ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿಯಾಗಿ ಗುರುವಾರ ಮಾತುಕತೆಯನ್ನು ನಡೆಸಿದರು. ಈ ವೇಳೆ ಕಾಶ್ಮೀರದ ವಿಷಯದಲ್ಲಿ ಫ್ರಾನ್ಸ್ ಭಾರತಕ್ಕೆ ಬೆಂಬಲವನ್ನು ಸೂಚಿಸಿದೆ.
ಹವಾಮಾನ ಬದಲಾವಣೆ, ಸೈಬರ್ ಸುರಕ್ಷತೆ, ರಕ್ಷಣಾ ಮತ್ತು ಬಾಹ್ಯಾಕಾಶ ಸಹಕಾರ ಮತ್ತು ಕಾಶ್ಮೀರ ವಿಷಯದಲ್ಲಿ ಬೆಂಬಲ ಇತ್ಯಾದಿ ಅಂಶಗಳನ್ನು ಕೇಂದ್ರೀಕರಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎಮ್ಯಾನುಯೆಲ್ ಮ್ಯಾಕ್ರೋನ್ ನಡುವೆ ಮಾತುಕತೆ ನಡೆದಿದೆ. ಉಭಯ ನಾಯಕರ ಐದನೇ ಬಾರಿಗೆ ಭೇಟಿ ಇದಾಗಿದೆ.
ಭೇಟಿಯ ವೇಳೆ, ಮುಂದಿನ ತಿಂಗಳು ರಫೇಲ್ ಫೈಟರ್ ಜೆಟ್ಗಳ ಹಸ್ತಾಂತರ ಪ್ರಾರಂಭವಾಗಲಿದೆ ಎಂದು ಉಭಯ ನಾಯಕರು ಘೋಷಣೆ ಮಾಡಿದರು.
“ನಮ್ಮ ಸ್ನೇಹವು ಸ್ವಾರ್ಥದ ಮೇಲೆ ನಿಂತಿಲ್ಲ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳ ಮೇಲೆ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತ ಮತ್ತು ಫ್ರಾನ್ಸ್ ಹೆಗಲಿಗೆ ಹೆಗಲು ಕೊಟ್ಟು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಈ ಅಂಶಗಳೇ ಕಾರಣ ” ಎಂದು ಹೇಳಿದರು.
ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಪ್ಯಾರಿಸ್ ನೀಡಿದ ಬೆಂಬಲವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಫ್ರೆಂಚ್ ಅಧ್ಯಕ್ಷರು ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸುತ್ತಾ, “ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಒಟ್ಟಾಗಿ ಕೆಲಸ ಮಾಡಲಿದ್ದೇವೆ” ಎಂದು ಹೇಳಿದರು.
ಕಾಶ್ಮೀರ ಕುರಿತು ಮಾತನಾಡಿದ ಫ್ರೆಂಚ್ ಅಧ್ಯಕ್ಷರು, “ಭಾರತ ಮತ್ತು ಪಾಕಿಸ್ತಾನ ಇದನ್ನು ದ್ವಿಪಕ್ಷೀಯವಾಗಿ ಪರಿಹರಿಸಬೇಕಾಗಿದೆ ಮತ್ತು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲಿ ಉಚಿತವಲ್ಲ” ಎಂದು ಹೇಳಿದರು.
ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಈ ಪ್ರದೇಶದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಯಾವುದೇ ಭಯೋತ್ಪಾದಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ತಾನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಹೇಳುವುದಾಗಿ ಮ್ಯಾಕ್ರೋನ್ ಹೇಳಿದರು.
ಅಲ್ಲದೇ ಜೈತಾಪುರ ಪರಮಾಣು ವಿದ್ಯುತ್ ಸ್ಥಾವರದ ಯೋಜನೆಯನ್ನು ಈ ವರ್ಷದ ಕೊನೆಯಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿ ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಫ್ರಾನ್ಸ್ ಪ್ರವಾಸವನ್ನು ಪ್ರಾರಂಭಿಸಿದ್ದಾರೆ. ಆಗಸ್ಟ್ 25 ಮತ್ತು 26 ರಂದು ಅಲ್ಲಿನ ಬಿಯರಿಟ್ಜ್ನಲ್ಲಿ ನಡೆಯಲಿರುವ 45 ನೇ ಜಿ 7 ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.