ಪ್ರಾರಂಭ
ತಕ್ಷಶಿಲಾ ವಿಶ್ವವಿದ್ಯಾಲಯವು ಅನೇಕ ದಾಳಿಕೋರರಿಗೆ ತುತ್ತಾಗಿ, ತನ್ನ ಶಿಕ್ಷಣದ ಮಹತ್ವವನ್ನು ಕಳೆದುಕೊಳ್ಳತೊಡಗಿತು. ಆಗ ಅಲ್ಲಿಯ ಶಿಕ್ಷಕರು ಹಾಗೂ ವಿದ್ವಾಂಸರು ತಮ್ಮ ಶಿಕ್ಷಣ ಉಳಿಯುವದಿಲ್ಲವೆಂದು ಮನಗಂಡರು. ಇದರ ಮಂಥನದ ಫಲವಾಗಿಯೇ ರಾಜಗೃಹದ ಶ್ರೇಷ್ಠರ ವಿನಂತಿಯಂತೆ, ರಾಜಗೃಹದ ಹತ್ತಿರ ಬುದ್ಧವಿಹಾರವನ್ನು ಪ್ರಾರಂಭಿಸಲಾಯಿತು. ಇದು ಬಿಹಾರದ ಪ್ರಸ್ತುತ ರಾಜಧಾನಿ ಪಟ್ನಾ ಹಾಗೂ ಗಯಾ ಪಟ್ಟಣಗಳ ಮಧ್ಯದ ಬರಗಾವಹಳ್ಳಿಯಲ್ಲಿ ಪ್ರಾರಂಭವಾಯಿತು. ಇದು ಅಂದಿನ ಮಗಧದ ರಾಜಧಾನಿ ರಾಜಗೃಹ ಹಾಗೂ ಪಾಟಲೀಪುತ್ರಗಳ ಮಧ್ಯದಲ್ಲಿದೆ. ನಲಂದಾ ಪಟ್ನಾದಿಂದ 93 ಕಿ.ಮಿ. ದೂರದಲ್ಲಿದೆ. ನಲಂದಾ ಶಬ್ದದ ಅರ್ಥವು ಜ್ಞಾನವನ್ನು ಕೊಡುವುದು ಎಂದಾಗುತ್ತದೆ. ಈ ಸ್ಥಳದಲ್ಲಿ ಭಗವಾನ ಶ್ರೀಮಹಾವೀರರು 14 ವರ್ಷ ಕಳೆದಿದ್ದಾರೆ. ನಲಂದಾ ಜಿಲ್ಲೆಯ ಲೇಪಾಹಳ್ಳಿಯಲ್ಲಿ ಪ್ರಾರಂಭವಾಗಲು ಕಾರಣ ಸುತ್ತಲಿನ ಪ್ರದೇಶ ಸಮೃದ್ಧಿಯಿಂದ ಕೂಡಿದ ಫಲವತ್ತಾದ ಪ್ರದೇಶವಾಗಿದೆ. ಇಲ್ಲಿ ಭಗವಾನ ಬುದ್ಧ ಅನೇಕ ವರ್ಷಗಳ ಕಾಲ ಅವರ ಶಿಷ್ಯರಾದ ಉದ್ಧಕ, ಆನಂದರೊಡನೆ ಇದ್ದರು. ಪ್ರಾರಂಭದಲ್ಲಿ ಕೇವಲ ಬೌದ್ಧ ಬಿಕ್ಷುಗಳಿಗೆ ಇದ್ದ ವಿಹಾರವು, ನಂತರ ಉಳಿದ ವಿದ್ಯಾರ್ಥಿಗಳು ಕಲಿಯಲು ಅನುಕೂಲ ಮಾಡಿಕೊಡಲಾಯಿತು. ಅನೇಕ ವಿಹಾರಗಳ ಜೋಡಣೆಯಿಂದ ಮಹಾವಿಹಾರವಾಯಿತು. ಅನೇಕ ವಿಹಾರಗಳು ಇದ್ದುದರಿಂದ ಈ ಪ್ರದೇಶವನ್ನು ಬಿಹಾರ ಎಂದು ಕರೆಯಲಾಯಿತು. ಪ್ರಥಮ ನಲಂದಾವಿಹಾರವನ್ನು ಸಾರಿಪುತ್ರ ಚೈತ್ಯವನ್ನು ಅಶೋಕ ಚಕ್ರವರ್ತಿ ಸ್ಥಾಪಿಸಿದನು ಎಂದು ಉಲ್ಲೇಖಗಳಿವೆ. ನಂತರ ಕನೋಜದ ಚಕ್ರವರ್ತಿ ಹರ್ಷವರ್ಧನನು ಮಹಾವಿಹಾರವನ್ನು ವಿಸ್ತರಿಸಿದನು. ಆಗ ಅನೇಕ ಬೌದ್ಧ ಭಿಕ್ಷುಗಳು ಜ್ಞಾನಾರ್ಜನೆಗಾಗಿ ಆಗಮಿಸತೊಡಗಿದರು. ಕ್ರಿ.ಶ. 427 ರಲ್ಲಿ ಉನ್ನತ ಶಿಕ್ಷಣದ ಕೇಂದ್ರವಾಗಿ ಕುಮಾರಗುಪ್ತ -1 (ಕ್ರಿ.ಶ. 415-455) ನೀಡಿದ ಸಹಾಯದಿಂದ ಹೆಚ್ಚು ಬೆಳವಣಿಗೆ ಹೊಂದಿತು. ನಂತರ ಬುದ್ಧಗುಪ್ತ, ತಥಾಗತ ಗುಪ್ತ, ಬಾಲಾದಿತ್ಯ, ವಜ್ರ ಮುಂತಾದ ಬ್ರಾಹ್ಮಣ ರಾಜರು ಅದರ ವಿಕಾಸಕ್ಕೆ ಕಾರಣರಾದರು. ಕ್ರಿ.ಶ.4ನೇಯ ಶತಮಾನದಿಂದ ಕ್ರಿ.ಶ. 12ನೇಯ ಶತಮಾನದ ವರೆಗೆ 800 ವರ್ಷಗಳ ಕಾಲ ಭಾರತದಲ್ಲಿಯ ಹಾಗೂ ವಿದೇಶಗಳಲ್ಲಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೇಂದ್ರವಾಗಿ ಕಾರ್ಯ ಮಾಡಿತು. ತಕ್ಷಶಿಲೆಯಲ್ಲಿಯ ಅಸಂಘಟಿತ ಗುರುಕುಲ ಶಿಕ್ಷಣವು ಇನ್ನೂ ಉತ್ತಮವಾದ ಸಂಘಟಿತ ಶಿಕ್ಷಣದ ಕಡೆಗೆ ಸಾಗಿತು.
