ಭಾರತದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಸುಧಾರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ದೃಢವಾದ ಫಲಿತಾಂಶಗಳನ್ನು ತೋರಿಸುತ್ತಿವೆ. ಜಾಗತಿಕ ಪ್ರವಾಸ ಮತ್ತು ಪ್ರವಾಸೋದ್ಯಮ (ಟಿ & ಟಿ) ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ನಮ್ಮ ದೇಶವು ಆರು ಸ್ಥಾನಗಳನ್ನು ಏರಿಸಿಕೊಂಡಿದೆ. 2017 ರಲ್ಲಿ ಭಾರತ 40 ನೇ ಸ್ಥಾನದಲ್ಲಿತ್ತು ಆದರೆ ಈ ವರ್ಷ ಶ್ರೇಯಾಂಕವು 34 ನೇ ಸ್ಥಾನಕ್ಕೆ ಸುಧಾರಣೆ ಕಂಡಿದೆ. “ದಕ್ಷಿಣ ಏಷ್ಯಾದ ಬಹುಪಾಲು ಟಿ & ಟಿ (ಪ್ರಯಾಣ ಮತ್ತು ಪ್ರವಾಸೋದ್ಯಮ) ಜಿಡಿಪಿಯನ್ನು ಹೊಂದಿರುವ ಭಾರತವು ಉಪ-ಪ್ರದೇಶದ ಅತ್ಯಂತ ಸ್ಪರ್ಧಾತ್ಮಕ ಟಿ & ಟಿ ಆರ್ಥಿಕತೆಯಾಗಿ ಉಳಿದಿದೆ, ಆರು ಸ್ಥಾನಗಳನ್ನು ಗಳಿಸಿ ಜಾಗತಿಕವಾಗಿ 34 ನೇ ಸ್ಥಾನದಲ್ಲಿದೆ” ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿ ತಿಳಿಸಿದೆ.
ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕ (ಟಿಟಿಸಿಐ) ಸ್ಕೋರ್ನಲ್ಲಿ ಹೆಚ್ಚಿನ ಸುಧಾರಣೆಯನ್ನು ತೋರಿಸಿದ ಕಾರಣದಿಂದಾಗಿ ಭಾರತವು ಅಗ್ರ 35 ರಲ್ಲಿ ಸ್ಥಾನ ಪಡೆದ ಏಕೈಕ ಮಧ್ಯಮ ಆದಾಯದ ದೇಶವಾಗಿ ಹೊರಹೊಮ್ಮಿದೆ. ಉಪ ವಿಭಾಗಗಳಲ್ಲಿ, ಭಾರತವು ಸಾಂಸ್ಕೃತಿಕ ಸಂಪನ್ಮೂಲಗಳಲ್ಲಿ 8 ನೇ ಸ್ಥಾನ, ನೈಸರ್ಗಿಕ ಸಂಪನ್ಮೂಲಗಳಲ್ಲಿ 14 ನೇ ಸ್ಥಾನ, ವಾಯು ಮೂಲಸೌಕರ್ಯದಲ್ಲಿ 33 ನೇ ಸ್ಥಾನ ಮತ್ತು ನೆಲ ಮತ್ತು ಬಂದರು ಮೂಲಸೌಕರ್ಯಗಳಲ್ಲಿ 28 ನೇ ಸ್ಥಾನವನ್ನು ಪಡೆದುಕೊಂಡು ಬೀಗಿದೆ.
ಪ್ರಯಾಣ ಮತ್ತು ಪ್ರವಾಸೋದ್ಯಮ ನೀತಿ, ಮೂಲಸೌಕರ್ಯ ಮತ್ತು ಐಸಿಟಿ ಸಿದ್ಧತೆಯಂತಹ ಅನೇಕ ವಿಭಾಗಗಳಲ್ಲಿ ದೇಶವು ಸಾಕಷ್ಟು ಸುಧಾರಣೆಯನ್ನು ತೋರಿಸಿದೆ. “ಭಾರತವು ತನ್ನ ವ್ಯವಹಾರ ಪರಿಸರವನ್ನು (89 ರಿಂದ 39 ನೇ ಸ್ಥಾನ), ಒಟ್ಟು ಟಿ & ಟಿ ನೀತಿ ಮತ್ತು ಶಕ್ತಗೊಳಿಸುವ ಪರಿಸ್ಥಿತಿಗಳಲ್ಲಿ (79 ರಿಂದ 69 ನೇ ಸ್ಥಾನ), ಮೂಲಸೌಕರ್ಯ (58 ರಿಂದ 55 ನೇ ಸ್ಥಾನ) ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಿದ್ಧತೆ (112 ರಿಂದ 105 ನೇ) ಅನ್ನು ಸುಧಾರಿಸಿಕೊಂಡಿದೆ” ಎಂದು ವರದಿ ಹೇಳುತ್ತಿದೆ.
