ಹಲವು ವರ್ಷಗಳಿಂದ ತ್ಯಾಜ್ಯಗಳನ್ನು ಸ್ವೀಕರಿಸಿ ಸ್ವೀಕರಿಸಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಮಹಾರಾಷ್ಟ್ರದ ಮೋರ್ನಾ ನದಿ ಈಗ ಜನರ ಸಂಘಟಿತ ಪ್ರಯತ್ನದ ಫಲವಾಗಿ ಪುನರುಜ್ಜೀವನವನ್ನು ಪಡೆದುಕೊಳ್ಳುತ್ತಿದೆ. ಈ ನದಿಗೆ ಮರುಜೀವವನ್ನು ನೀಡುವ ಸಲುವಾಗಿ ಅಕೋಲಾ ಜಿಲ್ಲೆಯ ಜನರು ಸಾಮೂಹಿಕ ಚಳುವಳಿಯನ್ನು ನಡೆಸಿದ್ದಾರೆ, ಬೃಹತ್ ಸ್ವಚ್ಛತಾ ಅಭಿಯಾನವನ್ನು ನಡೆಸಿದ್ದಾರೆ.
ಅಕೋಲಾ ಜನರ ಉತ್ಸಾಹ ಮತ್ತು ಸಮರ್ಪಣಾ ಭಾವದಿಂದ ಆಕರ್ಷಿತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಮನ್ ಕೀ ಕಿ ಬಾತ್ ರೇಡಿಯೋ ಕಾರ್ಯಕ್ರಮದ 40 ನೇ ಆವೃತ್ತಿಯಲ್ಲಿ ಇವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ, “ಮಿಷನ್ ಕ್ಲೀನ್ ಮೊರ್ನಾ ರಿವರ್ ಒಂದು ಅದ್ಭುತ ಉಪಕ್ರಮವಾಗಿದೆ, ಅಲ್ಲಿ ಜನರು ಒಗ್ಗೂಡಿ ನದಿಯನ್ನು ಸ್ವಚ್ಛಗೊಳಿಸಿದ್ದಾರೆ”ಎಂದು ಪ್ರಧಾನಿ ಹೇಳಿದ್ದಾರೆ.
ಕ್ಲೀನ್ ಮೊರ್ನಾ ಮಿಷನ್ ಅನ್ನು 2018ರ ಜನವರಿಯಲ್ಲಿ ಪ್ರಾರಂಭಿಸಲಾಯಿತು ಮತ್ತು ಆರು ತಿಂಗಳೊಳಗೆ ಜನರ ಈ ಆಂದೋಲನವು ನದಿ ಶುಚಿಗೊಳಿಸುವಿಕೆಯಲ್ಲಿ ಅತಿದೊಡ್ಡ ಸಾರ್ವಜನಿಕ ಭಾಗವಹಿಸುವಿಕೆಯನ್ನು ಕಂಡಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ದಾಖಲೆಗಳ ಪುಸ್ತಕವಾದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದುಕೊಂಡಿದೆ. ಒಟ್ಟು 40 ಸಾವಿರ ಸ್ವಯಂಸೇವಕರು ಮೊರ್ನಾ ನದಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಮೊರ್ನಾ ನದಿಯನ್ನು ಒಂದು ಸಮಯದಲ್ಲಿ ಕಸ ಎಸೆಯುವ ಗಾರ್ಬೆಝ್ ಡಂಪ್ ಆಗಿ ಮಾಡಿಕೊಳ್ಳಲಾಗಿತ್ತು, ಆದರೆ ಈಗ ಜನರ ಪ್ರಯತ್ನದಿಂದಾಗಿ ಶುದ್ಧ ನೀರು ಮುಕ್ತವಾಗಿ ಈ ನದಿಯಲ್ಲಿ ಹರಿಯುತ್ತಿದೆ.
ಹಲವು ತಿಂಗಳುಗಳವರೆಗೆ ಪ್ರತಿ ಶನಿವಾರ, ಜಿಲ್ಲೆಯ ಜನರು ಮೊರ್ನಾ ನದಿಗೆ ತೆರಳಿ ಅದರಲ್ಲಿ ತುಂಬಿದ್ದ ತ್ಯಾಜ್ಯಗಳನ್ನು, ಕಸಗಳನ್ನು, ಪ್ಲಾಸ್ಟಿಕ್, ಹುಲ್ಲು ಮತ್ತು ನೀರಿನ ಬಾಟಲಿಗಳನ್ನು ಹೊರತೆಗೆಯುವ ಕಾರ್ಯವನ್ನು ನಡೆಸುತ್ತಾ ಬಂದಿದ್ದಾರೆ. ಪ್ರತಿಯೊಬ್ಬರೂ ಇದಕ್ಕಾಗಿ ತಮ್ಮ ಒಂದಿಷ್ಟು ಗಂಟೆಗಳನ್ನು ಮೀಸಲಿಟ್ಟಿದ್ದಾರೆ.
“173 ಕಿಲೋಮೀಟರ್ ಉದ್ದದ ಮೊರ್ನಾ ನದಿ, ಪೂರ್ಣಾ ನದಿಯ ಪ್ರಮುಖ ಉಪನದಿ. ಪೂರ್ಣಾ ನದಿ ತಾಪ್ತಿ ನದಿಯ ಉಪನದಿಯಾಗಿದೆ. ಪೂರ್ಣ ಅಕೋಲಾ ಜಿಲ್ಲೆಯ ಪ್ರಮುಖ ನೀರಿನ ಮೂಲವಾಗಿದೆ, ಇದು ನಾಗ್ಪುರದಿಂದ 240 ಕಿ.ಮೀ ದೂರದಲ್ಲಿದೆ” ಎಂದು ವರದಿಯೊಂದು ತಿಳಿಸಿದೆ.
ಅಕೋಲಾ ಆಡಳಿತ ಕೂಡ ಮೊರ್ನಾ ನದಿಯ ಪುನರುಜ್ಜೀವನದಲ್ಲಿ ಕೈಜೋಡಿಸಿದೆ. ಸ್ವಚ್ಛತಾ ಹೋರಾಟಗಾರರಿಗೆ ಅದು ಗ್ಲೌಸ್, ಕ್ಲೀನಿಂಗ್ ಸಾಧನಗಳನ್ನು ಒದಗಿಸಿದೆ. ಸ್ವಚ್ಛತಾ ಕಾರ್ಯವು ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನದ ಊಟದ ವೇಳೆ ಕೊನೆಗೊಳ್ಳುತ್ತದೆ.
ಪ್ರತಿ ಶನಿವಾರ ಸಾವಿರ ಕೆಜಿಯಷ್ಟು ತ್ಯಾಜ್ಯವನ್ನು ನದಿಯನ್ನು ತೆಗೆಯಲಾಗುತ್ತಿತ್ತು. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಜಿಲ್ಲಾ ಆಡಳಿತ ಸ್ವಚ್ಛತಾ ಕೆಲಸಗಾರರು ಲ್ಯಾಂಡ್ಫಿಲ್ಗಳಿಗೆ ಸಾಗಿಸುತ್ತಿದ್ದರು.
