಾಮಿಗಳು ಇವರಿಗೆ ‘ಬಾಲಸುಬ್ರಹ್ಮಣ್ಯ ಮಂತ್ರ’ವನ್ನು ಉಪದೇಶಿಸಿದರು. ತಯಾಟು ಅಯ್ಯಾವು ಎಂಬ ಯೋಗಿಗಳ ಬಳಿ ಪ್ರಾಣಾಯಾಮ, ಯೋಗಾಸನ, ಧೌತಿ, ಧ್ಯಾನಯೋಗ ಸಂಪ್ರದಾಯಗಳನ್ನು ಅಭ್ಯಾಸ ಮಾಡಿದರು. ಅವರು ರಾತ್ರಿಹೊತ್ತು ದೇವಸ್ಥಾನದ ಬಾಗಿಲಲ್ಲೊ, ಮಾರ್ಗದ ಬದಿಯ ಬಂಡೆಯ ಮೇಲೊ ವಿಶಾಲ ಮರದಡಿಯಲ್ಲೊ ಬಟ್ಟೆಹಾಸಿ ಮಲಗುತ್ತಿದ್ದರು. ನಿಜವಾದ ಪರಿವ್ರಾಜಕರಾಗಿಯೇ ಸಂಚರಿಸುತ್ತಿದ್ದರು. ಒಂದು ದಿನ ಕನ್ಯಾಕುಮಾರಿಯಿಂದ ಸ್ವಲ್ಪ ದೂರದಲ್ಲಿದ್ದ ಮರುತ್ವಾಮಲೆಯನ್ನು ಹೊಕ್ಕರು. ಅರಣ್ಯದ ತುತ್ತತುದಿಯಲ್ಲಿದ್ದ ನಿಸರ್ಗನಿರ್ಮಿತ ಗುಹೆಯಲ್ಲಿ ಸಾಧನೆ ಮಾಡಿದರು. ಅವರು ಬರೆದ ‘ಆತ್ಮೋಪದೇಶಶತಕಂ’ ಕೃತಿಯಲ್ಲಿ ಇಲ್ಲಿ ತಮಗಾದ ವಿಶಿಷ್ಟ ಅನುಭವಗಳನ್ನು ದಾಖಲಿಸಿದ್ದುಂಟು. ಇಲ್ಲಿಗೆ ಜನ ಬರಲು ಆರಂಭಿಸಿದಾಗ ಮರುತ್ವಾಮಲೆಯನ್ನು ಬಿಟ್ಟು ಕೆಲವು ಕಾಲ ಊರೂರು ಅಲೆದಾಡಿದರು. ಅವರು ಕನ್ಯಾಕುಮಾರಿ, ಕುಳ್ಚ್ಚಲ್, ಕುರಿಂಕೊಳಂ, ಪೂವಾರ್, ಕೋವಳಂ, ತಿರುವನಂತಪುರಂ ಮುಂತಾದೆಡೆಗಳಲ್ಲಿ ಅವಧೂತರಂತೆ ಸಂಚರಿಸಿದರು.
