“ಕಾಲ ಬದಲಾಗಿದೆ ಸ್ವಾಮೀ, ಈಗೆಲ್ಲಾ ರಾಜನ ಮಗ ರಾಜನಾಗುವುದಿಲ್ಲ, ಯಾರಿಗೆ ಸಾಮರ್ಥ್ಯ ಇದೆಯೋ ಅವನು ರಾಜನಾಗುತ್ತಾನೆ…” ಎಂತಹ ಮಾತು?! ನಮ್ಮ ಈಗಿನ ಭಾರತದಲ್ಲಿ ನಡೆಯುತ್ತಿರುವುದು ಇದೇ ಸಾಲಿನ ಮೇಲೆ. ಇಲ್ಲಿ ಪೇಪರ್ ಹಾಕುವವ ರಾಷ್ಟ್ರಪತಿಯಾಗುತ್ತಾನೆ, ಚಹಾ ಮಾರುವವ ಪ್ರಧಾನಿ ಮತ್ತು ತರಕಾರಿಗಳ ಮಾರುತ್ತಿದ್ದವ ಭಾರತರತ್ನ ಪಡೆಯುತ್ತಾನೆ. ಇದು ನಮ್ಮ ಭಾರತ. ಸೂಪರ್ 30… ಈಗಲೇ ಹೇಳಿಬಿಡುತ್ತೇನೆ, ಚಿತ್ರ ಆರಂಭವಾದ ಕ್ಷಣದಿಂದ ಹಿಡಿದು ಮುಗಿಯುವ ತನಕ ನೋಡುಗರ ತುಟಿಯ ಮೇಲೆ ಪುಟ್ಟ ನಗು ಮತ್ತು ಎದೆಯೊಳಗೆ ಸಣ್ಣ ತಳಮಳ ಇವೆರಡೂ ಆಗದಿದ್ದರೆ ನೀವು ಚಿತ್ರ ಸರಿಯಾಗಿ ನೋಡಿಯೇ ಇಲ್ಲವೆಂದು ಅರ್ಥ. ಒಬ್ಬ ಸಾಮಾನ್ಯ ಅಂಚೆಯಣ್ಣನ ಮಗ ಏನು ತಾನೇ ಮಾಡಿಯಾನು ಎನ್ನುವ ಸಮಾಜದೊಳಗೆ ಒಂದು ಆಲದ ಮರದಂತೆ ನೆರಳಾಗಿ ನಿಂತ ಜೀವನದ ಯಶೋಗಾಥೆ. ಅವರು ಬೇಕಾದರೆ ಹಣದ ಬೆನ್ನು ಹತ್ತಿ ಎಷ್ಟೋ ತಲೆಮಾರು ಕುಳಿತು ಊಟ ಮಾಡುವಷ್ಟು ಗಳಿಸಬಹುದಿತ್ತು. ಆದರೆ ಅವರ ಸೋಲದ ಛಲ, ಪ್ರಯತ್ನಗಳ ಹಿಂದಿನ ಸತ್ಯ ಕಥೆಯೇ ಸೂಪರ್ 30. ಗಣಿತವನ್ನು ಜೀವಿಸಿದ ಬಿಹಾರದ ಆನಂದ್ ಕುಮಾರ್ ಬದುಕಿನ ಬಗ್ಗೆ ಚಿತ್ರ. ಜೀವನದಲ್ಲಿ ಬೇಸತ್ತವರು ಮತ್ತು ಗುರಿಯನ್ನೇ ಕಾಣಲು ಆಗದಿರುವವರು ನೋಡಲೇ ಬೇಕಾದ ಚಿತ್ರ.