ಪ್ರವೇಶ ಮತ್ತು ವ್ಯವಸ್ಥೆ
ನಲಂದಾ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ದೇಶದ ಹಾಗೂ ವಿದೇಶದ ವಿದ್ಯಾರ್ಥಿಗಳು ಪ್ರಯತ್ನ ಪಡುತ್ತಿದ್ದರು. ಅಲ್ಲಿಗೆ ಪ್ರವೇಶಕ್ಕೆ ಬರುವ ವಿದ್ಯಾರ್ಥಿಗಳು 12 ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಅಧ್ಯಯನ ಮಾಡಬೇಕಿತ್ತು. ನಂತರ ನಲಂದಾದಲ್ಲಿಯ ದ್ವಾರಪಾಲಕರು ಅಥವಾ ದ್ವಾರಪಂಡಿತರು, ಭಾರತೀಯ ತತ್ವಶಾಸ್ತ್ರ, ವೇದ, ಸೂತ್ರ, ಶಾಸ್ತ್ರ, ಸಂಸ್ಕೃತ ಜ್ಞಾನಗಳ ಕುರಿತು ಪ್ರವೇಶ ಪರೀಕ್ಷೆ ಕೈಗೊಳ್ಳುತ್ತಿದ್ದರು. ಇದರಲ್ಲಿ ಜ್ಞಾನ ಸಾಮರ್ಥ್ಯವೇ ಪ್ರಮುಖ. ಹತ್ತು ಜನ ಆಕಾಂಕ್ಷಿಗಳಲ್ಲಿ ೨ಅಥವಾ೩ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದರು. ನಂತರ 10 ವರ್ಷ ಕಲಿಯುತ್ತಿದ್ದರು. 20 ವರ್ಷದ ಒಳಗಿನ ವಿದ್ಯಾರ್ಥಿಗಳು ಪಂಚವಿದ್ಯೆ ಅಥವಾ ಮೂಲವಿದ್ಯೆಗಳನ್ನು ಕಲಿಯುತ್ತಿದ್ದರು. 20 ವರ್ಷಗಳ ನಂತರ ಅವರು ಉನ್ನತ ವ್ಯಾಸಂಗ ಕೈಗೊಳ್ಳುತ್ತಿದ್ದರು.
ವಿದ್ಯಾರ್ಥಿಗಳಿಗೆ ಬೋಧನಾಶುಲ್ಕ ಇರಲಿಲ್ಲ. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಶ್ವವಿದ್ಯಾಲಯದ ಆವರಣದಲ್ಲಿಯೇ ವಾಸಿಸಲು ವ್ಯವಸ್ಥೆ ಇತ್ತು. ಬೋಧನೆ ಮತ್ತು ಕಲಿಕೆಯು ಪ್ರಮುಖವಾಗಿ ಮೌಖಿಕವಾಗಿಯೇ ನಡೆಯುತ್ತಿತ್ತು. ಪ್ರತಿದಿನ 100 ವಿವಿಧ ವಿಷಯಗಳ ಬಗ್ಗೆ ತರಗತಿಗಳು ನಡೆಯುತ್ತಿದ್ದವು. ಇದರಲ್ಲಿ ವಿಚಾರ ವಿನಿಮಯ, ತರ್ಕ, ಚರ್ಚೆಗಳು ಆಗುತ್ತಿದ್ದವು. 7 ಜನ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಇರುತ್ತಿದ್ದರು. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಸಲಹುತ್ತಿದ್ದರು. ಒಂದು ಕಾಲದಲ್ಲಿ 10 ಸಾವಿರ ವಿದ್ಯಾರ್ಥಿಗಳು 1510 ಶಿಕ್ಷಕರು ಇದ್ದರು. ಅದರಲ್ಲಿ 1000 ಶಿಕ್ಷಕರು ಸೂತ್ರ ಹಾಗೂ ಶಾಸ್ತ್ರಗಳ ಶಿಕ್ಷಕರು, 500 ಶಿಕ್ಷಕರು 30 ಸಂಗ್ರಹಗಳನ್ನು, 10 ಶಿಕ್ಷಕರು 50 ಸಂಗ್ರಹಗಳನ್ನು ಕಲಿಸುತ್ತಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಪೂರ್ಣ ವಾತಾವರಣವಿತ್ತು.
ವಿಶ್ವವಿದ್ಯಾಲಯದ ಸುತ್ತಲೂ ಅನೇಕ ಹಳ್ಳಿಗಳು ಇದ್ದವು. ಅಲ್ಲಿಯ ಫಲವತ್ತಾದ ಭೂಮಿಯಲ್ಲಿ ದವಸ-ಧಾನ್ಯಗಳನ್ನು ಬೆಳೆದು ವಿದ್ಯಾಲಯಕ್ಕೆ ಕೊಡುತ್ತಿದ್ದರು. ಪ್ರಾರಂಭದಲ್ಲಿ 100 ಹಳ್ಳಿಗಳಲ್ಲಿ ನಂತರ 200 ಹಳ್ಳಿಗಳಲ್ಲಿ ಈ ವ್ಯವಸ್ಥೆ ಇತ್ತು. ಹಣಕಾಸಿನ ವ್ಯವಸ್ಥೆಯನ್ನು ರಾಜರುಗಳು ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿ ಅನೇಕ ರಾಜರುಗಳು. ಅಧಿಕಾರಿಗಳು, ವ್ಯಾಪಾರಸ್ಥರು, ಶ್ರೀಮಂತರು ಉದಾರ ಅನುದಾನ ನೀಡುತ್ತಿದ್ದರು. ಹಳ್ಳಗರು ಬೆಳೆದ ಆಹಾರಗಳನ್ನು ನೇರವಾಗಿ ನಲಂದಾ ಮುಖ್ಯಸ್ಥರಿಗೆ ತಲುಪಿಸುತ್ತಿದ್ದರು. ಕೇವಲ ವಿದ್ಯಾರ್ಥಿಗಳು ವಾಸಿಸಲು 300 ವಸತಿಗಳಿದ್ದವು. ಇಲ್ಲಿ ಉಚಿತ ಆಹಾರ ಹಾಗೂ ವಸತಿಯ ವ್ಯವಸ್ಥೆ ಇತ್ತು. ಹೀಗಾಗಿ ನಲಂದಾ ದೊಡ್ಡ ವಸತಿಯುತ ವಿಶ್ವವಿದ್ಯಾಲಯ ಆಗಿತ್ತು.
