ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಬಡತನದ ಬೇಗೆಯಲ್ಲಿ ಬದುಕುವುದು ಅಂಬಿಗನಾದ ಜೈನುಲಾಬುದ್ದೀನ್ ಮತ್ತು ಅವರ ಪತ್ನಿ ಆಶಿಮ್ಮಾರಿಗೆ ದುಸ್ತರವಾಗಿತ್ತು. 1931ರಲ್ ಅಕ್ಟೋಬರಿನಲ್ಲಿ ತಮ್ಮ ಮಗನನ್ನು ಜಗತ್ತಿಗೆ ತರಲು ಆ ದಂಪತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗ ಬಾಲಾವಸ್ಥೆಯಲ್ಲಿರುವಾಗಲೇ ದಿನಪತ್ರಿಕೆ ಮಾರಾಟ ಮಾಡುವುದು ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ.
70 ವರ್ಷಗಳ ಬಳಿಕ ಆತ ದೇಶದ 11ನೇ ರಾಷ್ಟ್ರಪತಿಯಾದ ಮತ್ತು ಆತ ದೇಶದ ವಿಜ್ಞಾನದ ಬೆಳವಣಿಗೆಗೆ ಕಾರಣನಾದ. ಬಾಹ್ಯಾಕಾಶ ವಿಜ್ಞಾನಕ್ಕೆ, ಮಿಲಿಟರಿ ಕ್ಷಿಪಣಿಗಳ ಬೆಳವಣಿಗೆಗೆ ಆತ ನೀಡಿದ ಕೊಡುಗೆ ವರ್ಣನಾತೀತವಾಗಿದೆ.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಪಯಣ ಪ್ರೇರಣೆಗಳ ಗುಚ್ಛ. ಆ ಪಯಣ ಯಾವುದೂ ಅಸಾಧ್ಯವಲ್ಲ ಎಂಬುದುನ್ನು ಸಾಧಿಸಿದ ತೋರಿಸಿದೆ, ಅದು ಪೀಳಿಗೆಗಳನ್ನು ಬಡಿದೆಬ್ಬಿಸಿದ ಪಯಣ.
ಇಂದೋರ್ ಜಿಲ್ಲಾಡಳಿತವು ಪ್ರಾರಂಭಿಸಿದ ‘ಪ್ರಾಜೆಕ್ಟ್ 100 ಕಲಾಂ’ ಕ್ಷಿಪಣಿ ಪುರುಷನನ್ನು ಗೌರವಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅತ್ಯದ್ಭುತವಾದ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ, ಹಿಂದುಳಿದ ಹಿನ್ನೆಲೆಯ 100 ವಿದ್ಯಾರ್ಥಿಗಳಿಗೆ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್ (ಜೆಇಇ) ಮತ್ತು ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್ (ನೀಟ್) ಬರೆಯಲು ಒಂದು ವರ್ಷದವರೆಗೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ.
ಇದಲ್ಲದೆ, ಜಿಲ್ಲೆಯ ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಆಹಾರ ಮತ್ತು ಸಾರಿಗೆ ಸೇವೆಗಳನ್ನು ನೀಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂದೋರ್ನ ಜಿಲ್ಲಾಧಿಕಾರಿ ಲೋಕೇಶ್ ಕುಮಾರ್ ಜಾತವ್ ಅವರು, “ಸಂಪನ್ಮೂಲಗಳು ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಹಲವಾರು ವಿದ್ಯಾರ್ಥಿಗಳ ಪ್ರತಿಭೆಗಳು ವ್ಯರ್ಥವಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು ಅತ್ಯಂತ ದುಬಾರಿ ವ್ಯವಹಾರವಾಗಿ ಈಗ ಮಾರ್ಪಟ್ಟಿದೆ, ಇದು ದೀನದಲಿತ ವಿದ್ಯಾರ್ಥಿಗಳಿಗೆ ಅವರ ಕನಸುಗಳನ್ನು ನನಸಾಗಿಸುವಲ್ಲಿ ದೊಡ್ಡ ತಡೆಯಾಗಿದೆ. ಈ ಯೋಜನೆಯು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳನ್ನು ಮತ್ತು ಪ್ರಾಧ್ಯಾಪಕರಿಂದ ತರಬೇತಿಗಳನ್ನು ನೀಡುತ್ತದೆ” ಎಂದಿದ್ದಾರೆ.
ಒಂದು ವರ್ಷದ ಕ್ರ್ಯಾಶ್ ಕೋರ್ಸ್ ಈ ವರ್ಷ ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗುತ್ತದೆ.
