ಭಾರತ ಮತ್ತು ಯುಎಸ್ ಎರಡರಲ್ಲೂ ಐಟಿ ಉದ್ಯಮದಲ್ಲಿ ಸುಮಾರು ಎರಡು ದಶಕಗಳ ಕಾಲ ಕೆಲಸ ಮಾಡಿದ ನಂತರ, ಬೆಂಗಳೂರಿನ ಗುರುಪ್ರಸಾದ್ ಕುರ್ತ್ಕೋಟಿ ಅವರಿಗೆ ತಾನು ಮಾಡುತ್ತಿರುವ ಕೆಲಸವನ್ನು ತಾನು ನಿಜವಾಗಿಯೂ ಪ್ರೀತಿಸುತ್ತಿಲ್ಲ ಎಂಬುದು ಅರಿವಾಯಿತು.
ತನ್ನ ಹೃದಯವು ಸಂತೋಷಪಡುವ ಕಾರ್ಯವನ್ನು ಮಾಡಬೇಕು ಎಂದು ಬಯಸಿದ 45 ವರ್ಷ ವಯಸ್ಸಿನ ಗುರುಪ್ರಸಾದ್, ಯುಎಸ್ನಲ್ಲಿ ಭಾರೀ ವೇತನ ನೀಡುತ್ತಿದ್ದ ಐಟಿ ಕೆಲಸವನ್ನು ತೊರೆದರು, ತಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿದರು ಮತ್ತು ತಮ್ಮ ಕೃಷಿ ಕನಸನ್ನು ಮುಂದುವರಿಸುವುದಕ್ಕಾಗಿ ಭಾರತಕ್ಕೆ ಬಂದೇ ಬಿಟ್ಟರು.
“ನಾನು ಮಾಡುತ್ತಿರುವ ಕಾರ್ಯದ ಬಗ್ಗೆ ತೃಪ್ತಿ ಇಲ್ಲದ ಕಾರಣ ಒತ್ತಡವೂ ಹೆಚ್ಚಾಗುತ್ತಿತ್ತು, ಇದರಿಂದ ನಿರಂತರವಾಗಿ ನನ್ನ ಹತಾಶೆ ಹೆಚ್ಚುತ್ತಲೇ ಹೋಯಿತು. ಆ ಸಮಯದಲ್ಲಿ ನಾನು ನನ್ನ ಕೆಲಸವನ್ನು ತ್ಯಜಿಸಿ ಕೃಷಿಯತ್ತ ಗಮನ ಹರಿಸಲು ನಿರ್ಧರಿಸಿದೆ ”ಎಂದು ಅವರು ಹೇಳುತ್ತಾರೆ.
ಗುರುಪ್ರಸಾದ್ ಅವರು ಕಳೆದ ಎರಡು ವರ್ಷಗಳಿಂದ ಕೃಷಿಯನ್ನು ಅತ್ಯಂತ ನಿಖರವಾಗಿ ಮತ್ತು ಶ್ರದ್ಧೆಯಿಂದ ಮಾಡುತ್ತಾ ಬರುತ್ತಿದ್ದಾರೆ. ಹೈಡ್ರೋಪೋನಿಕ್ಸ್ (ಜಲಕೃಷಿ) ಬಳಸಿ ಅವರು ತನ್ನ ಕುಟುಂಬವು ಸೇವಿಸುವ ಎಲ್ಲಾ ವಿಧದ ತರಕಾರಿಗಳನ್ನು-ಟೊಮೆಟೊ, ಕ್ಯಾರೆಟ್, ಪಾಲಕ್, ಬೀನ್ಸ್, ಬೇಬಿ ಕಾರ್ನ್, ಎಲೆಕೋಸುಗಳನ್ನು ತನ್ನ ಹಿತ್ತಲಿನಲ್ಲಿಯೇ ಬೆಳೆಯುತ್ತಾರೆ. ಈಗ ಅವರು ತಮ್ಮ ಕೃಷಿ ಜ್ಞಾನವನ್ನು ಹಂಚಿಕೊಳ್ಳುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ಕೇವಲ ಆರು ಗಂಟೆಗಳಲ್ಲಿ ಅವರು ಹೈಡ್ರೋಫೋನಿಕ್ಸ್ ಕೃಷಿಯ ಬಗ್ಗೆ ಕಲಿಸಿಕೊಡುತ್ತಾರೆ.
