ಚೆನ್ನೈ: ಮನೆಯೊಳಗೆ ನುಗ್ಗಲು ಯತ್ನಿಸಿದ ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಪ್ಲಾಸ್ಟಿಕ್ ಕುರ್ಚಿ ಮತ್ತು ಚಪ್ಪಲಿಗಳ ಮೂಲಕ ಹೋರಾಡಿದ್ದ ತಮಿಳುನಾಡಿನ ತಿರುನ್ವೇಲಿ ಜಿಲ್ಲೆಯ ಹಿರಿಯ ದಂಪತಿಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ವಿಶೇಷ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಚಾಕು ಹಿಡಿದುಕೊಂಡು ತಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿದ ದರೋಡೆಕೋರರ ವಿರುದ್ಧ ಪಿ.ಶಣ್ಮುಗವೇಲು ಮತ್ತು ಸೆಂಥಮರೈ ದಂಪತಿ ಧೈರ್ಯದಿಂದ ಹೋರಾಡಿ ಅವರನ್ನು ಬೆನ್ನಟ್ಟಿದ್ದಾರೆ. ಈ ಅಪ್ರತಿಮ ಸಾಹಸವನ್ನು ತೋರಿಸಿದ್ದಕ್ಕಾಗಿ ದಂಪತಿಗೆ ಮುಖ್ಯಮಂತ್ರಿಗಳು 2 ಲಕ್ಷ ರೂಪಾಯಿಗಳ ನಗದು ಮತ್ತು ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.
ದರೋಡೆಕೋರರು ಪ್ರವೇಶಿಸಿದ ಸಂದರ್ಭದಲ್ಲಿ ಶಣ್ಮುಗವೇಲು ಅವರು ಮನೆಯ ಅಂಗಳದಲ್ಲಿ ಇಡಲಾಗಿದ್ದ ಕುರ್ಚಿಯಲ್ಲಿ ಕೂತಿದ್ದರು. ಸೆಂಥಮರೈ ಅವರು ಮನೆಯೊಳಗಿದ್ದರು. ದರೋಡೆಕೋರರು ಇವರನ್ನು ಬೆದರಿಸಿದ ಸಂದರ್ಭದಲ್ಲೇ ಕಾರ್ಯಪ್ರವೃತ್ತರಾದ ಅವರು ಬೊಬ್ಬೆ ಹೊಡೆದು ಕುರ್ಚಿಯಿಂದ ದರೋಡೆಕೋರರ ವಿರುದ್ಧ ದಾಳಿ ನಡೆಸಿದ್ದಾರೆ. ಬಳಿಕ ಸೆಂಥಮರೈ ಅವರು ಮನೆಯಿಂದ ಹೊರಗೆ ಓಡಿ ಬಂದು ದರೋಡೆಕೋರರನ್ನು ಹಿಮ್ಮೆಟಿಸುವ ಪ್ರಯತ್ನ ನಡೆಸಿದ್ದಾರೆ. ಚಾಕುವಿಗೂ ಹೆದರದ ದಂಪತಿ ಕೈಗೆ ಸಿಕ್ಕ ಕುರ್ಚಿ, ಚಪ್ಪಲಿಗಳಿಂದ ಮರು ದಾಳಿ ನಡೆಸಿದ್ದಾರೆ. ಇವರಿಬ್ಬರ ಪರಾಕ್ರಮಕ್ಕೆ ದರೊಡೆಕೋರರು ಸೋತು ಕಾಲ್ಕಿತ್ತಿದ್ದಾರೆ.
ದಂಪತಿ ದರೋಡೆಕೋರರ ವಿರುದ್ಧ ಹೋರಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿತ್ತು. ದಂಪತಿಯ ಧೈರ್ಯ ಮತ್ತು ಸಾಹಸಕ್ಕೆ ಭಾರೀ ಮೆಚ್ಚುಗೆಗಳೂ ವ್ಯಕ್ತವಾಗಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.