ನೆರೆ, ಭೂಕಂಪ, ಪ್ರವಾಹ, ಕ್ಷಾಮ ಮುಂತಾದ ಪ್ರಕೃತಿ ವಿಕೋಪಗಳು ಯಾರನ್ನು ಕೇಳಿಯೇ ಬರುವುದಿಲ್ಲ. ಬರಬೇಕಾಗಿಯೂ ಇಲ್ಲ. ಪ್ರಕೃತಿಯಲ್ಲಿ ಸಮತೋಲನ ಏರುಪೇರಾದಾಗ, ಹದ ತಪ್ಪಿದಾಗ ಪ್ರಕೃತಿಯೇ ಅದನ್ನು ಸರಿಪಡಿಸುತ್ತದೆ. ಪ್ರಕೃತಿ ಸರಿಪಡಿಸುವ ಆ ಕ್ರಿಯೆಗೇ ನೆರೆ, ಭೂಕಂಪ, ಪ್ರವಾಹ, ಕ್ಷಾಮಡಾಮರ ಎಂದು ನಾವು ಮನುಷ್ಯರು ನಾಮಕರಣ ಮಾಡಿದ್ದೇವೆ!
ಪ್ರಕೃತಿ ಅಸಮತೋಲನವನ್ನು ಎಂದಿಗೂ ಸಹಿಸುವುದಿಲ್ಲ. ಪ್ರಕೃತಿ ಹೇಗಿರಬೇಕೋ ಹಾಗೆಯೇ ಇದ್ದಾಗ ಅಸಹಜವಾದದ್ದು, ಅನಿರೀಕ್ಷಿತವಾದದ್ದು, ಆತಂಕಕ್ಕೀಡು ಮಾಡುವಂತಹುದು ಯಾವುದೂ ಬಹುಶಃ ಜರುಗುವುದಿಲ್ಲ. ಈಗ ಪ್ರಕೃತಿ ಪದೇಪದೇ ಮುನಿಯುತ್ತಿರುವುದೇ ನಾವೇ ಮಾಡಿಕೊಂಡ ಎಡವಟ್ಟುಗಳು ಕಾರಣ ಎಂಬುದು ನಮಗೆ ಈಗಲೂ ಅರ್ಥವಾಗುತ್ತಿಲ್ಲ. ನದಿಪಾತ್ರಗಳನ್ನು ಕಿರಿದುಗೊಳಿಸಿದ್ದು, ಅರಣ್ಯವನ್ನು ಮನಸೋ ಇಚ್ಛೆ ಕಡಿದುರುಳಿಸಿದ್ದು, ನೀರು ತುಂಬಿರಬೇಕಾದ ಕೆರೆ, ರಾಜಕಾಲುವೆ ಪ್ರದೇಶಗಳನ್ನು ಸಮತಟ್ಟುಗೊಳಿಸಿ ಕಾಂಕ್ರೀಟ್ ಕಟ್ಟಡಗಳ ಕಾಡು ನಿರ್ಮಿಸಿದ್ದು, ಪ್ರಕೃತಿಯ ಮೇಲೆ ಇನ್ನೂ ಏನೇನೋ ಅತ್ಯಾಚಾರವೆಸಗಿದ್ದರ ಪರಿಣಾಮ ಸಣ್ಣಪುಟ್ಟ ಮಳೆಗೂ ಇವತ್ತು ನೆರೆ ಬರುವುದು ಸಹಜವೇ ಆಗಿದೆ. ನಾಲ್ಕೈದು ದಿನಗಳ ಕಾಲ 70 ಮಿ.ಮೀ.ನಷ್ಟು ಮಳೆಯಾದರೆ ಈಗ ಅನಾಹುತವೇ ಸಂಭವಿಸುತ್ತದೆ. ಆಗಸ್ಟ್ ಮೊದಲ ವಾರದಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಉಂಟಾದ ಪ್ರವಾಹವೇ ಇದಕ್ಕೆ ನಿದರ್ಶನ. ನಲವತ್ತು ಐವತ್ತು ವರ್ಷಗಳ ಹಿಂದೆ ಈಗ ಸುರಿಯುವ ನಾಲ್ಕೈದು ಪಟ್ಟು ಹೆಚ್ಚು ಮಳೆ ಸುರಿಯುತ್ತಿತ್ತು. ಆಗ ನದಿಗಳು ತುಂಬಿ ಹರಿಯುತ್ತಿದ್ದವೇ ಹೊರತು, ರಸ್ತೆಗಳಿಗೆ ನೀರು ನುಗ್ಗುವ, ಮನೆಗಳು ಕುಸಿದುಹೋಗುವ, ಗುಡ್ಡಗಳೇ ಜರಿಯುವ, ಗ್ರಾಮ ಗ್ರಾಮಗಳೇ ಪ್ರವಾಹದಲ್ಲಿ ಮುಳುಗುವ ವಿದ್ಯಮಾನಗಳು ನಡೆಯುತ್ತಿರಲಿಲ್ಲ.