ಜಪಾನ್, ಚೀನಾ, ಕೊರಿಯಾ, ಸಿಂಗಾಪುರ್, ಮಲೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ಏಷ್ಯಾದ ಒಟ್ಟು 35 ರಾಷ್ಟ್ರಗಳು ಸೂಚ್ಯಾಂಕದಲ್ಲಿ ಟಾಪ್ 35ರ ಸ್ಥಾನದಲ್ಲಿ ಕಾಣಿಸಿಕೊಂಡಿವೆ. ಭಾರತದ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರವಾದ ಪಾಕಿಸ್ಥಾನ ಏಷ್ಯಾದ ಅತ್ಯಂತ ಕಡಿಮೆ ಸ್ಪರ್ಧಾತ್ಮಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಒಟ್ಟು ಸ್ಪರ್ಧಾತ್ಮಕತೆಯಲ್ಲಿ 121 ನೇ ಸ್ಥಾನವನ್ನು ಇದು ಪಡೆದುಕೊಂಡಿದೆ ಮತ್ತು ಸುರಕ್ಷತೆ ಮತ್ತು ಭದ್ರತಾ ಪರಿಸ್ಥಿತಿಗಳಲ್ಲಿ 134 ನೇ ಸ್ಥಾನವನ್ನು ಪಡೆದುಕೊಂಡಿದೆ.
ಹಿಂದಿನ ಸರ್ಕಾರಗಳು ಭಾರತದ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಬಳಸಿಕೊಳ್ಳುವತ್ತ ಗಂಭೀರ ಪ್ರಯತ್ನಗಳನ್ನು ಮಾಡಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಭಾರತವನ್ನು ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಹಳ ಗಂಭೀರವಾಗಿ ಹೆಜ್ಜೆಯಿಟ್ಟಿದೆ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ಇದು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.
ಭಾರತ ಸರ್ಕಾರವು ಪ್ರವಾಸಿಗರು ಮತ್ತು ವ್ಯಾಪಾರ ಸಂದರ್ಶಕರಿಗಾಗಿ ಇಟಿಎ ಸೌಲಭ್ಯ ಆಧಾರಿತ ವೀಸಾ ಆನ್ ಅರೈವಲ್ ಅನ್ನು ಪರಿಚಯಿಸಿದೆ. ಅಮೆರಿಕ, ಚೀನಾ, ಗ್ರೇಟ್ ಬ್ರಿಟನ್, ಕೆನಡಾ, ಮತ್ತು ಜರ್ಮನಿ ಸೇರಿದಂತೆ 30 ದೇಶಗಳ ನಾಗರಿಕರಿಗೆ ಈ ಸೌಲಭ್ಯ ದೊರೆಯುತ್ತಿದೆ. ಹೋಟೆಲ್ಗಳು, ರೆಸಾರ್ಟ್ಗಳು ಮತ್ತು ಮನೋರಂಜನಾ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಪ್ರವಾಸೋದ್ಯಮ ನಿರ್ಮಾಣ ಯೋಜನೆಗಳಲ್ಲಿ ಶೇ.100ರಷ್ಟು ಎಫ್ಡಿಐಗೂ ಸರ್ಕಾರ ಅವಕಾಶವನ್ನು ನೀಡಿದೆ.
ಭಾರತೀಯ ಪ್ರವಾಸೋದ್ಯಮವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ, ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಭಾರತೀಯ ಪ್ರವಾಸೋದ್ಯಮವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ಉದ್ಯಮದಲ್ಲಿ ಕಡಿಮೆ ಮಟ್ಟದ ಔಪಚಾರಿಕೀಕರಣ, ಎಟಿಎಂ ಪೆನಟ್ರೇಶನ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ.
ವಿಶ್ವ ಪ್ರವಾಸೋದ್ಯಮ ಶ್ರೇಯಾಂಕದ ಪ್ರಕಾರ, ಭಾರತವು 2016 ರಲ್ಲಿ 14.6 ಮಿಲಿಯನ್ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಬರಮಾಡಿಕೊಂಡಿದೆ, ಅದು ಅದರ ನಿಜವಾದ ಸಾಮರ್ಥ್ಯಕ್ಕಿಂತ ಕಡಿಮೆಯಾಗಿದೆ. ದಕ್ಷಿಣ ಯುರೋಪಿನ ಸಣ್ಣ ದೇಶವಾದ ಫ್ರಾನ್ಸ್ ವಾರ್ಷಿಕವಾಗಿ 82.6 ಮಿಲಿಯನ್ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೊಂದುತ್ತದೆ, ಇದು ಭಾರತಕ್ಕಿಂತ 6 ಪಟ್ಟು ಹೆಚ್ಚು.
ಭಾರತೀಯ ಪ್ರವಾಸೋದ್ಯಮವು ಇನ್ನು 10 ವರ್ಷಗಳಲ್ಲಿ ಚೀನಾ, ಯುಎಸ್ ಮತ್ತು ಜರ್ಮನಿಯ ನಂತರ ನಾಲ್ಕನೇ ದೊಡ್ಡ ಪ್ರವಾಸೋದ್ಯಮವಾಗಲಿದೆ ಎಂದು ವಿಶ್ವ ಪ್ರವಾಸ ಮತ್ತು ಪ್ರವಾಸೋದ್ಯಮ ಮಂಡಳಿಯು ನಿರೀಕ್ಷಿಸುತ್ತಿದೆ.
