ಸೋನಿಯಾಗಾಂಧಿ ಅವರು ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress) ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುದ್ದಿ ಎಷ್ಟು ಮಂದಿ ಕಾಂಗ್ರೆಸ್ಸಿಗರಿಗೆ ಸಂತಸ, ಸಮಾಧಾನ ತಂದಿದೆಯೋ ಗೊತ್ತಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದಾಗ ರಾಹುಲ್ಗಾಂಧಿ ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮೇ 25 ರಿಂದ ಆಗಸ್ಟ್ 10 ರವರೆಗೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಅನಾಥವಾಗಿಯೇ ಉಳಿದಿತ್ತು. ರಾಜೀನಾಮೆ ಸಲ್ಲಿಸಿದ ರಾಹುಲ್ ಅವರನ್ನು ಮನವೊಲಿಸಿ ಮತ್ತೆ ಅಧ್ಯಕ್ಷರನ್ನಾಗಿಸುವ ಪ್ರಯತ್ನಗಳೂ ನಡೆದಿದ್ದವು. ಆದರೆ ಯಾವುದೇ, ಯಾರದೇ ಒತ್ತಾಯಕ್ಕೆ ಮಣಿಯದ ರಾಹುಲ್ ತಾನಿನ್ನು ಅಧ್ಯಕ್ಷ ಪದವಿಗೇರುವುದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದರು. ಕೊನೆಗೂ ನೂತನ ಅಧ್ಯಕ್ಷರ ಆಯ್ಕೆಗೆಂದು ಆ. 10 ರಂದು ಸಿಡಬ್ಲ್ಯುಸಿ ಸಭೆ ಸೇರಿದಾಗಲೂ ಅಧ್ಯಕ್ಷರ ಆಯ್ಕೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಸೋನಿಯಾರನ್ನು ಹಂಗಾಮಿಯಾಗಿ ನೇಮಿಸಲು ನಿರ್ಧರಿಸಲಾಯಿತಂತೆ. ಮೊದಲು ಈ ನಿರ್ಧಾರಕ್ಕೆ ಸಮ್ಮತಿಸದಂತೆ ತಲೆಯಾಡಿಸಿದ ಸೋನಿಯಾ ಕೊನೆಗೆ ಒಪ್ಪಿಗೆ ನೀಡಿದರಂತೆ!
ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಆ ಹುದ್ದೆಗೆ ಹಲವು ಹೆಸರುಗಳು ಕೇಳಿಬಂದಿತ್ತು. ಯುವ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಮುಖವಾಗಿ ಕೇಳಿಬಂದ ಹೆಸರುಗಳು. ಕಾಂಗ್ರೆಸ್ಗೆ ಹೊಸ ನಾಯಕತ್ವ ನೀಡಿ, ಅದೊಂದು ಪ್ರಬಲ ಪ್ರತಿಪಕ್ಷವಾಗಿಯಾದರೂ ಕಾರ್ಯನಿರ್ವಹಿಸಲು ಈ ಬದಲಾವಣೆ ಬೇಕಿತ್ತು. ಆದರೆ ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿ ಮತ್ತೆ ಸೋನಿಯಾ ಗಾಂಧಿಯವರನ್ನೇ ಅಧ್ಯಕ್ಷ ಗಾದಿಗೇರಿಸಿದ್ದು ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ನ ಬೌದ್ಧಿಕ ದಿವಾಳಿತನಕ್ಕೂ ಸಾಕ್ಷಿಯಾಗಿದೆ.