ನಾರಾಯಣ ಗುರುಗಳು ನಾಗರಕೋಯಿಲ್ನಲ್ಲಿದ್ದಾಗ ‘ಅಮ್ಮಾಳ್’ ಎಂಬ ಯೋಗಿನಿಯೊಬ್ಬರ ಪರಿಚಯವಾಯಿತು. ಆಕೆಯ ಬಳಿ ಹೋದಾಗ ಆಕೆ ತಪಸ್ಸಿನಲ್ಲಿದ್ದಳು. ಆಗ ಸಮೀಪದ ಮರದಡಿಯಲ್ಲಿ ತಪಸ್ಸು ಮುಗಿಯುವವರೆಗೂ ಕಾದಿರಬೇಕೆಂದು ವಿಶ್ರಮಿಸಿದರು. ಆ ಊರಿನ ತಹಸಿಲ್ದಾರ್ ಫಲಪುಷ್ಪಗಳನ್ನು ಯೋಗಿನಿಗೆ ಅರ್ಪಿಸಲು ತಂದಿದ್ದರು. ಆಗ ಸನ್ನೆ ಮೂಲಕ ನಾರಾಯಣ ಗುರುಗಳತ್ತ ತೋರಿಸಿ ಫಲಪುಷ್ಪ ಸಮರ್ಪಣೆ ಮಾಡಲು ತಿಳಿಸಿದಳು. ತನ್ನ ಬಳಿ ಕರೆದು ‘ನೀನು ಯಾರೆಂದು ನನಗೆ ಗೊತ್ತು. ನಿನ್ನ ಆತ್ಮೋದ್ಧಾರದ ಜತೆಗೆ ಸಮಾಜೋದ್ಧಾರ ನಿನ್ನಿಂದ ಆಗುತ್ತದೆ’ ಎಂದು ಆಶೀರ್ವದಿಸಿದಳು. ಇದು ನಾರಾಯಣ ಗುರುಗಳಲ್ಲಿ ಇಮ್ಮಡಿ ಶಕ್ತಿಯನ್ನು ತುಂಬಿದಂತಾಯಿತು. ತಿರುವನಂತಪುರಕ್ಕೆ ಹಿಂತಿರುಗಿದರು. ನೆಯ್ಯಾರ್ನದಿ ತೀರದ ದಟ್ಟಡವಿ ಅರವೀಪುರಂ ತಾಣದಲ್ಲಿ ತಪೋನಿರತರಾದರು. ಜನರು ನಾರಾಯಣ ಗುರುಗಳನ್ನು ಕಾಣಲು ಬರಲಾರಂಭಿಸಿದರು. ಅರವೀಪುರಂ ಅರಣ್ಯಾಧಿಕಾರಿ ಜನ ಬಂದು ಹೋಗಲು ರಸ್ತೆ ನಿರ್ಮಾಣ ಮಾಡಿಕೊಟ್ಟರು. ಆ ಅರಣ್ಯಾಧಿಕಾರಿಗೆ ಮಕ್ಕಳಿರಲಿಲ್ಲ. ಆತ ಬಂದು ಗುರುಗಳ ಆಶೀರ್ವಾದ ಬೇಡಿದ. ಮುಂದೆ ಆತನಿಗೆ ಮಗಳು ಜನಿಸಿದಳು. ಆಕೆಯೇ ನಾರಾಯಣೀ ಅಮ್ಮ. ಮುಂದೆ ಉತ್ತಮ ಶಾಸಕಿಯಾಗಿ ಹೆಸರು ಮಾಡಿದಳು.
ಕೇರಳದ ತಳವರ್ಗದ ಜನರಿಗಾಗಿ ಹೊಸದೊಂದು ದೇವಸ್ಥಾನವನ್ನು ನಾರಾಯಣಗುರುಗಳು ಅರವೀಪುರಂ ತಾಣದಲ್ಲಿ ನಿರ್ಮಾಣ ಮಾಡಿಸಿದರು. 1888ನೇ ಇಸವಿ ಶಿವರಾತ್ರಿ ದಿನ ನೆಯ್ಯಾರನದಿ ಪೂರ್ವತೀರದಲ್ಲಿ ಜನ ಸೇರಿದ್ದರು. ನಾರಾಯಣಗುರುಗಳು ನದಿಗೆ ಇಳಿದು ಅಲ್ಲಿಂದ ಶಿವಲಿಂಗವನ್ನು ತಂದು ಮಂದಿರದಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ ಸೇರಿದ್ದ ಜನರಿಗೆ ಪಂಚಾಕ್ಷರಿಮಂತ್ರವನ್ನು ಬೋಧಿಸಿದರು. ಲಕ್ಷಾಂತರ ಜನರ ಪ್ರತಿನಿಧಿಯಾಗಿ ಶಿವಲಿಂಗವನ್ನು ಸ್ಥಾಪಿಸಿ ಹೊಸ ಆಧ್ಯಾತ್ಮಿಕ ಆಂದೋಲನಕ್ಕೆ ನಾಂದಿ ಹಾಡಿದರು. ಆಗ ಜನರಿಗೆ ‘ಉತ್ತಮರ ನಿಂದೆಗೆ ನೀವು ಹೆದರಬೇಡಿ. ಅವರ ವಿರುದ್ಧ ಪ್ರತೀಕಾರವನ್ನೂ ಮಾಡಬೇಡಿ. ಅವರ ಶಿವನಿಗೆ ನಮ್ಮ ಪೂಜೆಯಿಂದ ಮೈಲಿಗೆಯಾಗಿದ್ದರೆ ನಾನು ಪ್ರತಿಷ್ಠಾಪಿಸಿದ್ದು ಮೈಲಿಗೆ ಶಿವನನ್ನೇ. ಜನ ಅವನನ್ನೇ ಪೂಜಿಸುತ್ತಾರೆ. ಬೇಕಾದರೆ ಮಡಿಶಿವನನ್ನು ಅವರು ಪೂಜಿಸಲಿ’ ಎಂದು ಉದ್ಘೊಷಿಸಿದರು. ‘ಈ ಆಶ್ರಮ, ಸಹೋದರತ್ವದ ನೆಲೆಯನ್ನೂ ಭ್ರಾತೃತ್ವದ ನೀತಿಯನ್ನೂ ಸಾರುತ್ತದೆ’ ಎಂದು ಜನರಿಗೆ ಮನದಟ್ಟು ಮಾಡಿಕೊಟ್ಟರು. ನಾರಾಯಣ ಗುರುಗಳು ಯಾವುದೇ ಜಾತಿಧರ್ಮದ ವಿರುದ್ಧ ದನಿಯೆತ್ತದೆ ಜಗತ್ತು ಎಂದೂ ಅನುಸರಿಸಬೇಕಾದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಯ ಮೊದಲ ಸೋಪಾನವನ್ನು ಸಾರಿ ‘ನಡೆದಾಡುವ ದೇವಮಾನವ’ ಎನಿಸಿಕೊಂಡರು. ಆಗ ಅವರ ಪ್ರಾಯ ಸುಮಾರು 36 ವರ್ಷ.
ನಾರಾಯಣ ಗುರುಗಳು ಪರಿವ್ರಾಜಕರಾಗಿ ದೇಶಸಂಚಾರ ಮಾಡಿದರು; ತಳವರ್ಗದ ಜನರಿಗೆ ಆಧ್ಯಾತ್ಮಿಕ ಪ್ರಭೆಯ ರುಚಿಯನ್ನು ಹತ್ತಿಸಿದರು. ಅನೇಕ ರೋಗಗಳನ್ನು ವಾಸಿಮಾಡಿದರು. ಅನೇಕ ಜನಾಂಗೀಯ ಕಲಹಗಳನ್ನು ಉಪಶಮನಗೊಳಿಸಿದರು. ಅವರು ತಮಿಳು ‘ಶಿವಪುರಾಣ’ವನ್ನು ಹೆಚ್ಚಾಗಿ ಪ್ರವಚನ ಮಾಡುತ್ತಿದ್ದರು. ‘ತಿರುಕ್ಕುರುಳ್’ ಕೃತಿಯನ್ನು ಮಲೆಯಾಳಂಗೆ ಅನುವಾದ ಮಾಡಿದರು. ಶಂಕರಾಚಾರ್ಯರ ಅದ್ವೈತ ಸಿದ್ಧಾಂತವನ್ನು ನಾರಾಯಣ ಗುರುಗಳು ಒಪ್ಪಿದ್ದರು. ತಮ್ಮ ಶಿಷ್ಯರಿಗೂ ಭಕ್ತರಿಗೂ ಶಂಕರರ ತತ್ತ್ವಗಳನ್ನು ವಿಮರ್ಶಾಪೂರ್ವಕ ವಿವರಿಸುತ್ತಿದ್ದರು. 