ನಮ್ಮ ಜನರ ಮನಸ್ಥಿತಿ ಬಹಳ ವಿಚಿತ್ರ. ಒಳ್ಳೆಯ ಪರಿಣಾಮಕಾರೀ ಕಾನೂನುಗಳು ಬೇಕು ಅನ್ನುತ್ತಾರೆ. ಆದರೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಅದಕ್ಕೆ ನೂರು ಆಕ್ಷೇಪಗಳನ್ನು ಹೇಳುತ್ತಾರೆ. ವ್ಯವಸ್ಥೆ ಸರಿಯಿಲ್ಲ, ಬದಲಾಗಬೇಕು ಎಂದು ಜನರು ಹೇಳುತ್ತಲೇ ಇರುತ್ತಾರೆ. ಆದರೆ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನವು ಸರಕಾರದ ವತಿಯಿಂದ ಆರಂಭವಾದಲ್ಲಿ ಇದೇ ಜನ ಅದನ್ನು ವಿರೋಧಿಸುತ್ತಾರೆ. ಬದಲಾವಣೆಗೋಸ್ಕರ ಜನರು ಸ್ವಲ್ಪವೂ ಕಷ್ಟವನ್ನು ಅಥವಾ ತೊಂದರೆಯನ್ನು ಅನುಭವಿಸಲು ಸಿದ್ಧರಿಲ್ಲ. ಬದಲಾವಣೆಯನ್ನು ತರುವ ಆರಂಭಿಕ ಹಂತದಲ್ಲಿ ಜನರಿಗೆ ಸ್ವಲ್ಪ ಅನನುಕೂಲ, ತೊಂದರೆ ಆಗಿಯೇ ಆಗುತ್ತದೆ. ಆದರೆ ಈ ಅನನುಕೂಲತೆಯನ್ನು ಸಕಾರಾತ್ಮಕ ದೃಷ್ಟಿಯಿಂದ ಸ್ವೀಕರಿಸದೆ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವವರು ನಾವು. ಯಾವುದೇ ಬದಲಾವಣೆಯ ಪ್ರಯತ್ನಗಳನ್ನು ನಡೆಯಿಸಿದಾಗಲೂ ನಾವು ಗೊಣಗಾಡುವ ಹಾಗೂ ದೂರುವ ಪ್ರವೃತ್ತಿಯನ್ನು ಮುಂದುವರಿಸುತ್ತೇವೆ. ನಮ್ಮಲ್ಲಿ ದೂರಗಾಮೀ ದೃಷ್ಟಿಕೋನದ ಕೊರತೆಯೇ ಇದಕ್ಕೆ ಕಾರಣ.
ಇತ್ತೀಚೆಗೆ ದಿನಾಂಕ 01/09/2019 ರಿಂದ ಅನ್ವಯವಾಗುವಂತೆ ಕೇಂದ್ರ ಸರಕಾರವು ಸಂಚಾರೀ ನಿಯಮಗಳನ್ನು ಬಿಗುಗೊಳಿಸಿದಾಗಲೂ ಜನರು ಬದಲಾದ ವ್ಯವಸ್ಥೆಯ ವಿರುದ್ಧ ಅಲ್ಲಲ್ಲಿ ಗೊಣಗಾಟ ಆರಂಭಿಸಿದ್ದಾರೆ. ಸಂಚಾರೀ ನಿಯಮವನ್ನು ಉಲ್ಲಂಘನೆ ಮಾಡುವವರ ಮೇಲೆ ಕೈಗೊಳ್ಳುವ ಶಿಕ್ಷೆಯನ್ನು ಈಗ ಕಠಿಣಗೊಳಿಸಲಾಗಿದೆ. ಅಪಾಯಕಾರಿ ಹಾಗೂ ಅಜಾಗರೂಕ ರೀತಿಯಲ್ಲಿ ವಾಹನ ಚಲಾಯಿಸುವವರ ಮೇಲಿನ ದಂಡದ ಪ್ರಮಾಣವು ಈ ಮೊದಲು ರುಪಾಯಿ 1000 ಇದ್ದಿದ್ದು ಈಗ ಆ ಪ್ರಮಾಣವನ್ನು ರುಪಾಯಿ 10,000 ಕ್ಕೆ ಏರಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡುವವರ ಮೇಲಿನ ದಂಡದ ಪ್ರಮಾಣವನ್ನು ಕೂಡಾ 10,000 ರುಪಾಯಿಗಳಿಗೇರಿಸಲಾಗಿದೆ. ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ ಮೊದಲ ಬಾರಿ ಸಿಕ್ಕಿ ಬಿದ್ದಾಗ 6 ತಿಂಗಳ ಜೈಲು ಶಿಕ್ಷೆ ಹಾಗೂ ಎರಡನೇ ಬಾರಿ ಸಿಕ್ಕಿ ಬಿದ್ದರೆ 2 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗುವುದು. ವಾಹನ ಇನ್ಷೂರೆನ್ಸ್ ಇಲ್ಲದೆ, ವಾಹನ ಚಲಾವಣೆ ಮಾಡುವವರ ಮೇಲೆ 2000 ಸಾವಿರ ರೂಗಳ ದಂಡ ವಿಧಿಸಲಾಗುತ್ತಿದೆ. ಅತಿವೇಗದ ಚಾಲನೆಗೆ ಕೂಡಾ 2000 ರುಪಾಯಿಗಳ ದಂಡದ ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವವರ ಮೇಲೆ 1000 ರುಪಾಯಿಗಳ ದಂಡ ಹಾಗೂ ವಾಹನ ಚಾಲನಾ ಲೈಸೆನ್ಸ್ ಅನ್ನು ಮೂರು ತಿಂಗಳ ಮಟ್ಟಿಗೆ ಅಮಾನತಿನಲ್ಲಿ ಇಡುವ ಶಿಕ್ಷೆಯನ್ನು ಕೊಡಲಾಗುವುದು. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವವರ ಮೇಲೆ ಈ ಮೊದಲು ಕೇವಲ 100 ರುಪಾಯಿಗಳ ದಂಡ ಶಿಕ್ಷೆಯನ್ನು ನೀಡಲಾಗುತ್ತಿತ್ತು. ವಾಹನ ಚಾಲನಾ ಲೈಸೆನ್ಸ್ ಅಮಾನತಿನಲ್ಲಿರುವಾಗ ಪುನಃ ವಾಹನ ಚಲಾಯಿಸಿದಲ್ಲಿ ಒಂದು ಲಕ್ಷದ ವರೆಗೂ ಫೈನ್ ವಿಧಿಸಲಾಗುವುದು. ಟ್ರಾಫಿಕ್ ಸಿಗ್ನಲ್ ಗಳ ಉಲ್ಲಂಘನೆಗೆ ಈ ಮೊದಲು ನೂರು ರುಪಾಯಿಗಳ ದಂಡನೆ ಇದ್ದಿದ್ದು ಈಗ ಅದನ್ನು ರುಪಾಯಿ 500 ಕ್ಕೆ ಏರಿಸಲಾಗಿದೆ. ಅಪ್ರಾಪ್ತ ಮಕ್ಕಳು (ಚಾಲನಾ ಪರವಾನಗಿ ದೊರೆಯುವುದು ೧೮ ವರ್ಷ ಪೂರೈಸಿದವರಿಗೆ ಮಾತ್ರ) ವಾಹನ ಚಲಾಯಿಸಿದಲ್ಲಿ, ಅವರ ಕೈಯಲ್ಲಿ ವಾಹನ ಕೊಟ್ಟವರಿಗೆ ಜೈಲು ಶಿಕ್ಷೆ ಹಾಗೂ ಆ ವಾಹನದ ನೋಂದಣಿಯನ್ನು ಶಾಶ್ವತವಾಗಿ ರದ್ದು ಮಾಡುವ ಶಿಕ್ಷೆಯನ್ನು ರೂಪಿಸಲಾಗಿದೆ. ಸಾರಿಗೆ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದವರ ಮೇಲಿನ ದಂಡವನ್ನು 100 ರುಪಾಯಿಗಳಿಂದ 500 ರುಪಾಯಿಗಳಿಗೆ ಏರಿಸಲಾಗಿದೆ. ಸಾರಿಗೆ ನಿಯಮ ಉಲ್ಲಂಘಿಸುವವರ ಮೇಲಿನ ಶಿಕ್ಷೆಯನ್ನು ಕಠಿಣಗೊಳಿಸಿದುದರ ವಿರುದ್ಧವಾಗಿ ಕೆಲವು ಜನರು ಮಾತನಾಡುತ್ತಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬದಲಾದ ಕಾನೂನಿನ ವಿರುದ್ಧ ಆಕ್ಷೇಪ, ಲೇಖನ, ವ್ಯಂಗ್ಯ ಚಿತ್ರ, ಮೀಮ್ಗಳನ್ನು ಪ್ರಕಟಿಸುತ್ತಿದ್ದಾರೆ. ಸರಕಾರವು, ಹಾಳಾದ, ಹೊಂಡ ಬಿದ್ದ ರಸ್ತೆಗಳನ್ನು ಸರಿಪಡಿಸಿದ ಮೇಲೆ ಸಾರಿಗೆ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಿ, ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ದಂಡ ವಿಧಿಸಲಿ ಎಂದೆಲ್ಲಾ ನೆಪವನ್ನು ಓಡ್ಡುತ್ತಿದ್ದಾರೆ. ಬಡ ವಾಹನ ಚಾಲಕರ ಮೇಲೆ ವಿಧಿಸಿರುವ ದಂಡ ಅತಿಯಾಯಿತು ಎನ್ನುತ್ತಿದ್ದಾರೆ.
