ಲಂಡನ್ನಗರದ ಹೆಸರು ಕೇಳಿರಬೇಕಲ್ಲ ನೀವು. ಅದು ಇಂಗ್ಲೆಂಡ್ ದೇಶದ ರಾಜಧಾನಿ. ಅಗಲವಾದ ರಸ್ತೆಗಳು, ಎತ್ತರ ಎತ್ತರವಾದ ಕಟ್ಟಡಗಳು, ರಾತ್ರಿಯೆಲ್ಲ ಕಣ್ಸೆಳೆಯುವ ದೀಪಮಾಲೆಗಳು – ಇವುಗಳಿಂದ ಮನಸ್ಸನ್ನು ಸೆಳೆಯುತ್ತದೆ. ಹಲವು ವರ್ಷಗಳ ಹಿಂದೆ ಅದು ಜಗತ್ತಿನ ಒಂದು ವಿಶಾಲ ಸಾಮ್ರಾಜ್ಯದ ರಾಜಧಾನಿ ಎನ್ನಿಸಿಕೊಂಡಿತ್ತು.
ಆ ಲಂಡನ್ನಿನಲ್ಲಿ ಒಂದು ರಸ್ತೆ. ಅದರ ಹೆಸರು ಕ್ರಾಮ್ವೆಲ್ರಸ್ತೆ. ಅಲ್ಲೊಂದು ಮನೆ. ಮನೆಯ ಹೆಸರು “ಭಾರತ ಭವನ”. ಭವನದ ಮಹಡಿಯ ಮೇಲೆ ಒಂದು ಕೋಣೆ.
ಕೋಣೆಯಲ್ಲಿ ಒಂದು ಕಡೆ ಮೇಜಿನ ಮೇಲೆ ಒಂದು ಒಲೆ ಧಗಧಗ ಉರಿಯುತ್ತಿತ್ತು. ಒಲೆಯ ಮೇಲೆ ಒಂದು ಗಾಜಿನ ಪಾತ್ರೆ. ಅದರಲ್ಲಿ ಏನೇನೋ ರಾಸಾಯನಿಕ ವಸ್ತುಗಳು.
ಮೇಜಿನ ಅಕ್ಕಪಕ್ಕದಲ್ಲೇ ಕೆಲವು ಕಪಾಟುಗಳು. ಅವುಗಳಲ್ಲಿ ರಾಸಾಯನಿಕ ವಸ್ತುಗಳು, ಆಮ್ಲಗಳು ತುಂಬಿದ್ದ ಸೀಸೆಗಳಿದ್ದವು. ಅವುಗಳಲ್ಲಿ ರಾಸಾಯನಿಕ ವಸ್ತುಗಳು, ಆಮ್ಲಗಳು ತುಂಬಿದ್ದ ಸೀಸೆಗಳಿದ್ದವು.
ಧಗಧಗ ಉರಿಯುತ್ತಿದ್ದ ಒಲೆಯ ಹತ್ತಿರ ಇಬ್ಬರು ನಿಂತಿದ್ದರು. ಅವರು ಯಾವುದೋ ಮುಖ್ಯ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಅವರ ಗಮನ ಎಲ್ಲೋ ಇತ್ತು.
ಒಲೆ ಮಾತ್ರ ಧಗಧಗ ಉರಿಯುತ್ತಲೇ ಇತ್ತು. ಅದರ ಕಾವು ಕ್ಷಣಕ್ಷಣಕ್ಕೂ ಹೆಚ್ಚುತ್ತಾ ಹೋಯಿತು. ಇನ್ನೂ ಸ್ವಲ್ಪವೇ ಸಮಯ ಬಿಟ್ಟಿದ್ದರೆ ಅದರಲ್ಲಿದ್ದ ರಾಸಾಯನಿಕ ವಸ್ತುಗಳು ಹಾರಿ ಆ ಗಾಜಿನ ಪಾತ್ರೆ ಢಮಾರನೆ ಸಿಡಿದು ಚೂರುಚೂರಾಗುತ್ತಿತ್ತು. ಆ ಶಬ್ದಕ್ಕೆ ಆ ರಸ್ತೆಯವರೆಲ್ಲರೂ ಅಲ್ಲಿಗೆ ಓಡಿಬರುತ್ತಿದ್ದರು. ಪೊಲೀಸರು ಬರುತ್ತಿದ್ದರು. ದೊಡ್ಡ ಅನಾಹುತವಾಗುತ್ತಿತ್ತು.
ಅಷ್ಟರಲ್ಲಿ ಆ ಇಬ್ಬರ ಪೈಕಿ ದೊಡ್ಡವನ ಗಮನ ಅತ್ತ ಹೋಯಿತು. ಅಯ್ಯಯ್ಯೋ! ಅನಾಹುತವಾಗುವುದಲ್ಲ!! ಇನ್ನೇನು ಗತಿ!!! ಕೂಡಲೆ ಏನು ಮಾಡಲು ತೋಚದೆ ಅವರು ಪಾತ್ರೆಯನ್ನು ಕೆಳಗಿಳಿಸಲು ಇಕ್ಕಳ ಹುಡುಕಲಾರಂಭಿಸಿದರು. ಆದರೆ ಗಾಜಿನ ಪಾತ್ರೆಯಲ್ಲಿನ ರಾಸಾಯನಿಕ ವಸ್ತುಗಳು ಕೊತಕೊತ ಕುದಿಯುವುದು ಬಹಳ ಹೆಚ್ಚಾಯಿತು. ಇನ್ನು ಅರ್ಧ ಕ್ಷಣ. ಅಷ್ಟೆ………ದಿಢೀರ್….
ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ ಸರಕ್ಕನೆ ಎರಡೂ ಕೈಗಳಲ್ಲಿ ಆ ಗಾಜಿನ ಪಾತ್ರೆಯನ್ನು ಬಿಗಿಯಾಗಿ ಹಿಡಿದು, ಒಲೆಯ ಮೇಲಿನಿಂದ ಎತ್ತಿ ಕೆಳಕ್ಕೆ ಇಳಿಸಿಬಿಟ್ಟ. ಚುರ್ ಅಂತ ಕೈ ಚರ್ಮ ಸುಟ್ಟುಹೋಯಿತು. ಮಾಂಸ ಸುಟ್ಟ ವಾಸನೆ ಬಂತು ಬುರಬುರ ಬೊಬ್ಬೆಗಳು ಹುಟ್ಟಿಕೊಂಡವು.
ಆ ಕೆಲಸ ಮಾಡುವುದು ಅಷ್ಟ ಸುಲಭವಿರಲಿಲ್ಲ. ಕೆಂಪಗೆ ಚೆನ್ನಾಗಿ ಕಾದಿದ್ದ ಅದನ್ನು ಇಳಿಸುವುದಕ್ಕೆ ಚುರುಕುಬುದ್ಧಿ ಧೈರ್ಯ ಬೇಕಿತ್ತು. ಅವೆಲ್ಲ ಗುಣಗಳಿದ್ದ ಆ ವ್ಯಕ್ತಿ ಆ ಕೆಲಸ ಮಾಡಿದ್ದು ಕಂಡು ಮೊದಲನೆಯವರಿಗೆ ಆನಂದವಾಯಿತು ಆಶ್ಚರ್ಯವಾಯಿತು. “ಶಹಬ್ಬಾಷ್ ಮದನ್ಬಾಯ್ ಶಹಬ್ಬಾಷ್!” ಎಂದು ಮೆಚ್ಚಿಕೊಂಡರು.
ಅವರಿಬ್ಬರೂ ಅಷ್ಟು ತವಕಗೊಂಡಿದ್ದಕ್ಕೆ ಕಾರಣವಿತ್ತು. ಅವರು ಕಾಲೇಜಿನ ಪ್ರಯೋಗಶಾಲೆಯಲ್ಲಿ ಪ್ರಯೋಗ ನಡೆಸುತ್ತಿರಲಿಲ್ಲ. ನಮ್ಮ ಭಾರತವನ್ನು ಬ್ರಿಟಿಷರ ಕೈಯಿಂದ ಬಿಡಿಸುವುದಕ್ಕಾಗಿ ಗುಟ್ಟಾಗಿ ಬಾಂಬು ತಯಾರಿಸುತ್ತಿದ್ದರು. ಅದೂ ಬ್ರಿಟಿಷರ ರಾಜಧಾನಿಯಾಗಿದ್ದ ಲಂಡನ್ ಪಟ್ಟಣದಲ್ಲಿ! ಆಕಸ್ಮಾತ್ಆ ಸುದ್ದಿ ಬ್ರಿಟಿಷ್ಸರಕಾರಕ್ಕೆ ತಿಳಿದಿದ್ದರೆ ಏನಾಗುತ್ತಿತ್ತು ಗೊತ್ತೆ? ಅವರನ್ನು, ಅವರ ಸ್ನೇಹಿತರನ್ನು ಜೈಲಿಗೆ ಕಳಿಸುತ್ತಿದ್ದರು.
ಅಮೃತಸರದ ಆ ಹುಡಗ
ಆ ಇಬ್ಬರು ವ್ಯಕ್ತಿಗಳು ಬಹಳ ದೊಡ್ಡವರು. ಮೊದಲನೆಯವರೇ ಸ್ವಾತಂತ್ರ್ಯವೀರ ಸಾವರಕರ್. ಬ್ರಿಟಿಷರನ್ನು ಹೊರಹಾಕಲು ಸುಮಾರು ಐವತ್ತು ವರ್ಷಗಳ ಕಾಲ ಬಿಡದೆ ಹೋರಾಡಿದ ಹೋರಾಟಗಾರ. ಎರಡನೆಯವನೇ ಮದನಲಾಲ್ಧಿಂಗ್ರ. ಅವನ ಕಥೆಯನ್ನೇ ನಾನೀಗ ನಿಮಗೆ ಹೇಳಲಿರುವುದು.
ಪಂಜಾಬ್ನಮ್ಮ ದೇಶದ ಒಂದು ಪ್ರಾಂತ. ಅಲ್ಲಿ ಐದು ಪವಿತ್ರ ನದಿಗಳು ಹರಿಯುವುದರಿಂದ ಅದಕ್ಕೆ ಆ ಹೆಸರು. “ಪಾಂಚ್ಆಬ್” – ಅಂದರೆ ಐದು ನದಿಗಳು ಎಂದು ಅರ್ಥ.
ಹಿಂದಿನಿಂದಲೂ ಅಲ್ಲಿ ದೊಡ್ಡ ದೊಡ್ಡ ಸಾಧುಗಳು, ವೀರರು, ಶೂರರು ಹುಟ್ಟಿದ್ದಾರೆ. ಅಲ್ಲಿಯ ಜನ ಮಹಾಸಾಹಸಿಗಳು. ಹಿಂದೂ ಧರ್ಮಕ್ಕೆ ಇಸ್ಲಾಂ ಮತದಿಂದ ತೊಂದರೆ ಬಂದಿತ್ತು. ಆಗ, ಸುಮಾರು ೪೫೦ ವರ್ಷಗಳ ಹಿಂದೆ, ಹಿಂದೂ ಧರ್ಮವನ್ನು ಕಾಪಾಡಲು ಸಿಖ್ಸಂಪ್ರದಾಯವನ್ನು ಗುರುನಾನಕ್ ಸ್ಥಾಪಿಸಿದರು. ಅದನ್ನು ರಕ್ಷಣೆ ಮಾಡಲು ಸಿಖ್ಖರ ಹತ್ತನೆ ಗುರು “ಗುರು ಗೋವಿಂದ ಸಿಂಹ್” ಕಾದಾಡಿದ್ದು ಇಲ್ಲಿಯೇ. ಅದಕ್ಕೆ ಅದನ್ನು “ಭಾರತದ ಖಡ್ಗಹಸ್ತ ಎನ್ನುತ್ತಾರೆ.
ಈ ಪಂಜಾಬಿನಲ್ಲಿ ಒಂದು ಊರು ಇದೆ. ಹೆಸರು ಅಮೃತಸರ. ಇಲ್ಲಿ ಸಿಖ್ಖ ಸಂಪ್ರದಾಯದ ಒಂದು ದೊಡ್ಡ ದೇವಾಲಯವಿದೆ. ಅದನ್ನು ಸರೋವರದ ಮಧ್ಯೆ ಕಟ್ಟಿದ್ದು ಮದನಲಾಲ್ಧಿಂಗ್ರ ಹುಟ್ಟಿದ್ದು ಈ ಅಮೃತಸರದಲ್ಲಿ.
ಮದನಲಾಲ್ಧಿಂಗ್ರ ಅವರ ತಂದೆ ಬಹಳ ದೊಡ್ಡ ಸಾಹುಕಾರರು. ಅವರ ಹೆಸರು ಡಾಕ್ಟರ್ ಸಾಹಿಬ್ಡಿತ್ರಾ. ಅಮೃತಸರದಲ್ಲಿ ದೊಡ್ಡ ಡಾಕ್ಟರ್ ಆಗಿದ್ದರು. ಬೇಕಾದಷ್ಟು ಹಣ ಸಂಪಾದಿಸಿ ಖಜಾನೆಯಲ್ಲಿಟ್ಟಿದ್ದರು. ಅವರಿಗೆ ಬ್ರಿಟಿಷರು ಎಂದರೆ ದೇವರನ್ನು ಕಂಡಷ್ಟೆ ಭಕ್ತಿ.
ಅಂತಹ ಮನೆಯಲ್ಲಿ ಧಿಂಗ್ರ ಹುಟ್ಟಿದ. ಅವನಿಗೊಬ್ಬ ಸೋದರನಿದ್ದ. ಅವನು ಡಾಕ್ಟರ್ ಪರೀಕ್ಷೆಗೆ ಓದಲು ಇಂಗ್ಲೆಂಡಿಗೆ ಹೋಗಿ ಅಲ್ಲಿಯೇ ನೆಲೆಸಿಬಿಟ್ಟ. ಅಪ್ಪನಂತೆ ಇವನಿಗೂ ಬ್ರಿಟಿಷರನ್ನು ಬಿಟ್ಟರೆ ಬೇರೆ ದೇವರೇ ಇರಲಿಲ್ಲ.