ನಲಂದಾದ ಪ್ರೇರಣೆಯಿಂದ ಜಗದ್ದಲಾ, ಓದಂಡಪುರಿ, ಸೋಮಪುರ, ವಿಶ್ವಮಶಿಲಾ ವಿಹಾರಗಳು ಪ್ರಾರಂಭವಾದವು. ಓದಂಡಪುರಿಯು ನಲಂದಾದಿಂದ 9 ಕೀ.ಮಿ. ದೂರದಲ್ಲಿದೆ. ಅದನ್ನು ಗೋಪಾಲ ಎಂಬುವನು ಆರಂಭಿಸಿದನು. ಅವನ ಮಗ ಧsರ್ಮಪಾಲ ವಿಕ್ರಮಶಿಲಾದಲ್ಲಿ ಹೀನಾಯಾನ ಮಹಾವಿಹಾರವನ್ನು, ಅವನ ಮಗ ದೇವಪಾಲ ಸೋಮಪುರ ವಿಹಾರವನ್ನು ಪ್ರಾರಂಭಿಸಿದರು.
ಶಿಕ್ಷಣ
ನಲಂದಾ ವಿಶ್ವವಿದ್ಯಾಲಯದಲ್ಲಿ ಪ್ರಮುಖವಾಗಿ ಬೌದ್ಧ ಧರ್ಮದ ಉನ್ನತ ಶಿಕ್ಷಣದ ಕೇಂದ್ರ ಮತ್ತು ಸಂಶೋಧನೆ ನಡೆಯುತ್ತಿತ್ತು. ತತ್ವಶಾಸ್ತ್ರ, ಮನೋವಿಜ್ಞಾನ, ಜ್ಞಾನಮೀಮಾಂಸೆ ಪ್ರಮುಖವಾಗಿ ಬೋಧಿಸಲ್ಪಟ್ಟಿತು. ಪ್ರಾಯೋಗಿಕ, ಸಿದ್ಧಾಂತಿಕ ಶಿಕ್ಷಣಗಳಾದ ಪ್ರಜ್ಞೆ, ವ್ಯಾಕರಣ, ಗಣೀತಶಾಸ್ತ್ರ, ಜ್ಯೋತಿಷ್ಯ, ವೈದ್ಯಕೀಯ, ತರ್ಕಶಾಸ್ತ್ರ, ರಸವಿದ್ಯೆಗಳನ್ನು ಕಲಿಸುತ್ತಿದ್ದರು. ಉನ್ನತಶಿಕ್ಷಣದಲ್ಲಿ ಶಬ್ದ ವಿದ್ಯೆ, ಆಧ್ಯಾತ್ಮ ವಿದ್ಯೆ, ಧರ್ಮಶಾಸ್ತ್ರ, ತತ್ವಶಾಸ್ತ್ರಗಳ ಸಂಶೋಧನೆ ನಡೆಯುತ್ತಿತ್ತು. ನಲಂದಾದಲ್ಲಿಯ ಪದವಿ ಎಲ್ಲ ಕಡೆಗಳಲ್ಲಿ ಗೌರವಿಸಲ್ಪಡುತ್ತಿತ್ತು. ದೇಶವಿದೇಶಗಳ ಅನೇಕ ವಿದ್ಯಾರ್ಥಿಗಳು ಬಂದು ಇಲ್ಲಿ ಅನೇಕ ವರ್ಷಗಳ ಕಾಲ ವಿದ್ಯಾಭ್ಯಾಸ ಕೈಗೊಂಡರು. ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ನಂತರ ಇಲ್ಲಯೇ ಉಪಾಧ್ಯಾಯರಾದರು. ಉಪಾಧ್ಯಾಯರು ಆಚಾರ್ಯರುಗಳಿಗಿಂತ ಹೆಚ್ಚಿನವರಾಗಿದ್ದರು. ವಿದ್ಯಾರ್ಥಿಗಳು ಸ್ನಾತಕ ಪದವಿ ನಂತರ ಮನೆಗೆ ಬಂದು ವಿವಾಹವಾಗುತ್ತಿದ್ದರು. ಉಳಿದವರು ಉಪಾಧ್ಯಾಯರು ಮತ್ತು ಸನ್ಯಾಸಿಗಳಾಗುತ್ತಿದ್ದರು. ಆಚಾರ್ಯರು ’ಅಂತೆವಾಸಿಕ’ ತರಬೇತಿಯ ನಂತರ ಬೌದ್ಧ ಭಿಕ್ಷುಗಳಾಗುತ್ತಿದ್ದರು. ಉಪಾಧ್ಯಾಯರ ’ಸದ್ದಿವಿಹಾರಿಕಾ’ ತರಬೇತಿ ನಂತರ ಭಿಕ್ಷುಗಳಾಗಿ ಮೋಕ್ಷ ಸಾಧನೆಗೈಯುತ್ತಿದ್ದರು. ಇಲ್ಲಿ ಪ್ರಜಾಪ್ರಭುತ್ವದ ಮತದಾನದ ಪದ್ಧತಿಯಿಂದ ಕಿರಿಯ ಹಾಗೂ ಹಿರಿಯ ಶಿಕ್ಷಕರು ಹಿರಿಯ ವಿಷಯ ತಜ್ಷರು ಹಾಗೂ ಕುಲಪತಿಗಳ ಆಯ್ಕೆ ನಡೆಯುತ್ತಿತ್ತು. ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು, ಉಪಾಧ್ಯಾಯರು, ಆಚಾರ್ಯರುಗಳಿಗೆ ಸ್ಥಾನಕ್ಕೆ ತಕ್ಕಂತೆ ವಸ್ತ್ರ ಧಾರಣೆಯ ಪದ್ಧತಿ ಜಾರಿಯಲ್ಲಿತ್ತು. ಇಲ್ಲಿಯ ಜ್ಞಾನಾರ್ಜನೆಯಿಂದ ನಾಗರೀಕತೆ ಬೆಳೆಯಿತು. ನಲಂದಾ ಅಥವಾ ಪಾಲಾ ಕಲೆಯ ಹಾಗೂ ಲೋಹ ಕಲೆಯ ಆರಂಭವಾಯಿತು. ಸನ್ಯಾಸಿಗಳನ್ನು ಆರೋಗ್ಯವಾಗಿ ಇಡಲು ಔಷಧ ವಿಜ್ಞಾನ ಪ್ರಾರಂಭವಾಯಿತು.