ಇವತ್ತು ಸಣ್ಣಪುಟ್ಟ ಮಳೆಬಂದರೂ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಇಲ್ಲ. ಸಣ್ಣಪುಟ್ಟ ಮಳೆಯೂ ಸೃಷ್ಟಿಸುವ ಅನಾಹುತಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ಅಂಥದ್ದರಲ್ಲಿ ಧಾರಾಕಾರ ಎಡೆಬಿಡದೆ ಮಳೆ ಸುರಿದರೆ, ಅದರಿಂದಾಗಿ ತುಂಬಿ ಹರಿಯುವ ನದಿಗಳು, ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳ ಪ್ರವಾಹದ ಪರಿಣಾಮ ಹೇಗಿರುತ್ತದೆ ಎನ್ನುವುದಕ್ಕೆ ಉತ್ತರ ಕರ್ನಾಟಕ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಆದ ಅನಾಹುತಗಳೇ ದಿವ್ಯ ಸಾಕ್ಷಿ.
ಮಳೆನೀರು ಸಂಗ್ರಹ ಮತ್ತು ಪ್ರವಾಹ ತಡೆಗೆ ಚೆಕ್ಡ್ಯಾಂ ಮತ್ತು ಇಂಗುಗುಂಡಿಗಳು ಸೂಕ್ತ ಪರಿಹಾರವೆಂದು ಪರಿಸರ ತಜ್ಞರು ಪದೇಪದೇ ಹೇಳುತ್ತಿದ್ದರೂ ಅದನ್ನು ಕಾರ್ಯಗತಗೊಳಿಸಿದವರು ಬೆರಳೆಣಿಕೆಯಷ್ಟು. ಚೆಕ್ ಡ್ಯಾಂ ಮತ್ತು ಇಂಗುಗುಂಡಿಗಳನ್ನು ನಿರ್ಮಿಸಿಬಿಟ್ಟರೆ ಭಾರೀ ಪ್ರಮಾಣದ ಪ್ರವಾಹ ತಡೆಗಟ್ಟಲು ಸಾಧ್ಯವಿಲ್ಲ ಎಂಬುದು ನಿಜವಾದರೂ, ಮಳೆ ಬಂದಾಗ ಆರಂಭದಲ್ಲಿ ನೀರುಹರಿದುಹೋಗುವುದನ್ನು ತಡೆದು ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಹರಿಯುವ ನೀರಿನ ಪ್ರಮಾಣ ಕಡಿಮೆಯಾದಾಗ ಪ್ರವಾಹ ತಪ್ಪಿ, ಅನಾಹುತಗಳೂ ತಪ್ಪುತ್ತದೆ. ಆದರೆ ಅದೆಷ್ಟು ರೈತರು