ರಾಯಚೂರು: ಪ್ರವಾಹದಿಂದ ಮುಳುಗಿದ್ದ ಸೇತುವೆಯ ಮೇಲೆ ನಿಂತು ಅಂಬ್ಯುಲೆನ್ಸ್ವೊಂದಕ್ಕೆ ಸುರಕ್ಷಿತವಾಗಿ ಸಂಚರಿಸಲು ದಾರಿ ತೋರಿಸಿ ಕೊಟ್ಟ ರಾಯಚೂರು ಜಿಲ್ಲೆಯ 12 ವರ್ಷದ ಬಾಲಕನಿಗೆ ಜಿಲ್ಲಾಧಿಕಾರಿ ಶರತ್ ಬಿ ಅವರು ಸ್ವಾತಂತ್ರ್ಯೋತ್ಸವದ ದಿನದಂದು ಸನ್ಮಾನ ಮಾಡಿದ್ದಾರೆ.
ಪ್ರವಾಹದಲ್ಲಿ ಮಾರ್ಗ ಯಾವುದು ಎಂದು ಕಾಣದೆ ಅಂಬ್ಯುಲೆನ್ಸ್ ಪರದಾಡುತ್ತಿತ್ತು, ಈ ವೇಳೆ ಅದರ ಸಹಾಯಕ್ಕೆ ಆಗಮಿಸಿದ ಬಾಲಕ ವೆಂಕಟೇಶ್ ಪ್ರವಾಹದ ನಡುವೆಯೇ ನಿಂತು ಮಾರ್ಗವನ್ನು ತೋರಿಸಿಕೊಟ್ಟಿದ್ದ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಸೇವಾ ಮನೋಭಾವವನ್ನು ಮೆರೆದ ಬಾಲಕನಿಗೆ ಜಿಲ್ಲಾಧಿಕಾರಿ ಸನ್ಮಾನವನ್ನು ಮಾಡಿ ಪುರಸ್ಕರಿಸಿದ್ದಾರೆ.
ಹಿರೇರಾಯನಕುಂಪಿ ಗ್ರಾಮದಲ್ಲಿ 100 ಮೀಟರ್ ಉದ್ದದ ಸೇತುವೆಯಲ್ಲಿ ನೀರು ತುಂಬಿತ್ತು. ಸೇತುವೆಯಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬುದು ತಿಳಿಯದ ಅಂಬ್ಯುಲೆನ್ಸ್ ಡ್ರೈವರ್ ಆರು ಮಂದಿ ಮಕ್ಕಳನ್ನು ಆಸ್ಪತ್ರೆಗೆ ಹೇಗೆ ಒಯ್ಯುವುದೆಂದು ಗೊತ್ತಾಗದೆ ಪರದಾಡುತ್ತಿದ್ದ. ಸುತ್ತಲಲ್ಲಿದ್ದ ಜನರೂ ಸಹಾಯಕ್ಕೆ ಬರಲಿಲ್ಲ. ಆದರೆ ವೆಂಕಟೇಶ್ ಪ್ರವಾಹದ ನಡುವೆಯೇ ಬಂದು ಅಂಬ್ಯುಲೆನ್ಸ್ಗೆ ದಾರಿ ತೋರಿಸಿ ಅದು ಸುರಕ್ಷಿತವಾಗಿ ಮತ್ತೊಂದು ಬದಿಯನ್ನು ತಲುಪುವಂತೆ ಮಾಡಿದ್ದಾನೆ.
ಕರ್ನಾಟಕವು ಮಳೆರಾಯನ ಕೋಪಕ್ಕೆ ತುತ್ತಾಗಿ ಭಾರೀ ನಷ್ಟವನ್ನು ಅನುಭವಿಸಿದೆ. ಬುಧವಾರ ಸಾವಿನ ಸಂಖ್ಯೆ 61 ಕ್ಕೆ ಏರಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಪರಿಶೀಲನಾ ಕೇಂದ್ರ (ಕೆಎಸ್ಎನ್ಡಿಎಂಸಿ) ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
22 ಪ್ರವಾಹ ಪೀಡಿತ ಜಿಲ್ಲೆಗಳ ಪೈಕಿ ಗರಿಷ್ಠ ಸಾವುಗಳು ಬೆಳಗಾವಿಯಲ್ಲಿ ಸಂಭವಿಸಿವೆ, ಅಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಮಾಹಿತಿಯ ಪ್ರಕಾರ, ಕನಿಷ್ಠ 14 ಜನರು ಕಾಣೆಯಾಗಿದ್ದಾರೆ.
ರಾಜ್ಯದಲ್ಲಿ ನಿಯೋಜಿಸಲಾದ ವಿಪತ್ತು ರಕ್ಷಣಾ ತಂಡಗಳು ಈವರೆಗೆ ಏಳು ಲಕ್ಷಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ ಎಂದು ವರದಿ ತಿಳಿಸಿದೆ. ಪ್ರಸ್ತುತ 1, 096 ಕ್ಕೂ ಹೆಚ್ಚು ಪರಿಹಾರ ಶಿಬಿರಗಳಲ್ಲಿ 3,75,663 ಜನರು ಆಶ್ರಯ ಪಡೆದುಕೊಂಡಿದ್ದಾರೆ. ಪ್ರವಾಹದಿಂದಾಗಿ 859 ಪ್ರಾಣಿಗಳು ಸಾವನ್ನಪ್ಪಿವೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.