ತತ್ವಶಾಸ್ತ್ರದಲ್ಲಿಯ ಮೂರು ಮುಖ್ಯ ಚಿಂತನೆಗಳು
ದುಷ್ಠ ಶಕ್ತಿಗಳಿಂದ ಮುಕ್ತಿ, ಅಸಹಿಷ್ಣುತೆ ಹಾಗೂ ನಿಷ್ಕಾಮ ಭಕ್ತಿಗಳಾಗಿದ್ದವು. ಇದು ಜಗತ್ತಿನ ಪ್ರಥಮ ಯೋಜನಾಬದ್ಧ ವಿಶ್ವವಿದ್ಯಾಲಯ ಎಂದು ಅನೇಕ ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಕೇವಲ ಪುರುಷರು ಮಾತ್ರ ಅಧ್ಯಯನ ಮಾಡುತ್ತಿದ್ದರು. ಮುಂಜಾನೆಯ ಸ್ನಾನದೊಂದಿಗೆ ಅವರ ದಿನಚರಿ ಪ್ರಾರಂಭವಾಗುತ್ತಿತ್ತು. ನೆಲಕ್ಕೆ ಮಂಡಿಯೂರಿ ನಮಸ್ಕರಿಸುವ ಪದ್ಧತಿ ಜಾರಿಯಲ್ಲಿತ್ತು. ಸ್ವಯಂ ಆಡಳಿತ, ಕಾನೂನು ಪಾಲನೆ, ಶಿಸ್ತು, ಆಡಳಿತ ನೈತಿಕತೆಯ ತಳಹದಿಯ ಮೇಲೆ ಕಟ್ಟಿದ ಈ ವಿಶ್ವವಿದ್ಯಾಲಯದ 700 ವರ್ಷಗಳಲ್ಲಿ ಒಮ್ಮೆಯೂ ವಿರೋಧ ವ್ಯಕ್ತವಾಗಲಿಲ್ಲ.
ಬೌದ್ಧ ಧರ್ಮ ಹಾಗೂ ವೈದಿಕ ಧರ್ಮಗಳ ಸಿದ್ಧಾಂತಗಳ ಬಗ್ಗೆ ಅನೇಕ ಆರೋಗ್ಯಪೂರ್ಣ ಚರ್ಚೆಗಲಾಗುತ್ತಿದ್ದವು. ವಿಚಾರಗೋಷ್ಠಿಗಳು, ಸಮ್ಮೇಳನಗಳು ನಡೆಯುತ್ತಿದ್ದವು. ವಿಷ್ಣು, ಶಿವ, ಪಾರ್ವತಿ, ಸೂರ್ಯ, ಗಣೇಶ ಮುಂತಾದ ದೇವರುಗಳ ದೇವಸ್ಥಾನಗಳು ಇದ್ದವು. ಬುದ್ಧನು ಬ್ರಾಹ್ಮಣರನ್ನು ವಿರೋಧಿಸಲಿಲ್ಲ, ಬೌದ್ಧಧರ್ಮದ ಮಹಾಯಾನ ಪಂಥವು ಅನೇಕ ವೈದಿಕಧರ್ಮದ ಆಚರಣೆಗಳನ್ನು ಅಳವಡಿಸಿಕೊಂಡಿತು. ಇಲ್ಲಿ ಬೌದ್ಧ ಧರ್ಮದ ಮಹಾಯಾನ ಪಂಥದ 18 ಪಂಗಡಗಳ ಕೃತಿಗಳು, ಸಾಮಾನ್ಯ ಕೃತಿಗಳು, ವೇದ ಯೋಗಶಾಸ್ತ್ರ, ಅಥರ್ವ ವೇದಗಳನ್ನು ಕಲಿಸುತಿದ್ದರು. ಶಬ್ದ ಸಂಗ್ರಹಗಳ ವಿಶ್ವಕೋಶದ ಪ್ರಕಟಣೆಯೂ ಇತ್ತು.