ಆನಂದ್ ಕುಮಾರ್ (ಹೃತಿಕ್ ರೋಷನ್) ಒಬ್ಬ ಪೋಸ್ಟ್ಮ್ಯಾನ್ (ವೀರೇಂದ್ರ ಸಕ್ಸೇನಾ) ಮಗ. ಬಡ ಕುಟುಂಬದ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯ ಆನಂದ್ ಕುಮಾರ್. ಅವನಿಗೆ ಕೇಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಗಣಿತದಲ್ಲಿ ಹೆಚ್ಚಿನ ಅಧ್ಯಯನ ಮಾಡುವ ಬಯಕೆ. ಅವನ ಕನಸುಗಳನ್ನು ಪ್ರತಿ ಹಂತದಲ್ಲೂ ಬೆಂಬಲಿಸುವ ಕುಟುಂಬ. ಜೊತೆ ಜೊತೆಗೆ ಅಲ್ಲೊಂದು ನಿಷ್ಕಲ್ಮಶ ಪ್ರೀತಿ. ಆ ಪ್ರೀತಿಯಲ್ಲಿ ಹಣಕಾಸಿನ ತೊಡಕು. ಒಂದು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಗಣಿತದ ಕುರಿತು ಓದುವಾಗ ಮೇಲ್ವಿಚಾರಕನ ಬಳಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆನಂದ್ ಆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವುದಿಲ್ಲ. ಅವರು ದರದರನೇ ಎಳೆದುಕೊಂಡು ಹೋಗಿ ಹೊರಹಾಕಲಾಗುತ್ತದೆ. ಊರಿನಲ್ಲಿ ಈ ಪುಸ್ತಕಗಳು ಲಭ್ಯವಿಲ್ಲದ ಕಾರಣ ಇಲ್ಲಿ ಬಂದು ಓದುತ್ತಿದ್ದೇನೆ ಎಂದರೂ ಅಲ್ಲಿನ ಅಧಿಕಾರಿ ಕೇಳಲು ತಯಾರಿರುವುದಿಲ್ಲ. ಆಗ ಅಲ್ಲಿನ ಗುಮಾಸ್ತ ಆನಂದ್ ಬಳಿ ಬಂದು ನೀನು ಬರೆಯುವ ಲೇಖನ ಆ ವಿದೇಶಿ ಜರ್ನಲ್ನಲ್ಲಿ ಬಂದುದೇ ಆದಲ್ಲಿ ಜೀವಮಾನ ಪರ್ಯಂತ ಆ ಪುಸ್ತಕ ಉಚಿತವಾಗಿ ನಿನ್ನ ಮನೆಗೆ ಬರುತ್ತದೆ. ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುವ ಆನಂದ್ ಗಣಿತದಲ್ಲಿ ಈವರೆಗೂ ಬಿಡಿಸಲಾಗದ ಸಮಸ್ಯೆ ಪರಿಹರಿಸುತ್ತಾರೆ. ಅದನ್ನು ಅಂಚೆಯ ಮೂಲಕ ಇಂಗ್ಲೆಂಡಿಗೆ ಕಳಿಸಬೇಕಾಗುತ್ತದೆ. ಆದರೆ ಅದಕ್ಕಾಗಿ ಅವರ ಬಳಿ ಹಣವಿರುವುದಿಲ್ಲ. ಆ ಸಂದರ್ಭದಲ್ಲಿ ಒಂದು ಸಂಭಾಷಣೆ ನಡೆಯುತ್ತದೆ.
ಅಂಚೆಯವ: “ನಮ್ಮ ಧರ್ಮ ಗ್ರಂಥಗಳ ವಿಚಾರಗಳನ್ನು ಈ ಇಂಗ್ಲೀಷರು ಕದ್ದುಬಿಟ್ಟರು.”
ಆನಂದ್ ತಂದೆ: “ನಮ್ಮ ಜ್ಞಾನ ಯಾಕೆ ಕದ್ದರು ಗೊತ್ತಾ? ನಾವದನ್ನು ಹಂಚಲಿಲ್ಲ. ಹಂಚದೇ ಉಳಿದ ಜ್ಞಾನ ಅಷ್ಟಕ್ಕೇ ಅಷ್ಟೇ ಉಳಿದುಬಿಡುತ್ತದೆ. ಆದರೆ ಹಂಚಿದ ಜ್ಞಾನ ದ್ವಿಗುಣಗೊಳ್ಳುತ್ತಲೇ ಹೋಗುತ್ತದೆ.”
