ಶ್ರೀನಗರ: ಶ್ರೀನಗರದ ಸ್ಥಳಿಯಾಡಳಿತವು ನಗರದ ಹೊರವಲಯದಲ್ಲಿರುವ ಬ್ಯುಸಿನೆಸ್ ಪ್ರಾಸೆಸ್ ಔಟ್ಸೋರ್ಸಿಂಗ್ (ಬಿಪಿಓ)ನ ರಕ್ಷಣೆಗೆ ಧಾವಿಸಿದೆ.
2010ರಲ್ಲಿ ಪ್ರಾರಂಭವಾದ ಶ್ರೀನಗರ ಸೆಂಟರ್ ಆಫ್ ಏಜಿಸ್ ಸುಮಾರು 70 ಉದ್ಯೋಗಿಗಳನ್ನು ಹೊಂದಿದ್ದು, ಗ್ರಾಹಕರ ಕೊರತೆಯಿಂದ ಇದು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ಇದೀಗ ಶ್ರೀನಗರ ಜಿಲ್ಲಾಡಳಿತ ಅದರ ರಕ್ಷಣೆಗೆ ಧಾವಿಸಿದ್ದು, ತಾನೇ ಅದರ ಗ್ರಾಹಕನಾಗಿದೆ.
ಜಿಲ್ಲಾಡಳಿತವು ಅದರಲ್ಲಿನ ಎಲ್ಲಾ ಉದ್ಯೋಗಿಗಳನ್ನು ಉಳಿಸಿಕೊಳ್ಳುವಂತೆ ಬಿಪಿಒಗೆ ಸೂಚನೆಯನ್ನು ನೀಡಿದೆ. ಮಾತ್ರವಲ್ಲದೇ, ಮುಂದಿನ 18 ತಿಂಗಳಲ್ಲಿ 2,000 ಉದ್ಯೋಗಗಳ ಸೌಲಭ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ತಾನೇ ಅದರ ಗ್ರಾಹಕನಾಗಿದೆ.
ಈ ಸೆಂಟರ್ಗೆ ಭೇಟಿ ನೀಡಿದ ಶ್ರೀನಗರದ ಜಿಲ್ಲಾಧಿಕಾರಿ ಶಾಹಿದ್ ಇಕ್ಬಾಲ್ ಚೌಧರಿ ಅವರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು, “ನಾವು ರಾಜ್ಯದಲ್ಲಿ ಐಟಿ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನಾವು ಏಜಿಸ್ಗೆ ಭೇಟಿ ನೀಡಿದ್ದೇವೆ ಮತ್ತು 70 ಉದ್ಯೋಗಿಗಳಿಂದ 2,000 ಉದ್ಯೋಗಿಗಳವರೆಗೆ ಅವರ ಸಾಮರ್ಥ್ಯವನ್ನು ವೃದ್ಧಿಸಲು ಮಾರ್ಗಸೂಚಿಯನ್ನು ಪಡೆದುಕೊಂಡಿದ್ದೇವೆ. ಇದಕ್ಕಾಗಿ ಆರ್ಥಿಕ ನೆರವನ್ನು ಸರ್ಕಾರವು ನೀಡಲಿದೆ” ಎಂದು ಹೇಳಿದ್ದಾರೆ.
“ಐಟಿ ವಲಯದಲ್ಲಿ ಅಪಾರ ಸಾಮರ್ಥ್ಯವಿದೆ ಮತ್ತು ಸಾಕಷ್ಟು ಅವಕಾಶಗಳಿವೆ. ನಾವು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಅವರು ಹೇಳಿದರು.
ಟೆಲಿಕಾಂ ಕ್ಷೇತ್ರದ ಮಂದಗತಿಯಿಂದಾಗಿ, ಶ್ರೀನಗರದ ಏಜಿಸ್ನ ಕಾರ್ಯಾಚರಣೆಯು ಕುಗ್ಗಿತು.
ಈ ಬಿಪಿಒ ಈ ಹಿಂದೆ ಎಸ್ಸಾರ್ ಗ್ರೂಪ್ನ ಭಾಗವಾಗಿತ್ತು ಮತ್ತು ಇದನ್ನು 2017 ರಲ್ಲಿ ಖಾಸಗಿ ಇಕ್ವಿಟಿ ಸಂಸ್ಥೆ ಕ್ಯಾಪಿಟಲ್ ಸ್ಕ್ವೇರ್ ಪಾರ್ಟ್ನರ್ಸ್ಗೆ ಮಾರಾಟ ಮಾಡಲಾಯಿತು.
“ಇಲ್ಲಿ ಕಾಲ್ ಸೆಂಟರ್ಗಳಲ್ಲಿ ಸಾಕಷ್ಟು ಯುವಕರು ಕೆಲಸ ಮಾಡುತ್ತಿದ್ದಾರೆ ಮತ್ತು ನಾವು ಈ ಕೆಲಸವನ್ನು ಅತ್ಯಂತ ಇಷ್ಟಪಟ್ಟು ಮಾಡುತ್ತೇವೆ. ನಾವು ಈ ಕೆಲಸವನ್ನು ಮುಂದುವರಿಸಲು ಅತೀವವಾಗಿ ಬಯಸುತ್ತಿದ್ದೇವೆ” ಎಂದು ಏಜಿಸ್ ಉದ್ಯೋಗಿ ಸಮೀರಾ ಅಖ್ತರ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.