ಧಿಂಗ್ರ ಹಾಗಲ್ಲ. ಮೊದಲಿನಿಂದಲೂ ಚುರುಕು ಬುದ್ಧಿಯ ಹುಡುಗ. ಮರಕೋತಿ, ಓಡುವ ಪಂದ್ಯಗಳಲ್ಲಿ ಎಷ್ಟು ಮುಂದಿದ್ದನೋ ಓದಿನಲ್ಲೂ ಅಷ್ಟೇ ಮುಂದು.
ಧಿಂಗ್ರ ಲಾಹೋರ್, ಅಮೃತಸರಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ.
ಬಾಲ್ಯದಲ್ಲೇ ಅವನು ಕನಸು ಕಾಣುತ್ತಿದ್ದ. ತಾನು ಚೆನ್ನಾಗಿ ಓದಬೇಕು, ಓದಿ ಪದವೀಧರನಾಗಬೇಕು, ಹೇಗಾದರೂ ಮಾಡಿ ಇಂಗ್ಲೆಂಡಿಗೆ ಹೋಗಿ ಎಂಜಿನಿಯರ್ ಆಗಬೇಕು ಎಂದು ನಿರ್ಧಾರ ಮಾಡಿಬಿಟ್ಟಿದ್ದ.
ಆದರೆ ಅಪ್ಪನ ಹತ್ತಿರ ಹಣವನ್ನು ಬೇಡುವುದು ಅವನಿಗೆ ಇಷ್ಟವೇ ಇರಲಿಲ್ಲ. ಆದ್ದರಿಂದ ತಾನೇ ಕೆಲಸ ಮಾಡಿ ಸಂಪಾದಿಸಿ ವಿದೇಶಕ್ಕೆ ಹೋಗುವುದೆಂದು ಹಟ ತೊಟ್ಟ.
ಆ ವೇಳೆಗೆ ಅವನಿಗೆ ಮದುವೆಯೂ ಆಗಿತ್ತು. ಒಂದು ಗಂಡು ಮಗು ಹುಟ್ಟಿತ್ತು.
ಧಿಂಗ್ರ ಕಾಶ್ಮೀರಕ್ಕೆ ಹೋದ. ಅಲ್ಲಿನ ಒಂದು ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡಿದ. ಸಿಮ್ಲಾ, ಕೊಲ್ಕಾಟಾಂಗಾ ಸರ್ವೀಸ್ನಲ್ಲಿ ಕೆಲದಿವಸ ಕೆಲಸ ಮಾಡಿದ. ಇದರಿಂದ ತಾನು ಇಂಗ್ಲೆಂಡಿಗೆ ಹೋಗಿ ದೊಡ್ಡ ಎಂಜಿನಿಯರ್ ಆಗಲು ಬೇಕಾದ ಹಣ ಕೂಡಿಸಿದ್ದು ಆಯಿತು.
ಹಡಗು ಹೊರಟಿತು
ತಂದೆಗೆ ಇಷ್ಟವಿಲ್ಲದಿದ್ದರೂ ಧಿಂಗ್ರ ೧೯೦೬ನೆ ಇಸವಿ ಜುಲೈ ತಿಂಗಳಲ್ಲಿ ಇಂಗ್ಲೆಂಡಿಗೆ ಹೋಗುತ್ತಿದ್ದ ಹಡಗು ಹತ್ತಿದ. ಆ ಹಡಗು ಅನೇಕ ದಿನಗಳ ಕಾಲ ಸಮುದ್ರದಲ್ಲಿ ಪ್ರಯಾಣಿಸುತ್ತ ಕೊನೆಗೆ ಇಂಗ್ಲೆಂಡ್ ತಲುಪಿತು. ಅಕ್ಟೋಬರ್ ತಿಂಗಳಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯಕ್ಕೆ ಸೇರಿದ ಧಿಂಗ್ರ.
ಇಂಗ್ಲೆಂಡಿಗೆ ಬಂದದ್ದೇ ತಡ ಧಿಂಗ್ರನಿಗೆ ಆನಂದವಾಯಿತು. ಅನೇಕ ದಿನ ಪಂಜರದಲ್ಲಿ ಕೂಡಿಟ್ಟ ಪಕ್ಷಿಯನ್ನು ಇದ್ದಕ್ಕಿದ್ದಂತೆ ಬಿಟ್ಟುಬಿಟ್ಟರೆ ಅದು ಪಂಜರದಿಂದ ನೇರವಾಗಿ ಮೇಲೆ ಮೇಲಕ್ಕೆ ಹಾರಿ ಹೋಗುತ್ತದೆ. ಬಂಧನ ಕಳೆಯಿತಲ್ಲ. ಸ್ವತಂತ್ರವಾದೆನಲ್ಲ ಎಂದು ಬಹಳ ಆನಂದ ಪಡುತ್ತದೆ. ಹಾಗೆಯೇ ಧಿಂಗ್ರನಿಗೂ ಆನಂದವಾಯಿತು. ಬೆಲೆಬಾಳುವ ಮಿರಮಿರಗುವ ಸೂಟುಗಳನ್ನು ಹಾಕಿಕೊಂಡು ಶೋಕಿಯಾಗಿ ಸ್ನೋ, ಪೌಡರ್, ಸೆಂಟ್ಗಳನ್ನು ಬಳಿದುಕೊಂಡು ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತು ತೀಡಿತೀಡಿ ತಲೆಬಾಚಿ, ಲಂಡನ್ನಿನ ರಸ್ತೆಗಳಲ್ಲಿ ಸಂಜೆಯ ವೇಳೆ ವಾಕಿಂಗ್ ಹೋಗುವುದು ಅವನಿಗೆ ಪರಮಾನಂದ. ಗೆಳೆಯ ಗೆಳತಿಯರನ್ನು ಗುಂಪು ಕಟ್ಟಿಕೊಂಡು ಅವರೊಂದಿಗೆ ಕುಣಿದಾಡುತ್ತಿದ್ದ.
ಭಾರತ ಭವನ
ಆ ವೇಳೆಗೆ ಮಹಾರಾಷ್ಟ್ರದಿಂದ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ್ ಇಂಗ್ಲೆಂಡಿಗೆ ಬಂದಿದ್ದರು. ವಕೀಲಿ ಪರೀಕ್ಷೆಗಾಗಿ ಅಲ್ಲಿಗೆ ಹೋಗಿದ್ದರೂ ನಿಜವಾಗಿಯೂ ಅವರು ಮಾಡುತ್ತಿದ್ದ ಕೆಲಸವೇ ಬೇರೆ. ಅವರು “ಭಾರತ ಭವನ”ವನ್ನು ಸ್ಥಾಪಿಸಿದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ಇಂಗ್ಲೆಂಡಿಗೆ ಬರುತ್ತಿದ್ದ ತರುಣರನ್ನು ಅಲ್ಲಿ ಒಂದು ಗೂಡಿಸುತ್ತಿದ್ದರು. ಅವರಿಗೆ ನಮ್ಮ ದೇಶದ ಕೆಟ್ಟ ಸ್ಥಿತಿಯನ್ನು ವಿವರಿಸಿ ಹೇಳುತ್ತಿದ್ದರು. “ನಮ್ಮ ತಾಯಿ ಭಾರತಮಾತೆ ಪರದೇಶದ ಬ್ರಿಟಿಷರ ಬೂಟುಕಾಲಿಗೆ ಸಿಕ್ಕಿಹಾಕಿಕೊಂಡಿದ್ದಾಳೆ, ವಿಲವಿಲನೆ ಒದ್ದಾಡುತ್ತಿದ್ದಾಳೆ. ಆ ರಾಕ್ಷಸರ ಹಿಡಿತದಿಂದ ತಾಯಿಯನ್ನು ಬಿಡುಗಡೆ ಮಾಡುವುದು ಎಲ್ಲ ಮಕ್ಕಳ ಕರ್ತವ್ಯ. ನಾವೆಲ್ಲರೂ ಹಾಗೆ ಪ್ರಯತ್ನಿಸಿದರೆ ನಮ್ಮ ತಾಯಿನಾಡಿಗೆ ಸ್ವಾತಂತ್ರ್ಯ ಸಿಕ್ಕೇಸಿಕ್ಕುವುದು. ಆದರೆ ನಾವು ಯಾವುದೇ ಕೆಲಸ ಮಾಡಲು ಬದ್ಧರಾಗಬೇಕು. ಪ್ರಾಣ ಕೊಡಬೇಕಾಗಿ ಬಂದರೂ ಕೊಡಬೇಕು” ಎಂದು ಹೇಳಿ ಆ ತರುಣರ ಹೃದಯಗಳಲ್ಲಿ ದೇಶಪ್ರೇಮವನ್ನು ತುಂಬುತ್ತಿದ್ದರು. ದೊಡ್ಡ ವೀರರನ್ನಾಗಿ ಮಾಡುತ್ತಿದ್ದರು.
ಧಿಂಗ್ರ ಲಂಡನ್ನಿನ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾಗ ಅವನಿಗೆ ಭಾರತ ಭವನದ ಸುದ್ದಿ ತಿಳಿಯಿತು.
ಒಂದು ದಿನ ಭಾರತ ಭವನಕ್ಕೆ ಅವನು ಬಂದ. ಅಲ್ಲಿ ಸಾವರಕರ ಭಾಷಣ ನಡೆಯುತ್ತಿತ್ತು. ಅನೇಕ ತರುಣರು ಕೇಳುತ್ತಾ ಕುಳಿತಿದ್ದರು. ಸಾವರಕರ್ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಅಲ್ಲಿದವರೆಲ್ಲರೂ ಗಮನವಿಟ್ಟು ಅದನ್ನು ಕೇಳುತ್ತಿದ್ದರು. ಆ ಭಾಷಣದಲ್ಲಿ ನಮ್ಮ ದೇಶದ ಘೋರ ಸ್ಥಿತಿಯ ವರ್ಣನೆ ಇತ್ತು. ಕೇಳುತ್ತಾ ಕೇಳುತ್ತಾ ಧಿಂಗ್ರನ ರಕ್ತ ಕುತಕುತ ಕುದಿಯಲಾರಂಭಿಸಿತು. ಮನಸ್ಸಿನಲ್ಲಿ ಭಾವನೆಗಳು ಉಕ್ಕಿ ಬರಲಾರಂಭಿಸಿದವು. ಅವನ್ನು ತಡೆಯುವುದು ಬಹಳ ಕಷ್ಟವಾಗಿತ್ತು.
ಅಂದಿನಿಂದ ಧಿಂಗ್ರನಿಗೆ ಸಾವರಕರರನ್ನು ಕಂಡರೆ ಬಹಳ ಭಕ್ತಿ, ಅವರಲ್ಲಿ ಪೂಜ್ಯಭಾವನೆ. ಅವರ ಭಾಷಣ ಅಂದರೆ ಎಲ್ಲಿಲ್ಲದ ಆಸಕ್ತಿ. ಅವರ ಮಾತು ಅಂದರೆ ವೇದವಾಕ್ಯ.
ಸಾವರಕರರು ೧೯೦೮ರ ಮೇ ತಿಂಗಳಲ್ಲಿ ಲಂಡನ್ನಿನಲ್ಲಿ ಬಹು ದೊಡ್ಡ ಕಾರ್ಯಕ್ರಮ ನಡೆಸಿದರು. ೧೮೫೭ರಲ್ಲಿ ಬ್ರಿಟಿಷರ ವಿರುದ್ಧ ಭಾರತದಲ್ಲಿ ಹೋರಾಟ ನಡೆಯಿತು. ಭಾರತದ ಈ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುವರ್ಣ ಮಹೋತ್ಸವದ ಆಚರಣೆಯನ್ನು ಸಾವರಕರ್ ಏರ್ಪಡಿಸಿದರು. ಈ ಕಾರ್ಯಕ್ರಮದ ಮೂಲಕ ಅಲ್ಲಿದ್ದ ಭಾರತೀಯ ತರುಣರಲ್ಲಿ ದೇಶಭಕ್ತಿಯನ್ನು ಉಕ್ಕಿಸಿದರು, ಸ್ಪೂರ್ತಿ ತುಂಬಿದರು.
ಲಂಡನ್ನಿನಲ್ಲಿದ್ದ ಭಾರತದ ತರುಣರೆಲ್ಲ ವಿಜೃಂಭಣೆಯಿಂದ ಆ ದಿನವನ್ನು ಆಚರಿಸಿದರು. ತರುಣ ವಿದ್ಯಾರ್ಥಿಗಳು ತಮ್ಮ ಎದೆಯ ಮೇಲೆ ೧೮೫೭ರ “ಸ್ಮೃತಿಮುದ್ರೆ”ಯ ಬ್ಯಾಡ್ಜ್ಗಳನ್ನು ಧರಿಸಿ ಕಾಲೇಜುಗಳಿಗೆ ಹೋದರು.
ಇದನ್ನು ಕಂಡು ಅನೇಕ ಬ್ರಿಟಿಷರಿಗೆ ಕೋಪ ನೆತ್ತಿಗೇರುತ್ತಿತ್ತು.