ಅಷ್ಟು ದೊಡ್ಡ ಕನಸುಗಳ ಕಾಣಲು ಅಷ್ಟು ಶಕ್ತಿ ಬೇಕಲ್ಲ ಎಂಬ ಮಾತು ಬರುತ್ತದೆ. ಆಗ ಆನಂದ್ ತಂದೆ ಹೇಳುತ್ತಾರೆ “ಈಗೆಲ್ಲಾ ರಾಜನ ಮಗ ರಾಜನಾಗುವುದಿಲ್ಲ, ಯಾರಿಗೆ ಸಾಮರ್ಥ್ಯ ಇದೆಯೋ ಅವನು ರಾಜನಾಗುತ್ತಾನೆ.” ಎಂತಹ ಮಾತು?! ಆನಂದರ ಜೀವನದ ತುಂಬಾ ಈ ಮಾತು ಧೈರ್ಯ ತುಂಬುತ್ತದೆ. ನಮ್ಮ ಈಗಿನ ಭಾರತದಲ್ಲಿ ನಡೆಯುತ್ತಿರುವುದು ಇದೇ ಸಾಲಿನ ಮೇಲೆ. ಇಲ್ಲಿ ಪೇಪರ್ ಹಾಕುವವ ರಾಷ್ಟ್ರಪತಿಯಾಗುತ್ತಾನೆ, ಚಹಾ ಮಾರುವವ ಪ್ರಧಾನಿ ಮತ್ತು ತರಕಾರಿಗಳ ಮಾರುತ್ತಿದ್ದವ ಭಾರತರತ್ನ ಪಡೆಯುತ್ತಾನೆ. ಇದು ನಮ್ಮ ಭಾರತ.
ಅದೊಂದು ಸುಂದರ ದಿನ. ಕೇಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಪ್ರವೇಶಾತಿ ಸಿಕ್ಕಿಬಿಡುತ್ತದೆ. ನಿಜವಾದ ಸಮಸ್ಯೆ ಆರಂಭವಾಗುವುದು ಅಲ್ಲಿಂದ. ನೂರಾರು ಕನಸುಗಳ ಹೊತ್ತು ಹಾರಲು ಆನಂದ್ಗೆ ಹಣಕಾಸಿನ ರೆಕ್ಕೆಗಳ ಕೊರತೆ ಬರುತ್ತದೆ. ಆಗ ಅವರು ತಂದೆಯ ಉಳಿತಾಯಗಳ ಮೇಲೆ ಸಾಲ ಮತ್ತು ಉಳಿದ ಹಣವನ್ನು ಸ್ಥಳೀಯ ಶಿಕ್ಷಣ ಮಂತ್ರಿಯಿಂದ ನೆರವು ಕೇಳಲು ನಿರ್ಧರಿಸುತ್ತಾರೆ. ಏಕೆಂದರೆ ರಾಮಾನುಜಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಲ್ಲಿ ಹಾಜರಿದ್ದ ಶಿಕ್ಷಣ ಸಚಿವ (ಪಂಕಜ್ ತ್ರಿಪಾಠಿ) ಹಣಕಾಸಿನ ನೆರವು ನೀಡಲು ತಾನು ಸಿದ್ದ ಎಂದು ಹೇಳಿರುತ್ತಾನೆ. ತಂದೆಯೊಂದಿಗೆ ಹೊರಟು ಅವರ ಭೇಟಿ ಮಾಡಿದಾಗ ಅವರಿಗೆ ನಿರಾಸೆ ಕಾದಿರುತ್ತದೆ. ಒಂದು ರಾಜ್ಯಕ್ಕೆ ಒಬ್ಬ ಅನಕ್ಷರಸ್ಥ ಮತ್ತು ಬೇಜವಾಬ್ದಾರಿ ಸಚಿವನಿಂದ ಏನೆಲ್ಲಾ ಆಗಬಹುದು ಎಂಬುದು ಈ ದೃಶ್ಯದಲ್ಲಿ ಗೊತ್ತಾಗುತ್ತದೆ. ಮುಂದುವರಿದಂತೆ, ಆನಂದರ ತಂದೆ ಸಾಲ ಮಾಡಿಯಾದರೂ ವಿದೇಶಕ್ಕೆ ಕಳಿಸಲು ಬಹಳ ಪ್ರಯತ್ನ ಮಾಡುತ್ತಾರೆ. ಬ್ಯಾಂಕು, ಅಂಚೆ ಇಲಾಖೆ ಅಲೆದು ಅಲೆದು ಅದನ್ನು ಮಾನಸಿಕವಾಗಿ ಹಚ್ಚಿಕೊಳ್ಳುವ ಅವರು ಹಠಾತ್ ನಿಧನರಾಗುತ್ತಾರೆ. ಇದರಿಂದ ಸಂಸಾರದ ದಿಕ್ಕು ತಪ್ಪುತ್ತದೆ. ಮನೆಯ ಅಷ್ಟೂ ಜವಬ್ದಾರಿ ಆನಂದರ ಹೆಗಲು ಏರುತ್ತದೆ. ಹಣಕಾಸಿನ ಒತ್ತಡ ನಿರ್ವಹಿಸಲು ಬೀದಿಗಳಲ್ಲಿ ಹಪ್ಪಳ ಮಾರುತ್ತಾರೆ. ಅದೇ ಅವರ ದಿನಚರಿಯಾಗಿ ಬಿಡುತ್ತದೆ.