70ರ ಸೋನಿಯಾ ಗಾಂಧಿಯವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ಚಿಕಿತ್ಸೆಗಾಗಿ ಆಗಾಗ ವಿದೇಶಕ್ಕೆ ಹೋಗಿ ಬರುತ್ತಲೇ ಇದ್ದಾರೆ. ಅವರಿಗೆ ಏನು ಕಾಯಿಲೆ ಎಂಬುದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಅನಾರೋಗ್ಯದ ಕಾರಣದಿಂದಾಗಿಯೇ ಅಧ್ಯಕ್ಷ ಪದವಿಯನ್ನು ತನ್ನ ಪುತ್ರ ರಾಹುಲ್ಗೆ ವರ್ಗಾಯಿಸಿದ್ದರು. ಮೊನ್ನೆ ಲೋಕಸಭಾ ಚುನಾವಣೆಯಲ್ಲೂ ತನ್ನ ರಾಯ್ಬರೇಲಿ ಕ್ಷೇತ್ರ ಹೊರತುಪಡಿಸಿದರೆ, ಬೇರೆಲ್ಲೂ ಅವರು ಚುನಾವಣಾ ಪ್ರಚಾರಕ್ಕೆ ಸುತ್ತಾಡಲಿಲ್ಲ. ಲೋಕಸಭೆ ಅಧಿವೇಶನಗಳಿಗೆ ತಪ್ಪದೆ ಹಾಜರಾಗುವುದು, ಕಾಂಗ್ರೆಸ್ಗೆ ಸಂಬಂಧಿಸಿದ ಸಭೆ, ಸಮಾರಂಭಗಳಲ್ಲಿ ಉಪಸ್ಥಿತರಿರುವುದನ್ನು ಬಿಟ್ಟರೆ ಪಕ್ಷದ ಸಂಘಟನೆಗಾಗಿ ಪ್ರವಾಸ, ಕಾರ್ಯಕರ್ತರಲ್ಲಿ ಹುರುಪು ತುಂಬುವ ಚಟುವಟಿಕೆಗಳು ಅವರಿಂದ ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ ಮತ್ತೆ ಸೋನಿಯಾರನ್ನೇ ಅಧ್ಯಕ್ಷರನ್ನಾಗಿಸಿದ್ದು ಏಕೆ? ಕಾಂಗ್ರೆಸ್ ಎಂಬ ಆಸ್ತಿ ನೆಹರೂ ವಂಶದಿಂದ ಬೇರ್ಪಟ್ಟು ಅನ್ಯರ ಪಾಲಾಗಬಾರದೆಂಬ ಎಚ್ಚರಿಕೆಯೇ? ನೆಹರು ವಂಶದಿಂದ ಹೊರತಾದ ಹೊರಗಿನವರು ನೇತೃತ್ವ ವಹಿಸಿದರೆ ಕಾಂಗ್ರೆಸ್ ಸದೃಢವಾಗಿ ಬೆಳೆಯಲಾರದೆಂಬ ಅಪನಂಬಿಕೆಯೇ? ಅಥವಾ ಸೋತು ಸುಣ್ಣವಾಗಿರುವ ಕಾಂಗ್ರೆಸ್ಗೆ ಸೋನಿಯಾಗಾಂಧಿ ಮರುಜೀವ ನೀಡಬಲ್ಲರೆಂಬ ಭ್ರಮೆಯೇ? ಇವುಗಳಲ್ಲಿ ಮೊದಲನೆಯದೇ ಕಾರಣ ಇರಬಹುದೆನಿಸುತ್ತದೆ.
