ಮಂಗಳೂರು: ಕರ್ನಾಟಕ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಂಗಳೂರಿನ ರಮಣ ಪೈ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿತ್ತು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಕಟೀಲ್ ಅವರು, “ರಾಜ್ಯಾಧ್ಯಕ್ಷನಾದರೂ ದಕ್ಷಿಣ ಕನ್ನಡ ಜನತೆಗೆ ನಾನೀಗಲೂ ಸಾಮಾನ್ಯ ಕಾರ್ಯಕರ್ತನೇ. ನಾನು ಕುಗ್ರಾಮದಿಂದ ಬಂದವ, ಜ್ಞಾನವಂತ ಅಲ್ಲ, ವಿದ್ವಾಂಸ ಅಲ್ಲ. ಆದರೆ ನಾನೊಬ್ಬ ಸಂಘದ ನಿಷ್ಠಾವಂತ ಕಾರ್ಯಕರ್ತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನನ್ನನ್ನು ಎತ್ತರಕ್ಕೆ ಕೊಂಡೊಯ್ದಿದ್ದು ಸಂಘ. ಸಾಮಾಜಿಕ ಅಧ್ಯಯನದಲ್ಲಿ ನನಗೆ ಸಂಘ ಗೌರವ ಪದವಿಯನ್ನೇ ನೀಡಿದೆ. ನನ್ನೆಲ್ಲಾ ಬೆಳವಣಿಗೆಗೂ ಸಂಘವೇ ಕಾರಣ. ನಮ್ಮ ವಿಚಾರಧಾರೆಯನ್ನು ನಂಬಿಕೊಂಡು ಬಂದವರು, ಅಧಿಕಾರವನ್ನು ನಂಬಿ ಬಂದವರಲ್ಲ. ಇದು ನಮಗೆ ಸಂಘದ ಶಾಖೆ ಕಲಿಸಿಕೊಟ್ಟ ಸಿದ್ಧಾಂತ” ಎಂದರು.
“ಬಿಜೆಪಿ ಕೆಲಸಕ್ಕೆ ಮಾತ್ರ ಸ್ಥಾನ ನೀಡುತ್ತದೆ. ಹೋರಾಟ, ಗುಂಪುಗಾರಿಕೆಗೆ ಅದು ಮಣೆ ಹಾಕುವುದಿಲ್ಲ. ಅದುವೇ ಬಿಜೆಪಿಯ ಭಿನ್ನತೆ. ಸಂಘದ ಹಿರಿಯರ ಸೂಚನೆಯ ಮೇರೆಗೆ ಲೋಕಸಭಾ ಚುನಾವಣೆಗೆ ನಿಂತೆ. ಆಗ ನಾನು ಯಾರೆಂದು ಜನರಿಗೆ ಗೊತ್ತಿರಲಿಲ್ಲ. ಆದರೂ ಕಾರ್ಯಕರ್ತರು ನನ್ನನ್ನು ಮನೆ ಮನೆಗೆ ಕರೆದೊಯ್ದರು ಗೆಲ್ಲಿಸಿದರು. ಮತದಾರ ನನ್ನ ಕೈಹಿಡಿದ. ಮೊದಲ ಬಾರಿಗೆ ಸಂಸದನಾದೆ. ದಕ್ಷಿಣಕನ್ನಡ ಜನತೆಗೆ ನಾನು ಅಭಾರಿಯಾಗಿದ್ದಾನೆ. 3 ಬಾರಿಗೆ ಸಂಸದನಾಗಿ ದಕ್ಷಿಣ ಕನ್ನಡದ ಪ್ರತಿ ಗ್ರಾಮವನ್ನೂ ಸುತ್ತಿದ್ದೇನೆ, ಕೆಲಸ ಮಾಡಿದ್ದೇನೆ” ಎಂದಿದ್ದಾರೆ.