ಒಂದು ದಿನ ಅಚಾನಕ್ಕಾಗಿ ಶಿಕ್ಷಣ ಸಚಿವರ ಆಪ್ತ ಲಲ್ಲನ್ ಸಿಂಗ್ನ (ಆದಿತ್ಯ ಶ್ರೀವಾಸ್ತವ) ಭೇಟಿಯಾಗುತ್ತದೆ. ಅಲ್ಲಿಂದ ಅವರ ಬದುಕು ಮತ್ತೆ ಬದಲಾಗುತ್ತದೆ. ಆನಂದ್ರಲ್ಲಿನ ಗಣಿತದ ಪ್ರತಿಭೆ ಗೊತ್ತಿದ್ದ ಆತ ಅವರನ್ನು ತನ್ನ ಕೋಚಿಂಗ್ ಸಂಸ್ಥೆಗೆ ಬರುವಂತೆ ಆಹ್ವಾನಿಸುತ್ತಾನೆ. ಅಲ್ಲಿ ಆನಂದ್ ಮತ್ತು ಅವರ ತಮ್ಮ ಕೈ ತುಂಬಾ ಸಂಪಾದಿಸುತ್ತಾರೆ. ಆನಂದ್ ತಮ್ಮ ನಿಜವಾದ ಗುರಿ ಕಂಡುಕೊಳ್ಳಲು ವಿಫಲರಾದರೇನೋ ಅನ್ನಿಸುತ್ತದೆ. ಚಿತ್ರದ ಮುಂದಿನ ಭಾಗವನ್ನು ನೀವು ನೋಡಿಯೇ ಆನಂದಿಸಬೇಕು. ಎರಡು ದೃಶ್ಯಗಳನ್ನು ಕುರಿತು ಹೇಳಲೇಬೇಕು ಅನ್ನಿಸುತ್ತಿದೆ.
ಒಂದು, ಆನಂದ್ ಕುಮಾರ್ ತಮ್ಮನ್ನು ಪ್ರೋತ್ಸಾಹಿಸಿ, ವಿದೇಶಿ ಜರ್ನಲ್ನಲ್ಲಿ ತಮ್ಮ ಲೇಖನ ಬರುವಂತೆ ಮಾಡಿದ ಗ್ರಂಥಾಲಯದ ಗುಮಾಸ್ತನ ಕಾಲಿಗೆ ಬೀಳುವುದು.
ಎರಡು, ಕೇವಲ ಒಂದು ಅಂಕದಿಂದ ಆನಂದ್ರ ಮೊದಲ ಸೂಪರ್ 30 ಯಿಂದ ತಪ್ಪಿಸಿಕೊಳ್ಳುವ ಒಬ್ಬ ಬಡ ವಿದ್ಯಾರ್ಥಿ ಅವರ ಕಾಲಿಗೆ ಬೀಳುವುದು. ಈ ದೃಶ್ಯಗಳು ಖಂಡಿತ ಕಣ್ಣಾಲಿಗಳಲ್ಲಿ ನೀರು ತರುತ್ತದೆ. ಇಡೀ ಚಿತ್ರವೇ ಹಾಗಿದೆ. ಮೊದಲೇ ಹೇಳಿದಂತೆ ಚಿತ್ರ ನೋಡುವಾಗ ಎದೆಯಲ್ಲಿ ಪುಟ್ಟ ನಡುಕ, ತುಟಿಯಂಚಿನಲ್ಲಿ ಸಣ್ಣ ನಗು ಇದ್ದೇ ಇರುತ್ತದೆ.