ರಾಹುಲ್ ಗಾಂಧಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಸೋಲಿನ ಮೇಲೆ ಸೋಲು ಅನುಭವಿಸಿತು. ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ಕರ್ನಾಟಕ ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಅದು ಹೀನಾಯ ಸೋಲು ಕಂಡಿತು. ಲೋಕಸಭಾ ಚುನಾವಣೆಯಲ್ಲಂತೂ ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡರಾದ ದಿಗ್ವಿಜಯ ಸಿಂಗ್, ಮುನಿಯಪ್ಪ, ವೀರಪ್ಪ ಮೊಯ್ಲಿ ಸೋತಿದ್ದಲ್ಲದೆ ಸ್ವತಃ ರಾಹುಲ್ ಗಾಂಧಿಯವರೇ ಅಮೇಥಿಯಲ್ಲಿ ಸೋಲು ಕಾಣಬೇಕಾಯಿತು. ಕೇರಳದ ವಯನಾಡು ಕ್ಷೇತ್ರದಿಂದ ರ್ಸ್ಪಧಿಸದೇ ಇದ್ದಲ್ಲಿ ರಾಹುಲ್ ಗಾಂಧಿ ಲೋಕಸಭೆಯ ಸದಸ್ಯನಾಗಿಯೇ ಇರುತ್ತಿರಲಿಲ್ಲ. ಪ್ರತಿಪಕ್ಷದ ಸ್ಥಾನ ಅಲಂಕರಿಸುವಷ್ಟು ಸದಸ್ಯ ಬಲವೂ ಕಾಂಗ್ರೆಸ್ಗೆ ಈಗ ಇಲ್ಲ. ಲೋಕಸಭೆಯ ಒಟ್ಟು ಸದಸ್ಯ ಬಲದ ಶೇ. 10 ರಷ್ಟು ಸದಸ್ಯ ಬಲ ಇದ್ದರೆ ಮಾತ್ರ ಪ್ರಬಲ ಪ್ರತಿಪಕ್ಷವೆಂದು ಪರಿಗಣಿಸಬಹುದು. ಈಗಿನ ಒಟ್ಟು ಲೋಕಸಭಾ ಸದಸ್ಯ ಬಲಕ್ಕೆ ಹೋಲಿಸಿದರೆ ಕನಿಷ್ಠ 55 ಮಂದಿಯಾದರೂ ಇದ್ದರೆ ಪ್ರತಿಪಕ್ಷವೆಂದು ಪರಿಗಣಿಸಬಹುದು. ಆದರೆ ಕಾಂಗ್ರೆಸ್ ಗೆದ್ದಿರುವುದು ಕೇವಲ 52 ಸ್ಥಾನಗಳನ್ನು. 354 ಸದಸ್ಯ ಬಲದ (ಅದರಲ್ಲಿ ಬಿಜೆಪಿಯದೇ 303) ಆಡಳಿತಾರೂಢ ಎನ್ಡಿಎ ಪಕ್ಷವನ್ನು ಕೇವಲ 52 ಸದಸ್ಯ ಬಲದ ಕಾಂಗ್ರೆಸ್ ಎದುರಿಸುವುದಾದರೂ ಹೇಗೆ? ಕಾಂಗ್ರೆಸ್ ಮೈತ್ರಿಪಕ್ಷಗಳನ್ನು ಗುಡ್ಡೆ ಹಾಕಿದರೂ ಯುಪಿಎ ಬಲ ಕೇವಲ 93. ಜೊತೆಗೆ ಆಡಳಿತಾರೂಢ ಬಿಜೆಪಿಯ ತಪ್ಪುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಹುಡುಕಿ, ಅದನ್ನು ಅಧಿವೇಶನ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಪ್ರತಿಪಾದಿಸಿ, ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವ ವಾಕ್ಚತುರರೂ ಕಾಂಗ್ರೆಸ್ನಲ್ಲಿ ಇಲ್ಲ. ಕಾಶ್ಮೀರಕ್ಕೆ ಸಂಬಂಧಿಸಿದ 370, 35ಎ ಗಳ ಕುರಿತ ಚರ್ಚೆಯ ಸಂದರ್ಭದಲ್ಲೂ ಸೋನಿಯಾ, ರಾಹುಲ್ ಮೌನವಾಗಿ ಕಮಕ್ಕಿಮಕ್ ಎನ್ನದೆ ಕುಳಿತಿದ್ದನ್ನು ನೋಡಿದರೆ ಇವರದೆಂತಹ ವಿರೋಧ ಪಕ್ಷ ಎಂದು ರೇಜಿಗೆಯಾಗದೆ ಇರದು.