ಆಗಿನ ಕಾಲದಲ್ಲಿ ಬ್ರಿಟಿಷರಿಗೆ ತಮ್ಮ ಸಾಮ್ರಾಜ್ಯ ಎಂದರೆ ಬಹು ಹೆಮ್ಮೆ. ತಾವು ಆಳುವುದಕ್ಕೇ ಹುಟ್ಟಿದವರು, ಭಾರತೀಯರಿಗೆ ತಮ್ಮ ದೇಶವನ್ನು ಆಳಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಅವರ ಭಾವನೆ. ಅವರಲ್ಲಿಯೂ ಹಲವರು ಯೋಗ್ಯರು ಇದ್ದರು. ಭಾರತದ ಬಗ್ಗೆ ಸಹಾನುಭೂತಿ ಉಳ್ಳವರೂ ಇದ್ದರು. ಆದರೆ ಬಹುಮಂದಿಗೆ ತಾವು ಶ್ರೇಷ್ಠಪಂಕ್ತಿಯವರು, ಭಾರತೀಯರಿಗೆ ದಾರಿ ತೋರಿಸುವವರು ಎಂಬ ಕೆಟ್ಟ ಅಹಂಕಾರವಿತ್ತು. ಅವರ ದೇಶದಲ್ಲಿಯೇ, ಅವರ ರಾಜಧಾನಿಯಲ್ಲಿಯೆ, ಅವರ ಕಣ್ಣಿನ ಎದುರಿಗೆ ಅವರ ವಿರುದ್ಧವಾಗಿ ೧೮೫೭ರಲ್ಲಿ ನಡೆದ ಹೋರಾಟವನ್ನು ನೆನಪಿಗೆ ತರುವ “ಬ್ಯಾಡ್ಜ್”ಗಳು! ಹಲವು ಬ್ರಿಟಿಷರ ರಕ್ತ ಕುದಿಯಿತು.
ಧಿಂಗ್ರ ಶಿಸ್ತಾಗಿ ಬಟ್ಟೆ ಧರಿಸಿ, ಕೋಟಿನ ಎದೆಯ ಮೇಲೆ ಎದ್ದು ಕಾಣುವಂತೆ ಬ್ಯಾಡ್ಜ್ ಧರಿಸಿದ್ದ. ಎದೆಯನ್ನು ಉಬ್ಬಿಸಿಕೊಂಡು ಕಾಲೇಜಿನ ಕಡೆಗೆ ಬಂದ. ಎಲ್ಲರ ಕಣ್ಣುಗಳಿಗೂ ಕುಕ್ಕುವಂತೆ ಓಡಾಡುತ್ತಿದ್ದ.
ಧಿಂಗ್ರನ ಗೆಳೆಯ ಆಂಗ್ಲ ವಿದ್ಯಾರ್ಥಿ ಒಬ್ಬ ಇದನ್ನು ಕಂಡ. ಅವನಿಗೆ ಹೊಟ್ಟೆಯಲ್ಲಿ ಸಾಸಿವೆ ಅರೆದಂತಾಯಿತು. ನೇರವಾಗಿ ಧಿಂಗ್ರನ ಬಳಿಗೆ ಬಂದ. ಅವನ ಎದೆಯ ಮೇಲಿದ್ದ ಮುದ್ರೆಯನ್ನು ಕಿತ್ತುಹಾಕಲು ಕೈ ಹಾಕಿದ, ಅಷ್ಟೆ. ಸರಕ್ಕನೆ “ಫಟೀರ್ ಫಟೀರ್” ಎಂದು ಎರಡು ಥಪರಾಕು ಬಿಟ್ಟ ಧಿಂಗ್ರ! ಅವನನ್ನು ಧೊಪಕ್ಕನೆ ನೆಲದ ಮೇಲೆ ಕುಕ್ಕಿದ. ಎದೆಯ ಮೇಲೆ ಕುಳಿತು ಜೇಬಿನಿಂದ ಚೂಪಾದ ಚೂರಿಯನ್ನು ಹೊರತೆಗೆದ. “ನನ್ನ ದೇಶದ ಗೌರವದ ಚಿಹ್ನೆಗೆ ಕೈ ಹಾಕ್ತಿಯಾ!” ಎಂದು ಅಬ್ಬರಿಸುತ್ತ ಫಳಫಳ ಹೊಳೆಯುತ್ತಿದ್ದ ಚೂರಿಯನ್ನು ತೋರಿಸಿದ. ಪಾಪ! ಆ ಆಂಗ್ಲ ಬಡಪಾಯಿ “ಕುಯ್ಯೋ, ಮರ್ರೋ” ಎಂದು ಕಿರುಚಿಕೊಂಡ. “ನಿನ್ನ ದಮ್ಮಯ್ಯಾ, ಬಿಟ್ಟುಬಿಡಪ್ಪ. ಇನ್ನೊಂದ್ಸರಿ ನಿನ್ತಂಟೆಗೆ ಬಂದ್ರೆ ಆಗ ಕೇಳು” ಎಂದು ಕಾಲಿಗೆ ಬಿದ್ದು ಬಿಡಿಸಿಕೊಂಡು ಹಿಂದೆಯೂ ನೋಡದೆ ಗಾಡಿಬಿಟ್ಟ!
ಅಂಗೈಯಲ್ಲಿ ಸೂಜಿ ಚುಚ್ಚಿದರು
ಧಿಂಗ್ರನದು ಕಷ್ಟವನ್ನು, ನೋವನ್ನು ಸಹಿಸುವ ಗಟ್ಟಿ ಮನಸ್ಸು. ಅವನಿಗೆ ಕಾಡು ಹರಟೆ ಹೊಡೆಯುವುದು, ಸುಮ್ಮಸುಮ್ಮನೆ ಚರ್ಚೆ ಮಾಡುವುದು ಕಂಡರೆ ಆಗದು. ಏನಾದರೂ ಕೆಲಸ ಮಾಡಬೇಕೆ? ಹಾಗಾದರೆ ನಾನು ಸಿದ್ಧ ಎನ್ನುತ್ತಿದ್ದ.
ಒಂದು ದಿನ ಭಾರತ ಭವನದಲ್ಲಿ ಸ್ನೇಹಿತರೆಲ್ಲ ಸೇರಿದ್ದರು. ಮಾತುಕತೆ ನಡೆಯುತ್ತಿತ್ತು. ಜಪಾನ್ದೇಶದವರು ಎಷ್ಟು ಸಾಹಸಿಗಳು, ಕಷ್ಟವನ್ನು ಸಹಿಸಿಕೊಳ್ಳುವವರು, ಧೈರ್ಯಸ್ಥರು ಎಂದು ಎಲ್ಲರೂ ಹೇಳುತ್ತಿದ್ದರು.
ಧಿಂಗ್ರನಿಗೆ ಈ ಪೊಳ್ಳುಹರಟೆ ಸ್ವಲ್ಪವೂ ಹಿಡಿಸಲಿಲ್ಲ. “ಆಹಾಹ! ಏನೂ ಹೊಗಳ್ತೀರಪ್ಪ, ಹಿಂದುಗಳಾದ ನಮ್ಮ ಸಾಹಸ ಪರಾಕ್ರಮಗಳೇನು ಕಡಿಮೇಯೇ? ಅವಕಾಶ ಬರಲಿ ನೋಡುತ್ತಿರಿ, ನಮ್ಮ ಹಿಂದುಗಳ ಬಗ್ಗೆ ಪ್ರಪಂಚವೇ ಮೆಚ್ಚಬೇಕು ಗೊತ್ತಾ!” ಎಂದು ಧಿಂಗ್ರ.
ಧಿಂಗ್ರ ಎಂದರೆ ಅನೇಕರಿಗೆ “ಇವನು ಬರೀ ಶೋಕಿ ಮಾಡೋದಕ್ಕಷ್ಟೆ ಸರಿ” ಎಂಬ ಭಾವನೆ ಇತ್ತು. ಆದ್ದರಿಂದ ಅವನ ಮಾತು ಕೇಳಿ ಅವರು ಗೊಳ್ಳೆಂದು ನಕ್ಕರು.
“ನಮಗೆ ಗೊತ್ತಿಲ್ಲವೆ! ನಮ್ಮ ಉತ್ತರನ ಪೌರುಷವೆಲ್ಲ ಒಲೆ ಮುಂದೇನೆ” ಎಂದು ಕುಚೋದ್ಯ ಮಾಡಿದರು.
ಇದಕ್ಕೆ ಧಿಂಗ್ರ ಒಪ್ಪಲಿಲ್ಲ. ಆ ತರುಣರು ಗೇಲಿ ಮಾಡುವುದನ್ನು ಬಿಡಲಿಲ್ಲ. ಛಲ ಬೆಳೆಯಿತು. ಹಾಗಾದರೆ ಪರೀಕ್ಷೆ ಮಾಡಿಯೇ ಬಿಡೋಣ ಎಂದರು ಗೆಳೆಯರು. “ಸೈ” ಎಂದು ಧಿಂಗ್ರ.
ಒಬ್ಬ ತರುಣ ಮಿರಮಿರ ಮಿರುಗುತ್ತಿದ್ದ ಉದ್ದನೆಯ ಒಂದು ಸೂಜಿ ತಂದ. ತನ್ನ ಕೈಯನ್ನು ಅಲ್ಲಿದ್ದ ಮೇಜಿನ ಮೇಲಿಟ್ಟ.
ಎಲ್ಲ ತರುಣರು ಇವನ ಕೈ ಕಡೆಗೇ ನೋಡುತ್ತಿದ್ದರು. ಆ ತರುಣ ಸೂಜಿಯನ್ನು ಧಿಂಗ್ರನ ಅಂಗ್ಯ ಮೇಲಿಟ್ಟು ಮೆಲ್ಲನೆ ಅಮುಕತೊಡಗಿದ. ಸುಜಿ ಅಂಗಯಯೊಳಗೆ ಇಳಿಯಲಾರಂಭಿಸಿತು. ಧಿಂಗ್ರ ಕೈ ಹಾಗೆ ಇಟ್ಟುಕೊಂಡಿದ್ದ. ಕಿಮಕ್ಕಮಿಕ್ಅನ್ನಲಿಲ್ಲ. ಆ ತರುಣ ಇನ್ನಷ್ಟು ಶಕ್ತಿ ಬಿಟ್ಟು ಒತ್ತಿದ. ಸೂಜಿ ಅಂಗೈ ದಾಟಿ ಮೇಜಿನ ಹಲಗೆಯೊಳಕ್ಕೆ ನುಗ್ಗಿತು. ಬಹಳ ನೋವಾಗುತ್ತಿತ್ತು. ರಕ್ತ ಚಿಮ್ಮಿ ಬರುತ್ತಿತ್ತು. ಇಷ್ಟೆಲ್ಲ ಆದರೂ ಧಿಂಗ್ರ ಕಲ್ಲು ಕಂಬದಂತೆ ನಿಂತಿದ್ದ. ಆನಂತ ಸೂಜಿಯನ್ನು ಹೊರತೆಗೆಯಲಾಯಿತು. ಏನೂ ಆಗಲೇ ಇಲ್ಲವೇನೋ ಎನ್ನುವಂತೆ ಧಿಂಗ್ರ ಎಂದಿನಂತೆ ನಗುತ್ತಲೇ ಇದ್ದ!
ಇಷ್ಟೆಲ್ಲಾ ಆದರೂ ಧಿಂಗ್ರ ವಿಚಿತ್ರ ಮನುಷ್ಯ! ಯಾವಾಗಲೂ ಹಾಸ್ಯ ಮಾಡುತ್ತಾ ಯಾರದಾರನ್ನು ರೇಗಿಸುತ್ತಾ ಇರುತ್ತಿದ್ದ. ಭಾರತ ಭವನಕ್ಕೆ ಹೋದ ಸಾವರಕರ್ ಭಾಷಣ ಬಿಟ್ಟು ಬೇರೆ ಯಾರ ಭಾಷಣವನ್ನು ಕೇಳುತ್ತಿರಲಿಲ್ಲ.
ಒಂದು ದಿನ ಸಂಜೆ ಧಿಂಗ್ರ ಭಾರತ ಭವನಕ್ಕೆ ಬಂದ. ಒಳಕೋಣೆಯಲ್ಲಿ ಗಂಭೀರವಾದ ಸಭೆ ನಡೆಯುತ್ತಿತ್ತು. ಧಿಂಗ್ರನಿಗೆ ಸಭೆಗೆ ಹೋಗಲು ಇಷ್ಟವಿರಲಿಲ್ಲ. ಹಾಗಾದರೆ ಇನ್ನೇನು ಮಾಡುವುದು ಎಂದು ಯೋಚಿಸಿದ. ತಟ್ಟಕ್ಕನೆ ಏನೋ ಹೊಳೆಯಿತು. ಕೂಡಲೆ ಒಳಗಿನಿಂದ ಒಂದು ಗ್ರಾಮಫೋನ್ತಂದ. ರಸ್ತೆಯ ಕಡೆಗಿದ್ದ ಕಿಟಕಿಯಲ್ಲಿ ಅದನ್ನು ಇಟ್ಟು ಹಾಡುವಂತೆ ಮಾಡಿದ. ಗ್ರಾಮಾಫೋನ್ತಿರುಗುತ್ತ ಹಾಡು ಹೇಳಲಾರಂಭಿಸಿತು. ಕಿಟಕಿಯಾಚೆ ಅನೇಕ ಹುಡುಗಿಯರು ಬಂದು ಸೇರಿ ಹಾಡಿಗೆ ಸರಿಯಾಗಿ ತಳಹಾಕಿ ಕುಣಿಯಲಾರಂಭಿಸಿದರು. ಅವರ ಜೊತೆಯಲ್ಲಿ ಇವನೂ ಶಿಳ್ಳೆ ಹಾಕಲಾರಂಭಿಸಿದ. ಗದ್ದಲವೋ ಗದ್ದಲ!