ಕರ್ನಾಟಕದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಗುರು ಅವರು ಹಸಿರು ಕೃಷಿಭೂಮಿಯಿಂದ ಸುತ್ತುವರೆಯಲ್ಪಟ್ಟ ಪರಿಸರದಲ್ಲಿ ಬೆಳೆದವರು. “ನಾನು ಯಾವಾಗಲೂ ಪ್ರಕೃತಿಯೊಂದಿಗೆ ಇರಲು ಮತ್ತು ಕೃಷಿ ಮಾಡಲು ಬಯಸುತ್ತೇನೆ, ಅದಕ್ಕೆ ನಾನು ಹುಟ್ಟಿ ಬಂದ ಮೂಲವೂ ಕಾರಣವಾಗಿರಬಹುದು. ನನ್ನ ಅನೇಕ ಸ್ನೇಹಿತರು ಕೃಷಿ ಕುಟುಂಬದಿಂದ ಬಂದವರು ”ಎಂದು ಗುರುಪ್ರಸಾದ್ ಹೇಳುತ್ತಾರೆ.
ಸನ್ನಿವೇಶಗಳೆಲ್ಲ ಅವರಿಗೆ ಪೂರಕವಾಗಿರಲಿಲ್ಲ, ಅವರಿಗೆ ಕೃಷಿಯಲ್ಲಿ ಅನುಭವವಿಲ್ಲದ ಕಾರಣ, ಮೊದಲಿನಿಂದಲೂ ಎಲ್ಲವನ್ನೂ ಕಲಿತುಕೊಂಡು ಪ್ರಾರಂಭಿಸಬೇಕಾದ ಅನಿವಾರ್ಯತೆ ಇತ್ತು. ಅವರು ಕೃಷಿ ಬಗೆಗಿನ ವಿಷಯಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಅವರ ಸ್ನೇಹಿತರೊಬ್ಬರು ಹೈಡ್ರೋಪೋನಿಕ್ಸ್ ಬಗ್ಗೆ ವೀಡಿಯೊವನ್ನು ಫಾರ್ವರ್ಡ್ ಮಾಡಿದರು. “ಇದು ನನ್ನ ಜೀವನದ ಮಹತ್ವದ ತಿರುವು!” ಎಂದು ಉದ್ಗರಿಸುತ್ತಾರೆ ಗುರುಪ್ರಸಾದ್.
ಹೈಡ್ರೋಪೋನಿಕ್ಸ್ ಎಂದರೇನು?
ಹೈಡ್ರೋಪೋನಿಕ್ಸ್ ಎನ್ನುವುದು ಮಣ್ಣಿಲ್ಲದೆ ಸಸ್ಯಗಳನ್ನು ಬೆಳೆಸುವ ತಂತ್ರವಾಗಿದೆ. ಸಸ್ಯಗಳು ಬೆಳೆಯಲು ಬೇಕಾಗಿರುವುದು ನೀರು ಮತ್ತು ಪೋಷಕಾಂಶಗಳು. ಜಾಗವು ಪ್ರಮುಖ ಸಮಸ್ಯೆಯಾಗಿರುವ ನಗರ ಪ್ರದೇಶಗಳಲ್ಲಿ ಹೈಡ್ರೋಪೋನಿಕ್ಸ್ ವಿಶೇಷವಾಗಿ ಉಪಯುಕ್ತವಾಗಿದೆ ಎಂದು ಗುರುಪ್ರಸಾದ್ ನಂಬಿದ್ದಾರೆ.
“ಒಂದು ಪ್ರದೇಶದಲ್ಲಿ ಸಸ್ಯವನ್ನು ಮಣ್ಣಿನಲ್ಲಿ ಬೆಳೆಯುವುದಕ್ಕಿಂತ ಹೈಡ್ರೋಪೋನಿಕ್ಸ್ ಮೂಲಕ ಬೆಳೆದರೆ ಇಳುವರಿ ಸುಮಾರು ಮೂರರಿಂದ ಐದು ಪಟ್ಟು ಹೆಚ್ಚು. ಸಣ್ಣ ಪ್ರದೇಶಗಳಲ್ಲಿಯೂ ಅದ್ಭುತಗಳನ್ನು ಮಾಡಬಹುದು, ”ಎಂದು ಅವರು ಹೇಳುತ್ತಾರೆ. ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ಲಭ್ಯವಿದ್ದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಬರುತ್ತದೆ ಎಂದು ಗುರುಪ್ರಸಾದ್ ಹೇಳುತ್ತಾರೆ.
