ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕದಾದ್ಯಂತ ಮಳೆಯಿಂದ ತುಂಬಾ ಜನ ಮನೆ ಕಳೆದುಕೊಂಡು, ಜಾನುವಾರಗಳಿಗೆ ಮೇವಿಲ್ಲದೆ ಪರದಾಡುತ್ತಿವೆ. ಪ್ರತಿಯೊಬ್ಬರ ಕರಳು ಚುರ್ ಅನ್ನುವಂತಹ ಘಟನೆಗಳನ್ನು ನೋಡಿದ್ದೇವೆ. ವರುಣದೇವನ ಕೃಪೆಯಿಂದ ಆಗಿದ್ದು ಆಗಿ ಹೋಗಿದೆ. ಆದರೆ ಈಗ ಮುಖ್ಯವಾಗಿ ಆಗಬೇಕಾಗಿರೋದು ಏನೆಂದರೆ ಸಂತ್ರಸ್ತರನ್ನು ಮಾನಸಿಕವಾಗಿ ಸದೃಢಗೊಳಿಸಿ, ಅವರಿಗೆ ಧೈರ್ಯ ತುಂಬಿ, ಅವರನ್ನು ಸಂತಸದಿಂದಿರುವಂತೆ ಮಾಡಬೇಕಾಗಿದೆ.
ಈಗ ಶ್ರಾವಣ ಮಾಸ ಇರುವುದರಿಂದ ಸಾಲು ಸಾಲು ಹಬ್ಬಗಳು ಬರುತ್ತವೆ. ನಾವೆಲ್ಲ ಮನೆಯಲ್ಲಿ ಕುಳಿತು ಮನೆಯವರ ಜೊತೆ ಸಂತೋಷದಿಂದ ಹಬ್ಬಗಳನ್ನು ಮಾಡುತ್ತೇವೆ. ಆದರೆ ಪಾಪ ಆ ಸಂತ್ರಸ್ಥರಿಗೆ ಹಬ್ಬ ಮಾಡಲು ಆಗುವುದಿಲ್ಲ. ಮನೆಯಲ್ಲಿ ದೈವಭಕ್ತಿ ಕಡಿಮೆ ಆಗಿದೆ ಅನಿಸಿದರೆ ಮಾನಸಿಕವಾಗಿ ಕುಗ್ಗುವ ಪರಿಸ್ಥಿತಿ ಉತ್ತರ ಕರ್ನಾಟಕ ಭಾಗದ ಕಡೆ ಇದೆ. ಇಷ್ಟು ದಿನ ಅವರಿಗೆ ಊಟ ದಿನನಿತ್ಯದ ಸಾಮಾಗ್ರಿಗಳನ್ನು ಕೊಟ್ಟು ಬಂದಿದ್ದೇವೆ. ಇದಷ್ಟೇ ನಮ್ಮ ಸೇವೆ ಎಂದುಕೊಳ್ಳದೆ ಅವರ ಜೊತೆಗೂಡಿ ಹಬ್ಬಗಳನ್ನು ಆಚರಿಸೋಣ. ಅಂತಹದ್ದೊಂದು ನಿದರ್ಶನ ಸಂಘದ ಸ್ವಯಂಸೇವಕರಿಂದ ನಡೆದಿದೆ. ಬಾಗಲಕೋಟೆಯ ಸ್ವಯಂಸೇವಕರೊಂದಿಗೆ ಬೆಂಗಳೂರಿನಿಂದ ಸೇವೆಯ ಸಲುವಾಗಿ ಬಂದಿದ್ದ ಗೆಳೆಯರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಿದ್ದು ನಮಗೂ ಮರೆಯಲಾಗದ ಖುಷಿ ನೀಡಿದೆ.