ನಮ್ಮ ದೇಶದಲ್ಲಿ ವರ್ಷವೊಂದಕ್ಕೆ ಏನಿಲ್ಲವೆಂದರೂ 5 ಲಕ್ಷ ರಸ್ತೆ ಅಫಘಾತಗಳು ಸಂಭವಿಸುತ್ತವೆ. ಇದರ ಪರಿಣಾಮವಾಗಿ 1.5 ಲಕ್ಷ ಜನರು ಪ್ರಾಣ ಕಳೆದುಕೊಂಡರೆ, 3 ಲಕ್ಷ ಜನರು ತೀವ್ರ ಗಾಯಾಳುಗಳಾಗಿ ಆಸ್ಪತ್ರೆ ಸೇರಬೇಕಾಗುತ್ತದೆ. ಅರ್ಧದಷ್ಟು ಅಪಘಾತಗಳು ರಸ್ತೆಗಳ ದೋಷದಿಂದ, ರಸ್ತೆ ಹೊಂಡಗಳಿಂದ ಸಂಭವಿಸುತ್ತದೆ ಎಂದು ಕೊಂಡರೂ ಉಳಿದ 50% ಅಪಘಾತಗಳು ಸಂಭವಿಸುವುದು ಅಜಾಗರೂಕತೆಯ ಚಾಲನೆ ಹಾಗೂ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವುದರಿಂದ. ಈ ಲೆಕ್ಕಾಚಾರದಲ್ಲಿ ವಾರ್ಷಿಕ 75000 ಜನರು ನಿರ್ಲಕ್ಷ್ಯದ ಚಾಲನೆಯಿಂದ ಪ್ರಾಣ ಕಳೆದುಕೊಂಡಂತಾದರೆ, 1.5 ಲಕ್ಷ ಜನರು ಇದೇ ಕಾರಣಕ್ಕೆ ಕೈಕಾಲು ಎಲುಬುಗಳನ್ನು ಮುರಿದುಕೊಂಡು ಆಸ್ಪತ್ರೆ ಸೇರುತ್ತಾರೆ. ಬಹಳಷ್ಟು ಜನರು ಶಾಶ್ವತ ಅಂಗ ವಿಹೀನರಾಗುತ್ತಾರೆ. ಅತೀ ವೇಗದ ಚಾಲನೆಯಿಂದ ರಸ್ತೆ ಅಪಘಾತವಾಗಿ ಶೇಕಡಾ 41 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಯನವು ಹೇಳುತ್ತದೆ. ಅಂಕಿ ಅಂಶ ಪ್ರಕಾರ 2017 ರಲ್ಲಿ ದೇಶದಲ್ಲಿ ದಿನವೊಂದಕ್ಕೆ 98 ಮಂದಿ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿದ ಬೈಕ್ ಸವಾರರು ಬೈಕ್ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅಂದರೆ ವರ್ಷವೊಂದಕ್ಕೆ 35000 ಕ್ಕಿಂತಲೂ ಹೆಚ್ಚು ವ್ಯಕ್ತಿಗಳು ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿದ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದಾಯಿತು. ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುವಾಗ ಅಪಘಾತ ಸಂಭವಿಸಿದಾಗ ತಲೆ ನೆಲಕ್ಕೆ ಬಡಿದು ಹೋದರೆ ತಲೆಗೆ ತೀವ್ರ ಸ್ವರೂಪದ ಹಾನಿಯಾಗಿ ಸಾವು ಸಂಭವಿಸುತ್ತದೆ. ಒಂದು ವೇಳೆ ಈ ಸವಾರರು ಹೆಲ್ಮೆಟ್ ಧರಿಸಿದ್ದಿದ್ದರೆ 35000 ಜನರ ಪ್ರಾಣವು ಉಳಿಯುತ್ತಿತ್ತು. ಮೊದಲು ಹೆಲ್ಮೆಟ್ ಧರಿಸದೆ ಬೈಕ್ ಸವಾರಿಗೆ ಕೇವಲ 