ತಮ್ಮ ಹೊಲಗದ್ದೆಗಳಲ್ಲಿ, ತೋಟಗಳಲ್ಲಿ ಇಂಗುಗುಂಡಿ ನಿರ್ಮಿಸಿದ್ದಾರೆ? ಸರ್ಕಾರ ಅದೆಷ್ಟು ಚೆಕ್ಡ್ಯಾಂಗಳನ್ನು ನಿರ್ಮಿಸಿದೆ? ನೀರಿಗಾಗಿ ಎಲ್ಲೆಂದರಲ್ಲಿ ಬೋರ್ವೆಲ್ ಕೊರೆಯುವ ನಾವು ಅಷ್ಟೇ ಉತ್ಸಾಹದಲ್ಲಿ, ಅಷ್ಟೇ ಪ್ರಮಾಣದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲು ಏಕೆ ಮನಸ್ಸು ಮಾಡುತ್ತಿಲ್ಲ? ಮಳೆ ನೀರು ಹಿಡಿದಿಡುವಂತಹ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸಲು ನಾವಾಗಲೀ (ಜನರು) ಸರ್ಕಾರವಾಗಲೀ ಏಕೆ ಮುತುವರ್ಜಿ ವಹಿಸುತ್ತಿಲ್ಲ? ಸಂಕಟ ಬಂದೆರಗಿದಾಗ ವೆಂಕಟರಮಣ ಎಂದು ಮೊರೆಯಿಟ್ಟರೆ ಏನು ಪ್ರಯೋಜನ? ಪ್ರಕೃತಿ ಮುನಿದರೆ ಯಾವ ದೇವರೂ ಕಾಪಾಡಲಾರ. ಏಕೆಂದರೆ ಯಾವ ದೇವರೂ ಅರಣ್ಯವನ್ನು ನಾಶ ಮಾಡು/ ಕೆರೆಗಳನ್ನು ಬರಿದು ಮಾಡಿ ಕಟ್ಟಡ ನಿರ್ಮಿಸು; ದುರಾಸೆಗಾಗಿ ನದಿಪಾತ್ರವನ್ನು ಕಿರಿದುಗೊಳಿಸು/ ಗುಡ್ಡಗಳನ್ನು ಕಡಿದು ಹೋಂ ಸ್ಟೇ ನಿರ್ಮಿಸು; ನೀರಿಗಾಗಿ ಸಿಕ್ಕಲೆಲ್ಲ ಕೊಳವೆ ಬಾವಿ ತೋಡು ಎಂದು ಅಪ್ಪಣೆ ಕೊಡಿಸಿಲ್ಲ! ಇವುಗಳನ್ನು ಮಾಡುವಾಗ ನೆನಪಿಸಿಕೊಳ್ಳದ ದೇವರನ್ನು , ಇವುಗಳನ್ನು ಮಾಡಿದ್ದರಿಂದಲೇ ಉಂಟಾದ ವಿಕೋಪಗಳ ಸಂದರ್ಭದಲ್ಲಿ ದೂರಿದರೇನು ಪ್ರಯೋಜನ? ಜಲ ಪ್ರಳಯ, ವಿಕೋಪದ ಸಂದರ್ಭಗಳಲ್ಲಿ ಮಾತ್ರ ದೇವರು ಬಂದು ಕಾಪಾಡಬೇಕೆಂದರೆ ಅದು ಯಾವ ಪರಿಯ ನ್ಯಾಯ?