ಆಗಸ್ಟ್ 2017 ರ ವೇಳೆಗಾಗಲೇ ಭಾರತವು 36 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ, ಈ ತಾಣಗಳನ್ನು ಯುನೆಸ್ಕೋ ಗುರುತಿಸಿದೆ. 1972 ರ ಯುನೆಸ್ಕೋ ವಿಶ್ವ ಪರಂಪರೆಯ ಸಮಾವೇಶದಲ್ಲಿ ವಿವರಿಸಿದಂತೆ, ಇವುಗಳು ಸಾಂಸ್ಕೃತಿಕ ಅಥವಾ ನೈಸರ್ಗಿಕ ಪ್ರಾಮುಖ್ಯತೆಯ ಸ್ಥಳಗಳಾಗಿವೆ. ಭಾರತದ ರಾಜಕೀಯ ಗಡಿಗಳು ವ್ಯಾಪಕವಾದ ಪರಿಸರ ವಲಯಗಳನ್ನು ಒಳಗೊಂಡಿವೆ-ಮರುಭೂಮಿ, ಎತ್ತರದ ಪರ್ವತಗಳು, ಎತ್ತರದ ಪ್ರದೇಶಗಳು, ಉಷ್ಣವಲಯಗಳು ಮತ್ತು ಸಮಶೀತೋಷ್ಣ ಕಾಡುಗಳು, ಬಯಲು ಪ್ರದೇಶಗಳು, ಹುಲ್ಲುಗಾವಲುಗಳು, ನದಿಗಳನ್ನು ಸುತ್ತುವರೆದಿರುವ ಪ್ರದೇಶಗಳು, ಹಾಗೆಯೇ ದ್ವೀಪಸಮೂಹಗಳನ್ನು ಇದು ಒಳಗೊಂಡಿದೆ. ಇದು ವಿಶ್ವದ ಅತ್ಯಂತ ಜೈವಿಕ ವೈವಿಧ್ಯಮಯ ಪ್ರದೇಶಗಳಲ್ಲಿ ಒಂದಾಗಿದೆ. ಭಾರತದಲ್ಲಿ ಪ್ರವಾಸೋದ್ಯಮವು ಅತ್ಯಂತ ವಿಶಿಷ್ಟವಾದ ಮೂರು ಪ್ರದೇಶಗಳನ್ನು ಹೊಂದಿದೆ, ಅವುಗಳೆಂದರೆ ಪಶ್ಚಿಮ ಘಟ್ಟಗಳು, ಹಿಮಾಲಯ ಮತ್ತು ಅಂಡಮಾನ್ ದ್ವೀಪಗಳು.
ಪ್ರವಾಸೋದ್ಯಮವು ಕೇವಲ ವಿಶ್ರಾಂತಿ ಮತ್ತು ಮನೋರಂಜನೆಗೆ ಸೀಮಿತವಾಗಿಲ್ಲ. ಇದರಲ್ಲಿ ಪರಿಸರ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಆರೋಗ್ಯ ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಿವೆ. ವಿಶೇಷವಾಗಿ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರತವು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ, ಮತ್ತು ಗಲ್ಫ್ ರಾಷ್ಟ್ರಗಳು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇರಾನ್ನ ಅನೇಕ ಜನರು ಭಾರತಕ್ಕೆ ಭೇಟಿ ನೀಡಿ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾಕೆಂದರೆ ನಮ್ಮ ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳು ತುಂಬಾ ಅಗ್ಗವಾಗಿವೆ. ಅಂತೆಯೇ, ಪ್ರಪಂಚದಾದ್ಯಂತ ವಾಸಿಸುವ ಭಾರತೀಯರು ನಿಯಮಿತವಾಗಿ ಭಾರತಕ್ಕೆ ಭೇಟಿ ನೀಡುತ್ತಾರೆ. ಭಾರತವು ಅನೇಕ ಧರ್ಮಗಳ ಯಾತ್ರಾ ಸ್ಥಳಗಳನ್ನು ಹೊಂದಿರುವ ಭೂಮಿಯಾಗಿರುವುದು ಇದಕ್ಕೆ ಕಾರಣ. ಜಪಾನ್, ಮಯನ್ಮಾರ್, ಶ್ರೀಲಂಕಾ ಮುಂತಾದ ಅನೇಕ ಏಷ್ಯಾ ರಾಷ್ಟ್ರಗಳ ಜನರು ಪವಿತ್ರ ಬೌದ್ಧ ತಾಣಗಳನ್ನು ಭೇಟಿ ಮಾಡಲು ಭಾರತಕ್ಕೆ ಬರುತ್ತಲೇ ಇರುತ್ತಾರೆ.
ಹೀಗಾಗಿ ಭಾರತವು ಸಮೃದ್ಧ ತಾಣಗಳನ್ನು ಹೊಂದಿರುವ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ವಿಶ್ವ ಪ್ರವಾಸೋದ್ಯಮದಲ್ಲಿ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ಮೋದಿ ಸರ್ಕಾರದ ಶ್ರಮವನ್ನು ನಾವಿಲ್ಲಿ ಶ್ಲಾಘಿಸಲೇ ಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.