ಒಳಗಡೆ ಸಭೆ ನಡೆಯುತ್ತಿತ್ತಲ್ಲ. ಸಭೆಗೆ ಇದರಿಂದ ತೊಂದರೆ ಉಂಟಾಯಿತು. ಸಾವರಕರ್ ಸಭೆಯಿಂದ ಹೊರಬಂದು ನೊಡುತ್ತಾರೆ. ಅಲ್ಲಿ ಧಿಂಗ್ರ. ಸಾವರಕರರಿಗೆ ಧಿಂಗ್ರನನ್ನು ಚೆನ್ನಾಗಿ ಚಚ್ಚಿಬಿಡುವಷ್ಟು ಕೋಪ ಉಕ್ಕಿಬಂತು. “ಏಯ್ಮದನ್!” ಎಂದು ಅಬ್ಬರಿಸಿದರು. ಧಿಂಗ್ರ ಬೆಚ್ಚಿಬಿದ್ದು ಹಿಂದೆ ನೋಡಿದ.”ನಿಲ್ಲಿಸು ನಿನ್ನ ಹಾಡು!” ಅಂದರು ಸಾವರಕರ್. ತಟಕ್ಕನೆ ಗ್ರಾಮಾಫೋನ್ನಿಲ್ಲಿಸಿದ ಧಿಂಗ್ರ. ಸಾವರಕರ್ ಕಣ್ಣಿನಲ್ಲಿ ಕೆಂಡ ಕಾರುತ್ತಿತ್ತು. “ಏನಯ್ಯಾ ಮದನ್, ನಾಚಿಕೆ ಆಗೋಲ್ವೇನಯ್ಯಾ ನಿನಗೆ? ಒಳಗೆ ಸಭೆ ನಡೆಯುತ್ತಿದೆ. ಚಕ್ಕರ್ ಹೊಡೆದು ಇಲ್ಲಿ ಚಕ್ಕಂದ ಆಡುತ್ತಿದ್ದಿಯಾ? ಛಿ! ಛಿ! ಬಾಯಲ್ಲಿ ಹೇಳೋದು ಹೋರಾಟ, ಬಲಿದಾನ ಎಂದು, ಮಾಡೋದು ಈ ರೀತಿ” ಎಂದು ಚೆನ್ನಾಗಿ ಪೂಜೆ ಮಾಡಿದರು! ಧಿಂಗ್ರ ತಲೆ ತಗ್ಗಿಸಿಕೊಂಡು ಅಲ್ಲಿಂದ ಹೊರಟುಹೋದ.
ಒಂದು ದಿನ ಆಯಿತು. ಎರಡು ದಿನಗಳಾದವು. ಭಾರತ ಭವನದ ಕಡೆಗೆ ಧಿಂಗ್ರ ಬರಲೇ ಇಲ್ಲ. ಬಹುಶಃ ಅವನಿಗೆ ಕೋಪ ಅವನಿಗೆ ಬಹಳ ಕೋಪ ಬಂದಿರಬೇಕು. ತನ್ನನ್ನು ಬೇಜವಾಬ್ದಾರಿಯವನು ಎಂದು ಎಲ್ಲರೂ ತಿಳಿದುಕೊಂಡಿದ್ದು ಅವಮಾನವಾಗಿರಬೇಕು. ಧಿಂಗ್ರ ಎಲ್ಲಿ ಹೋದ? ಎಷ್ಟು ದಿನ ಏಕೆ ಬರಲಿಲ್ಲ? ಎಂದು ಸಾವರಕರ್ ಚಿಂತಿಸುತ್ತಿದ್ದರು.
ದೊಡ್ಡ ಘಟನೆಗೆ ಸಿದ್ಧತೆ
ಒಂದು ಸಂಜೆ ಇದ್ದಕ್ಕಿದ್ದಂತೆ ಸಾವರಕರ್ ಮುಂದೆ ಬಂದು ಗಕ್ಕನೆ ನಿಂತ. ಸುತ್ತಲು ಯಾರೂ ಇರಲಿಲ್ಲ. ಸಾವರಕರನ್ನೇ ನೇರವಾಗಿ ನೆಟ್ಟದೃಷ್ಟಿಯಿಂದ ನೋಡುತ್ತ ಒಂದು ಪ್ರಶ್ನೆ ಕೇಳಿದ, “ಸಾವರಕರ್ಜಿ, ನೀವು ಹೇಳಿ, ನಾನು ಬಲಿದಾನ ನೀಡಬೇಕಾದ ಸಮಯ ಬಂದಿದೆಯೇ?”
“ಮದನ್ಭಾಯ್, ಬಲಿದಾನ ಮಾಡುವವವನ ಮನಸ್ಸಿನಲ್ಲಿ ಆ ಭಾವನೆ ಬಂದಿದ್ದರೆ ಬಲಿದಾನದ ಸಮಯ ಬಂದಿದೆ ಎಂದೇ ಅದರ ಅರ್ಥ!”
“ಹಾಗಾದರೆ ಸಾವರಕರ್ ಜಿ, ನಾನು ಸಿದ್ಧವಾಗಿದ್ದೇನೆ!” ಎಂದು ಧಿಂಗ್ರ ಉತ್ತರಿಸಿದ.
ಕೂಡಲೆ ಸಾವರಕರ್ ಧಿಂಗ್ರನನ್ನು ತಮ್ಮ ಕೋನೆಗೆ ಕರೆದೊಯ್ದರು. ಬಹಳ ಹೊತ್ತು ಮಾತುಕತೆ ನಡೆಯಿತು. ಧಿಂಗ್ರನ ಜೀವನದಲ್ಲಿ ಒಂದು ಬಹಳ ದೊಡ್ಡ ಘಟನೆಗೆ ಸಿದ್ಧತೆಗಳು ಆರಂಭವಾದವು.
ಆಗ ಭಾರತದಲ್ಲಿ ದಿನ ಬೆಳಗಾದರೆ ಹೋರಾಟ ನಡೆಯುತ್ತಲೇ ಇತ್ತು. ಪ್ರತಿದಿನ ಜನರಿಂದ ಮೆರವಣಿಗೆ, ಸರ್ಕಾರದ ಪೋಲೀಸನವರಿಂದ ಲಾಠಿಛಾರ್ಜು, ಗೋಲೀಬಾರ್ ನಡೆಯುತ್ತಲೇ ಇತ್ತು. ಬ್ರಿಟಿಷರಿಗೆ ಭಾರತ ತಮ್ಮ ಮುಷ್ಟಿಯಲ್ಲೇ ಇರಬೆಕು ಎಂದು ಆಸೆ. ಇಲ್ಲಿನ ಖನಿಜ, ಹತ್ತಿ ಉಪಯೋಗಿಸಿ, ಸಾಮಾನುಗಳನ್ನು ಮಾರಿ ಹಣ ಮಾಡುವರು. ತಮ್ಮ ಜನರಿಗೆ ದೊಡ್ಡ ದೊಡ್ಡ ಸಂಬಳ ಕೊಟ್ಟು ಇಲ್ಲಿಗೆ ಕಳುಹಿಸುವರು. ಇಲ್ಲಿನ ಜನರ ಹತ್ತಿರ ದುಡಿಸುವರು. ಇಲ್ಲಿನ ಸಂಪತ್ತನ್ನು ಕೊಳ್ಳೊಹೊಡೆಯುವರು. ಈ ಜನ ಎಚ್ಚೆತ್ತರೆ, ಭಾರತ ಅವರ ಕೈಯಿಂದ ತಪ್ಪಿಸಿಕೊಂಡರೆ ಅವರಿಗೆ ಎಷ್ಟು ನಷ್ಟ? ಆದ್ದರಿಂದ, ಸ್ವಾತಂತ್ರ್ಯ ಬೇಕು ಎಂದು ಬಾಯಿಬಿಟ್ಟವರೆ ಬ್ರಿಟಿಷ್ಸರ್ಕಾರದ ಶತ್ರುಗಳಾದರು. ಪೋಲಿಸರನ್ನೂ ಸೈನಿಕರನ್ನೂ ಬಳಸಿ ನಿರ್ದಯವಾಗಿ ಜನರನ್ನು ಬಡಿದರು. ಬಂಧನದ ಬಲಿದಾನಗಳು ನಡೆಯುತ್ತಲೇ ಇದ್ದವು. ಲೋಕಮಾನ್ಯ ತಿಲಕ್, ಲಾಲಾ ಲಜಪತರಾಯ್ಮುಂತಾದ ಹಿರಿಯರ ನಾಯಕತ್ವದಲ್ಲಿ ಇಡೀ ಭಾರತ ಹೋರಾಟ ನಡೆಸುತ್ತಿತ್ತು.
ಧಿಂಗ್ರ ಇದ್ದಕ್ಕಿದ್ದಂತೆ ಪಿಸ್ತೂಲನ್ನು ಹೊರತೆಗೆದು ಕರ್ಜನನಿಗೆ ಗುರಿ ಇಟ್ಟು ಹಾರಿಸಿದ.
ಇನ್ನೊಂದು ಕಡೆ ತರುಣ ಕ್ರಾಂತಿಕಾರರು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿದ್ದರು. ಬಂಗಾಲದಲ್ಲಿ ಖುದಿರಾಮ್ಬೋಸ್ಮತ್ತು ಪ್ರಫುಲ್ಲಚಂದ್ರ ಚಾಕಿ ಮೊಟ್ಟಮೊದಲ ಬಾಂಬ್ಹಾರಿಸಿದ್ದರು.
ಈ ಸುದ್ದಿಗಳನ್ನು ಕೇಳುತ್ತಿದ್ದ ಧಿಂಗ್ರ ಚಡಪಡಿಸುತ್ತಿದ್ದ. ಬ್ರಿಟಿಷರನ್ನು ಕಂಡರೆ ಅವನಿಗೆ ಮೈ ಉರಿದುಹೋಗುತ್ತಿತ್ತು. ಗಾಯದ ಮೇಲೆ ಉಪ್ಪು ಚೆಲ್ಲಿದಂತೆ ಇನ್ನೊಂದು ಘಟನೆ ನಡೆಯಿತು.
ಸಾವರಕರ್ ಅಣ್ಣ ಬಾಬರಾವ್ಸಾವರಕರ್. ಅವರ ಪೂರ್ತಿ ಹೆಸರು ಗಣೇಶ ದಾಮೊದರ ಸಾವರಕರ್ ಕ್ರಾಂತಿಕಾರಿ ಆಗಿದ್ದರು. ಬ್ರಿಟಿಷರು ಅವರನ್ನು ಬಂಧಿಸಿ ಅವರಿಗೆ ಕರನೀರಿನ ಶಿಕ್ಷೆ ವಿಧಿಸಿದರು. ಕರೀನೀರು ಶಿಕ್ಷೆ ಎಂದರೆ ಭಾರತದಿಂದ ಬಹಳ ದೂರದಲ್ಲಿ, ಸಮುದ್ರದ ಮಧ್ಯೆ ಇದ್ದ ಅಂಡಮಾನ್ದ್ವೀಪದಲ್ಲಿ ಜೈಲು ವಾಸ. ಅಲ್ಲಿ ಮನುಷ್ಯರು ವಾಸಮಾಡುವುದು ಸಾಧ್ಯವೇ ಇರಲಿಲ್ಲ. ಹಾವು, ಚೇಳು, ಕಾಡುಪ್ರಾಣಿಗಳು ಬೇಕಾದಷ್ಟಿದ್ದವು. ಇತರರನ್ನು ಕೊಂದವರು, ದರೋಡೆ ಮಾಡಿದವರು, ಹೀಗೆ ತುಂಬ ಕೆಟ್ಟ ಕೆಲಸಗಳನ್ನು ಮಾಡಿದವರು, ಇತರರಿಗೆ ಅಪಾಯ ಮಾಡುತ್ತಾರೆ ಎನ್ನುವಂತಹವರು ಇವರನ್ನು ಸರಕರ ಅಂಡಮಾನ್ದ್ವೀಪಕ್ಕೆ ಕಳುಹಿಸುತ್ತಿತ್ತು. ತಮ್ಮ ದೇಶದ ಸ್ವಾತಂತ್ರ್ಯ ಹೋರಾಡಿದ ವೀರರನ್ನು ಸೆರೆಯಲ್ಲಿಟ್ಟಿದ್ದು ಇಂತಹ ಸ್ಥಳದಲ್ಲಿ!
ಬಾಬಾರಾವ್ಸಾವರಕರರ ಬಂಧನ, ಕರೀನೀರು ಶಿಕ್ಷೆಗಳ ಸುದ್ದಿ ಕೇಳಿ ಧಿಂಗ್ರನ ಮೈ ಬೆಂಕಿಯಾಯಿತು. ಇವೆಲ್ಲ ಸಂಗತಿಗಳೂ ಒಟ್ಟುಗೂಡಿ, ಬ್ರಿಟಿಷರಿಗೆ ಹಿಂದೂ ತರುಣನ ಪರಾಕ್ರಮದ ರುಚಿ ತೋರಿಸಬೇಕೆಂಬ ಧಿಂಗ್ರನ ಛಲಕ್ಕೆ ಮತ್ತಷ್ಟು ಪುಟ ಸಿಕ್ಕಿತು.
ತನ್ನ ಯೋಜನೆಯನ್ನು ಸಫಲಗೊಳಿಸುವುದಕ್ಕಾಗಿ ಒಂದು ರಿವಾಲ್ವರ್ ಕೊಂಡುಕೊಂಡು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಿದ.
ಗುಳ್ಳೇನರಿ
ಲಂಡನ್ನಿನಲ್ಲಿ “ನ್ಯಾಷನಲ್ಇಂಡಿಯನ್ಅಸೋಸಿಯೇಷನ್” ಎಂಬ ಒಂದು ಸಂಸ್ಥೆ ಇತ್ತು. ಭಾರತದಿಂದ ಓದಲು ಇಂಗ್ಲೆಂಡಿಗೆ ಬಂದ ತರುಣರನ್ನು ಬ್ರಿಟಿಷರ ಹೊಗಳು ಭಟರನ್ನಾಗಿ ತಯಾರು ಮಾಡುವುದೇ ಆ ಸಂಸ್ಥೆಯ ಕೆಲಸವಾಗಿತ್ತು. ದೇಶಪ್ರೇಮಿ ತರುಣರಿಗೆ ದುರಭ್ಯಾಸಗಳನ್ನು ಕಲಿಸಿ ದೇಶದ್ರೋಹಿಗಳನ್ನಾಗಿ ಮಾಡುತ್ತಿತು ಆ ಸಂಸ್ಥೆ. ಕುಮಾರಿ ಏಮಾ ಜೋಸೆಫಿನ್ಬೆಕ್ಎಂಬ ತರುಣಿ ಅದರ ಕಾರ್ಯದರ್ಶಿಯಾಗಿದ್ದಳು.