ನಲಂದಾದಲ್ಲಿ ಸುಸಜ್ಜಿತ ಗ್ರಂಥಾಲಯದಲ್ಲಿ ಸಾವಿರಾರು ಸಂಸ್ಕೃತ, ಪಾಲಿಭಾಷೆಯ ಪುಸ್ತಕಗಳು ಇದ್ದವು ಅಲ್ಲಿ ಪ್ರಮುಖವಾಗಿ ಮೂರು ಗ್ರಂಥಾಲಯಗಳಿದ್ದವು 1) ರತ್ನ ಸಾಗರ 2) ರತ್ನದಧಿ, 3) ರತ್ನ ರಂಜಕ. ರತ್ನ ಸಾಗರವು 9 ಅಂತಸ್ತುಳ್ಳ ಕಟ್ಟಡವಾಗಿತ್ತು. ಇಲ್ಲಿ ಗ್ರಂಥಗಳ ನಕಲು ಮಾಡುವ ವಿಶೇಷ ತಜ್ಷರು ಇದ್ದರು. ವಿದೇಶಿ ವಿದ್ಯಾರ್ಥಿಗಳು ಬೌದ್ಧಧರ್ಮದ ಗ್ರಂಥಗಳ ಹಸ್ತ ಪ್ರತಿಗಳನ್ನು ತಮ್ಮ ದೇಶಗಳಿಗೆ ಕೊಂಡೊಯುತ್ತಿದ್ದು ಧರ್ಮ ಪ್ರಚಾರ ಮಾಡುತ್ತಿದ್ದರು. ಇಲ್ಲಿ ಭಾರತದೇಶದ ಹಾಗೂ ವಿದೇಶಗಳ ಅನೇಕ ರಾಜಕುಮಾರರು ಅಧ್ಯಯನಕ್ಕಾಗಿ ಆಗಮಿಸುತ್ತಿದ್ದರು. ನಲಂದಾ ಮಹಾವಿಶ್ವವಿದ್ಯಾಲಯವು ಹೊರ ಜಗತ್ತಿನೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿತ್ತು. ಅನೇಕ ರಾಜರುಗಳು ವಿದ್ಯಾರ್ಥಿಗಳನ್ನು ಇಲ್ಲಿ ಕಲಿಯಲು ಕಳಿಸುತ್ತಿದ್ದರು. ತಮ್ಮ ಆಸ್ಥಾನದಲ್ಲಿ ರಾಜಗುರುಗಳಾಗಿ ನೇಮಿಸಿಕೊಂಡಿದ್ದರು. ವಿಚಾರ ವಿನಿಮಯಕ್ಕಾಗಿ ಇಲ್ಲಿ ಬರುತ್ತಿದ್ದರು. ಹೀಗೆ ಶತಮಾನಗಳ ಸಂಬಂಧ ಇಟ್ಟುಕೊಂಡವರಲ್ಲಿ ಇಂಡೊನೇಶಿಯಾದ ಶೈಲೇಂದ್ರ ರಾಜವಂಶವೂ ಒಂದು.
ಬೌದ್ಧ ಧರ್ಮದ ಅಧ್ಯಯನ
ಬೌದ್ಧ ಭಿಕ್ಷುಗಳ ಪ್ರಮುಖವಾಗಿ ತ್ರಿಪಿಟಿಯ ಅಧ್ಯಯನ ಮಾಡುತ್ತಿದ್ದರು. ಮಹಾಯಾನದ ಶಿಕ್ಷಣವನ್ನು ಎಲ್ಲರಿಗೂ ನೀಡಲಾಗುತ್ತಿತ್ತು. ಬೌದ್ಧಧರ್ಮದ ತತ್ವಶಾಸ್ತ್ರದ ಶಿಕ್ಷಣ, ಧರ್ಮ ಪ್ರಚಾರದ ಮಾರ್ಗಗಳಾದ ಶಿಕ್ಷಣ ಹಾಗೂ ತರಬೇತಿಯನ್ನು ನೀಡುತ್ತಿದ್ದರು. ಆತಂತ್ರಗಳಲ್ಲಿ ಮಹಾಜಲತಂತ್ರ, ಸಮಾಜ ತಂತ್ರ, ಮಹಾಸಮಯ ತಂತ್ರ, ತತ್ವಸಂಗ್ರಹ, ಭೂತದ ಮಾಟ ಮಂತ್ರ, ವಜ್ರಮಂತ್ರ, ಕಕಸಮವರ್ತನ ತಂತ್ರಗಳು ಪ್ರಮುಖವಾಗಿವೆ. ಸತ್ಯಾನ್ವೇಷಣೆಯನ್ನು ತರ್ಕದ ಮೂಲಕ ಕಲಿಸಲಾಗುತ್ತಿತ್ತು. ತತ್ವಶಾಸ್ತ್ರದಲ್ಲಿ ತರ್ಕದ ಮೂಲಕ ಹಾಗೂ ಪ್ರಜ್ಞೆಯ ಮೂಲಕ ಎಂಬ ವಿಧಾನಗಳಿವೆ. ಬುದ್ಧನು ತರ್ಕದ ಮೂಲಕ ಪ್ರತಿಯೊಬ್ಬರು ತಮಗೆ ಸರಿಯೆನಿಸಿದ ದಾರಿಯಲ್ಲಿ ಸಾಗಲು ಬೋಧಿಸುತ್ತಿದ್ದರು. ಅವರು ನಂಬದೇ ಅನುಸರಿಸಬೇಡ ಎಂದುಹೇಳಿದರು. ಇದಕ್ಕಾಗಿ ಚಿಕ್ಕ ಕಥೆಗಳು, ಹೋಲಿಕೆಗಳು, ಸಾಂದರ್ಭಿಕವಾದ ಘಟನೆಗಳ ಬೋಧನೆಯ ಮಾರ್ಗ ಅನುಸರಿಸಿದರು. ಕೆಲವು ಪ್ರಶ್ನೆಗಳಿಂದ ಜೀವನದ ಸಮಸ್ಯೆಗಳಿಗೆ ಸಮಾಧಾನವಿದೆ ಕಾಲಕಳೆದಂತೆ ಕೆಲವು ಅನುಭವದಿಂದ ಸಮಾಧಾನ ಲಭಿಸುತ್ತದೆ. ಅನಂತರದಿಂದ ಪ್ರಾರಂಭವಾದ ಜೀವನದಲ್ಲಿ 7 ವಿಧಗಳಿವೆ.
1) ಚಾರ್ವಾಕ – ಕರ್ಮಸಿದ್ಧಾಂತ ನಂಬದೇ ಇರುವದು. 2) ಜೈನ- ಆಂತರಿಕ ಶುದ್ಧಿಯ ಆಚರಣೆ 3) ಸಂಖ್ಯಾ-ತತ್ವಶಾಸ್ತ್ರ ಗುಣಗಳ ಆಧಾರಿತ 4) ಯೋಗಶಾಸ್ತ್ರ- ಧ್ಯಾನದ ಮೂಲಕ ಸತ್ಯಾನೇಷಣೆ 5) ವೇದಾಂತ 6) ನಿರ್ವಾಣ 7) ನ್ಯಾಯ ವೈಸೇಸಿಕಾ ಮಹಾಯಾನ ಶಿಕ್ಷಣದಲ್ಲಿ ಮುದ್ರ, ಮಂತ್ರ, ಮಂಡಲ, ಧರಣಾ, ಯೋಗ, ಸಮಾಧಿ, ತಾಂತ್ರಿಕ ವಿದ್ಯೆಗಳನ್ನು ಕಲಿಸುತ್ತಿದ್ದರು. ನಂತರದ ದಿನಗಳಲ್ಲಿ ತಾಂತ್ರಿಕ ಮಹಾಯಾನ ಪ್ರಾರಂಭವಾಯಿತು. ಈ ಮಂತ್ರಾಯಣದಲ್ಲಿ ವಜ್ರಾಯಣ, ಕಾಲಚಕ್ರಾಯಣ, ಸಹಜಾಯಣ ಸೇರಲ್ಪಟ್ಟವು.
