ನವದೆಹಲಿ: ಸೋಷಿಯಲ್ ಮೀಡಿಯಾ ಪ್ರೊಫೈಲ್ಗಳಲ್ಲಿ ಬಳಕೆದಾರರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕು ಎಂದು ಭಾರತದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮಂಗಳವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ. ತಮಿಳುನಾಡು ಸರ್ಕಾರದ ಪರವಾಗಿ ಹಾಜರಾದ ಅವರು, ಈ ವಿಷಯದ ಬಗ್ಗೆ ವಿವಿಧ ಹೈಕೋರ್ಟ್ಗಳಲ್ಲಿರುವ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ತರಬೇಕು ಮತ್ತು ಸುಪ್ರೀಂಕೋರ್ಟ್ ಇದನ್ನು ವಿಚಾರಣೆ ನಡೆಸಬೇಕು ಎಂಬ ಫೇಸ್ಬುಕ್ ಮನವಿಯನ್ನು ವಿರೋಧಿಸಿದರು.
ಸಾಮಾಜಿಕ ಮಾಧ್ಯಮದ ಖಾತೆಗಳೊಂದಿಗೆ ಆಧಾರ್ ಲಿಂಕ್ ಮಾಡುವುದರಿಂದ ಭಯೋತ್ಪಾದಕ ಸಂದೇಶಗಳು ಹರಡುವುದನ್ನು, ಅಶ್ಲೀಲ ಚಿತ್ರಗಳು ಮತ್ತು ನಕಲಿ ಸುದ್ದಿಗಳು ಪಸರಿಸುವುದನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದು ವೇಣುಗೋಪಾಲ್ ವಾದಿಸಿದರು.
ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠವು ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ, ಗೂಗಲ್, ಟ್ವಿಟರ್ ಮತ್ತು ಯೂಟ್ಯೂಬ್ಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಫೇಸ್ಬುಕ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು, ಇದು ಅಂತಾರಾಷ್ಟ್ರೀಯ ವಿಷಯವಾಗಿದ್ದು, ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ತೆಗೆದುಕೊಳ್ಳದ ಹೊರತು ಹೈಕೋರ್ಟ್ಗಳು ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು.
ಮದ್ರಾಸ್ ಹೈಕೋರ್ಟ್ನಲ್ಲಿ ವಿಚಾರಣೆಗಳು ಮುಂದುವರಿಯಬಹುದು ಆದರೆ ಅಂತಿಮ ಆದೇಶಗಳನ್ನು ರವಾನಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಾಟ್ಸಾಪ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, “ವಾಟ್ಸಾಪ್ ಜಾಗತಿಕ ಉತ್ಪನ್ನವಾಗಿದೆ. ಯಾವುದೇ ಮಧ್ಯಂತರ ಆದೇಶವು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಅನ್ವಯಿಸುತ್ತದೆ. ವಿವಿಧ ಹೈಕೋರ್ಟ್ಗಳು ವಿಭಿನ್ನ ಆದೇಶಗಳನ್ನು ರವಾನಿಸಲು ಸಾಧ್ಯವಿಲ್ಲದ ಕಾರಣ ಅದನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುವುದು ಸೂಕ್ತ” ಎಂದು ಪ್ರತಿಪಾದಿಸಿದರು.
ಸೋಷಿಯಲ್ ಮೀಡಿಯಾ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದರಿಂದ ಖಾಸಗಿತನಕ್ಕೂ ಧಕ್ಕೆಯಾಗುತ್ತದೆ ಎಂಬ ಅಭಿಪ್ರಾಯಗಳು ಇಲ್ಲಿ ವ್ಯಕ್ತವಾದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.