ಮನುಷ್ಯನ ಅಹಂಕಾರ ನೆತ್ತಿಗೇರಿದೆ. ತಾನು ಮಾಡಿದ್ದೆಲ್ಲ ಸರಿ. ಏನು ಬೇಕಾದರೂ ಮಾಡಬಲ್ಲೆ. ನನ್ನನ್ನು ಕೇಳುವವರಾರು? ಹಣಬಲ, ತೋಳ್ಬಲ, ಅಕಾರ ಬಲದಿಂದ ನನಗಿಚ್ಛೆ ಬಂದಲ್ಲಿ ಅಣೆಕಟ್ಟು ನಿರ್ಮಿಸಬಲ್ಲೆ. ಬಂಗಲೆ, ಅಪಾರ್ಟ್ಮೆಂಟ್, ಬೃಹತ್ ಕಟ್ಟಡಗಳನ್ನು ಕಟ್ಟಬಲ್ಲೆ; ಕಾಡುಗಳನ್ನು ಕಡಿದುರುಳಿಸಿ ಹೊಲಗದ್ದೆ, ಕಾರ್ಖಾನೆ ಮಾಡಬಲ್ಲೆ ಎಂಬ ಅಹಂನಿಂದ ಮನುಷ್ಯ ಮದವೇರಿ ಹೋಗಿದ್ದಾನೆ. ಪ್ರಕೃತಿ ಮೌನವಾಗಿ ಇದನ್ನೆಲ್ಲ ಸಹಿಸುತ್ತಲೇ ಬಂದಿದ್ದಾಳೆ. ಆದರೆ ಆಕೆಯ ಸಹನೆಗೂ ಮಿತಿ ಎಂಬುದಿದೆಯಲ್ಲ. ಬೇಸರದಿಂದ ಒಮ್ಮೆ ಆಕಳಿಸಿದರೂ ಸಾಕು, ಮನುಕುಲವೇ ವಿನಾಶದಂಚಿಗೆ ತಲಪುತ್ತದೆ. ಇನ್ನು ಪ್ರಕೃತಿ ಮುನಿದರಂತೂ ಕೇಳುವುದೇ ಬೇಡ. ಪ್ರಕೃತಿಯ ಮುಂದೆ ಮನುಷ್ಯ ಅದೆಷ್ಟು ಕುಬ್ಜ ಹಾಗೂ ದುರ್ಬಲ ಎಂಬುದು ಪ್ರಕೃತಿ ವಿಕೋಪಗಳು ಸಂಭವಿಸಿದಾಗಲೆಲ್ಲ ಸಾಬೀತಾಗುತ್ತಲೇ ಇದೆ. ಆದರೆ ಮನುಷ್ಯ ಮಾತ್ರ ಪಾಠ ಕಲಿಯುತ್ತಲೇ ಇಲ್ಲ.
ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸರ್ಕಾರ, ವಿಪತ್ತು ನಿರ್ವಹಣಾ ಪಡೆ, ಸೇನೆ, ಹಾಗೂ ನಮ್ಮ ಜನಪ್ರತಿನಿಧಿಗಳು ಸಂತ್ರಸ್ತರ ನೆರವಿಗೆ ಧಾವಿಸಬೇಕೆಂಬುದು ನಿಯಮ. ಇವೆಲ್ಲ ಒಂದು ವ್ಯವಸ್ಥೆಗೆ ಒಳಪಟ್ಟಿರುವುದರಿಂದ ಮೇಲಿನಿಂದ ಆದೇಶ ಬರುವತನಕ ಇವ್ಯಾವುವೂ ಸಂತ್ರಸ್ತರ, ನೆರೆಪೀಡಿತರ ನೆರವಿಗೆ ಧಾವಿಸಲಾರವು. ಮೇಲಿನಿಂದ ಆದೇಶ ಕೊಡಬೇಕಾದವರು ಅಧಿಕಾರಿಗಳು ಹಾಗೂ ಮಂತ್ರಿಗಳು ಅಥವಾ ಅಧಿಕಾರ ಸೂತ್ರ ಹಿಡಿದ ಮುಖ್ಯಸ್ಥರು. ಇಂಥವರಲ್ಲಿ ಮಾನವೀಯ ಕಾಳಜಿಯ ಕೊರತೆ ಕಾಡುತ್ತಿದ್ದರೆ ವಿಪತ್ತು ನಿರ್ವಹಣಾ ಪಡೆ, ಸೇನೆ ಇತ್ಯಾದಿ ಇದ್ದೂ ಅಸಹಾಯಕ ಸ್ಥಿತಿ ನಿರ್ಮಾಣವಾಗುವುದು ಸಹಜ. ಅಧಿಕಾರಸೂತ್ರ ಹಿಡಿದವರು “ಮರುಕಕ್ಕೆ, ಪ್ರೇಮಕ್ಕೆ ಚಿರತೆರೆದ ಎದೆ”ಯುಳ್ಳವರಾಗಿರಬೇಕಾದುದು ಅಗತ್ಯ. ರಾಜ್ಯದಲ್ಲಿ ಮಂತ್ರಿಮಂಡಲ ಇನ್ನೂ ರಚನೆಯಾಗಿರದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ‘ಒನ್ ಮ್ಯಾನ್ ಆರ್ಮಿ’ಯಂತೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ನಿರಂತರ ಸುತ್ತಾಡಿ, ಪರಿಹಾರ ಕಾರ್ಯಗಳಿಗೆ ಚಾಲನೆ ನೀಡಿ, ಸಂತ್ರಸ್ತರಿಗೆ ಸಾಂತ್ವನದ ಬೆಚ್ಚನೆಯ ಭರವಸೆ ನೀಡಿದ್ದು ಮಾತ್ರ ಅತ್ಯಂತ ಶ್ಲಾಘನೀಯ. ದೇವೇಗೌಡರಂತಹ ದೇವೇಗೌಡರೂ ಬಿಎಸ್ವೈ ಅವರ ಈ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಪಕ್ಷ ರಾಜಕೀಯದ ಮೇಲಾಟಗಳು ಸಲ್ಲದು. ಪಕ್ಷಬೇಧ ತೊರೆದು ಜನರ ಸಂಕಷ್ಟಗಳನ್ನು ನಿವಾರಿಸಲು ಒಂದಾಗಿ ಕಾರ್ಯ ನಿರ್ವಹಿಸಬೇಕು. ಅಂಥ ಅಪರೂಪದ ದೃಶ್ಯಗಳು ಮಾತ್ರ ನೆರೆ ಸಂದರ್ಭದಲ್ಲಿ ಎಲ್ಲೂ ಕಂಡುಬರಲಿಲ್ಲ!
ಯಾವ, ಯಾರ ಆದೇಶಕ್ಕೂ ಕಾಯದೆ, ಪ್ರಕೃತಿ ವಿಕೋಪದ ಸುದ್ದಿ ತಿಳಿದೊಡನೆ ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ ಆರೆಸ್ಸೆಸ್, ಇನ್ಫೋಸಿಸ್ನ ಸುಧಾಮೂರ್ತಿ, ವಿವಿಧ ಮಠಾಧೀಶರುಗಳು, ಇನ್ನಿತರ ಖಾಸಗಿ ಸಂಘಟನೆಗಳ ಶ್ಲಾಘನೀಯ ಕಾರ್ಯವನ್ನು ಎಷ್ಟು ಬಣ್ಣಿಸಿದರೂ ಸಾಲದು. ಅದರಲ್ಲೂ ಯಾವುದೇ ಪ್ರಚಾರ, ಪ್ರಸಿದ್ಧಿ ಬಯಸದೆ, ಪ್ರಾಣವನ್ನೂ ಲೆಕ್ಕಿಸದೆ ಪರಿಹಾರ ಕಾರ್ಯಗಳಲ್ಲಿ ಹಗಲಿರುಳೆನ್ನದೆ ತೊಡಗಿಕೊಂಡ ಆರೆಸ್ಸೆಸ್ ಕಾರ್ಯಕರ್ತರ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಟಿವಿ ಪತ್ರಿಕಾ ಮಾಧ್ಯಮದವರ ಕಣ್ಣಿಗೆ ಮಾತ್ರ ಆರೆಸ್ಸೆಸ್ನವರ ಸದ್ದಿಲ್ಲದ ಸೇವಾಕಾರ್ಯ ಕಾಣಿಸಲೇ ಇಲ್ಲ! ಕಾಣಿಸಿದ್ದರೂ ಅದೇನೂ ಅಷ್ಟು ಮಹತ್ವದ್ದೆಂದು ಅನಿಸಲಿಲ್ಲ. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಸಂಘದ ಸ್ವಯಂಸೇವಕರು ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದರು ಎನ್ನುವುದು ಅಷ್ಟೇ ವಾಸ್ತವ.