ಕ್ರ್ಯಾಶ್ ಕೋರ್ಸ್ ಅನ್ನು ತಂದೆಯಿಲ್ಲದ ಮಕ್ಕಳಿಗೆ, ಅಂಗವಿಕಲ ತಂದೆ ಅಥವಾ ತಾಯಿಯನ್ನು ಹೊಂದಿರುವ ಮಕ್ಕಳಿಗೆ, ಗ್ರೇಡ್ III ಮತ್ತು IV ಸರ್ಕಾರಿ ನೌಕರರ ಮಕ್ಕಳಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ಇದಲ್ಲದೆ, ವಿದ್ಯಾರ್ಥಿಗಳು ಈ ಕೋರ್ಸಿಗೆ ಅರ್ಹತೆ ಪಡೆಯಲು ತಮ್ಮ 12 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 70 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳು ಪಡೆಯುವುದು ಇಲ್ಲಿ ಕಡ್ಡಾಯವಾವಿದೆ.
ಕೋರ್ಸ್ಗೆ ಅರ್ಜಿ ಸಲ್ಲಿಸಿದ 1,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ 150 ಮಂದಿಯನ್ನು ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆ ನಡೆಸಿದ ಪ್ರವೇಶ ಪರೀಕ್ಷೆಯ ನಂತರ ಶಾರ್ಟ್ಲಿಸ್ಟ್ ಮಾಡಲಾಗಿದೆ. ಆಗಸ್ಟ್ 21 ರಂದು ನಡೆಯಲಿರುವ ಎರಡನೇ ಹಂತದ ಸ್ಕ್ರೀನಿಂಗ್ನಲ್ಲಿ 100 ವಿದ್ಯಾರ್ಥಿಗಳನ್ನು (ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶಕ್ಕೆ ತಲಾ 50) ಅವರ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಯೋಜನೆಗೆ ಹಣವನ್ನು ನೀಡುತ್ತಿದೆ.
ಸದ್ಯಕ್ಕೆ, ಈ ಯೋಜನೆಯು 2019-2020 ರ ಶೈಕ್ಷಣಿಕ ಅವಧಿಗೆ ಮಾತ್ರ ಇದೆ ಮತ್ತು ಜಿಲ್ಲಾಡಳಿತವು ಈ ಯೋಜನೆಯನ್ನು ಮುಂದಕ್ಕೂ ವಿಸ್ತರಿಸಲು ದಾನಿಗಳನ್ನು ಅಥವಾ ಹೂಡಿಕೆದಾರರನ್ನು ಹುಡುಕುತ್ತಿದೆ. “ಇದನ್ನು ವಾರ್ಷಿಕ ಉಪಕ್ರಮವನ್ನಾಗಿ ಮಾಡಲು ನಮಗೆ ಹಣದ ಅಗತ್ಯವಿದೆ. ಈ ಯೋಜನೆಯು ಯಶಸ್ವಿಯಾಗಿದೆ ಎಂದು ನಾವು ಭಾವಿಸುತ್ತೇವೆ, ಇದರಿಂದಾಗಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ ಹಣವನ್ನು ಪಡೆಯಲು ನಾವು ಪ್ರಯತ್ನ ಮಾಡಬಹುದಾಗಿದೆ ”ಎಂದು ಜಾತವ್ ಹೇಳುತ್ತಾರೆ.
ಇಂದೋರ್ ಜಿಲ್ಲೆಯನ್ನು ಹೊರತುಪಡಿಸಿ ಬೇರೆ ಭಾಗಗಳಲ್ಲಿ ಇರುವ ಜೆಇಇ ಮತ್ತು ನೀಟ್ ಆಕಾಂಕ್ಷಿಗಳು ಭಾರತದಾದ್ಯಂತ ಇರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಯ ಟೆಸ್ಟ್ ಪ್ರ್ಯಾಕ್ಟಿಸ್ ಸೆಂಟರುಗಳಲ್ಲಿ ಉಚಿತವಾಗಿ ಮಾಕ್ ಟೆಸ್ಟ್ ಪೇಪರ್ಗಳನ್ನು ಪಡೆಯಬಹುದಾಗಿದೆ ಅಥವಾ ಅವರ ವೆಬ್ಸೈಟ್ www.nta.ac.in ಗೆ ಭೇಟಿ ನೀಡಿ ಅಥವಾ ‘NTA Student’ ಆ್ಯಪ್ ಡೌನ್ಲೋಡ್ ಮಾಡುವ ಮೂಲಕ ಪೇಪರ್ ಪಡೆದುಕೊಳ್ಳಬಹುದಾಗಿದೆ,
ಮಾಕ್ ಟೆಸ್ಟ್ ಫಲಿತಾಂಶವನ್ನು ಆಧರಿಸಿ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳು ಮತ್ತು ಮಾಕ್ ಟೆಸ್ಟ್ಗಳಲ್ಲಿ ಮಾಡಿದ ತಪ್ಪುಗಳ ಬಗ್ಗೆ ಎನ್ಟಿಎ ಕೇಂದ್ರಗಳಲ್ಲಿನ ಮಾರ್ಗದರ್ಶಕರೊಂದಿಗೆ ಚರ್ಚಿಸಬಹುದು. ಇದರಿಂದ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಸುಲಭವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.