೧೯೦೯ರ ಮಾರ್ಚ ತಿಂಗಳಲ್ಲಿ ಧಿಂಗ್ರ ನ್ಯಾಷನಲ್ಇಂಡಿಯನ್ಅಸೋಸಿಯೇಷನ್ಕಛೇರಿಗೆ ಬಂದ. ಅಲ್ಲಿದ್ದ ಏಮಾ ಬೆಕ್ಜೊತೆಗೆ ಮಾತನಾಡಿದ. ಆಕೆಯೊಂದಿಗೆ ಗೆಳೆತನ ಬೆಳೆಸಿದ. ಆ ಸಂಸ್ಥೆಯ ಬಗ್ಗೆ ಬಹಳ ಆಸಕ್ತಿಯಿಂದ ವಿಚಾರಿಸಿದ. ತಾನೂ ಆ ಸಂಸ್ಥೆಯ ಸದಸ್ಯನಾಗುವುದಾಗಿ ಹೇಳಿದ. ಏಪ್ರಿಲ್ತಿಂಗಳಲ್ಲಿ ಸದಸ್ಯನಾದ.
ಆಂಗ್ಲ ಸರಕಾರ ಬಹಳ ಮೋಸದ ಸರಕಾರ. ಭಾರತೀಯ ವಿದ್ಯಾರ್ಥಿಗಳನ್ನು ತಮ್ಮ ದೇಶದ ವಿರುದ್ಧವೇ ತಿರುಗಿಬೀಳುವಂತೆ ವಿಷ ತುಂಬಲು ಅದು ಒಂದು ಸಮಿತಿ ರಚಿಸಿತ್ತು. ಸಮಿತಿಯ ಮೂವರು ಪ್ರಮುಖ ಸದಸ್ಯರಲ್ಲಿ ಸರ್ ವಿಲಿಯಂ ಕರ್ಜನ್ವಾಯ್ಲಿ ಎಂಬುವನು ಒಬ್ಬ. ಕರ್ಜನ್ವಾಯ್ಲಿ “ಗುಳ್ಳೇನರಿ” ಇದ್ದಂತೆ. ಒಳ್ಳೆಯ ಸಿಹಿ ಮಾತನಾಡುತ್ತ ವಿಷವನ್ನು ತುಂಬುವುದರಲ್ಲಿ ಅವನದು ಎತ್ತಿದ ಕೈ. ಇಂಗ್ಲೆಂಡಿನಲ್ಲಿದ್ದ ಭಾರತದ ವಿಷಯಗಳಿಗೆ ಸಂಬಂಧಿಸಿದ ಮಂತ್ರಿಮಂಡಲದ ಕಛೇರಿಯಲ್ಲಿ ಇವನೊಬ್ಬ ಸಲಹೆಗಾರ. ಇವನಿಗೆ ತನ್ನ ಕುಯುಕ್ತಿಗಳನ್ನು ನಡೆಸಲು ಬೇಕಾದಷ್ಟು ಅವಕಾಶ ಸಿಕ್ಕಿತ್ತು. ಆದ್ದರಿಂದ ಭಾರತದ ವಿದ್ಯಾರ್ಥಿಗಳಿಗೆ ಈ “ಗುಳ್ಳೆನರಿ”ಯ ಮೇಲೆ ಮಹಾಕೋಪ. ಅವನನ್ನು ಕೊಂದುಹಾಕಬೇಕೆಂದು ಎಲ್ಲರಿಗೂ ಕಾತುರವಿತ್ತು.
ಈ ಕರ್ಜನ್ವಾಯ್ಲಿಗೂ, ಧಿಂಗ್ರನ ತಂದೆಗೂ ಅಣ್ಣನಿಗೂ ಬಹಳ ಸ್ನೇಹ. ಧಿಂಗ್ರನ ತಂದೆ ಕರ್ಜನ್ನನಿಗೆ ಕಾಗದ ಬರೆದು ತನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳುತ್ತಿದ್ದರು. ಅಂತೆಯೇ ಕರ್ಜನ್ನೂ ಆಗಾಗ ಧಿಂಗ್ರನೊಂದಿಗೆ ಮತನಾಡುತ್ತಾ ವಿಶ್ವಾಸಿಯಂತೆ ನಟಿಸುತ್ತಿದ್ದ. ಅದಕ್ಕೆ ತಕ್ಕಂತೆ ಧಿಂಗ್ರನೂ ನಟಿಸುತ್ತಿದ್ದ.
ತನಗೆ ಭಾರತ ಭವನದ ಗುಟ್ಟುಗಳನ್ನು ತಿಳಿಸಬೇಕೆಂದು ಕರ್ಜನ್ಧಿಂಗ್ರನನ್ನು ಮೆಲ್ಲಮೆಲ್ಲನೆ ಕೇಳಲಾರಂಭಿಸಿದ.
ಆದರೆ ಧಿಂಗ್ರ ಆಗಾಗ ಸಾವರಕರರನ್ನೂ ಗುಟ್ಟಾಗಿ ಭೇಟಿಮಾಡಿ ನಡೆಯುತ್ತಿದ್ದ ಸಂಗತಿಗಳನ್ನೆಲ್ಲ ಅವರಿಗೆ ತಿಳಿಸುತ್ತಿದ್ದ. ಒಮ್ಮೊಮ್ಮೆ ಕೆಲವು ಸುದ್ದಿಗಳನ್ನು ಕರ್ಜನ್ನನಿಗೂ ತಿಳಿಸುತ್ತಲೂ ಇದ್ದ. ಆದರೆ ಆ ವಿಷಯವನ್ನು ಮೊದಲೇ ತಮ್ಮ ನಾಯಕ ಸಾವರಕರರಿಗೆ ತಿಳಿಸಿ ಅನುಮತಿ ಪಡೆದಿರುತ್ತಿದ್ದ. ಕರ್ಜನ್ಗೆ ಗುಟ್ಟು ತಿಳಿಸುವುದೆಲ್ಲ ಬರೀ ನಾಟಕ, ಅಷ್ಟೆ.
ಜುಲೈ ಒಂದು
ಜೂನ್೮ರಂದು ಬಾಬಾರಾವ್ಸಾವರಕರರಿಗೆ ಜೀವನಪೂರ್ತಿ ಅಂಡಮಾನಿನಲ್ಲಿರುವಂತೆ ಕರಿನೀರಿನ ಶಿಕ್ಷೆಯಾಯಿತು. ಅಂದಿನ ದಿನವೇ ಕರ್ಜನ್ವಾಯ್ಲಿಯನ್ನು ಕೊಂದುಹಾಕಬೇಕೆಂದು ಧಿಂಗ್ರ ಪ್ರಯತ್ನಪಟ್ಟ. ಆದರೆ, ಅಂದು ಕಾಲ ಮಿಂಚಿದ್ದರಿಂದ “ಬೇಟೆ” ಇವನ ಕೈಯಿಂದ ಜಾರಿಕೊಂಡಿತು. ಮತ್ತೆ ನಮ್ಮ ಬೇಟೆಗಾರ ಧಿಂಗ್ರ ಸುಸಮಯಕ್ಕಾಗಿ ಹೊಂಚುಹಾಕುತ್ತಾ ಕುಳಿತ!
೧೯೦೯ ನೇ ಜುಲೈ ೧ನೇ ತಾರೀಖು ನ್ಯಾಷನಲ್ಇಂಡಿಯನ್ಅಸೋಸಿಯೇಷನ್ನಿನ ವಾರ್ಷಿಕೋತ್ಸವ ನಡೆಯಬೇಕಾಗಿತ್ತು. ಕುಮಾರಿ ಏಮಾ ಬೆಕ್ಳನ್ನು ಧಿಂಗ್ರ ಭೇಟಿಮಾಡಿ ಎಲ್ಲ ವಿಷಯಗಳನ್ನೂ ಸಂಗ್ರಹಿಸಿದ. ಅಂದು ಕರ್ಜನ್ಸಭೆಗೆ ಬರುವನೆಂದು ತಿಳಿದು ಧಿಂಗ್ರನ ಮನಸ್ಸಿಗೆ ಆನಂದವಾಯಿತು.
ಜೂನ್೨೦ ರಂದು ಧಿಂಗ್ರ ಗುಪ್ತವಾಗಿ ಸಾವರಕರರನ್ನು ಭೇಟಿ ಮಾಡಿದ. ತನ್ನ ಮನದಾಸೆಯನ್ನು, ಯೋಜನೆಯನ್ನು ಸಾವರಕರರಿಗೆ ತಿಳಿಸಿದ. ಸಾವರಕರರಿಗೂ ಆನಂದವಾಯಿತು.
ಜುಲೈ ೧ನೇ ತಾರೀಖು. ಗುರುವಾರ . ಆ ದಿನವೇ ಧಿಂಗ್ರ ಭಾರತಕ್ಕಾಗಿ ಅಪಮಾನದ ಸೇಡನ್ನು ತೀರಿಸಿಕೊಳ್ಳಲು ನಿಶ್ಚಯಿಸಿದ್ದ ದಿನ.
ಅಂದು ಬೇಗ ಊಟ ಮುಗಿಸಿದ. ರಿವಾಲ್ವರ್ ಜೇಬಿನಲ್ಲಿಟ್ಟು ಕೊಂಡು ಗುಂಡು ಹಾರಿಸುವ ಶಿಕ್ಷನ ಶಾಲೆಗೆ ಹೋದ. ಹನ್ನೆರಡು ಗುಂಡು ಹಾರಿಸಿ ಗುರಿ ಇಡುವುದನ್ನು ಚೆನ್ನಾಗಿ ಅಭ್ಯಾಸ ಮಾಡಿದ.
ಸಂಜೆ ಕೋಣೆಗೆ ಹಿಂದಿರುಗಿದಾಗ ಗಂಟೆ ಆರು. ಬೇಗ ಬೇಗ ಮುಖ ತೊಳೆದುಕೊಂಡು ಬಟ್ಟೆ ಬದಲಾಯಿಸಿದ. ತಲೆಗೆ ಪಂಜಾಬ್ಮಾದರಿಯ ಆಕಾಶನೀಲಿಯ ಪೇಟ ಬಿಗಿಯಾಗಿ ಸುತ್ತಿದ. ಕಪ್ಪುಕನ್ನಡಕ ಕಣ್ಣಿಗೆ ಏರಿಸಿದ. ಟೈ ಧರಿಸಿ ಮೇಲೆ ಕೋಟು ಹಾಕಿಕೊಂಡ. ಒಂದು ರಿವಾಲ್ವರ್, ಎರಡು ಪಿಸ್ತೂಲು ಎರಡು ಚೂರಿಗಳನ್ನು ಕೋಟಿನ ಒಳಜೇಬುಗಳಲ್ಲಿ ಗುಪ್ತವಾಗಿಟ್ಟುಕೊಂಡ. ಕರ್ಜನ್ಎಂಬ ಕುರಿಯನ್ನು ಕಾಳಿಗೆ ಬಲಿಕೊಡಲು ಸಿದ್ಧನಾದ.
ನೇರವಾಗಿ ಒಳಗೆ ಹೋಗಿ ಎಲ್ಲರೊಂದಿಗೆ ಹರಟೆ ಕೊಚ್ಚುತ್ತಾ ಅಲ್ಲಿಂದಿಲ್ಲಿಗೆ ಸ್ವಲ್ಪಕಾಲ ಓಡಾಡಿದ. ಬಣ್ಣ ಬಣ್ಣದ ಬಟ್ಟೆ ಧರಿಸಿದ ಅನೇಕ ಹೆಂಗಸರು, ಗರಿಗರಿಯಾಗಿ ಇಸ್ತ್ರಿ ಮಾಡಿದ ಸೂಟುಗಳಿದ್ದ ಅನೇಕ ಗಂಡಸರು ಅಲ್ಲಿ ನೆರೆದಿದ್ದರು. ಬಣ್ಣಬಣ್ಣದ ಕಾಗದಗಳು, ಬೆಲೂನುಗಳು ಹಾರಾಡುತ್ತಿದ್ದವು. ಗೆಳತಿ ಏಮಾ ಬೆಕ್ಬಂದು ಮಾತನಾಡಿಸಿದಳು. ಆನಂದವಾಗಿ ಮಾತನಾಡಿದ ಧಿಂಗ್ರ.
ಗಂಟೆ ಸುಮಾರು ಹತ್ತುವರೆ ಆಯಿತು. ಧಿಂಗ್ರ ಬಹಳ ತವಕದಿಂದ ಬಾಗಿಲ ಕಡೆ ಆಗಾಗ ನೋಡುತ್ತಿದ್ದ.
ಇದ್ದಕ್ಕಿದಂತೆ ಕರ್ಜನ್ವಾಯ್ಲಿ ಮತ್ತು ಅವನ ಪತ್ನಿಯ ಆಗಮನವಾಯಿತು. ವಾತಾವರಣದಲ್ಲಿ ಇನ್ನಷ್ಟು ಉತ್ಸಾಹ, ಕಳೆ ಏರಿತು. ಸುಮಾರು ಹನ್ನೊಂದು ಗಂಟೆಗೆ ಸಭೆ ಮುಗಿದು ಕರ್ಜನ್ವೇದಿಕೆಯಿಂದ ಕೆಳಗಿಳಿದ. ಸಂಗೀತ ಪ್ರಾರಂಭವಾಗಿತ್ತು. ಕರ್ಜನ್ಉಪಚಾರದ ಸಿಹಿ ಮಾತುಗಳನ್ನಾಡುತ್ತ ಅಲ್ಲೇ ಸಂಚರಿಸುತ್ತಿದ್ದ.
ಅಷ್ಟರಲ್ಲಿ ಧಿಂಗ್ರ ಅವನನ್ನೇ ಹುಡುಕಿಕೊಂಡು ಮುಂದೆ ಬಂದ. ಕರ್ಜನ್ಹುಬ್ಬು ಏರಿಸಿ “ಹಲ್ಲೋ” ಎಂದ. ಧಿಂಗ್ರ ಇನ್ನೂ ಹತ್ತಿರಕ್ಕೆ ಹೋದ.