100 ರುಪಾಯಿಗಳ ಫೈನ್ ಮಾತ್ರ ಇದ್ದುದರಿಂದ ಒಂದು ಬಾರಿ ಫೈನ್ ಕಟ್ಟಿದವರೂ ಅದೇ ತಪ್ಪನ್ನು ಹಲವು ಬಾರಿ ಪುನರಾವರ್ತಿಸುತ್ತಿದ್ದರು. ಈಗ ಏರಿದ ದಂಡದ ಮೊತ್ತ ಹಾಗೂ ಚಾಲನಾ ಪರವಾನಗಿಯ ಅಮಾನತುಗೊಳ್ಳುವಿಕೆಯ ಭಯದಿಂದ ದ್ವಿಚಕ್ರ ವಾಹನವನ್ನು ಹೆಲ್ಮೆಟ್ ಧರಿಸಿಯೇ ಚಾಲನೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಬೈಕ್ ಅಪಘಾತಗಳ ಸಾವಿನ ಸಂಖ್ಯೆಯೂ ಕಡಿಮೆಯಾಗಲಿದೆ. ಕಾರು ಅಥವಾ ನಾಲ್ಕು ಚಕ್ರದ ವಾಹನ ಚಲಾವಣೆಯ ಸಂದರ್ಭದಲ್ಲಿ ನಡೆಯುವ ಅಪಘಾತಗಳಲ್ಲಿ 79% ಸಾವುಗಳು ಸಂಭವಿಸುವುದು ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸುವುದರಿಂದ ಎಂದು ಅಂಕಿ ಅಂಶಗಳು ಹೇಳುತ್ತವೆ. 2017 ನೇ ಇಸವಿಯಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಕಾರು ಅಪಘಾತಗಳಲ್ಲಿ ಮರಣಿಸಿದವರ ಸಂಖ್ಯೆ 28,986, ತೀವ್ರವಾಗಿ ಗಾಯಗೊಂಡವರ ಸಂಖ್ಯೆ 33,264. 2017 ರಲ್ಲಿ ಸೀಟ್ ಬೆಲ್ಟ್ ಧಾರಣೆ ಖಡ್ಡಾಯವಾಗಿದ್ದಿದ್ದರೆ ಈ ಎಲ್ಲಾ ಸಾವು ನೋವುಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದ್ದಗಿತ್ತು.
ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ವಾಹನ ಅಪಘಾತದ ಇನ್ನೊಂದು ಪ್ರಮುಖ ಕಾರಣವಾಗಿದೆ. ಹೊಸ ವರ್ಷ ಆಚರಣೆ, ವಾರಾಂತ್ಯ ಆಚರಣೆ ಅಥವಾ ಇತರ ಹಬ್ಬಗಳ ಸಂದರ್ಭದಲ್ಲಿ ಹಾಗೂ ರಾತ್ರಿ ಹೊತ್ತು ಸಂಭವಿಸುವ ಅಪಘಾತಗಳಲ್ಲಿ ಕುಡಿತ ಅಥವಾ ಮಾದಕ ವಸ್ತುಗಳ ಪ್ರಭಾವವು ಕಾಣುತ್ತದೆ. 2017 ನೇ ಇಸವಿಯಲ್ಲಿ ಕುಡಿತ ಅಥವಾ ಮಾದಕ ವಸ್ತುಗಳ ಪ್ರಭಾವದಲ್ಲಿ ವಾಹನ ಚಾಲನೆ ಮಾಡಿದುದರ ಪರಿಣಾಮವಾಗಿ 14,071 ಅಪಘಾತಗಳು ದೇಶದಲ್ಲಿ ಸಂಭವಿಸಿದ್ದು, ಇದರಲ್ಲಿ 4776 ಜನರು ಜೀವವನ್ನು ಕಳೆದುಕೊಂಡಿದ್ದಾರೆ. ಈ ಸಂಖ್ಯೆಯನ್ನು ಗಮನಿಸುವಾಗ ಅಮಲಿನಲ್ಲಿನ ವಾಹನ ಚಾಲನೆಯ ಅಪರಾಧದ ಪರಿಣಾಮವು ಎಷ್ಟು ಅಪಾಯಕಾರೀ ಹಾಗೂ ತೀವ್ರವಾದುದು ಎಂಬುದು ನಮಗೆ ಅರ್ಥವಾಗಬಹುದು. ಮೊಬೈಲ್ ಫೋನ್ನಲ್ಲಿ ಮಾತನಾಡಿಕೊಂಡು ಅಥವಾ ಇಯರ್ ಫೋನ್ನಲ್ಲಿ ಹಾಡು ಕೇಳಿಕೊಂಡು ಡ್ರೈವಿಂಗ್ ಮಾಡುವುದು, ಬೈಕ್ ಬಿಡುವುದು ಕೂಡಾ ದೊಡ್ಡ ಮಟ್ಟಿನ ಅಪಘಾತಕ್ಕೆ ಕಾರಣವಾಗುತ್ತಿದೆ. ಭಾರತದಲ್ಲಿ 2017 ರಲ್ಲಿ ವಾಹನ ಚಲಾಯಿಸುತ್ತಿರುವಾಗ ಸೆಲ್ ಫೋನ್ಗಳಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದುದರಿಂದ 3172 ಜನರು ಮೃತಪಟ್ಟಿದ್ದಾರೆ. 3668 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಅಟೋ ರಿಕ್ಷಾ ಅಥವ ವ್ಯಾನ್ಗಳು ಕೂಡಾ ನಿಗದಿತ ಮಿತಿಗಿಂತ ಎಷ್ಟೋ ಹೆಚ್ಚು ಮಕ್ಕಳನ್ನು ತುಂಬಿಸಿಕೊಂಡು ಸಾಗುತ್ತವೆ. ಬಹಳಷ್ಟು ಅಟೋ ರಿಕ್ಷಾಗಳಿಗೆ ಹಾಗೂ ವ್ಯಾನ್ಗಳಿಗೆ ಮಕ್ಕಳನ್ನು ಶಾಲೆಗೆ ಕೊಂಡು ಹೋಗಲು ಪರವಾನಗಿಯೂ ಇರುವುದಿಲ್ಲ. ಶಾಲಾವಾಹನಗಳಿಗೆ ಪರವಾನಗಿ ಸಿಗಲು ಸಾಕಷ್ಟು ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಈ ವಾಹನಗಳಲ್ಲಿ ಯಾವುದೇ ಸುರಕ್ಷಾ ವ್ಯವಸ್ಥೆ ಇರುವುದಿಲ್ಲ. ಅಪಘಾತ ಸಂಭವಿಸಿದಾಗ ಮಕ್ಕಳ ಸಾವು ಸಂಭವಿಸಿತ್ತದೆ. ವರುಷವೊಂದಕ್ಕೆ ಇದರಿಂದಾಗಿ ಸಾವಿರಾರು ಮಕ್ಕಳು ಸಾವನ್ನಪ್ಪುತ್ತಾರೆ. ದೇಶದಲ್ಲಿ ಸಲಕರಣೆ ಹಾಗೂ ಸಾಮಾನುಗಳನ್ನು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸುವುದು ಅಪರಾಧ. ಆದರೆ ದೇಶಾದ್ಯಂತ ಕಟ್ಟಡ ಕಾರ್ಮಿಕರನ್ನು ಹಾಗೂ ಕೂಲಿಯವರನ್ನು ಲಾರಿ, ಗೂಡ್ಸ್ ಟೆಂಪೋ, ಟ್ರ್ಯಾಕ್ಟರ್ಗಳಲ್ಲಿ ಭಾರೀ ಸಲಕರಣೆಗಳ ಜೊತೆಯೇ ಕರೆದುಕೊಂಡು ಹೋಗುವುದು ಸರ್ವೇಸಾಮಾನ್ಯ ದೃಶ್ಯ. ಆದರೆ ಇಂತಹ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿದರೆ ಅಪಘಾತದ ಏಟಿನ ಜೊತೆಗೆ ಸಲಕರಣೆಗಳು ಮೈಮೇಲೆ ಬಿದ್ದು ಈ ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ. ಇವರು ಪ್ರಯಾಣಿಸಿದ ವಾಹನ ಸರಕು ಸಾಗಣೆಯ ವಾಹನವಾದುದರಿಂದ ಗಾಯಗೊಂಡವರಿಗೆ ಹಾಗೂ ಮರಣಿಸಿದವರಿಗೆ ಯಾವುದೇ ರೀತಿಯ ಪರಿಹಾರ ಕೂಡಾ ದೊರಕುವುದಿಲ್ಲ.