ಇನ್ನು ಮುಂದೆ ಪ್ರತಿ ಗ್ರಾಮಕ್ಕೆ ಪ್ರಯಾಣಿಸಲು ನನಗೆ ಸಾಧ್ಯವಾಗದಿರಬಹುದು. ಆದರೆ ದಕ್ಷಿಣ ಕನ್ನಡಿಗರು ನನ್ನ ಹೃದಯಲ್ಲಿರುತ್ತಾರೆ. ರಾಜ್ಯದ ಮೂಲೆ ಮೂಲೆಗೆ ಪ್ರವಾಸ ಕೈಗೊಂಡು ಬಿಜೆಪಿಯನ್ನು ಗಟ್ಟಿಗೊಳಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ, ದಕ್ಷಿಣಕನ್ನಡದವರು ಸಮರ್ಥರು ಎಂದು ಸಾಬೀತು ಮಾಡುತ್ತೇನೆ. ಇದಕ್ಕೆ ನನಗೆ ಅನುವು ಮಾಡಿಕೊಡಿ ಎಂದರು.
ನಮ್ಮ ಸಂಘಟನೆಯಲ್ಲಿ ಸಂಘಟಿತ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಸ್ಥಾನ ಕೊಡುವುದು ಒಬ್ಬ ವ್ಯಕ್ತಿಯಲ್ಲ, ಎಲ್ಲವನ್ನೂ ಟೀಮ್ ಯೋಚಿಸಿ ನಿರ್ಧಾರ ಮಾಡುತ್ತದೆ. ನಾವೆಲ್ಲರೂ ಒಂದಾಗಿ ಕೆಲಸ ಕಾರ್ಯವನ್ನು ಮಾಡುತ್ತೇವೆ. ಬಿಜೆಪಿ ವಿಚಾರ ಮತ್ತು ಸಿದ್ಧಾಂತದ ಆಧಾರದಲ್ಲಿ ನಡೆಯುವಂತಹ ಪಕ್ಷ. ಅದಕ್ಕೆ ಧಕ್ಕೆ ತರದಂತೆ ನಾವು ನಡೆದುಕೊಳ್ಳುತ್ತೇವೆ.
ನಾನು ಸ್ವರ್ಣಯುಗದಲ್ಲಿ ಅಧಿಕಾರವನ್ನು ಪಡೆದುಕೊಂಡಿದ್ದೇನೆ. ಮೋದಿಯಂತಹ ಪ್ರಧಾನಿ, ಅಮಿತ್ ಶಾರಂತಹ ಗೃಹಸಚಿವ, ಯಡಿಯೂರಪ್ಪನಂತಹ ಮುಖ್ಯಮಂತ್ರಿಯನ್ನು ನಾವಿಂದು ಹೊಂದಿದ್ದೇವೆ. ನರೇಂದ್ರ ಮೋದಿ ಆಡಳಿತದಲ್ಲಿ ಇಂದು ಬಿಜೆಪಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮೂಲೆ ಮೂಲೆಯಲ್ಲೂ ಅರಳಿ ನಿಂತಿದೆ. ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ನಾನು ಕಟ್ಟಬಲ್ಲೆ ಎಂಬ ವಿಶ್ವಾಸ ನನಗಿದೆ ಎಂದರು.
ಕಾರ್ಯಕರ್ತರ ಶ್ರಮದ ಫಲವಾಗಿ ನನಗೆ ಅಧಿಕಾರ ಸಿಕ್ಕಿದೆ. ಹಿಂದೂ ಸ್ವಯಂಸೇವಕರ ಬಲಿದಾನ, ಹಿರಿಯರ ತ್ಯಾಗಗಳು ಇದರ ಹಿಂದಿದೆ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ದಕ್ಷಿಣಕನ್ನಡ ಬಿಜೆಪಿಯ ಭದ್ರ ಕೊಟೆಯಾಗಿ ಬೆಳೆದಂತೆ ರಾಜ್ಯದಲ್ಲೂ ಬಿಜೆಪಿಯನ್ನು ಕಟ್ಟಿಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು. ವಾರದಲ್ಲಿ ಆರು ದಿನ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇನೆ ಮತ್ತು ವಾರದಲ್ಲಿ ಒಂದು ದಿನ ದಕ್ಷಿಣ ಕನ್ನಡಕ್ಕೆ ಬಂದು ಸೇವೆ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ಶಾಸಕ ಅಂಗಾರ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರತಾಪ್ ಸಿಂಹ ನಾಯಕ್, ಸೇರಿದಂತೆ ಬಿಜೆಪಿಯ ಅನೇಕ ಗಣ್ಯರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಹಿತೈಷಿಗಳು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.