1912ರಲ್ಲಿ ವರ್ಕಳದಲ್ಲಿ ತಮ್ಮ ಆಶ್ರಮ ಸ್ಥಾಪಿಸಿದರಷ್ಟೆ. ಅಲ್ಲಿ ಎತ್ತರದ ಬೆಟ್ಟವಿತ್ತು. ಅದರ ಮೇಲೆ ನಾರಾಯಣ ಗುರುಗಳು ಧ್ಯಾನ ಮಾಡುತ್ತಿದ್ದರು. ಅಲ್ಲಿ ಸುಂದರವಾದ ಶಾರದಾ ಮಂದಿರವೊಂದನ್ನು ಕಟ್ಟಿದರು. ಅದಕ್ಕೆ ‘ಶಿವಗಿರಿ’ ಎಂದು ನಾಮಕರಣ ಮಾಡಿದರು. ತಮ್ಮ ಚಿಂತನೆ ಮತ್ತು ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಆಯ್ದ ಕೆಲವರಿಗೆ ಸಂನ್ಯಾಸದೀಕ್ಷೆ ನೀಡಿದರು. ಅವರಲ್ಲಿ ನಾಯರ್, ನಂಬೂದಿರಿ, ಈಳವ, ಶೆಣೈ ಸಮುದಾಯಕ್ಕೆ ಸೇರಿದವರೂ ಇದ್ದರು. ನಂತರ ಕೇರಳ, ಕರ್ಣಾಟಕ, ತಮಿಳುನಾಡು ಮತ್ತು ಶ್ರೀಲಂಕ ಸೇರಿದಂತೆ ಎಪ್ಪತ್ತೊಂಭತ್ತು ದೇವಸ್ಥಾನಗಳನ್ನು ನಿರ್ಮಾಣ ಮಾಡಿದರು. ಅಲ್ಲಿ ಶಿವಲಿಂಗ ಮತ್ತು ದೇವಿಮೂರ್ತಿಗಳನ್ನು ಪ್ರತಿಷ್ಠಾಪಿಸಿದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯವು ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡಿತೆಂಬುದು ವಿಶೇಷ.
ಅವರು ಪರ್ಯಟಣೆಯಲ್ಲಿ ಹಲವಾರು ಆಶ್ರಮಗಳನ್ನು ಸ್ಥಾಪಿಸಿದರು. ಆಳ್ವಾಯಿ ನದೀತೀರದಲ್ಲಿ ದೊಡ್ಡ ಜಮೀನನ್ನು ಖರೀದಿಸಿ ಪರ್ಣಕುಟೀರ ಕಟ್ಟಿದರು. ಅವರು ಇಲ್ಲಿಂದ ಎರಡನೆಯ ಹಂತದ ಆಧ್ಯಾತ್ಮಿಕೋನ್ನತಿಯನ್ನು ಪ್ರಾರಂಭಿಸಿ ‘ನಾನಿಲ್ಲದೆ ಅವನಿಲ್ಲ. ಅವನಿಲ್ಲದೆ ನಾನಿಲ್ಲ. ನಮ್ಮಿಬ್ಬರನ್ನು ಬಿಟ್ಟು ಸಮಾಜವಿಲ್ಲ. ಇವು ಯಾವುವೂ ಬೇರೆಬೇರೆಯಲ್ಲ’ ಎಂಬ ತತ್ತ್ವಪ್ರಚಾರ ಕೈಗೊಂಡರು. ಆ ಪ್ರದೇಶಕ್ಕೆ ‘ಅದ್ವೈತಾಶ್ರಮ’ ಎಂಬ ಹೆಸರನ್ನಿಟ್ಟರು. ಇಲ್ಲಿ ಸಂಸ್ಕೃತ ಶಾಲೆ ಪ್ರಾರಂಭಿಸಿದರು. ಅಲ್ಲಿ ಹರಿಜನ ಹುಡುಗರನ್ನು ಸೇರಿಸಿದರು. ಸಮಾನತೆಯನ್ನೇ ಉಸಿರಾಗಿಸಿದರು. ಅವರು ಬಂದ ಎಲ್ಲರಿಗೂ ‘ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು. ಜಾತಿಯನ್ನು ಕೇಳಬೇಡ, ಹೇಳಬೇಡ ಮನಸ್ಸಿನಲ್ಲೂ ಯೋಚಿಸಬೇಡ’ ಎಂದು ಸಾರಿ, ದೇವಸ್ಥಾನಗಳ ಭಿತ್ತಿಯಲ್ಲಿ ಅದನ್ನು ಬರೆಸಿದರು.