ವಿದ್ಯಾರ್ಥಿಗಳು ಮತ್ತು ಧರ್ಮಪ್ರಚಾರ
ನಲಂದಾ ವಿಶ್ವವಿದ್ಯಾಲಯದಲ್ಲಿ ಭಾರತದ ಅನೇಕ ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡಿದರು. ಅವರಲ್ಲಿ ನಾಗಾರ್ಜುನ, ರಾಹುಲಭದ್ರ, ದಿನಗ್ಗ, ಧರ್ಮಕೃತಿ, ಅಸಂಗ, ವಸುಬಂಧು, ಗುಣಮತಿ, ಸ್ತಿರಿಮತಿ, ವಿಮುಕ್ತಸೇನ, ಧರ್ಮಪಾಲ, ಪದ್ಮ ಸಂಭವ, ಸಂತರಕ್ಷಿತ, ಸಿಲಾಭದ್ರ, ವೀರದೇವ, ನಾರೋಪ, ವಜ್ರಬೊಧ, ಅಮೋಘ ಭದ್ರ ಮುಂತಾದವರು ಇದ್ದರು. ನಲಂದಾದಲ್ಲಿ ವಿದ್ಯಾರ್ಥಿಗಳಾಗಿ ಆಗಮಿಸಿ ಉಪಾಧ್ಯಾಯರಾಗಿ ಕುಲಪತಿಗಳಾದವರು ದಿಗ್ನಾಂಗ, ಜಯದೇವ, ಚಂದ್ರಕೀರ್ತಿ, ತಾರಾನಾಥ, ಸಿಲಾಭದ್ರ.
ನಾಗಾರ್ಜುನರು 2ನೇಯ ಶತಮಾನದಲ್ಲಿ ಜನಿಸಿದರು. ಶೂನ್ಯ ಕಲ್ಪನೆಮಧ್ಯಮಮಾರ್ಗವನ್ನು ಕಲಿಸಿದರು ದಿನ್ನಾಂಗಾಕಂಚಿಯಲ್ಲಿ ೫ನೇ ಶತಮಾನದಲ್ಲಿ ಜನಿಸಿದರು. ಬೌದ್ಧಧರ್ಮದ ತರ್ಕ ವ್ಯವಸ್ಥೆಯನ್ನು ಪ್ರಚುರಪಡಿಸಿದರು. ಧರ್ಮಕೀರ್ತಿಯು 7ನೇ ಶತಮಾನದಲ್ಲಿ ತಿರುಮಲೈಯಲ್ಲಿ ಜನಿಸಿದರು. ಧರ್ಮಪಾಲಕ ಹತ್ತಿರ ವಿದ್ಯಾಜ್ಞಾನ ಕೈಗೊಂಡರು. ನಲಂದಾದಲ್ಲಿ ಕಲಿತ ಅನೇಕ ಭಾರತದೇಶದ ವಿದ್ಯಾರ್ಥಿಗಳು, ಬೌದ್ಧ ಭಿಕ್ಷುಕರಾಗಿ ವಿದೇಶಗಳಿಗೆ ಧರ್ಮ ಪ್ರಚಾರಕ್ಕಾಗಿ ಪ್ರವಾಸ ಕೈಗೊಂಡರು. ಅವರು ವಿದೇಶಗಳ ಭಾಷೆ ಕಲಿತು ಅಲ್ಲಿಯ ಭಾಷೆಗಳಲ್ಲಿಯೇ ಧರ್ಮ ಪ್ರಚಾರ ಮಾಡಿದರು.
ತಿಬೇಟ ಪ್ರದೇಶಕ್ಕೆ ಆರ್ಯದೇವ, ಸಿಲಾಭದ್ರ, ಧರ್ಮಪಾಲ, ಚಂದ್ರಗೊಮ್ನ, ಶಾಂತರಕ್ಷಿತ, ಪದ್ಮ ಸಂಬವ, ಕಮಲಶಿಲ, ಸ್ತರಮತಿ, ಬುದ್ಧ ಕೃತಿ, ಕುಮಾರ ಶ್ರೀ, ಸಮತಿ ಸೇನ ಮುಂತಾದವರು ಹೋದರು ಪದ್ಮಸಂಭವ ಕ್ರಿ.ಶ. 747 ರಲ್ಲಿ ಲಡಾಕ, ತಿಬೇಟಗಳಲ್ಲಿ ಧರ್ಮಪ್ರಚಾರ ಮಾಡಿದರು. ಅವರನ್ನು ಪ್ರಥಮ ಗುರು ಹಾಗೂ ಎರಡನೇಯ ಬುದ್ಧ ಎಂದು ಪೂಜಿಸುತ್ತಾರೆ.
ಚೈನಾ ಮತ್ತು ಕೋರಿಯಾ ದೇಶಗಳಿಗೆ ಸಿರಿದೇವ, ಆರ್ಯವರ್ಮ, ಹುವಾಹಿ, ಬೋಧಿಧರ್ಮ, ತಂಗ, ಸಿಲಾಪ್ರಭ, ಹುವಾಯಿತಾ, ವೋಕಿಂಗ, ದೋ, ಶೊ, ಚೀರೋ, ಪ್ರಚಾರಕ ಮಿತ್ರ ಮತ್ತು ಧರ್ಮದೇವ ಬುದ್ಧಕೃತಿ ಮುಂತಾದವರು ಪ್ರಮುಖರು ಹೋದರು.
