ಬೀಬಿಪುರ್: ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿರುವ ಹರಿಯಾಣದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನವನ್ನು ಹೆಚ್ಚಿಸುವ ಹಲವಾರು ಅಭಿಯಾನಗಳು ನಡೆಯುತ್ತಲೇ ಇದೆ. ಈಗಾಗಲೇ ಅಲ್ಲಿನ ವಿಲೇಜ್ ಪಂಚಾಯತ್ ನಡೆಸಿದ ‘ಸೆಲ್ಫಿ ವಿತ್ ಡಾಟರ್’ ಈಗ ದೇಶದಾದ್ಯಂತ ಜನಪ್ರಿಯಗೊಂಡಿದೆ. ಇದೀಗ ಮತ್ತೊಂದು ಅಭಿಯಾನವನ್ನು ರೂಪಿಸಲಾಗಿದ್ದು, ಅದೆಂದರೆ ಹೆಣ್ಣು ಮಗಳ ಹೆಸರಲ್ಲಿ ಮನೆಯ ನೇಮ್ ಪ್ಲೇಟ್ ಹಾಕುವುದು.
ಪ್ರಧಾನಿ ನರೇಂದ್ರ ಮೋದಿಯವರ ‘ಡಿಜಿಟಲ್ ಇಂಡಿಯಾ ವಿದ್ ಲಾಡೋ’ ಅಭಿಯಾನದ ಭಾಗವಾಗಿ ಬೀಬಿಪುರ್ ಪಂಚಾಯತ್ ಈ ನೇಮ್ ಪ್ಲೇಟ್ ಅಭಿಯಾನವನ್ನು ಆರಂಭಿಸಿದೆ. ಪಂಚಾಯತ್ ಪ್ರತಿನಿಧಿಗಳು ಎಲ್ಲಾ ಮನೆ ಮನೆಗಳಿಗೆ ಹೋಗಿ ಆ ಮನೆಯ ಹೆಣ್ಣು ಮಗಳ ಹೆಸರು ಮತ್ತು ಇಮೇಲ್ ಐಡಿ ಇರುವ ನೇಮ್ ಪ್ಲೇಟ್ ಹಾಕುತ್ತಿದ್ದಾರೆ. ಈಗಾಗಲೇ 30 ಮನೆಗಳ ನೇಮ್ಪ್ಲೇಟ್ ಮಗಳ ಹೆಸರಲ್ಲಿ ಬದಲಾಯಿಸಲಾಗಿದೆ.
ಪುರುಷ ಪ್ರಧಾನ ಕುಟುಂಬದಲ್ಲಿ ಮನೆಯ ನೇಮ್ಪ್ಲೇಟ್ನಲ್ಲಿ ಕೂಡ ಪುರುಷನ ಹೆಸರೇ ಇರುತ್ತದೆ. ಹೆಣ್ಣು ಮಕ್ಕಳಿಗೆ ಮನೆಯ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂತಹ ಕುಟುಂಬದಲ್ಲಿ ಅವಕಾಶಗಳಿಲ್ಲ. ಈ ಮನಸ್ಥಿತಿಯನ್ನು ಬದಲಾಯಿಸಲೆಂದೇ ಮನೆಯ ನೇಮ್ಪ್ಲೇಟ್ನಲ್ಲಿ ಪುರುಷನ ಹೆಸರು ಹಾಕುವ ಬದಲು ಹೆಣ್ಣಿನ ಹೆಸರನ್ನು ಹಾಕಲಾಗುತ್ತಿದೆ. ಇದು ಆಕೆಯ ಕೌಟುಂಬಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಎಂಬ ಭರವಸೆಯೂ ಇದೆ.
ಕೇಂದ್ರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಆಂದೋಲನದ ಯಶಸ್ಸಿಗೆ ಈ ಅಭಿಯಾನ ಮಹತ್ವದ ಕೊಡುಗೆಯನ್ನು ನೀಡುತ್ತದೆ ಎಂಬ ವಿಶ್ವಾಸವಿದೆ. ಕಡಿಮೆ ಲಿಂಗಾನುಪಾತ ಹೊಂದಿರುವ ಹರಿಯಾಣದ ಗ್ರಾಮಪಂಚಾಯತ್ಗಳು ಹೆಣ್ಣು ಮಕ್ಕಳ ರಕ್ಷಣೆಗೆ ವಿಭಿನ್ನ ಯೋಜನೆಗಳನ್ನು ರೂಪಿಸುತ್ತಿರುವ ಕಾರ್ಯ ಶ್ಲಾಘನೀಯ. ದೇಶದಾದ್ಯಂತ ಇಂತಹ ಇನ್ನಷ್ಟು ಅಭಿಯಾನಗಳು ಆರಂಭವಾಗಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.