ದೇಶದಲ್ಲಿ ಸರಕು ಸಾಗಣೆಯ ವಾಹನಗಳಲ್ಲಿ ಕಬ್ಬಿಣದ ಸರಳು ಮುಂತಾದವುಗಳು ವಾಹನದ ಅಳತೆಯನ್ನು ಮೀರುವಂತೆ ಇರಿಸಿ ಸಾಗಾಟ ಮಾಡುವುದರ ಮೇಲೆ ನಿಷೇಧವಿದೆ. ಆದರೆ ಚೂಪಾದ ಸರಳುಗಳು ಹಾಗೂ ಮರ ಮಟ್ಟುಗಳನ್ನು ಇತರ ವಾಹನಗಳ ಪ್ರಯಾಣಿಕರಿಗೆ ತಾಗುವಂತೆ ಕೊಂಡು ಹೋಗುವುದು ಮುಂದುವರಿದಿದೆ. ಈ ವಾಹನಗಳ ಅಪಘಾತವು ಸಂಭವಿಸಿದಾಗ ರಸ್ತೆಯಲ್ಲಿರುವ ಇತರ ವಾಹನಗಳ ಪ್ರಯಾಣಿಕರು ಈ ಅಪಾಯಕಾರೀ ಸರಂಜಾಮುಗಳೆಡೆಗೆ ಸಿಲುಕಿ ಮರಣವನ್ನಪ್ಪುತ್ತಾರೆ. ಭಾರತದಲ್ಲಿ ವಾರ್ಷಿಕವಾಗಿ 9000 ದಷ್ಟು ಜನರು ಈ ರೀತಿಯ ಅಪಘಾತಕ್ಕೆ ಸಿಲುಕಿ ಜೀವ ಕಳೆದುಕೊಳ್ಳುತ್ತಾರೆ. ವಾಹನಗಳನ್ನು ಇನ್ಶೂರೆನ್ಸ್ ಇಲ್ಲದೆ ಓಡಿಸುವುದು ಭಾರತೀಯರು ಎಸಗುತ್ತಿರುವ ಇನ್ನೊಂದು ಬಹು ದೊಡ್ಡ ಅಪರಾಧ. ಒಂದು ಲೆಕ್ಕಾಚಾರದ ಪ್ರಕಾರ ದೇಶದ 70% ವಾಹನಗಳನ್ನು ಜನರು ಇನ್ಶೂರೆನ್ಸ್ ಇಲ್ಲದೆ ಓಡಿಸುತ್ತಿದ್ದಾರಂತೆ. ವಾಹನಕ್ಕೆ ವಿಮೆ ಇಲ್ಲದಿದ್ದಾಗ ಅಪಘಾತಕ್ಕೆ ಒಳಗಾದವರಿಗೆ ವಿಮಾ ಪರಿಹಾರವನ್ನು ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬದಲಾದ ಕಾನೂನಿನಡಿಯಲ್ಲಿ ಇನ್ಶೂರೆನ್ಸ್ ಇಲ್ಲದೆ ಓಡಿಸುವ ವಾಹನ ಚಾಲಕರಿಗೆ/ ಮಾಲಿಕರಿಗೆ ಭಾರೀ ದಂಡವನ್ನು ವಿಧಿಸಲಾಗುತ್ತಿದೆ.
ಆಂಬುಲೆನ್ಸ್ಗಳಿಗೆ ದಾರಿ ಬಿಡದಿರುವುದು, ಕರ್ಕಶ ಹಾರನ್ ಹಾಕಿ ಓಡಿಸುವುದು, ಟ್ರಾಫಿಕ್ ಸಿಗ್ನಲ್ಗಳನ್ನು ಉಲ್ಲಂಘಿಸುವುದು, ಪಾದಾಚಾರಿಗಳ ಸಂಚಾರಕ್ಕೆ ಮೀಸಲಿಟ್ಟ ಫುಟ್ ಪಾತ್ಗಳಲ್ಲಿ ವಾಹನ ಚಲಾಯಿಸುವುದು, ರಸ್ತೆಯ ರಾಂಗ್ ಸೈಡ್ನಲ್ಲಿ ವಾಹನ ಚಲಾಯಿಸುವುದು, ರಾತ್ರೆ ಹೊತ್ತಿನಲ್ಲಿ ಪ್ರಖರವಾದ ಹೆಡ್ ಲೈಟ್ಗಳನ್ನು ಉರಿಸಿ, ಎದುರು ಬದಿಯಿಂದ ಬೇರೆ ವಾಹನಗಳು ಬರುವಾಗ ಹೆಡ್ ಲೈಟ್ ಅನ್ನು ಡಿಮ್ ಮಾಡದೆ ಸತಾಯಿಸುವುದು, ನಿಷೇಧಿತ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವುದು, ಅಪಾಯಕಾರೀ ಸ್ಥಳಗಳಲ್ಲಿ ಓವರ್ ಟೇಕ್ ಮಾಡುವುದು, ಮಿತಿಗಿಂತ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸುವುದು, ಸರಕು ಸಾಗಣೆಯ ವಾಹನಗಳಲ್ಲಿ ಮಿತಿ ಮೀರಿದ ತೂಕದ ವಸ್ತುಗಳನ್ನು ಸಾಗಿಸುವುದು ಮುಂತಾದ ಬೇಜವಾಬ್ದಾರೀ ವರ್ತನೆಗಳಿಗೆ ದೇಶಾದ್ಯಂತ ಸಾವಿರಾರು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ.