ಕರ್ಜನ್ಮತ್ತು ಧಿಂಗ್ರ ಇಬ್ಬರೂ ಬಹಳ ಹತ್ತಿರ ಹತ್ತಿರವಿದ್ದರು. ಧಿಂಗ್ರ ಮೆಲ್ಲನೆ ಏನೋ ಗಟ್ಟು ಹೇಳುವಂತೆ ಬಾಯಿ ತೆರದ. ಕರ್ಜನ್ಅದನ್ನು ಕೇಳಲು ತಲೆ ಬಗ್ಗಿಸಿದ.
ಅಷ್ಟರಲ್ಲಿ ಧಿಂಗ್ರ ಸರಕ್ಕನೆ ಜೇಬಿನಿಂದ ರಿವಾಲ್ವರ್ ಹೊರಸೆಳೆದ. ಅದನ್ನು ಕರ್ಜನ್ನ ಕುತ್ತಿಗೆಗೆ ಗುರಿ ಇಟ್ಟು “ಢಮಾರ್ ಢಮಾರ್” ಎಂದು ಎರಡು ಗುಂಡು ಹೊಡೆದ ಕರ್ಜನ್ಗಟ್ಟಿಯಾಗಿ ವಿಕಾರವಾಗಿ “ಅಯ್ಯೋ” ಎಂದು ಕಿರುಚುತ್ತಾ ನೆಲದ ಮೇಲೆ ಕುಸಿದು ಬಿದ್ದ. ಧಿಂಗ್ರ ಇನ್ನೂ ಎರಡು ಗುಂಡು ಹೊಡೆದ. ಕರ್ಜನ್ನೆಲದ ಮೇಲೆ ಬಿದ್ದ. ಅವನನ್ನು ರಕ್ಷಿಸಲು ಕಾವಾಸಜೀಲಾಲ್ಎಂಬ ಪಾರ್ಸಿ ಓಡಿಬಂದ. ಧಿಂಗ್ರ ಅವನ ಕಡೆಗೂ ಗುಂಡು ಹಾರಿಸಿದ. ಕಾವಾಸಜಿ ಕೆಳಕ್ಕೆ ಬಿದ್ದ. (ಕಾವಾಸಜಿ ಕೆಲವು ದಿನಗಳ ನಂತರ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ.)
ಜಂಹಾಂಗೀರ್ ಸಭಾಂಗಣದಲ್ಲಿ ಗುಲ್ಲೋಗುಲ್ಲು! ಜನ ಥರಥರ ನಡುಗಲಾರಂಭಿಸಿದರು. “ಹಿಡಿಯಿರಿ, ಹೊಡೆಯಿರಿ” ಬೊಬ್ಬಾಟ ಶುರುವಾಯಿತು. ಧಿಂಗ್ರನ ಹಿಡಿಯಲು ಬಂದ ಒಬ್ಬನಿಗೆ ಧಿಂಗ್ರ ಎಡಗಯಯಿಂದ ಒಂದು ಪೆಟ್ಟುಕೊಟ್ಟ. ಬಂದವನ ಕುತ್ತಿಗೆ ಊದಿಕೊಂಡಿತು. ಪಕ್ಕೆಲುಬುಗಳು ಮುರಿದುಹೋದವು. ಅವನು ರಕ್ತ ಕಾರಿಕೊಂಡ ಕೆಳಗೆ ಬಿದ್ದ.
ಧಿಂಗ್ರ ಮಾತ್ರ ನಗುನಗುತ್ತಲೇ ಶಾಂತನಾಗಿದ್ದ. ಅವನನ್ನು ಹಿಡಿಯಲು ಹತ್ತಿರ ಬಂದ ಜನರಿಗೆ “ಒಂದು ಕ್ಷಣ ತಡೆಯಿರಿ, ಕನ್ನಡಕ ಹಾಕಿಕೊಳ್ಳುತ್ತೇನೆ” ಎಂದು ಕನ್ನಡಕ ಹಾಕಿಕೊಂಡ. ಆಮೇಲೆ ಪೋಲೀಸರು ಅವನನ್ನು ಹಿಡಿದುಕೊಂಡರು. ಡಾಕ್ಟರ್ ಒಬ್ಬರು ಓಡಿಬಂದು ಇವನ ನಾಡಿ ಹಿಡಿದರು. ನಾಡಿ ಎಂದಿನಂತೆ ಶಾಂತವಾಗಿಯೇ ಇತ್ತು. ಮಿಗಿಲಾಗಿ ಡಾಕ್ಟರೇ ಗಡಗಡ ನಡುಗುತ್ತಿದ್ದರು.
ಇಂಥ ಘೋರ ಕೊಲೆಯನ್ನು ಮಾಡಿದ್ದರೂ ಧಿಂಗ್ರ ಸ್ವಲ್ಪವೂ ಭಯಪಟ್ಟಿರಲಿಲ್ಲ. ತಾನು ಮಾಡುತ್ತಿರುವುದು ಸರಿಯಾದದ್ದು ಎಂದು ಅವನಿಗೆ ದೃಢನಂಬಿಕೆ ಇತ್ತು. ಅವನನ್ನು ಪೋಲೀಸ್ಸ್ಟೇಷನ್ನಿಗೆ ಕರೆದೊಯ್ದರು. ಹೋದಕೂಡಲೇ ಅವನು ಮಾಡಿದ ಮೊದಲ ಕೆಲಸ ಗಾಢನಿದ್ರೆ!
ಲಂಡನ್ನಿನಲ್ಲಿ ಗುಲ್ಲೋಗುಲ್ಲು
ಪತ್ರಿಕೆಗಳಲ್ಲಿ ಬಿಸಿಬಿಸಿ ಸುದ್ದಿ. ಲಂಡನ್ನಿನ ಎಲ್ಲ ಪತ್ರಿಕೆಗಳಲ್ಲೂ ದಪ್ಪಕ್ಷರಗಳಲ್ಲಿ ಸುದ್ದಿ ಪ್ರಕಟವಾಯಿತು. ಜನತೆಗೆ ದಂಗು ಬಡಿಯಿತು.
ಧಿಂಗ್ರ ಜೇಬಿನಲ್ಲಿ ಒಂದು ಹೇಳಿಕೆ ಇಟ್ಟುಕೊಂಡಿದ್ದ. ಪೋಲೀಸರು ಆ ಹೇಳಿಕೆಯನ್ಹು ತೆಗೆದು ಬಚ್ಚಿಟ್ಟರು.
ಈ ಘಟನೆ ಸಾವರಕರಿಗೆ ತಿಳಿಯಿತು. ಅವರಿಗೆ ತೃಪ್ತಿಯಾಯಿತು. ಈ ಸುದ್ದಿ ಭಾರತಕ್ಕೂ ಮುಟ್ಟಿತು. ಭಾರತದ ಕ್ರಾಂತಿಕಾರರು ಉತ್ಸಾಹ, ಆನಂದಗಳಿಂದ ಕುಣಿದು ಕುಪ್ಪಳಿಸಿದರು.
ಧಿಂಗ್ರನ ಹೆಸರು ಲಂಡನ್ನಿನಲ್ಲಿ, ಭಾರತದಲ್ಲಿ ಮನೆ ಮಾತಾಯಿತು. ದೇಶಭಕ್ತರ ಕಣ್ಣಿನಲ್ಲಿ ಅವನು ದೇವರಂತೆ ಕಂಡ.
ಆದರೆ ಕೆಲವರು ಭಾರತೀಯರು ಧಿಂಗ್ರನ ಕೃತ್ಯದಿಂದ ಕುಪಿತರಾದರು. ಅವನು ಮಾಡಿದ್ದು ತಪ್ಪೆಂದು ಬೀದಿಬೀದಿಯಲ್ಲಿ ಹೇಳಲಾರಂಭಿಸಿದರು. ಸ್ವತಃ ಅವನ ಸಾಹಿಬ್ಡಿತ್ತಾ ಭಾರತದಿಂದ ಕೂಡಲೇ ತಂತಿ ಕಳಿಸಿದರು; “ಮದನ್ನನ್ನ ಮಗನೇ ಅಲ್ಲ. ಅವನು ಮೂರ್ಖ! ನನ್ನ ಹೆಸರಿಗೇ ಮಸಿ ಬಳಿದಿದ್ದಾನೆ.” ಅವನ ಸೋದರ ತನಗೂ ಧಿಂಗ್ರನಿಗೂ ಏನೂ ಸಂಬಂಧವಿಲ್ಲವೆಂದೂ ಧಿಂಗ್ರ ಮಾಡಿದ್ದು ಘೋರ ಅಪರಾಧವೆಂದೂ ಹೇಳಿದ.
ಆದರ ಧಿಂಗ್ರನ ಮನೆಯವರೇ ಅವನ ಕೈಬಿಟ್ಟಿದ್ದರೂ, ದೇಶಭಕ್ತ ಭಾರತ ಅವನನ್ನು ಮೆಚ್ಚಿಕೊಂಡಿತು. ಭಾರತಮಾತೆಗೆ ಗೌರವ ತಂದ ಸುಪುತ್ರನೆಂದು ಹೊಗಳಿ ಹಾಡಿದರು.
ಬ್ರಿಟಿಷರು ಭಕ್ತರು ಲಂಡನ್ನಿನಲ್ಲಿ ಸಭೆ ನಡೆಸಿ ಧಿಂಗ್ರನ ಕೃತ್ಯವನ್ನು ಖಂಡಿಸಬೇಕೆಂದು ಯೋಚಿಸಿದರು.
ಜುಲೈ ಐದರಂದು ಲಂಡನ್ನಿನ ಕಾಕ್ಸ್ಟನ್ಸಭಾಂಗಣದಲ್ಲಿ ಒಂದು ಸಭೆ ಸೇರಿತು. ಅದರ ಮುಖ್ಯ ಉದ್ದೇಶ ಧಿಂಗ್ರನ ಕೃತ್ಯವನ್ನು ಖಂಡಿಸುವುದು.
ಈ ಸುದ್ದಿ ಧಿಂಗ್ರನ ಗೆಳೆಯರಿಗೆ ತಲುಪಿತು. ಸಾವರಕರರಿಗೆ ರೋಷ ಉಕ್ಕಿತು; ಒಬ್ಬ ಭಾರತೀಯ ತರುಣ ತಾಯನಾಡಿಗಾಗಿ ತನ್ನ ಪ್ರಾಣವನ್ನೇ ಚೆಲ್ಲುತ್ತಿರುವಾಗ ಅದೇ ಭಾರತದ ಕೆಲವರು ಅದನ್ನು ಖಂಡಿಸುವುದು ನಮ್ಮ ರಾಷ್ಟಕ್ಕೆ ಎಂತಹ ಅವಮಾನ! ಆ ಸಭೆಯಲ್ಲಿ ಖಂಡನಾ ನಿರ್ಣಯ ಒಮ್ಮತದಿಂದ ಒಪ್ಪಿತವಾಗಕೂಡದು ಎಂದು ನಿಶ್ಚಯಿಸಿದರು.
ತಮ್ಮ ಗೆಳೆಯರು ಕೆಲವರನ್ನು ಕರೆದುಕೊಂಡು ತಾವೂ ಆ ಸಭೆಗೆ ಹೋದರು. ವೇದಿಕೆಯ ಹತ್ತಿರದಲ್ಲೇ ಕುಳಿತುಕೊಂಡರು. ಸಭೆ ಪ್ರಾರಂಭವಾಯಿತು. ಕೊನೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಆಗಾಖಾನರು ಎದ್ದು ನಿಂತು ನಿರ್ಣಯ ಓದಲು ಶುರುಮಾಡಿದರು; ” ಈ ಸಭೆಯು ಸರ್ವಾನುಮತದಿಂದ ಧಿಂಗ್ರನ ಕೃತ್ಯವನ್ನು ಖಂಡಿಸುತ್ತದೆ…..”
ಅಷ್ಟರಲ್ಲೇ ಎಲ್ಲಿಂದಲೋ ಬಾಂಬು ಬಿದ್ದಂತೆ ಒಂದು ಧ್ವನಿ ಕೇಳಿಸಿತು. ” ಇಲ್ಲ ಸರ್ವಾನುಮತದಿಂದ ಅದು ಒಪ್ಪಿತವಾಗಿಲ್ಲ!” ಸಭೆ ಒಂದು ಕ್ಷಣ ನಡುಗಿತು.
“ಹಾಗೆನ್ನುವವರು ಯಾರು? ಎಂದು ಆಗಾಖಾನ್ಕೂಗಿದರು.”
“ನಾನು!” ಎಂದು ಸಾವರಕರ್ ಎದ್ದು ನಿಂತು, “ನಾನು ಸಾವರಕರ್ ಅದನ್ನು ವಿರೋಧಿಸುತ್ತೇನೆ!” ಎಂದ ಕೂಡಲೇ ಸಭೆಗೆ ಸಭೆಯೇ ಹೆದರಿ ದಿಕ್ಕಾಪಾಲಾಗಲು ಆರಂಭವಾಯಿತು. ಒಬ್ಬ ಆಂಗ್ಲ ತರುಣ ಸಾವರಕರ್ ಕಡೆ ನುಗ್ಗಿಬಂದ. ಕೈ ಮುಷ್ಟಿ ಕಟ್ಟಿ ಸಾವರಕರ್ ಮುಖದ ಮೇಲೆ ಗುದ್ದಿದ. “ಇಂಗ್ಲಿಷರ ಮುಷ್ಟಿ ಏಟಿನದು ರುಚಿ ನೋಡು” ಎಂದ. ಸಾವಕರರ ಕನ್ನಡಕ ಛಿದ್ರವಿಛಿದ್ರವಾಯಿತು. ಮುಖದ ಮೇಲೆ ರಕ್ತ ಹರಿಯತೊಡಗಿತು. ಆದರೂ ಸಾವರಕರ್ ಕದಲಲಿಲ್ಲ;” ಇಷ್ಟೆಲ್ಲ ಆದರೂ ಸಹ ನಾನು ಈ ನಿರ್ಣಯಕ್ಕೆ ವಿರೋಧವಿದ್ದೇನೆ” ಎಂದರು. ಅಷ್ಟರಲ್ಲಿ ಸಾವರಕರರ ಜೊತೆಗೆ ಬಂದಿದ್ದ ತಿರುಮಲಾಚಾರ್ಯ ಎಂಬ ಕ್ರಾಂತಿಕಾರಿ ತಮ್ಮ ಬಳಿ ಇದ್ದ ಲಾಠಿ ಹೊರತೆಗೆದರು. ಚಿರತೆಯಂತೆ ಆ ಆಂಗ್ಲ ತರುಣನ ಕಡೆ ಹಾರಿ ನಾಲ್ಕು ಲಾಠಿ ಏಟು ಕೊಟ್ಟು “ಭಾರತದ ಲಾಠಿ ಏಟಿನ ರುಚಿ ಹೇಗಿದೆ?” ಎಂದು ಗೇಲಿ ಮಾಡಿದರು. ಅವನು ಪೆಟ್ಟು ತಿಂದು ಕಂಬಿಕಿತ್ತ.
ಈ ಸಭೆಯಲ್ಲಿ ನಡೆದದ್ದು ನೋಡಿದರೆ ಧಿಂಗ್ರನ ಬಗ್ಗೆ ಸಾವರಕರ್ ಮತ್ತು ಗೆಳೆಯರಿಗೆ ಎಷ್ಟು ಹೆಮ್ಮೆ, ಗೌರವಗಳಿದ್ದವು ಎನ್ನುವುದು ಅರಿವಾಗುತ್ತದೆ. ಅವನಿಗೆ ಅವಮಾನವಾದರೆ ಅದನ್ನು ಇವರು ಬಲವಾಗಿ ವಿರೋಧಿಸುತ್ತಿದ್ದರು.
ನ್ಯಾಯಾಲಯದ ಕಟಕಟೆಯಲ್ಲಿ
ಲಂಡನ್ನಿನ ನ್ಯಾಯಾಲಯದಲ್ಲಿ ಅವನ ವಿಚಾರಣೆ ಪ್ರಾರಂಭವಾಯಿತು. ಅದರಲ್ಲಿ ಧಿಂಗ್ರನಿಗೆ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಅವನು ಒಂದೇ ಒಂದು ಹೇಳಿಕೆಕೊಟ್ಟ; ನಾನು ಲಾಲ್ಕಾಕಾನನ್ನು ಕೊಲ್ಲಬೇಕೆಂದು ಬಯಸಿರಲಿಲ್ಲ. ಆದರೆ ನನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಗುಂಡುಹಾರಿಸಬೇಕಾಯಿತು.
ಬ್ರಿಕ್ಸ್ಟನ್ಜೈಲಿನ ದಪ್ಪಗೋಡೆಗಳ ಮಧ್ಯೆ ಮದನ ಲಾಲ್ಧಿಂಗ್ರ ಬಂಧಿತನಾಗಿದ್ದ. ಸಾವರಕರ್ ಅವನನ್ನು ನೋಡಿಬರಲು ಅಲ್ಲಿಗೆ ಹೋಗಿದ್ದರು. ತಮ್ಮ ಶಿಷ್ಯನ ಧೈರ್ಯ, ಸಾಹಸ ನೋಡಿ ಅವರಿಗೆ ಹೆಮ್ಮೆ, ಗೌರವಗಳು ಹುಟ್ಟಿದ್ದವು. ಧಿಂಗ್ರ ಸಾವರಕರರನ್ನು ಕಂಡು, “ಸಾವರಕರಜಿ! ನಾನು ಸತ್ತಮೇಲೆ ನನ್ನ ಶವಸಂಸ್ಕಾರ ಹಿಂದು ಪದ್ಧತಿಯಲ್ಲೇ ನಡೆಯಬೇಕು. ನನ್ನ ಸೋದರ ನನ್ನ ಶವವನ್ನು ಮುಟ್ಟುಕೂಡದು, ಯಾವ ಅಹಿಂದುವೂ ನನ್ನನ್ನು ಸೋಂಕಕೂಡದು, ನನ್ನ ಸಾಮಾನುಗಳನ್ನೆಲ್ಲ ಹರಾಜು ಹಾಕಿ ಬಂದ ಹಣವನ್ನು “ರಾಷ್ಟ್ರೀಯ ನಿಧಿ”ಗೆ ಕೊಡಿ” ಎಂದು ಹೇಳಿದ.
ಜುಲೈ ಹತ್ತರಂದು ನ್ಯಾಯಾಲಯದಲ್ಲಿ ಇವನು ಹೇಳಿಕೆ ನೀಡಿದ. ಅದು ಎಲ್ಲೆಲ್ಲೂ ಪ್ರತಿಧ್ವನಿಸಿತು. ಅವನು ಹೇಳಿದ್ದು ಇದು: “ಹೇಗೆ ಜರ್ಮನ್ನರಿಗೆ ಇಂಗ್ಲೆಂಡನ್ನು ಆಕ್ರಮಿಸಲು ಅಧಿಕಾರವಿಲ್ಲವೋ ಹಾಗೆಯೇ ಹಿಂದುಸ್ಥಾನವನ್ನು ಆಕ್ರಮಿಸುವ ಅಧಿಕಾರ ಆಂಗ್ಲರಿಗೂ ಇಲ್ಲ. ನಮ್ಮ ಪವಿತ್ರ ಮಾತೃಭೂಮಿಯನ್ನು ಅಪವಿತ್ರಗೊಳಿಸುತ್ತಿರುವ ಆಂಗ್ಲರನ್ನು ಸಂಹರಿಸುವುದು ನ್ಯಾಯಸಮ್ಮತವಾಗಿದೆ. ನನಗೆ ಮರಣದಂಡನೆ ವಿಧಿಸಿ! ಅದೇ ನನ್ನ ಆಸೆ. ಅದರಿಂದ ನನ್ನ ದೇಶಬಾಂಧವರ ಸೇಡಿನ ಕಿಡಿ ಹೆಚ್ಚು ಉಗ್ರವಾಗುತ್ತದೆ.”
ಅಂದು ಸಂಜೆಯ ವೇಳೆಗೆ ಧಿಂಗ್ರನ ಹೇಳಿಕೆ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದಿತು. “ಧಿಂಗ್ರನ ವಿಚಿತ್ರ ಜವಾಬು! ನನ್ನ ದೇಶಬಾಂಧವರು ನನ್ನ ಮರಣದ ಸೇಡು ತೀರಿಸಿಕೊಳ್ಳುತ್ತಾರೆ, ನಾನು ದೇಶಭಕ್ತ. ನನ್ನ ಹಿಂದುಸ್ಥಾನದ ಉದ್ಧಾರಕ್ಕಾಗಿ ನಾನು ಪ್ರಾಣಬಿಡುತ್ತೇನೆ,” ಎನ್ನುತ್ತಾನೆ ಧಿಂಗ್ರ” ಎಂದು ಪತ್ರಿಕೆಗಳು ದಪ್ಪಕ್ಷರಗಳಲ್ಲಿ ಸಾರಿದವು.
ಜುಲೈ ೨೩ರಂದು ವಿಚಾರಣೆ ಮುಗಿಯಿತು. ನ್ಯಾಯಾಲಯ ಧಿಂಗ್ರನಿಗೆ ಶಿಕ್ಷೆ ವಿಧಿಸಿತು. ಶಿಕ್ಷೆ ಏನು? ಮರನದಂಡನೆ! ಮರನದಂಡನೆಯ ದಿನವೂ ನಿಶ್ಚಯವಾಗಿದ್ದಿತು. ೧೯೦೯ರ ಆಗಷ್ಟ್೧೭!
ದೇಶ ವಿದೇಶಗಳಲ್ಲಿ ಧಿಂಗ್ರನ ಹೇಳಿಕೆ!
ಧಿಂಗ್ರ ಸಿದ್ಧಮಾಡಿ ಇಟ್ಟುಕೊಂಡಿದ್ದ ಹೇಳಿಕೆಯನ್ನು ಪೋಲೀಸರು ಕದ್ದು ಮುಚ್ಚಿಟ್ಟಿದ್ದರು. ಅದನ್ನು ಓದುವಂತೆ ಧಿಂಗ್ರ ಹೇಳಿದಾಗ ಏನೂ ಗೊತ್ತಿಲ್ಲದವರಂತೆ ನಟಿಸಿದರು. ಇದು ಸಾವರಕರಿಗೂ ತಿಳಿಯಿತು. ಸಾವರಕರ್ ಬಳಿ ಅದರ ಒಂದು ಪ್ರತಿ ಇತ್ತು. ಸಾವರಕರರಿಗೆ ಒಂದು ಯೋಜನೆ ತಟ್ಟನೆ ಹೊಳೆಯಿತು. “ಮದನಲಾಲ್ಪ್ರಾಣ ಬಿಡುವ ಮುಂಚೆ ಏನಾದರೂ ಮಾಡಿ ಈ ಚರಿತ್ರಾರ್ಹ ಹೇಳಿಕೆ ಪ್ರಮುಖ ದೇಶಗಳ ಎಲ್ಲ ಪತ್ರಿಕೆಗಳಲ್ಲೂ ಬರುವಂತೆ ಮಾಡಬೇಕು. ಇದರಿಂದಾಗಿ ಸಾಯುವ ಮುನ್ನ ಅವನಿಗೆ ಸಮಾಧಾನ ನೀಡುತ್ತದೆ” ಎನ್ನಿಸಿತು.
ಸಾವರಕರ್ ಗ್ಯಾನಚಂದ್ವರ್ಮ ಎಂಬ ಕ್ರಾಂತಿಕಾರಿ ಗೆಳೆಯರನ್ನು ಹತ್ತಿರ ಕರೆದು ” ಈ ಹೇಳಿಕೆ ಎಲ್ಲ ಪತ್ರಿಕೆಗಳಲ್ಲೂ ಮುದ್ರಣವಾಗುವಂತೆ ಮಾಡು” ಎಂದು ಸೂಚನೆ ನೀಡಿದರು. ಗ್ಯಾನ್ಚಂದ್ವರ್ಮ ಅದನ್ನು ಗುಪ್ತವಾಗಿ ಪ್ಯಾರಿಸಿಗೆ ತೆಗೆದುಕೊಂಡು ಹೋದರು. ಅಲ್ಲಿ ಅದರ ಸಾವಿರಾರು ಪ್ರತಿಗಳನ್ನು ಮುದ್ರಿಸಿದರು. ಅಮೆರಿಕಾ, ಜರ್ಮನಿ, ಇಟಲಿ ಮುಂತಾದ ರಾಷ್ಟ್ರಗಳ ಮುಖ್ಯ ಪತ್ರಿಕೆಗಳಿಗೆ ಕಳಿಸಿದರು.
ಲಂಡನ್ನಿನಲ್ಲಿ “ಡೈಲಿ ನ್ಯೂಸ್” ಎಂಬುದು ಒಂದು ಪ್ರಮುಖ ಪತ್ರಿಕೆ. ಸಾವರಕರರ ಆಂಗ್ಲ ಸ್ನೇಹಿತನೊಬ್ಬ “ಡೈಲಿನ್ಯೂಸ್”ನಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ಪತ್ರಿಕೆ ಅಚ್ಚಾಗುವಾಗ ಯಾರಿಗೂ ಗೊತ್ತಿಲ್ಲದಂತೆ ಇದನ್ನು ಸೇರಿಸಿಬಿಟ್ಟ! ಆಗಸ್ಟ್೧೬ ರಂದೇ ಅದು “ಡೈಲಿ ನ್ಯೂಸ್”ನಲ್ಲಿ ಪ್ರಕಟವಾಯಿತು. ಜೈಲಿನ ಒಳಗಿದ್ದ ಧಿಂಗ್ರನಿಗೆ ಈ ಸುದ್ದಿ ತಿಳಿದಾಗ ಅವನಿಗಾದ ಅನಂದ ಅಷ್ಟಿಷ್ಟಲ್ಲ. ಅಲ್ಲೇ ಕುಣಿದು ಕುಪ್ಪಳಿಸಿದ. ಹೇಳಿಕೆಯಲ್ಲಿ ಈ ರೀತಿಯ ಅರ್ಥ ಬರುವಂತೆ ಬರೆದಿತ್ತು;
ಸವಾಲು
ನಾನು ಬ್ರಿಟಿಷರ ರಕ್ತ ಹರಿಸಲು ಯತ್ನಸಿದ್ದು ನಿಜ. ದೇಶಭಕ್ತ ಭಾರತೀಯ ಯುವಕರನ್ನು ಬ್ರಿಟಿಷರು ಹಿಂಸಿಸುತ್ತಿರುವುದರ ವಿರುದ್ಧ ಸಣ್ಣ ಸೇಡು ಇದು. ಇದಕ್ಕೆ ನಾನೇ ಹೊಣೆ.
ನಮ್ಮ ದೇಶ ಪರಕೀಯರ ಕೈಯಲ್ಲಿದೆ. ಎಡೆಬಿಡದೆ ಹೋರಾಡುತ್ತಿದೆ. ನಮ್ಮ ಬಳಿ ಶಸ್ತ್ರಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲ. ಬಂದೂಕು ಇಟ್ಟುಕೊಳ್ಳಲು ಬಿಟ್ಟಿಲ್ಲ. ಅದುದರಿಂದ ನಾನು ಪಿಸ್ತೂಲಿನಿಂದ ಹಲ್ಲೆ ನಡೆಸಬೇಕಾಯಿತು!