ನಾರಾಯಣಗುರುಗಳು ಶಿವಗಿರಿಬೆಟ್ಟದ ಮೇಲೆ ತಮ್ಮ ಕುಟೀರದಲ್ಲಿ ಇರುತ್ತಿದ್ದರು. ಅವರ ದಿನಚರಿ ತುಂಬಾ ಸರಳವಾಗಿತ್ತು. ಪ್ರತಿನಿತ್ಯ ಅಲ್ಲಿಯ ಮಕ್ಕಳು, ಯುವಕರ ಜತೆ ಸೇರಿಕೊಂಡು ಕೆಲಸ ಮಾಡುತ್ತಿದ್ದರು. ಅವರು ತಮ್ಮ ಆಹಾರವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಮಲೆಯಾಳಂ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ 62ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಅವರು ಬೋಧಿಸಿದ ತತ್ತ್ವಗಳನ್ನು ಕೃತಿಗಳ ಮೂಲಕ ಅನುಸಂಧಾನಿಸಿದರು. ತಮಿಳು ಮತ್ತು ಸಂಸ್ಕೃತ ಭಾಷೆಯ ನಾಲ್ಕು ಗ್ರಂಥಗಳನ್ನು ಮಲೆಯಾಳಂ ಭಾಷೆಗೆ ಅನುವಾದಿಸಿದರು.
ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ದೇವರ ಮಕ್ಕಳು, ದೇವರ ಸೃಷ್ಠಿಯಲ್ಲಿ ಮೇಲು-ಕೀಳುಗಳೆಂಬುದಿಲ್ಲ. ಸರ್ವಜನಾಂಗಕ್ಕೂ ದೇವರನ್ನು ಪೂಜಿಸುವ ಹಕ್ಕಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು. ವಿದ್ಯೆಯನ್ನು ಪಡೆದು ಜ್ಞಾನ ಸಂಪಾದಿಸಿ ಸ್ವತಂತ್ರರಾಗಿರಿ. ಸಂಘಟಿತರಾಗಿ ಶಕ್ತಿಯನ್ನು ಪಡೆದು ಉನ್ನತಿಯೆಡೆಗೆ ಸಾಗಿ ಎಂಬ ದಿವ್ಯ ಸಂದೇಶದ ಮೂಲಕ ಗುರುಗಳು ಅಸ್ಪ್ರಶ್ಯ ಸಮಾಜದ ಶಾಪ ವಿಮೋಚನೆ ಮಾಡಿದರು. ಅಂಧಾನುಕರಣೆ, ಗೊಡ್ಡು ಸಂಪ್ರದಾಯ ಅನಾಗರಿಕ ಧಾರ್ಮಿಕ ಕಟ್ಟಳೆಗಳಿಂದ ಶೋಷಿತರನ್ನು ಮೇಲೆತ್ತಿ ಅವರಿಗೆ ಆತ್ಮಗೌರವದ ಬದುಕು ದೊರಕಿಸಿದ ಸಂತ ಅವರು. ಬ್ರಹ್ಮಶ್ರೀ ನಾರಾಯಣ ಗುರುಗಳು ಈ ಸಮುದಾಯಗಳಿಗೆ ದೊರಕಿಸಿದ ಆತ್ಮಗೌರವದ ಬದುಕಿನಿಂದಾಗಿ ಮುಂದೆ ಈ ಸಮುದಾಯ ಮತಾಂತರಗೊಳ್ಳುವುದು ಕೊನೆಗೊಂಡಿರುವುದು ಇಲ್ಲಿ ಉಲ್ಲೇಖನೀಯ.