ದೇಶದಲ್ಲಿ ಸಂಭವಿಸುವ ವಾಹನ ಅಪಘಾತಗಳಲ್ಲಿ 65% ಬಲಿಪಶುಗಳು 18 ರಿಂದ 35 ವರ್ಷ ವಯಸ್ಸಿನವರು. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ, ಸೀಟ್ ಬೆಲ್ಟ್ ಇಲ್ಲದೆ ಕಾರು ಚಾಲನೆ, ಅತಿವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ, ವೀಲಿಂಗ್, ಮೊಬೈಲ್ ಫೋನ್ಗಳಲ್ಲಿ ಮಾತನಾಡುತ್ತಾ ಚಾಲನೆ ಮಾಡುವವರಲ್ಲಿ, ರಸ್ತೆ ನಿಯಮ ಉಲ್ಲಂಘನೆ ಮಾಡುವವರಲ್ಲಿ ಹೆಚ್ಚಿನವರು ಯುವಕರೇ. ಅವರಲ್ಲಿ ವಯೋಸಹಜವಾದ ಅತ್ಯುತ್ಸಾಹ ಹಾಗೂ ಕಾನೂನಿನ ಭಯ ಇಲ್ಲದಿರುವುದು ಇವರ ಈ ದುಸ್ಸಾಹಸಕ್ಕೆ ಕಾರಣವಾಗಿದೆ. ನೂರು ರುಪಾಯಿಯಂತಹ ಜುಜುಬಿ ಜುಲ್ಮಾನೆಗಳು ಇಂದಿನ ಯುವಕರಿಗೆ ವಿಷಯವೇ ಅಲ್ಲ. ಭಾರೀ ಪ್ರಮಾಣದ ಜುಲ್ಮಾನೆಗಳ ಹಾಗೂ ಜೈಲು ಶಿಕ್ಷೆಯ ಭಯವನ್ನು ಹುಟ್ಟಿಸುವ ಮೂಲಕ ಮಾತ್ರ ಸಂಚಾರೀ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಲು ಸಾಧ್ಯ.
ಜೀವಕ್ಕಿಂತ ಅಮೂಲ್ಯವಾದದ್ದು ಯಾವುದೂ ಅಲ್ಲ. ಪ್ರಜೆಗಳ ಜೀವಕ್ಕೆ ಹಾನಿಯಾಗದಂತೆ ತಡೆಗಟ್ಟುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ವಾಹನ ಸಂಚಾರೀ ನಿಯಮಗಳನ್ನು ಬಿಗುಗೊಳಿಸುವುದರ ಮೂಲಕ ಚಾಲನಾ ಅಪರಾಧಗಳನ್ನು ಕಡಿಮೆಗೊಳಿಸಿ ಜೀವಹಾನಿಯನ್ನು ತಡೆಗಟ್ಟುವುದು ಸರಕಾರದ ಈ ಕ್ರಮದ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಹಳೆಯ ಕಾನೂನು ಅಷ್ಟು ಪರಿಣಾಮಕಾರಿಯಲ್ಲ ಎಂದಾದಾಗ ಕಾನೂನನ್ನು ಪರಿಷ್ಕೃತಗೊಳಿಸುವುದು ಅನಿವಾರ್ಯವಾಗುತ್ತದೆ. ರಸ್ತೆ ಗುಂಡಿ, ಹಾಳಾದ ರಸ್ತೆ, ಅವೈಜ್ಞಾನಿಕ ರಸ್ತೆ ಮುಂತಾದವುಗಳಿಂದ ಜೀವ ಹಾನಿಯಾಗುತ್ತದೇನೋ ನಿಜ. ಕಳಪೆ ಗುಣಮಟ್ಟದ ರಸ್ತೆ ತಯಾರಿಸುವ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾರೆ. ಈ ವ್ಯವಸ್ಥೆ ಸರಿಯಾಗಲು ಸ್ವಲ್ಪ ಸಮಯವು ಬೇಕಾಗುತ್ತದೆ. ಆದರೆ ಪ್ರತೀ ಪ್ರಜೆಯೂ ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪರಿಪಾಲಿಸುವಂತಾದರೆ ಈಗ ಆಗುತ್ತಿರುವ ಅಪಘಾತ ಹಾನಿಯಲ್ಲಿ 50 ಶೇಕಡಾವನ್ನಾದರೂ ಕಡಿಮೆ ಮಾಡಬಹುದಲ್ಲವೇ? ವಾಹನ ಚಾಲಕರಲ್ಲಿ ಎಲ್ಲಾ ರೀತಿಯ ದಾಖಲೆಗಳು ಇದ್ದರೆ, ಅವರು ಸಂಚಾರೀ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿಕೊಂಡಿದ್ದರೆ ಅವರಿಗೆ ಯಾವುದೇ ಶಿಕ್ಷೆಯ ಭಯವಿಲ್ಲ. ಡ್ರೈವಿಂಗ್ ಲೈಸೆನ್ಸ್, ವಾಹನದ ಆರ್ ಸಿ, ವಿಮೆ ಮೊದಲಾದ ದಾಖಲೆಗಳನ್ನು ಡಿಜಿ ಲಾಕರ್ಗಳ ಮೂಲಕ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದ್ದು ಇದಕ್ಕೆ ಸರಕಾರವು ಮಾನ್ಯತೆಯನ್ನು ಕೊಟ್ಟಿದೆ. ಅಧಿಕಾರಿಗಳು ತಪಾಸಣೆಗ ಬಂದಾಗ ಡಿಜಿ ಲಾಕರ್ನ ಮೂಲಕ ಎಲ್ಲಾ ದಾಖಲೆಗಳನ್ನು ಅವರಿಗೆ ತೋರಿಸಬಹುದಾಗಿದೆ.
ಬದಲಾವಣೆಯಾದಾಗ ಒಂದಷ್ಟು ತೊಂದರೆ ಹಾಗೂ ಅನನುಕೂಲವಾಗುವುದು ಇದ್ದದ್ದೇ. ಈ ಹಿಂದೆ ನೋಟ್ ಬ್ಯಾನ್ ಮಾಡಿದಾಗಲೂ ಆರಂಭದಲ್ಲಿ ಜನರಿಗೆ ತೊಂದರೆಯಾದರೂ ಮತ್ತೆ ಎಲ್ಲವೂ ಸರಿಯಾಯಿತು, ಜಿಎಸ್ಟಿ ಜಾರಿಗೆ ತಂದಾಗ ವ್ಯಾಪಾರಿಗಳಿಗೆ ಸ್ವಲ್ಪ ದಿನ ತೊಂದರೆಯಾಯಿತು. ಮೊನ್ನೆ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದು ಹಾಕಿದಾಗಲೂ ಒಂದಿಷ್ಟು ಚರ್ಚೆಯಾಗಿದ್ದು ಈಗ ಅದೂ ತಣ್ಣಗಾಗಿದೆ. ಕೇಂದ್ರ ಸರಕಾರವು ತ್ರಿವಳಿ ತಲಾಖ್ ಅನ್ನು ನಿಷೇಧ ಮಾಡಿದಾಗಲೂ ಹೀಗೇ ಆಯಿತು. ಬರುವ ತಿಂಗಳು ಗಾಂಧೀ ಜಯಂತಿಯಂದು ಪರಿಸರಕ್ಕೆ ಹಾನಿಕಾರಕವಾಗಿರುವ ಏಕೋಪಯೋಗೀ ಪ್ಲಾಸ್ಟಿಕ್ ಬಳಕೆಯನ್ನು ಸರಕಾರವು ನಿಷೇಧಿಸುವ ಯೋಜನೆಯನ್ನು ಹಾಕಿಕೊಂಡಿದ್ದು ಆಗಲೂ ದೇಶಾದ್ಯಂತ ಭಾರೀ ಚರ್ಚೆಯಾಗಬಹುದು. ಮೊದಮೊದಲು ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟ ಎನಿಸಿದರೂ ರೂಢಿಯಾದ ಮೇಲೆ ತನ್ನಿಂತಾನೇ ಎಲ್ಲವೂ ಸರಿ ಹೋಗುತ್ತದೆ. ವಾಹನ ಸಂಚಾರೀ ನಿಯಮದ ಬದಲಾವಣೆಯ ವಿಚಾರದಲ್ಲೂ ಅಷ್ಟೇ. ಕೆಲವು ದಿವಸದಲ್ಲಿ ಎಲ್ಲರೂ ಬದಲಾವಣೆಗೆ ಹೊಂದಿಕೊಳ್ಳುತ್ತಾರೆ. ಅಲ್ಲಿಗೆ ಗೊಣಗಾಟ ನಿಲ್ಲುತ್ತದೆ.
✍ ಗಣೇಶ್ ಭಟ್ ವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.