ಬಾಗಲಕೋಟೆ ಪಕ್ಕದ ಕಲಾದಗಿ ಗ್ರಾಮದಲ್ಲಿ ಸಂಘದ ಸ್ವಯಂಸೇವಕರು ಸ್ವಾತಂತ್ರ್ಯ ದಿನವನ್ನು ಗ್ರಾಮಸ್ಥರ ಜೊತೆ ಆಚರಿಸಿ ಅವರ ಮೊಗದಲ್ಲೂ ಖುಷಿ ತರಿಸಿದ್ದು ಹೆಮ್ಮೆ ಅನಿಸುತ್ತದೆ.
ಕಲಾದಗಿ ಗ್ರಾಮದ ನಿರಾಶ್ರಿತರು ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿ ತುಂಬಾ ಖುಷಿ ಪಟ್ಟರು. ತಮ್ಮ ಮನೆ ಆಸ್ತಿ ಪಾಸ್ತಿ ಕಳೆದುಕೊಂಡೇ ಇಲ್ಲ ಅನ್ನುವ ಭಾವ ಅವರಲ್ಲಿ ವ್ಯಕ್ತವಾಗ್ತಿತ್ತು. ಚಿಕ್ಕಮಕ್ಕಳು ಖುಷಿ ಪಟ್ಟಿದ್ದು ಉಳಿದೆಲ್ಲರಿಗೂ ಮಾದರಿ ಅನಿಸುತ್ತಿತ್ತು. ಮಕ್ಕಳಿಗೆ ಪೆನ್ಸಿಲ್(ಕ್ರಿಯೋನ್ಸ್)ನಿಂದ ಭಾರತ ಬಾವುಟದ ಚಿತ್ರ ಬಿಡಿಸಲು ಹೇಳಿದಾಗಂತು ಅತಿ ಉತ್ಸಾಹದಿಂದ ಏನೂ ಆಗಿಯೇ ಇಲ್ಲ ಎನ್ನುವಂತೆ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿ ದೇಶಪ್ರೇಮ ಮೆರೆದರು. ಎಲ್ಲರಿಗೂ ಬಾವುಟ ಕೊಟ್ಟು ಮತ್ತಷ್ಟು ಖುಷಿ ಹೆಚ್ಚಿಸಿದ ನಂತರ ಎಲ್ಲರೂ ಕೂಡಿ ಭಾರತ ಮಾತೆಗೆ ಜೈಕಾರ ಹಾಕಲಾಯಿತು. ಅವರ ಘೋಷಣೆಗಳಂತು ಮುಗಿಲು ಮುಟ್ಟುವಂತಿತ್ತು. ಅದನ್ನು ಕೇಳಿದಾಗಲಂತೂ ನಮ್ಮಲ್ಲಿಯೂ ಒಂಥರ ಚೈತನ್ಯ ತುಂಬಿದಂತಾಯಿತು. ಕೊನೆಗೆ ಸಿಹಿ ಹಂಚಿ ಶುಭಾಶಯ ತಿಳಿಸಿದೆವು.
ಸಂಘ ಬಿದ್ದವರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಕಷ್ಟದಲ್ಲಿದ್ದವರನ್ನು ಕಷ್ಟಪಟ್ಟಾದರೂ ಪಾರು ಮಾಡುವ ಕೆಲಸ ಸಂಘದ ಸ್ವಯಂಸೇವಕರಿಂದ ನಡೆಯುತ್ತಿದೆ. ತ್ಯಾಗ, ತನು, ಮನ, ಧನದಿಂದ ಸಮಾಜದಲ್ಲಿ ಸ್ವಯಂಸೇವಕ ಕೆಲಸ ಮಾಡುತ್ತಿದ್ದಾನೆ. ನಮ್ಮ ಕಷ್ಟ ಮರೆತು ಕಷ್ಟದಲ್ಲಿ ಬೆಂದವರ ಮೊಗದಲ್ಲಿ ಖುಷಿ, ವಿಶ್ವಾಸ ತರಿಸೋದು ಸಂಘದ ಸಂಸ್ಕಾರದಿಂದ.
✍ ಸ್ವಯಂಸೇವಕ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.