ರಸಗೊಬ್ಬರ ಮತ್ತು ಕೀಟನಾಶಕಗಳಂತಹ ಮಾಲಿನ್ಯಕಾರಕಗಳಿಂದ ಬೇಗ ಕಲುಷಿತಗೊಳ್ಳುವ ಮಣ್ಣಿಗೆ ಹೋಲಿಸಿದರೆ ನೀರಿನಲ್ಲಿ ಬೆಳೆಯುವಾಗ ಸಸ್ಯಗಳು ಆರೋಗ್ಯಕರವಾಗಿರುತ್ತವೆ. “ಇಲ್ಲಿ ಮಣ್ಣು ಕಡಿಮೆ ಇರುವುದರಿಂದ, ಮಣ್ಣಿನಿಂದ ಹರಡುವ ರೋಗಗಳನ್ನು ತಪ್ಪಿಸಬಹುದಾಗಿದೆ. ಹಾನಿಕಾರಕ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಮಣ್ಣು ಕಲುಷಿತಗೊಳ್ಳುತ್ತದೆ ಎಂಬ ಆತಂಕ ಇಲ್ಲಿ ಇರುವುದಿಲ್ಲ” ಎಂದು ಗುರುಪ್ರಸಾದ್ ವಿವರಿಸುತ್ತಾರೆ.
ನೀರಿನ ಜೊತೆಗೆ, ಕೊಕೊ ಪೀಟ್ ಮತ್ತು ಪೆಬಲ್ಸ್ ಗಳಂತಹ ಪೋಷಕಾಂಶಗಳಿಂದ ಸಮೃದ್ಧ ಪದಾರ್ಥವನ್ನು ಸಸ್ಯಗಳನ್ನು ಹಿಡಿದಿಡಲು ಮಾಧ್ಯಮವಾಗಿ ಇಲ್ಲಿ ಬಳಸಲಾಗುತ್ತದೆ.
ಈ ತಂತ್ರದ ಸುಸ್ಥಿರ ಅಂಶವನ್ನು ಗುರುಪ್ರಸಾದ್ ತಮ್ಮ ಬಳಿಕ ಕಲಿಯಲು ಬಂದವರಿಗೆ ಸವಿವರವಾಗಿ ವಿವರಿಸುತ್ತಾರೆ.
“ಸಾಂಪ್ರದಾಯಿಕ ಕೃಷಿಗೆ ಹೋಲಿಸಿದರೆ, ನೀರನ್ನು ಹೈಡ್ರೋಪೋನಿಕ್ಸ್ನಲ್ಲಿ ರಿ ಸರ್ಕ್ಯುಲೇಟ್ ಮಾಡಲಾಗುತ್ತದೆ ಮತ್ತು ಇದರಿಂದಾಗಿ ನಾವು ಶೇಕಡಾ 90 ರಷ್ಟು ನೀರನ್ನು ಉಳಿಸಿಕೊಳ್ಳಬಹುದು” ಎಂದು ಅವರು ಮಾಹಿತಿ ನೀಡುತ್ತಾರೆ.
ಹೈಡ್ರೋಪೋನಿಕ್ಸ್ನ ತಾಂತ್ರಿಕತೆಗಳನ್ನು ಕಲಿಸಬಲ್ಲ ವ್ಯಕ್ತಿಯನ್ನು ಹುಡುಕುವಲ್ಲಿ ನಾನು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇನೆ ಎಂದು ಗುರುಪ್ರಸಾದ್ ಹೇಳುತ್ತಾರೆ. ಕೊನೆಗೆ ಧಾರವಾಡಕ್ಕೆ ಪ್ರಯಾಣಿಸಿದ ಅವರು ಅಂತಿಮವಾಗಿ ನಿವೃತ್ತ Lt. Cdr. ಸಿವಿ ಪ್ರಕಾಶ್ ಅವರಿಂದ ಇದರ ತಂತ್ರಗಾರಿಕೆಗಳನ್ನು ಕಲಿತುಕೊಂಡರು. ತನಗೇ ಪ್ರಕಾಶ್ ಅವರೇ ಸ್ಫೂರ್ತಿ ಎಂದು ಗುರುಪ್ರಸಾದ್ ಪರಿಗಣಿಸುತ್ತಾರೆ.
ಹೈಡ್ರೋಪೋನಿಕ್ ಕೃಷಿಯನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ಪ್ರಕಾಶ್ ಪೆಟ್ ಭರೋ ಯೋಜನೆಯನ್ನು ಪ್ರಾರಂಭಿಸಿದರು.
ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಹೈಡ್ರೋಪೋನಿಕ್ಸ್ ಅನ್ನು ಕಲಿತ ನಂತರ ಮತ್ತು ಅಭ್ಯಾಸ ಮಾಡಿದ ನಂತರ, ಈ ತಂತ್ರದ ಬಗ್ಗೆ ಇತರರಿಗೆ ತಿಳಿಸಲು ಮತ್ತು ಶಿಕ್ಷಣ ನೀಡಲು ಹೆಚ್ಚಿನ ಜನರ ಲಭ್ಯತೆ ಇಲ್ಲ ಎಂಬುದನ್ನು ಗುರುಪ್ರಸಾದ್ ಅರಿತುಕೊಂಡರು. ಗ್ರಾಮೀಣ ಪ್ರದೇಶದ ರೈತರಂತೆ ಸಾಕಷ್ಟು ನಗರ ಪ್ರದೇಶಗಳ ರೈತರು ಕೂಡ ವಿಭಿನ್ನ ಕೃಷಿ ಪದ್ಧತಿಗಳ ಬಗ್ಗೆ ತಪ್ಪು ಮಾಹಿತಿಯನ್ನು ಹೊಂದುತ್ತಿದ್ದಾರೆ ಮತ್ತು ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನು ಅವರು ಕಂಡುಕೊಂಡರು. ಹೀಗಾಗಿ, ಏಪ್ರಿಲ್ 2018 ರಲ್ಲಿ ತಾನು ಸ್ಥಾಪಿಸಿದ ಕಂಪನಿಯಾದ ‘ಬೆಳೆಸಿರಿ’ ಅಡಿಯಲ್ಲಿ ಈ ವೈಜ್ಞಾನಿಕ ಕೃಷಿ ತಂತ್ರದ ಬಗ್ಗೆ ಜನರಿಗೆ ತರಬೇತಿಯನ್ನು ನೀಡಲು ಅವರು ನಿರ್ಧರಿಸಿದರು. ಅದಕ್ಕಾಗಿ ಕಾರ್ಯಾಗಾರಗಳನ್ನು ಇವರು ಆಯೋಜನೆಗೊಳಿಸುತ್ತಾರೆ.
ಇವರ ಕಾರ್ಯಾಗಾರಕ್ಕೆ ಸೇರಲು ಬಯಸುವವರಿಗೆ ಎರಡು ಆಯ್ಕೆಗಳಿವೆ. ಒಂದು ದಿನದ ಕಾರ್ಯಾಗಾರಕ್ಕೆ ರೂ.3000ವನ್ನು ಪಾವತಿಸಬೇಕು ಮತ್ತು ಎರಡು ದಿನಗಳ ಕಾರ್ಯಾಗಾರಕ್ಕೆ ರೂ.5000 ಪಾವತಿಸಬೇಕು.
ಒಂದು ದಿನದ ಕಾರ್ಯಾಗಾರ ಆರೂವರೆ ಗಂಟೆಗಳವರೆಗೆ ಇರುತ್ತದೆ. ಇಲ್ಲಿ, ವಿವಿಧ ಸಸ್ಯಗಳನ್ನು ಹೇಗೆ ಬೆಳೆಸುವುದು ಮತ್ತು ಪ್ರತಿಯೊಂದಕ್ಕೂ ಪೋಷಕಾಂಶಗಳ ವಿಶೇಷಣಗಳನ್ನು ಕಲಿಸಲಾಗುತ್ತದೆ. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಟೇಕ್ಅವೇ ಆಗಿ ಒದಗಿಸಲಾಗುವ ಚಾರ್ಟ್ನಲ್ಲಿ ಇದರ ಬಗ್ಗೆ ಬೆಳಕು ಚೆಲ್ಲಲಾಗಿರುತ್ತದೆ.