ಮಹಾಮಳೆಯಲ್ಲಿ ಜೀವ ಕಳೆದುಕೊಂಡವರ ಜತೆಗೆ ಮಾನವೀಯತೆ ಮರೆತು ಅಮಾನವೀಯರಾಗಿ ವರ್ತಿಸಿದ ಕೆಟ್ಟ ನಿದರ್ಶನಗಳೂ ಇವೆ. ಗುಡ್ಡ ಕುಸಿತದಿಂದ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡು, ಮನೆಯನ್ನೂ ಕಳೆದುಕೊಂಡು ಉಟ್ಟಬಟ್ಟೆಯಲ್ಲಿ ಶವಗಳನ್ನು ಸ್ಮಶಾನಕ್ಕೆ ತಂದಾಗ ಹಣ ಕೊಟ್ಟರಷ್ಟೇ ಶವಸಂಸ್ಕಾರಕ್ಕೆ ಅವಕಾಶ ಎಂದ ವ್ಯಕ್ತಿ ಮಾನವನೋ ದಾನವನೋ ಎಂದು ತೀರ್ಮಾನಿಸುವುದು ಕಷ್ಟವಲ್ಲ. ಇದು ನಡೆದಿದ್ದು ಕೊಡಗಿನ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ. ತಮ್ಮನ ಮನೆ ಕುಸಿದುಹೋದಾಗ ಹತ್ತಿರದಲ್ಲೇ ಇದ್ದ ಮನೆಯ ಅಣ್ಣ ನೆರವಿಗೆ ಬಾರದೆ ತಾತ್ಸಾರ ತೋರಿದ ಘಟನೆ ಮಾನವೀಯತೆ ಸತ್ತುಹೋಯಿತೇ ಎಂದು ಪ್ರಶ್ನಿಸುವಂತಾಗಿದೆ. ಇದು ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಜಯಪುರ ಸಮೀಪದಲ್ಲಿ.
ಮಹಾಮಳೆ, ಪ್ರವಾಹವನ್ನೇ ನೆಪಮಾಡಿಕೊಂಡು ಅಲ್ಲಲ್ಲಿ ಕೆಲವು ಖದೀಮರು ಸಂತ್ರಸ್ತ ಪರಿಹಾರನಿಧಿ ಸಂಗ್ರಹಿಸಿ ಜೇಬಿಗಿಳಿಸಿದ ಘಟನೆಗಳೂ ನಡೆದಿವೆ. ಮನೆಗೆ ಬೆಂಕಿ ಬಿದ್ದಾಗ ಅದನ್ನು ನಂದಿಸಲು ಮುಂದಾಗದೆ, ಉರಿವ ಬೆಂಕಿಯ ಗಳ ಹಿಡಿದು ಬೀಡಿ ಹಚ್ಚಿ ಸೇದುವುದೆಂದರೆ ಇದೇನೇ. ಒಂದು ಪ್ರವಾಹ ಹಲವರಲ್ಲಿ ಮಾನವತೆಯನ್ನು ಚಿಗುರಿಸಿದರೆ, ಇನ್ನು ಕೆಲವರಲ್ಲಿ ದಾನವತೆಯನ್ನು ಬಡಿದೆಬ್ಬಿಸುವ ಪರಿ ನಿಜಕ್ಕೂ ಅದೆಷ್ಟು ವಿಪರ್ಯಾಸದ ಸಂಗತಿ!
ಈಗ ಮಳೆ ಇಳಿದಿದೆ ನೆರೆಯೂ ಇಳಿದಿದೆ. ಆದರೆ ನೆರೆಯಲ್ಲಿ ಮುಳುಗಿದ ಬದುಕುಗಳನ್ನು ಮೇಲೆತ್ತಿ ನಿಲ್ಲಿಸುವ ಕಾರ್ಯ ಮಾತ್ರ ಆಗಬೇಕಾಗಿದೆ. ತಾತ್ಕಾಲಿಕವಾಗಿ ನೀಡುವ ಪರಿಹಾರಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸಂತ್ರಸ್ತ ಬಂಧುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ತುರ್ತಾಗಿ ಆಗಬೇಕಿದೆ.
✍ ದು.ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.