ಚೈನಾದೇಶದ ಪ್ರವಾಸಿ ಹ್ಯೂಯನ್ ತ್ಸಾಂಗ (ಕ್ರಿ.ಶ. 629-645) ಭಾರತಕ್ಕೆ ಆಗಮಿಸಿ 16 ವರ್ಷಗಳ ಕಾಲ ಇಲ್ಲಯೇ ಇರುತ್ತಾನೆ. ಅವನು ಮೋಕ್ಷದೇವ ನಾಮದಿಂದ ಶಿಲಾಭದ್ರ ಗುರುಗಳ ಹತ್ತಿರ 2 ವರ್ಷ ಬೌದ್ಧಧರ್ಮ ಕುರಿತು ಅಧ್ಯಯನ ಮಾಡುತ್ತಾರೆ. ನಲಂದಾದಲ್ಲಿ ಇನ್ನೂ ಮೂರು ವರ್ಷಗಳ ಕಾಲ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಾನೆ. ಆ ಸಮಯದಲ್ಲಿ ಕನೋಜದ ಚಕ್ರವರ್ತಿ ಹರ್ಷವರ್ಧನನ್ನು ಭೇಟ್ಟಿಯಾಗುತ್ತಾನೆ. ಹೀಗೆ ಪ್ರವಾಸಿಯಾಗಿ ಬಂದವನು ಪಂಡಿತನಾಗುತ್ತಾನೆ ಮರಳಿ ಹೋಗುವಾಗ 657 ಬೌದ್ಧ ಗ್ರಂಥಗಳು 74 ಭಾಷಾಂತರ ಮಾಡಿದ ಗ್ರಂಥಗಳೊಡನೆ ಹೋಗುತ್ತಾನೆ.
ಫಾಹೆಯಾನ (ಕ್ರಿ.ಶ. 337-422) ಹಾಗೂ ಹ್ಯೂಯನ ತ್ಸಾಂಗರ ಪ್ರೇರಣೆಯಿಂದ ಐತ್ಸಂಗ ಕ್ರಿ.ಶ. 673 ರಲ್ಲಿ ಭಾರತಕ್ಕೆ ಬೌದ್ಧ ಧರ್ಮದ ಅಧ್ಯಯನ ಹಾಗೂ ಪ್ರವಾಸಕ್ಕೆ ಆಗಮಿಸುತ್ತಾನೆ 10 ವರ್ಷಗಳ ಕಾಲ ನಲಂದಾದಲ್ಲಿ ಹಾಗೂ ಇನ್ನೂ 4 ವರ್ಷಗಳ ಭಾರತದ ಇತರ ಪ್ರದೇಶಗಳಲ್ಲಿ ಅಧ್ಯಯನ ಕೈಗೊಳ್ಳುತ್ತಾರೆ. ಕ್ರಿ.ಶ. 695 ರಲ್ಲಿ ಮರಳಿ ಹೋಗುವಾಗ 400 ಸಂಸ್ಕೃತ ಗ್ರಂಥಗಳೊಡನೆ ಹೋಗುತ್ತಾನೆ. ಕ್ಸುವಾಂಗ ಎಂಬ ಚೈನಾ ಪ್ರವಾಸಿ ಧರ್ಮ ಪಾಲಕರಕಡೆಗೆ ವಿದ್ಯಾಭ್ಯಾಸದ ನಂತರ ಇಂಡೋನೇಶಿಯಾದಲ್ಲಿ ಧರ್ಮ ಪ್ರಚಾರ ಕೈಗೊಳ್ಳುತ್ತಾನೆ.
ಶ್ರೀಲಂಕಾ ದೇಶಕ್ಕೆ ವಜ್ರಬೋಧಿಯ ಧರ್ಮ ಪ್ರಚಾರಕ್ಕಾಗಿ ಹೋಗುತ್ತಾನೆ. ಅಲ್ಲಿ ಹೋದ ವಿದ್ವಾಂಸರ ವಿದ್ಯಾಭ್ಯಾಸ ಪದ್ಧತಿಯು ಈಗಲೂ ತಿಬೇಟ, ಚೈನಾ, ಭೂತಾನ ನೇಪಾಳ, ಜಪಾನ ಮಂಗೋಲಿಯಾ ಸೈಬೇರಿಯಾ, ಜಾವಾ, ಸುಮಾತ್ರಾ, ಶ್ರೀಲಂಕಾ, ಇಂಡೋನೇಶಿಯಾ ಮುಂತಾದ ದೇಶಗಳಲ್ಲಿ ಕಾಣಸಿಗುತ್ತದೆ.