ಮೇಲ್ವರ್ಗದವರ ದೇವಾಲಯಗಳಲ್ಲಿ ಪ್ರವೇಶವಿಲ್ಲದಿದ್ದರೇನಾಯಿತು. ನಾವೇ ದೇವಾಲಯ ಸ್ಥಾಪನೆ ಮಾಡಿ ಅಲ್ಲಿ ನಮ್ಮದೇ ದೇವರನ್ನು ಪೂಜಿಸೋಣ ಎಂದು ಕೆಳವರ್ಗದವರಲ್ಲಿ ಆತ್ಮಸ್ಥೈರ್ಯ ತುಂಬಿ ತಾವೇ ದೇವಾಲಯ ಪ್ರತಿಷ್ಠಾಪನೆ ಮಾಡಿ, ಸರ್ವ ಜನಾಂಗವೂ ಜಾತಿ-ಮತ ಧರ್ಮದ ಭೇದವಿಲ್ಲದೆ ದೇವರನ್ನು ಪೂಜಿಸುವ ಹಕ್ಕನ್ನು ದಯಪಾಲಿಸಿದರು. ಅಂದು ಗುರುಗಳು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಧಿಸಿದ ಮೌನ ಹೋರಾಟದ ಫಲ ಇಂದು ಸಮಾಜದಲ್ಲಿ ಮಹತ್ತರವಾದ ಬದಲಾವಣೆಗಳಿಗೆ, ಪರಿವರ್ತನೆಗಳಿಗೆ ಕಾರಣವಾಗಿದೆ.
ನಾರಾಯಣ ಗುರು ವಿವಾಹ ಪದ್ಧತಿಯನ್ನು ಸರಳಗೊಳಿಸಿದರು. ಮದುವೆಯ ದುಂದು ವೆಚ್ಚದ ಆಡಂಬರಗಳನ್ನು ಬಿಟ್ಟು, ಸರಳ ಧಾರ್ಮಿಕ ವಿಧಿ ಮತ್ತು ವಿಧಾನಗಳಿಂದ ಆಚರಿಸಲು ಕರೆ ಕೊಟ್ಟರು.
ಕರ್ನಾಟಕದಲ್ಲಿ ಶ್ರೀ ನಾರಾಯಣ ಗುರುಗಳು
ಕರ್ನಾಟಕದ ಕರಾವಳಿಯಲ್ಲಿ ಬಿಲ್ಲವರು ಸೇರಿದಂತೆ ಹಿಂದುಳಿದ ಅಸ್ಪೃಶ್ಯ ಜನಾಂಗವನ್ನು ಮೇಲ್ಜಾತಿಯವರೆಂದು ಕರೆಸಿಕೊಳ್ಳುತ್ತಿದ್ದ ಹಿಂದುಗಳು ಬಹಳ ನಿಕೃಷ್ಟವಾಗಿ ಕಾಣುತ್ತಿದ್ದರು. ಆದರೆ ಇದೇ ಅಸ್ಪೃಶ್ಯರು, ಶೂದ್ರರು ಸಲ್ಲಿಸುತ್ತಿದ್ದ ಹರಕೆ, ಕಾಣಿಕೆಗಳಿಗೆ ಮೈಲಿಗೆಯಿರಲಿಲ್ಲ. ಆದರೆ ಶೂದ್ರರಿಗೆ ದೇವಾಲಯದ ಒಳಗೆ ಪ್ರವೇಶವಿರಲಿಲ್ಲ. ಇದರಿಂದ ನೋವು, ಹಿಂಸೆ ಅನುಭವಿಸಿದ ಅಂದಿನ ಬಿಲ್ಲವ ಸಮಾಜದ ಹಿರಿಯರು ಅಧ್ಯಕ್ಷ ಕೊರಗಪ್ಪನವರ ನೇತೃತ್ವದಲ್ಲಿ ಶ್ರೀ ನಾರಾಯಣ ಗುರುಗಳನ್ನು ಭೇಟಿ ಮಾಡಿ ತಮ್ಮ ಜನಾಂಗವನ್ನು ಉದ್ಧರಿಸಬೇಕೆಂದು ಬಿನ್ನವಿಸಿಕೊಂಡರು. ಬಿಲ್ಲವ ಜನಾಂಗದ ಹಿರಿಯರ ಭಕ್ತಿ ಮನವಿಗೆ ಸ್ಪಂದಿಸಿದ ಶ್ರೀ ನಾರಾಯಣ ಗುರುಗಳು ಮಂಗಳೂರಿಗೆ ಬಂದು ಕುದ್ರೋಳಿಯ ಪುಣ್ಯ ಭೂಮಿಯಲ್ಲಿ ಶ್ರೀ ಗೋಕರ್ಣನಾಥನನ್ನು ಪ್ರತಿಷ್ಠಾಪಿಸಿ ಬಿಲ್ಲವ ಸಮಾಜ ಸೇರಿದಂತೆ ದೀನ ದಲಿತರ ಬಾಳಲ್ಲಿ ಆತ್ಮಸ್ಥೈರ್ಯ ತುಂಬಿ, ಸ್ಫೂರ್ತಿ, ಸ್ವಾಭಿಮಾನದ ಸೆಲೆಯನ್ನು ಕರುಣಿಸಿದರು.
ಯಾವ ಅವರ್ಣೀಯರಿಗೆ ಸ್ವಯಂ ಪ್ರತಿಷ್ಠೆಗಳಿರಲಿಲ್ಲವೊ, ವಿದ್ಯಾಭ್ಯಾಸಕ್ಕೆ ಶಾಲೆಗಳಿಗೆ ಪ್ರವೇಶವಿರಲಿಲ್ಲವೋ, ಬೇರೆ ಕಡೆ ಹೋಗಿ ಶಿಕ್ಷಣ ಪಡೆದವರಿಗೆ ಸರ್ಕಾರದಲ್ಲಿ ಉದ್ಯೋಗದ ಅವಕಾಶವಿರಲಿಲ್ಲವೋ ಅಂತಹವರ ಏಳಿಗೆಗೆ ಕಂಕಣಬದ್ಧರಾದ ಗುರುಗಳಿಗೆ ಈ ದೇವಸ್ಥಾನದ ನಿರ್ಮಾಣಗಳು ಸಂಪ್ರದಾಯಸ್ಥರ ಬಿಗುಧೋರಣೆಗಳನ್ನು ಮೌನವಾಗಿ ಬಗ್ಗು ಬಡಿಯುವ ಶಸ್ತ್ರಗಳಾದವು. ಈ ಜನರಿಗೆ ನೇರವಾಗಿ ಪೌರೋಹಿತ ಶಾಹಿಗಳ ವಿರುದ್ಧ ಹೋರಾಡಲು ಆತ್ಮಸ್ಥೈರ್ಯ ಕಳೆದೇ ಹೋಗಿದ್ದ ಸಂದರ್ಭದಲ್ಲಿ ಗುರುಗಳು ಈ ವರ್ಗದ ಕಲ್ಯಾಣಕ್ಕೆ ಕಾರಣರಾದರು.
ಕೃಪೆ : ಗೃಹಪತ್ರಿಕೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.