ಮಂಗಳೂರು: ಮಾದಕ ವ್ಯವಸನಿಯಾಗಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಂಗಳೂರಿನ ಯುವಕನೊಬ್ಬ ಈಗ ವ್ಯಸನ ಮುಕ್ತನಾಗಿ ನವ ಜೀವನವನ್ನು ನಡೆಸುತ್ತಿದ್ದಾನೆ. ತನ್ನಲ್ಲಿ ಬದಲಾವಣೆಯನ್ನು ತಂದ ಪೊಲೀಸ್ ಇಲಾಖೆಗೆ ಆತ ಪತ್ರ ಮುಖೇನ ಧನ್ಯವಾದಗಳನ್ನು ತಿಳಿಸಿದ್ದಾನೆ. ಆತ ಬರೆದ ಪತ್ರವನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಹರ್ಷ ಅವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಸೆ.2 ರಂದು ಮಾದಕ ದ್ರವ್ಯ ಸೇವನೆ ಮಾಡಿದ್ದ ವೇಳೆ ಯುವಕ ಕಾವೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಬಳಿಕ ಠಾಣೆಯಲ್ಲಿ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಮತ್ತು ಕಾವೂರು ಇನ್ಸ್ಪೆಕ್ಟರ್ ರಾಘವ್ ಅವರು ಯುವಕನಿಗೆ ಕೌನ್ಸೆಲಿಂಗ್ ಮಾಡಿದ್ದರು. ಮಾದಕ ವ್ಯಸನದ ದುಷ್ಪರಿಣಾಮಗಳು ಮತ್ತು ಜೀವನದ ಮಹತ್ವಗಳನ್ನು ಆತನಿಗೆ ಎಳೆಎಳೆಯಾಗಿ ಬಿಡಿಸಿ ಹೇಳಿದ್ದರು.
ಅವರ ಈ ಕಾರ್ಯದಿಂದಾಗಿ ಯುವಕ ಇಂದು ವ್ಯಸನ ಮುಕ್ತನಾಗಿದ್ದಾನೆ ಮತ್ತು ತನ್ನಲ್ಲಿ ಬದಲಾವಣೆ ತಂದ ಪೊಲೀಸ್ ಇಲಾಖೆಗೆ ಪತ್ರ ಮುಖೇನ ಧನ್ಯವಾದ ತಿಳಿಸಿದ್ದಾನೆ.
“ನಾನು 5 ವರ್ಷದಿಂದ ಮಾದಕ ವ್ಯಸನಿಯಾಗಿದ್ದೆ, ಇದರಿಂದ ನನ್ನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗಿತ್ತು. ನನ್ನ ಭವಿಷ್ಯವೂ ಆತಂಕದ ಸ್ಥಿತಿಯನ್ನು ತಲುಪಿತ್ತು. ಮಾದಕ ವ್ಯಸನ ಮುಕ್ತಗೊಳ್ಳಲು ನಾನಾ ರೀತಿಯಲ್ಲಿ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆದರೆ ಪೊಲೀಸರು ಜೀವನವನ್ನು ಮುನ್ನಡೆಸಲು ತುಂಬಾ ಅವಕಾಶಗಳಿವೆ ಎಂಬುದನ್ನು ನನಗೆ ತಿಳಿಸಿಕೊಟ್ಟರು. ಅವರ ಸಲಹೆಗಳು ನನ್ನ ಜೀವನವನ್ನೇ ಬದಲಿಸಿತು, ನಾನು ಮಾದಕ ವ್ಯಸನ ಮುಕ್ತಗೊಂಡಿದ್ದೇನೆ” ಎಂದು ಪತ್ರದಲ್ಲಿ ಯುವಕ ಬರೆದಿದ್ದಾನೆ.
ಯುವಕ ಬರೆದ ಪತ್ರಕ್ಕೆ ಕಮಿಷನರ್ ಡಾ. ಹರ್ಷಾ ಶ್ಲಾಘನೆ ವ್ಯಕ್ತಪಡಿಸಿದ್ದು, ಪತ್ರವನ್ನು ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ.
Really Heart touching moment. An Young boy who was addicted to ganja was caught by police and counseled writes to me that he had changed.. this is what we want.. not cases or arrests.. they all are tools to attain this result.. proud #nammakudlaldapolice pic.twitter.com/pvFgNBCYpf
— Harsha IPS CP Mangaluru City (@compolmlr) September 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.