ಹೃತಿಕ್ ರೋಷನ್, ಮೃಣಾಲ್ ಠಾಕೂರ್, ಪಂಕಜ್ ತ್ರಿಪಾಠಿ, ಆದಿತ್ಯ ಶ್ರೀವಾಸ್ತವ, ವೀರೇಂದ್ರ ಸಕ್ಸೇನಾ ಹೀಗೆ ಪ್ರತಿಭಾವಂತ ನಟರ ದಂಡೇ ಇದೆ. ಚಿತ್ರದ ನಿರ್ದೇಶಕರು ವಿಕಾಸ್ ಬೆಹ್ಲ್. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ಭಾರತೀಯ ಚಿತ್ರರಂಗದಲ್ಲಿ ನೃತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹೃತಿಕ್ ರೋಷನ್ ಅವರು ಇಡೀ ಚಿತ್ರದಲ್ಲಿ ಒಂದೇ ಒಂದು ಸರಿಯಾದ ನೃತ್ಯ ಮಾಡಿಲ್ಲ. ಚಿತ್ರಕ್ಕೆ ಏನು ಬೇಕಾಗಿದೆಯೋ ಅಷ್ಟು ಮಾತ್ರ ನೀಡಲಾಗಿದೆ. ಅಲ್ಲಿ ಕೃತಕತೆ, ಬೆಡಗು, ಕಾಲ್ಪನಿಕತೆಗೆ ಅವಕಾಶವಿಲ್ಲ. ಒಂದು ಮೌಲ್ಯಯುತ ಸಿನಿಮಾವನ್ನು ನೋಡುವ ಮನಸ್ಸಾದಲ್ಲಿ ತಪ್ಪದೆ ಸೂಪರ್ 30 ನೋಡಿ. ಆನಂದರ ಹೋರಾಟ ಬದುಕಿನಲ್ಲಿ ಅನೇಕ ಬಾರಿ ಅವರನ್ನು ಕೊಲ್ಲಲು ಪ್ರಯತ್ನಿಸಲಾಗುತ್ತದೆ, ಮುಂದೆ ಬದುಕು ಮುಗಿದೇ ಹೋಯಿತೇನೋ ಅನ್ನುವ ಕ್ಷಣಗಳು ಬರುತ್ತವೆ, ಅನಾಯಾಸವಾಗಿ ಬರುವ ಹಣ ಆವರ ಮತಿಗೆಡಿಸುತ್ತದೆ. ಆದರೆ ಅವರು ಅದೆಲ್ಲವನ್ನೂ ಮೀರಿ ನಿಲ್ಲುವ ರೀತಿ ನಿಮ್ಮ ಬದುಕಲ್ಲಿ ಪುಟ್ಟ ಛಲವನ್ನಂತೂ ಹುಟ್ಟಿಸುತ್ತದೆ.
ಸೂಪರ್ 30, ಬಿಹಾರದ ಪಾಟ್ನಾದ ಆನಂದ್ ಕುಮಾರ್ ಎಂಬ ಗಣಿತ ವಿದ್ವಾಂಸ ಮತ್ತು ಮಾಜಿ ಡಿ.ಜಿ.ಪಿ. ಅಭಯಾನಂದ್ ಎಂಬಿಬ್ಬರು ಆರಂಭಿಸಿದ JEE ತರಬೇತಿ ಕೇಂದ್ರ. 2002 ರಲ್ಲಿ ಆರಂಭವಾದ ಈ ಸಂಸ್ಥೆ ಪ್ರತಿ ವರ್ಷವೂ ಮೂವತ್ತು ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತದೆ. ಆ ಯಶೋಗಾಥೆ ಸೂಪರ್ 30 ಸಿನಿಮಾದ ಮೇಲೆ ಬಿಹಾರ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ ಸರ್ಕಾರದ ಕೋರಿಕೆ ಮೇರೆಗೆ ಆನಂದರು ವಾರಾಂತ್ಯಗಳಲ್ಲಿ ಉಚಿತ ತರಗತಿಗಳನ್ನು ನಡೆಸಲು ಒಪ್ಪಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿ, ಲಕ್ಷಾಂತರ ರೂಪಾಯಿ ಹಣ ಪೀಕಿ ನೀಡುವ ಅರ್ಥಹೀನ ಶಿಕ್ಷಣ ಪದ್ಧತಿಯ ನಡುವೆ ಆನಂದರ ಗುರುಕುಲ ಪದ್ಧತಿ ಮಾದರಿಯ ತರಬೇತಿ ನೋಡುಗರ ಚಿಂತನೆಗೆ ಹಚ್ಚುವುದು ಖಚಿತ.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.