ಈ ಕಾರ್ಯದಲ್ಲಿ ಅನೇಕ ಸವಾಲುಗಳು ಹೋರಾಟಗಾರರಿಗೆ ಎದುರಾಗಿದ್ದವು ಆದರೆ ನದಿಯನ್ನು ಸ್ವಚ್ಛಗೊಳಿಸುವ ಇಚ್ಛಾಶಕ್ತಿ ಆ ಎಲ್ಲಾ ಸವಾಲುಗಳನ್ನು ಮೀರಿ ನಿಂತು ಬಿಟ್ಟಿತು. ನದಿಯ ಮೇಲಿನ ಸೇತುವೆಯ ಮೇಲೆ ನಿಂತು ಅನೇಕರು ನದಿಗೆ ಕಸ ಎಸೆಯುತ್ತಿದ್ದರು. ಹೀಗಾಗಿ ಸೇತುವೆಯಲ್ಲಿ ಅನೇಕ ಕಸದಬುಟ್ಟಿಗಳನ್ನು ಇಡಲಾಯಿತು ಮತ್ತು ಜನರಿಗೆ ಕಸದ ಬುಟ್ಟಿಯಲ್ಲೇ ಕಸ ಹಾಕುವಂತೆ ಪ್ರೇರೇಪಣೆಯನ್ನು ನೀಡಲಾಯಿತು. ಅಲ್ಲದೇ, ಸ್ಥಳಿಯರಿಗೆ ನದಿಯಲ್ಲಿ ಬಟ್ಟೆ ಒಗೆಯಬೇಡಿ, ಸ್ನಾನ ಮಾಡಬೇಡಿ ಎಂದೂ ಮನವಿಯನ್ನು ಮಾಡಿಕೊಳ್ಳಲಾಗಿದೆ.
ಜಿಲ್ಲಾಡಳಿತದ ದಾಖಲೆಗಳ ಪ್ರಕಾರ, 19,300 ನೀರಿನ ಬಾಟಲಿಗಳನ್ನು ಮತ್ತು 8,440 ಪ್ಲಾಸ್ಟಿಕ್ ವಸ್ತುಗಳನ್ನು ಈ ನದಿಯಿಂದ ಹೊರಕ್ಕೆ ತೆಗೆದುಹಾಕಲಾಗಿದೆ.
ಈ ಸ್ವಚ್ಛತಾ ಅಭಿಯಾನ ಪ್ರಾರಂಭವಾಗಿ ಒಂದೂವರೆ ವರ್ಷಗಳು ಕಳೆದಿವೆ. ಪ್ರಸ್ತುತ ನಗರದ ತ್ಯಾಜ್ಯವನ್ನು ನದಿಗೆ ಹೋಗುವ ಮೊದಲು ಸಂಸ್ಕರಿಸುವ ಸಲುವಾಗಿ ಎರಡು ಒಳಚರಂಡಿ ಘಟಕಗಳನ್ನು ನದಿಯ ಬಳಿ ನಿರ್ಮಿಸಲಾಗಿದೆ.
ನದಿಯ ಸಮೀಪದಲ್ಲಿ, ಹಿಂದೆ ಬಯಲು ಮಲವಿಸರ್ಜನೆಗೆ ಬಳಸಲಾಗುತ್ತಿದ್ದ ಸ್ಥಳದಲ್ಲಿ ಈಗ ಸೌರ ದೀಪಗಳನ್ನು ಅಳವಡಿಸಲಾಗಿದೆ ಮತ್ತು ಅಲ್ಲಿ ಜಾಗಿಂಗ್ ಟ್ರ್ಯಾಕ್ ತಲೆ ಎತ್ತುತ್ತಿದೆ.
ನದಿಯನ್ನು ಸ್ವಚ್ಛಗೊಳಿಸಲು ಸಾರ್ವಜನಿಕ ದೇಣಿಗೆಯಿಂದ 17 ಲಕ್ಷ ರೂಪಾಯಿಗಳ ನೆರವು ಬಂದಿದೆ. ಕೆಲವರು ತಮ್ಮ ಹುಟ್ಟುಹಬ್ಬದ ಹಣವನ್ನು ನದಿಯನ್ನು ಸ್ವಚ್ಛಗೊಳಿಸಲು ನೀಡಿದ್ದಾರೆ ಮತ್ತು ಇನ್ನೂ ಕೆಲವರು ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ವಸ್ತುಗಳನ್ನು ತೆಗೆಯಲು ವಾಲಿಬಾಲ್ ಪರದೆಗಳನ್ನು ಬಳಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.