ನಾನು ಹಿಂದು, ನನ್ನ ದೇಶಕ್ಕೆ ಅಪಮಾನವಾದರೆ ಅದು ನಮ್ಮ ದೇವರಿಗೆ ಅಪಮಾನವಾದಂತೆ ಎಂದು ನನ್ನ ಭಾವನೆ. ನಾನು ಬುದ್ಧಿವಂತನಲ್ಲ, ನಾನು ಬಲಶಾಲಿಯಲ್ಲ. ನಾನು ನನ್ನ ತಾಯಿಗೆ ನನ್ನ ರಕ್ತವನ್ನಲ್ಲದೆ ಇನ್ನೇನು ತಾನೆ ಕೊಡಬಲ್ಲೆ? ಆದುದರಿಂದ ನನ್ನ ರಕ್ತವನ್ನೇ ನನ್ನ ಮಾತೃಭೂಮಿಗೆ ಅರ್ಪಿಸಿದ್ದೇನೆ. ಭಾರತಮಾತೆಯ ಕೆಲಸವೆಂದರೆ ಶ್ರೀರಾಮನ ಕೆಲಸ; ಆಕೆಯ ಸೇವೆ ಶ್ರೀಕೃಷ್ಣನ ಸೇವೆ. ಆದ್ದರಿಂದ ನಾನು ಪ್ರಾಣಾರ್ಪಣೆ ಮಾಡುತ್ತಿದ್ದೇನೆ, ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ನನ್ನ ತಾಯಿನಾಡು ಸ್ವತಂತ್ರವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆ ಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ ನೀಡುವಂತೆ ಆಗಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ.
ವಂದೇ ಮಾತರಂ.
ಬಲಿದಾನದ ಘಳಿಗೆ
ಆಗಷ್ಟ್೧೭ನೇ ದಿನಾಂಕ, ಧಿಂಗ್ರನ ಮರಣದಂಡೆನಯ ದಿನ, ಪೆಂಟೋನ್ವಿಲ್ಲ ಜೈಲಿನಲ್ಲಿ ಅವನಿಗೆ ಗಲ್ಲಿಗೆ ಹಾಕುವ ಯೋಜನೆಯಾಗಿತ್ತು. ಅವನ ಗೆಳೆಯರಿಗೆಲ್ಲ ಬಹಳ ದುಃಖ. ಹೊರಗಡೆಯಿಂದ ಶೋಕಿಲಾಲನಂತೆ ಕಾಣುತ್ತಿದ್ದ ಆ ತರುಣನ ಹೃದಯದಲ್ಲಿ ಎಂತಹ ದೇಶಪ್ರೇಮ ಮನೆಮಾಡಿತ್ತು ಎಂದು ಮುಳುಮುಳು ಅತ್ತರು.
ಅದು ಮುಂಜಾನೆ ಸಾವರಕರ್ ಗೆಳೆಯರು ಸುಮ್ಮನೆ ಕೂರಲಿಲ್ಲ. ಒಂದು ಪತ್ರಕವನ್ನು ತಯಾರಿಸಿದರು. ಲಂಡನ್ನಿನ ಬೀದಿಬೀದಿಗಳಲ್ಲಿ ನಿಂತರು. ಹೃದಯದಲ್ಲಿ ದುಃಖ, ಮನಸ್ಸಿನಲ್ಲಿ ಆವೇಗ ತುಂಬಿದ್ದವು. ಕೈಯಲ್ಲಿ ಪತ್ರಕ ಹಿಡಿದು ಹೋಗಿಬರುತ್ತಿದ್ದವರಿಗೆಲ್ಲ ಹಂಚುತ್ತಿದ್ದರು. “ಇದನ್ನು ಓದಿ, ನೀವು ಓದಿ” ಎಂದು ಒತ್ತಾಯ ಮಾಡುತ್ತಿದ್ದರು. ಅದರಲ್ಲಿ ಹೀಗೆ ಬರೆದಿತ್ತು:
‘ಇಂದು ೧೯೦೯ ಆಗಷ್ಟ್೧೭, ಪ್ರತಿಯೊಬ್ಬ ದೇಶ ಪ್ರೇಮಿ ಭಾರತೀಯನ ಹೃದಯದಲ್ಲಿ ರಕ್ತದ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಇಂದು ಬೆಳಿಗ್ಗೆ ಶ್ರೇಷ್ಠ ದೇಶಭಕ್ತ, ನಮ್ಮ ಅಚ್ಚುಮೆಚ್ಚಿನ ಧಿಂಗ್ರ ತನ್ನ ಪವಿತ್ರ ಕುತ್ತಿಗೆಯನ್ನು ನೇಣುಕಂಬಕ್ಕೆ ಒಡ್ಡಿ ಪೆಂಟೋನವಿಲ್ಲ ಜೇಲುಗೋಡೆಗಳ ಮಧ್ಯೆ ತೂಗಾಡುತ್ತಿದ್ದಾನೆ. ಅವನ ಆತ್ಮ ನಮಗೆ ದಾರಿ ತೋರುತ್ತದೆ. ಅವನ ಹೆಸರು ಚರಿತ್ರೆಯ ಪುಟಗಳನ್ನು ಬೆಳಗುತ್ತದೆ. ನಮ್ಮ ಶತ್ರುಗಳು ಅವನನ್ನು ಕೊಂದಿದ್ದಾರೆ. ಆದರೆ ನಮ್ಮ ಹೋರಾಟವನ್ನು ಎಂದೆಂದಿಗೂ ಕೊಲ್ಲಲಾರರು. ಇದನ್ನು ಅವರು ಮರೆಯದಿರಲಿ!!’
೧೯೦೬ರ ಜುಲೈಯಲ್ಲಿ ಲಂಡನ್ನಿಗೆ ತರುಣ ಬಂದ. ಒಳ್ಳೆಯ ಉಡುಪು ಹಾಕಿಕೊಂಡು ರಸ್ತೆಗಳಲ್ಲಿ ಅಲೆದಾಡುವುದರಲ್ಲಿಯೇ ಸಂತೋಷ ಕಾಣುತ್ತಿದ್ದ ತರುಣ. ಸ್ನೋ, ಪೌಡರು, ಕನ್ನಡಿ ಸೊಗಸಾಗಿ ಇಸ್ತ್ರಿ ಮಾಡಿದ ಬಟ್ಟೆ ಎಂದರೆ ಅವನಿಗೆ ಪ್ರಾಣ.
ಮೂರೇ ವರ್ಷಗಳ ನಂತರ ಇದೇ ತರುಣ ನಗುನಗುತ್ತ ಸಾವನ್ನು ಸ್ವಾಗತಿಸಿದ.
ಎಷ್ಟು ಸ್ವಲ್ಪ ಕಾಲದಲ್ಲಿ ಎಂತಹ ಬದಲಾವಣೆ!
ಒಳ್ಳೆಯ ಉಡುಪು ಹಾಕಿಕೊಳ್ಳುವುದು, ಸ್ನೇಹಿತರೊಡನೆ ಸಂತೋಷ ಕೂಟಗಳಿಗೆ ಹೋಗುವುದು, ಶಿಳ್ಳೆಹಾಕಿಕೊಂಡು ರಸ್ತೆಗಳಲ್ಲಿ ಅಲೆಯುವುದು ಇವು ಅವನ ವಯಸ್ಸಿಗೆ ಸಹಜವಾಗಿದ್ದವು. ಧಿಂಗ್ರ ಹಾಗೆಯೇ ಉಳಿದುಬಿಟ್ಟಿದ್ದರೆ ಅವನ ಹೆಸರನ್ನು ಇಂದು ಯಾರೂ ಸ್ಮರಿಸುತ್ತಿರಲಿಲ್ಲ. ಪ್ರಪಂಚದಲ್ಲಿ ಹುಟ್ಟಿ ಸತ್ತುಹೋದ ಕೋಟ್ಯಾಂತರ ಅನಾಮಧೇಯರಲ್ಲಿ ಅವನೂ ಒಬ್ಬನಾಗಿರುತ್ತಿದ್ದ.
ಆದರೆ ತಾನು ಹುಟ್ಟಿದುದಕ್ಕೆ ಸಾರ್ಥಕವಾಗಬೇಕು, ತನ್ನ ನಡಿಗೆ ಪ್ರಯೋಜನವಾಗಬೇಕು ಎಂಬ ಹಂಬಲ ಅವನಲ್ಲಿ ಹುಟ್ಟಿತು, ಅವನಿಗೆ ಸಾವನ್ನು ತಂದಿತು, ಅವನು ಭಾರತೀಯರ ಹೃದಯದಲ್ಲಿ ಚಿರಂಜೀವಿಯಾಗುವಂತೆ ಮಾಡಿತು.
ಎಂಜಿನಿಯರ್ ಆಗಬೇಕೆಂಬ ಬಯಕೆಯಿಂದ ಅವನು ಇಂಗ್ಲೆಂಡಿಗೆ ಹೋದ. ಆಗಿದ್ದಿದ್ದರೆ ಬೇಕಾದಷ್ಟು ಹಣ, ಅಧಿಕಾರ, ಸುಖ ಎಲ್ಲ ಅವನಿಗೆ ಸಿಕ್ಕುತ್ತಿತ್ತು. ಇನ್ನಷ್ಟು ವರ್ಷ ಹಾಯಾಗಿ ಬದುಕಬಹುದಾಗಿತ್ತು.
ತನ್ನ ದೇಶದವರು ಗುಲಾಮರಾಗಿ ಬದುಕಿದ್ದೂ ಸತ್ತಂತೆ, ಅವರು ಸ್ವತಂತ್ರರಾಗಿ ಬದುಕಲಿ ಎಂದು ಅವನು ಸತ್ತ. ಅವನಿಂದ, ಅವನಂತಹ ವೀರತ್ಯಾಗಶೀಲರಿಂದ ನಾವು ಬದುಕಿದೆವು. ಅವನು ಸತ್ತ ತನ್ನ ದೇಶದವರ ಹೃದಯಗಳಲ್ಲಿ ಬದುಕಿದ.
ನಾವೇನು ಮಾಡಬೇಕು?
ಮದನಲಾಲ್ಧಿಂಗ್ರ ಅಂದು ನೇಣುಗಂಬವನ್ನು ಹತ್ತಿದ. ಪವಿತ್ರ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು, ಶ್ರೀರಾಮ, ಶ್ರೀಕೃಷ್ಣ ಜಪ ಮಾಡುತ್ತ ದೇಶಕ್ಕಾಗಿ ಪ್ರಾಣ ಕೊಟ್ಟ. ಇಂದು ನಾವು ಆತನನ್ನು ನೆನೆಯುತ್ತಿದ್ದೇವೆ. ಪೂಜ್ಯ ಭಾವನೆಯಿಂದ ನೋಡುತ್ತಿದ್ದೇವೆ. ನಮ್ರತೆಯಿಂದ ತಲೆಬಾಗುತ್ತಿದ್ದೇವೆ.
ಅಂದು ಬ್ರಿಟಿಷರು ಭಾರತದ ಮೇಲೆ ದಬ್ಬಾಳಿಕೆ ನಡೆಸಿದಾಗ ಹೋರಾಡಿ ಬಲಿದಾನ ನೀಡಿದ ವೀರರು ಸಾವಿರಾರು ಮಂದಿ. ಅವರು ತಮ್ಮ ಸ್ವಂತ ಸುಖವನ್ನು ತ್ಯಜಿಸಿದರು. ಮಡದಿ, ಮಕ್ಕಳನ್ನು ಬಿಟ್ಟರು. ಮೊದಲು ಭಾರತಮಾತೆಯ ಬಿಡುಗಡೆ ಮಾಡೋಣ, ಆಮೇಲೆ ನಮ್ಮ ಸ್ವಂತ ಸುಖಕ್ಕೆ ಗಮನ ಕೊಡೋಣ ಎಂದರು.
ಅವರು ಸುರಿಸಿದ ಬೆವರಿನಿಂದ, ಧಾರೆ ಎರೆದ ರಕ್ತದಿಂದ ಸ್ವರಾಜ್ಯದ ಬಳ್ಳಿ ಚಿಗುರಿತು, ವಿಶಾಲವಾಗಿ ಹಬ್ಬಿತು. ಸ್ವಾತಂತ್ರ್ಯ ಉದಿಸಿ ಇಂದಿಗೆ 73 ವರ್ಷಗಳು ಕಳೆದವು.
ಆ ತ್ಯಾಗಿಗಳು, ಬಲಿದಾನಿಗಳು, ಪ್ರಾಣಕೊಟ್ಟು ಗಳಿಸಿದ ಸ್ವಾತಂತ್ರ್ಯದ ರಕ್ಷಣೆಯು ಜವಾಬ್ದಾರಿ ನಮ್ಮ ಮೇಲಿದೆ.
ಅಂದು ಸ್ವಾತಂತ್ರ್ಯದ ಗಳಿಕೆಗಾಗಿ ಅಸಂಖ್ಯಾತರು ಮಡಿದರು. ಇಂದು ಅದನ್ನು ಕಾಪಾಡಲು ನಾವು ದುಡಿಯಬೇಕು.
ಮಾತೃಭೂಮಿಯ ಸೇವೆ ಮಾಡುವಾಗ ಮದನ್ಲಾಲ್ಧಿಂಗ್ರರಂತಹ ಲಕ್ಷಾಂತರ ಬಲಿದಾನಿಗಳು ನಮಗೆ ಸ್ಫೂರ್ತಿ ಕೊಡಲಿ: ಶಕ್ತಿ ಕೊಡಲಿ; ಅವರ ಆಶೀರ್ವಾದ ನಮ್ಮ ಮೇಲಿರಲಿ; ಆ ಮಹಾಪುರುಷರ ದೇಶಪ್ರೇಮ, ಧೈರ್ಯ, ಸಾಹಸ ಪರಾಕ್ರಮ, ಪ್ರಾಮಾಣಿಕತೆ ಮುಂತಾದ ಒಳ್ಳೆಯ ಗುಣಗಳು ನಮ್ಮಲ್ಲಿ ಮನೆ ಮಾಡಲಿ, ದೇಶ ಸೇವೆಗೆ ಪ್ರೇರೇಪಿಸಲಿ ಎಂದು ಪರಮಾತ್ಮನಲ್ಲಿ ನಾವೆಲ್ಲರೂ ಭಕ್ತಿ ನಮ್ರತೆಗಳಿಂದ ಪ್ರಾರ್ಥನೆ ಮಾಡೋಣ.
ಕೃಪೆ : ಕಣಜ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.