ಈಗ 303 ರಷ್ಟು ಭರ್ಜರಿ, ಮೂರನೇ ಎರಡರಷ್ಟು ಬಹುಮತ ಪಡೆದಿರುವ ಬಿಜೆಪಿ ಕೂಡ ಬಹಳ ಹಿಂದೆ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನಗಳಿಗೆ ಕುಸಿದಿತ್ತು. ಆದರೆ ಆಗ ಬಿಜೆಪಿಯ ಚಟುವಟಿಕೆ, ಹೋರಾಟಗಳಿಗೇನೂ ಕೊರತೆ ಇರಲಿಲ್ಲ. ಅದೇ ಎರಡು ಸ್ಥಾನಗಳ ಹುಲ್ಲುಕಡ್ಡಿ ಹಿಡಿದು ರಾಜಕೀಯ ಸಾಗರದಲ್ಲಿ ಈಜಿ ಈಗ 303 ಸ್ಥಾನಕ್ಕೇರಿದ ಹಿನ್ನಲೆಯಲ್ಲಿ ಬಿಜೆಪಿಯ ಸತತ ಪರಿಶ್ರಮ, ಅಖಂಡ ಹೋರಾಟ, ದಣಿವರಿಯದ ಸಾಧನೆ ಎದ್ದು ಕಾಣುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅಂತಹ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಸಣ್ಣಪುಟ್ಟ ಈಶಾನ್ಯ ರಾಜ್ಯಗಳಲ್ಲೂ ಅದು ಅಧಿಕಾರ ಕಳೆದುಕೊಂಡಿದೆ. ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷವಾಗಿದ್ದರೂ ಸಂಖ್ಯೆಯಲ್ಲಿ ಅತಿ ಕಡಿಮೆಯಿದ್ದ ಜೆಡಿಎಸ್ನೊಂದಿಗೆ ಕೈಜೋಡಿಸಿ, ಜೆಡಿಎಸ್ಗೇ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟು, ಕೊನೆಗೆ ಆ ಅಪವಿತ್ರ ಮೈತ್ರಿ ಒಡೆದು ಹೋಳಾದ ಕಥೆ ಇಡೀ ದೇಶಕ್ಕೇ ಗೊತ್ತು.
ಕಾಂಗ್ರೆಸ್ಗೆ ಇಂತಹ ಹೀನಾಯ ಸೋಲು ಒದಗಿದ್ದಾದರೂ ಏಕೆ? ಹೇಗೆ? ಅವಿರತ ಭ್ರಷ್ಟಾಚಾರ, ದುರಾಡಳಿತಗಳೇ ಕಾರಣವೆಂದು ಮೇಲ್ನೋಟಕ್ಕೆ ಸುಲಭವಾಗಿ ಹೇಳಿಬಿಡಬಹುದು. ಆದರೆ ಕಾಂಗ್ರೆಸ್ನ ಹೀನಾಯ ಸೋಲಿಗೆ ಬೇರೆ ಹಲವು ಕಾರಣಗಳೂ ಇವೆ ಎಂಬುದನ್ನು ಮರೆಯುವಂತಿಲ್ಲ. ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಕಾಂಗ್ರೆಸ್ ವಿರೋಧ, ರಾಮಸೇತುಗೆ ವಿರೋಧ, ತ್ರಿವಳಿ ತಲಾಖ್ ಮಸೂದೆಗೆ ವಿರೋಧ, ಪೌರತ್ವ ತಿದ್ದುಪಡಿ ಮಸೂದೆ ವಿರೋಧ, ಎಂಎಸ್ಎಂಇ ಮಸೂದೆಗೆ ವಿರೋಧ, ರೋಹಿಂಗ್ಯಾ ಜನರನ್ನು ಹೊರಗಟ್ಟುವ ವಿಚಾರದಲ್ಲಿ ವಿರೋಧ, ಜಿಎಸ್ಟಿಗೆ ವಿರೋಧ, ಪಿಎಂ ಕಿಸಾನ್ ಸಮ್ಮಾನ್ನಿಗೆ ವಿರೋಧ, ಎನ್ಆರ್ಸಿ ಮಸೂದೆಗೆ ವಿರೋಧ, ಜಮ್ಮು-ಕಾಶ್ಮೀರದಲ್ಲಿ ಸೈನಿಕ ಕಾಲೊನಿ ನಿರ್ಮಾಣಕ್ಕೆ ವಿರೋಧ, ನಾಗಾ ಒಪ್ಪಂದಕ್ಕೆ ವಿರೋಧ, ಆಧಾರ್ ಓಟರ್ ಐಡಿ ಲಿಂಕಿಂಗ್ಗೆ ವಿರೋಧ, ಸಮಾನ ನಾಗರಿಕ ಸಂಹಿತೆಗೆ ವಿರೋಧ, ನೋಟು ಅಮಾನ್ಯೀಕರಣಕ್ಕೆ ವಿರೋಧ, ರಫೇಲ್ ಒಪ್ಪಂದಕ್ಕೆ ವಿರೋಧ, ನಗರ ನಕ್ಸಲರ ಬಂಧನಕ್ಕೆ ವಿರೋಧ, ‘ಆಯುಷ್ಮಾನ್ ಭಾರತ’ ವಿರೋಧ, ‘ಮೇಕ್ ಇನ್ ಇಂಡಿಯಾ’ಕ್ಕೇ ವಿರೋಧ, ಬೇನಾಮಿ ಆಸ್ತಿ ಮಸೂದೆಗೆ ವಿರೋಧ, ಭೂಸ್ವಾನ ಮಸೂದೆಗೆ ವಿರೋಧ, ಸಿಖ್ ಹತ್ಯೆ ಮರುತನಿಖೆಗೆ ವಿರೋಧ, ಕಾಶ್ಮೀರಕ್ಕೆ ಸಂಬಂಧಿಸಿದ 370, 35 ಎ ವಿಧಿ ರದ್ದತಿಗೆ ವಿರೋಧ, ಜಮ್ಮು-ಕಾಶ್ಮೀರವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರೂಪಿಸಿದ್ದಕ್ಕೆ ವಿರೋಧ, ಬಾಲಕೋಟ್ ಸೈನಿಕ ಕಾರ್ಯಾಚರಣೆಗೆ ವಿರೋಧ… ಹೀಗೆ ದೇಶಹಿತಕ್ಕೆ ಸಂಬಂಧಿಸಿದ, ದೇಶದ ಅಖಂಡತೆ, ಸಮಗ್ರತೆಗೆ ಪೂರಕವಾದ ಎಲ್ಲ ಸಂಗತಿಗಳಿಗೂ ತನ್ನ ವಿರೋಧವನ್ನು ಕಾಂಗ್ರೆಸ್ ವ್ಯಕ್ತಪಡಿಸುತ್ತಲೇ ಬಂದಿದೆ. ದೇಶಪ್ರೇಮಿಗಳಿಗಿಂತ ದೇಶ ವಿರೋಧಿಗಳು, ಸಮಾಜ ಭಂಜಕರೇ ಕಾಂಗ್ರೆಸ್ ಮುಖಂಡರಿಗೆ ಆಪ್ಯಾಯಮಾನರೆನಿಸುತ್ತಾರೆ. ಕಾಂಗ್ರೆಸ್ ಸೋತಿರುವುದೇ ಇಂತಹ ಋಣಾತ್ಮಕ ಚಿಂತನೆಗಳಿಂದ. ತನ್ನ ಋಣಾತ್ಮಕ ಚಿಂತನೆಗಳಿಂದ ದೂರ ಸರಿದು, ಗಟ್ಟಿಯಾದ ಧನಾತ್ಮಕ, ದೇಶಹಿತಕ್ಕೆ ಪೂರಕವಾದ ಚಿಂತನೆಗಳನ್ನು ಈಗಲಾದರೂ ಮೈಗೂಡಿಸಿಕೊಳ್ಳದಿದ್ದರೆ, ಜನಮನದ ನಾಡಿಬಡಿತವನ್ನು ಸರಿಯಾಗಿ ಗಮನಿಸದಿದ್ದರೆ ಕಾಂಗ್ರೆಸ್ ಸೋಲಿನ ಸುಳಿಯಿಂದ ಮತ್ತೆ ಮೇಲೇಳುವುದು ಇನ್ನಷ್ಟು ಕಷ್ಟವೇ ಸರಿ.