ಗುರುಪ್ರಸಾದ್ ಅವರು ಕೊಡಿಗೆಹಳ್ಳಿಯ ಗಣೇಶನಗರದಲ್ಲಿರುವ ತನ್ನ ಜಮೀನಿನಲ್ಲಿ ಕಳೆದ 18 ತಿಂಗಳುಗಳಿಂದ 300 ಕ್ಕೂ ಹೆಚ್ಚು ಜನರಿಗೆ ತರಬೇತಿಯನ್ನು ನೀಡಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಅವರಿಂದ ಹೈಡ್ರೋಪೊನಿಕ್ಸ್ ತಂತ್ರವನ್ನು ಕಲಿತ ಅವರ ವಿದ್ಯಾರ್ಥಿ ಕೊತ್ರ ಗೌಡ ಅವರು, “ಈ ತಂತ್ರವನ್ನು ಕಲಿತಿರುವುದು ನನಗೆ ನನ್ನ ಆಹಾರವನ್ನು ಬೆಳೆಸಲು ಮಾತ್ರವಲ್ಲದೆ ಉದ್ಯಮಿಯಾಗಿ ರೂಪುಗೊಳ್ಳಲೂ ಸಹಕಾರಿಯಾಯಿತು” ಎಂದು ಹೇಳುತ್ತಾರೆ. ಅವರು ಹಾವೇರಿಯ ರೈತನಾಗಿದ್ದಾರೆ.
ಗೌಡ ಅವರು ಈಗಾಗಲೇ ಹೈಡ್ರೋಪೋನಿಕ್ ಕಿಟ್ಗಳನ್ನು ಸಿದ್ಧಪಡಿಸುತ್ತಿದ್ದು, 50 ಸಸ್ಯಗಳಿಗೆ 10,000 ರಿಂದ 15,000 ರೂ. ಇದಕ್ಕೆ ತಗಲುತ್ತದೆ.
ತನ್ನ ಕಾರ್ಯ ಬದಲಾವಣೆಯನ್ನು ಸೃಷ್ಟಿಸಿದ್ದಕ್ಕೆ ಗುರು ಸಂತೋಷಪಡುತ್ತಾರೆ. “ಈ ತಂತ್ರವನ್ನು ಸ್ಕೇಲೆಬಲ್ ಮಾದರಿಯಾಗಿ ಹಳ್ಳಿಗಳಿಗೆ ಕೊಂಡೊಯ್ಯುವ ಯೋಜನೆ ನಮ್ಮಲ್ಲಿದೆ, ಇದು ರೈತರಿಗೆ ಉತ್ತಮ ಲಾಭ ಗಳಿಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳುತ್ತಾರೆ.
ವೃತ್ತಿಜೀವನವನ್ನು ಬದಲಾಯಿಸಲು ನಿರ್ಧರಿಸಿದಾಗ ಗುರುಪ್ರಸಾದ್ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. “ಇದು ನಾವು ತೆಗೆದುಕೊಳ್ಳುತ್ತಿರುವ ಅತ್ಯಂತ ಅಪಾಯದ ನಿರ್ಧಾರ ಎಂಬುದು ನನಗೆ ಮತ್ತು ನನ್ನ ಹೆಂಡತಿಗೆ ತಿಳಿದಿತ್ತು. ನಾವು ಆರಂಭದಲ್ಲಿಯೇ ಟೀಕೆಗಳನ್ನು ಎದುರಿಸಬಹುದೆಂದು ನಮಗೆ ತಿಳಿದಿತ್ತು, ಮತ್ತು ಕೆಲವರು ನಮ್ಮ ವೈಫಲ್ಯಗಳನ್ನು ನೋಡಿ ನಗಲು ಸಿದ್ಧರಾಗಿದ್ದರು. ಆದರೆ, ನಾನು ಇಷ್ಟಪಡುವುದನ್ನು ಮಾಡಲು ನಾನು ದೃಢ ನಿಶ್ಚಯವನ್ನು ಹೊಂದಿದ್ದೆ ಮತ್ತು ಯಾವುದೇ ಕಾರಣಕ್ಕೂ ಕಾರ್ಪೊರೇಟ್ ಜೀವನಕ್ಕೆ ಹಿಂತಿರುಗಲು ನಾನು ಬಯಸಿರಲಿಲ್ಲ. ಇದು ನನಗೆ ಮಾಡು ಅಥವಾ ಮಡಿ ನಿರ್ಧಾರವಾಗಿತ್ತು! ” ಎಂದು ಗುರುಪ್ರಸಾದ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.