ಅವನತಿ
ನಲಂದಾ ವಿಶ್ವವಿದ್ಯಾಲಯವು ಪ್ರಾರಂಭವಾದ 10 ವರ್ಷದಲ್ಲಿಯೇ ಮಿಹಿರಕುಲನ ನೇತ್ರತ್ವದಲ್ಲಿ ಹನ್ಸರು ಪ್ರಥಮ ಬಾರಿ ಸ್ಕಂದಗುಪ್ತ (ಕ್ರಿ.ಶ.455-467)ರ ಕಾಲದಲ್ಲಿ ಆಕ್ರಮಣ ಮಾಡಿದರು. ನಂತರ ಬಂದ ಗುಪ್ತರ ವಂಶದ ಪುರಗುಪ್ತ , ನರಸಿಂಹಗುಪ್ತರು ಮತ್ತೆ ನಲಂದಾವನ್ನು ನಿರ್ಮಾಣ ಮಾಡಿದರು. ಎರಡನೇಯ ಆಕ್ರಮಣವು 150 ವರ್ಷಗಳ ನಂತರ 7ನೇಯ ಶತಮಾನದಲ್ಲಿ ಗೌಡಾಸ ನಾಶಮಾಡಿದರು. ನಂತರದಲ್ಲಿ ಚಕ್ರವರ್ತಿ ಹಷವರ್ಧನ (ಕ್ರಿ.ಶ.606-648) ನಿರ್ಮಾಣ ಮಾಡಿದರು. ಹನ್ನೇರಡನೇಯ ಶತಮಾನದಲ್ಲಿಯ ತಿಬೇಟ ಬೌದ್ಧ ಸನ್ಯಾಸಿ ಧರ್ಮಸ್ವಾಮಿನ (ಕ್ರಿ.ಶ. 1234-36)ರಲ್ಲಿ ನಲಂದಾದಲ್ಲಿ ವಾಸಿಸಿದನು. ಆಗ ಅಲ್ಲಿ 84 ಮಹಾವಿಹಾರಗಳು 14 ಚೈತ್ರಗಳು ಇದ್ದವು. ಬೌದ್ಧ ಧರ್ಮವು ಧರ್ಮದಿಂದ, ತಾಂತ್ರಿಕ ಅಥವಾ ಮಾಟದ ಕಡೆಗೆ ವಾಲಿತ್ತು. ಪರಿಣಾಮವಾಗಿ ಧರ್ಮ ಕ್ಷೀಣಿಸತೊಡಗಿತು. ಸನ್ಯಾಸಿಗಳ, ವಿದ್ಯಾರ್ಥಿಗಳ ನಡುವಿನ ಅತಃಕಲಹವೂ ಹೆಚ್ಚಾಗುತ್ತದೆ. ಇದರ ವಿವರಣೆಯನ್ನು ತಿಬೇಟನ ವಿದ್ಯಾರ್ಥಿ ತಾರಾನಾಥ ದಾಖಲಿಸಿದ್ದಾನೆ. ತುರ್ಕಸ್ಥಾನದ ರಾಜ ಭಕ್ರಿಯಾರ ಖಿಲ್ಜಿ ಕ್ರಿ.ಶ. 1197-1206 ರಲ್ಲಿ ಹಲವು ವರ್ಷಗಳ ಕಾಲ ದಾಳಿ ಮಾಡುತ್ತಾನೆ. ಅಲ್ಲಿಯ ಸಾವಿರಾರು ಬೌದ್ಧ ಭಿಕ್ಷುಗಳ ವಿದ್ಯಾರ್ಥಿಗಳ ಮಾರಣಹೋಮ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ವಿಕ್ರಮಶಿಲಾ, ಓದಂಡಪುರಿಗಳು ನಾಶವಾಗುತ್ತವೆ. ಆಗ ನಲಂದಾದ ಕೊನೆಯ ಪ್ರಾಧ್ಯಾಪಕ ಶಾಕ್ಯ ಶ್ರೀ ಭದ್ರ ಕಾಶ್ಮೀರದವನು ಅನೇಕ ವಿದ್ಯಾರ್ಥಿಗಳು ಹಾಗೂ ಗ್ರಂಥಗಳೊಡನೆ ತಿಬೇಟಗೆ ಪಲಾಯನ ಮಾಡುತ್ತಾನೆ.
ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆಯಲ್ಲಿ ನಲಂದಾ ಮಹಾವಿಹಾರ ಪ್ರಮುಖವಾಗಿದೆ. ತಕ್ಷಶಿಲಾದಿಂದ ಪ್ರಾರಂಭವಾದ ಸಾಂಸ್ಥಿಕ ಪರಂಪರೆ, ನಲಂದಾದಲ್ಲಿ ಮುಂದುವರೆಯಿತು. ಅಸಂಘಟಿತ ಶಿಕ್ಷಣವು, ಸಂಘಟಿತದ ಕಡೆಗೆ ಸಾಗಿತು. ಪಠ್ಯಕ್ರಮದಲ್ಲಿ ವೃತ್ತಿಪರ ಮತ್ತು ಸೈದ್ಧಾಂತಿಕ ವಿಷಯಗಳನ್ನು ಒಳಗೊಂಡಿತ್ತು. ಸಮಕಾಲಿನ, ಸಾಮಾಜಿಕ, ರಾಜಕೀಯ, ಆರ್ಥಿಕ, ಸಮಸ್ಯೆಗಳಿಗೆ ಸ್ಪಂದಿಸಿತು. ಅನೇಕ ವಿಶ್ವವಿದ್ಯಾಲಯಗಳಿಗೆ ಪ್ರಾರಂಭಕ್ಕೆ ಪ್ರೇರಣೆ ನೀಡಿತು. ಇದರ ಪರಿಣಾಮವಾಗಿ ಗುಜರಾತಿನ ವಲಭಾ, ಬನಾರಸ, ಉಜ್ಜಯನಿ, ಮಧ್ಯ ಭಾರತದ ಜಗದ್ದಲಾ, ದಕ್ಷಿಣ ಭಾರತದ ಕಂಚಿ, ಬಾಹುರ, ನಾಗಾರ್ಜುನಕೊಂಡ, ಮಾನ್ಯಖೇಟ, ಬೆಳಗಾಮ, ಬಾಂಗ್ಲಾದೇಶದ ಸೋಮಪುರ, ಕಾಶ್ಮೀರದ ಶಾರದಾ ಪೀಠ, ಶ್ರೀಲಂಕಾ, ಸುನೇತ್ರಾದೇವಿ ಪಿರಿವೇನ, ಓರಿಸ್ಸಾದ ಪುಷ್ಪಗಿರಿ, ರತ್ನಾಗಿರಿ, ಇಲ್ಲಿ ಪ್ರಾರಂಭಗೊಂಡವು ಇವುಗಳನ್ನು ಘಟಿಕಾಸ್ಥಾನಗಳು ಎಂದು ಗುರುತಿಸಲಾಗಿದೆ. ಅಲ್ಲಿಯ ರಾಜರುಗಳು, ವ್ಯಾಪಾರಿಗಳು, ಧಾರ್ಮಿಕನಾಯಕರುಗಳು ಉನ್ನತ ಶಿಕ್ಷಣದ ಪರಂಪರೆಯನ್ನು ಮುಂದುವರೆಸಿದರು.
(ಆಧಾರಗಳಿಂದ)
✍ ಡಾ. ಗೋಪಾಲಕೃಷ್ಣ ಧೃವರಾಜ ಕಮಲಾಪೂರ
ಅಧ್ಯಾಪಕರು, ವಿದ್ಯುತ್ ವಿಭಾಗ,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜನೀಯರಿಂಗ್ ಕಾಲೇಜು, ಧಾರವಾಡ
ಮೊಬೈಲ್ : 9480248486 | e-mail : gdkpur9@gmail.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.