ಆದರೆ ದೇಶಕ್ಕೊಂದು ಪ್ರಬಲ ವಿರೋಧ ಪಕ್ಷ ಬೇಕೇಬೇಕು. ಸಮರ್ಥ ವಿರೋಧ ಪಕ್ಷವೊಂದು ಇರದಿದ್ದರೆ ಆಡಳಿತ ಪಕ್ಷ ಅಡ್ಡಹಾದಿ ಹಿಡಿಯುವ ಅಪಾಯ ಇದ್ದೇ ಇರುತ್ತದೆ. ದುರ್ಬಲ ವಿರೋಧ ಪಕ್ಷದ ಕಾರಣದಿಂದಾಗಿ ಆಡಳಿತ ಪಕ್ಷ ಬರಬರುತ್ತಾ ಸರ್ವಾಧಿಕಾರಿಯಾಗಲೂಬಹುದು. ಅದು ಮಾತ್ರ ಪ್ರಜಾತಂತ್ರ ವ್ಯವಸ್ಥೆಗೇ ಅಪಾಯಕಾರಿ. ಕಾಂಗ್ರೆಸ್ ಹೊರತುಪಡಿಸಿದರೆ ಪ್ರಬಲ ಪ್ರತಿಪಕ್ಷವಾಗುವ ಅರ್ಹತೆ, ಯೋಗ್ಯತೆ ಈಗಿನ ಯಾವ ವಿರೋಧ ಪಕ್ಷಗಳಿಗೂ ಇಲ್ಲ. ಆದರೆ ಕಾಂಗ್ರೆಸ್ ಮಾತ್ರ ರಾಜಕೀಯದ ರಸಾತಳಕ್ಕೆ ತಲುಪಿದೆ.
ಸೋನಿಯಾಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷೆಯಾಗಿ ಎಂತಹ ಪರಿವರ್ತನೆ ತರಲಿದ್ದಾರೆ? ಆಕೆ ಹಂಗಾಮಿ ಅಧ್ಯಕ್ಷೆಯೇ? ಅಥವಾ ಪೂರ್ಣಕಾಲೀನ ಅಧ್ಯಕ್ಷೆಯೆ? ‘ಕಾಂಗ್ರೆಸ್ ಸಂಸ್ಕೃತಿ’ಗೆ ಹೊರತಾದ ಹೊಸ ಕಾಂಗ್ರೆಸ್ ಪಕ್ಷವನ್ನು ಅವರು ಕಟ್ಟಿ ಬೆಳೆಸಬಹುದೆ? ಪ್ರಬಲ ಪ್ರತಿಪಕ್ಷವಾಗುವ ಕಸುವನ್ನು ಕಾಂಗ್ರೆಸ್ಗೆ ಸೋನಿಯಾ ತುಂಬಬಹುದೆ?
ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಮೌಲ್ಯದ ಪ್ರಶ್ನೆಗಳಿವು! ಉತ್ತರಿಸಬೇಕಾದವರು ಮಾತ್ರ ಸೋನಿಯಾ ಗಾಂಧಿಯವರೇ.
✍ ದು.ಗು. ಲಕ್ಷ್ಮಣ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.