ಚೆನ್ನೈ: ಪ್ರಸಾದಗಳು, ನೈವೇದ್ಯಗಳು ಹಿಂದೂ ಪದ್ಧತಿಯ ಪ್ರಮುಖ ಸಂಪ್ರದಾಯಗಳು, ಇದೀಗ ಪಂಚಾಮೃತ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ತಮಿಳುನಾಡಿನ ಪಳನಿ ದೇಗುಲದ ‘ಪಂಚಾಮೃತ’ ಜಿಐ ಟ್ಯಾಗ್ (ಭೌಗೋಳಿಕ ಸೂಚ್ಯಾಂಕ) ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ತಮಿಳುನಾಡಿನ ದೇಗುಲವೊಂದು ತನ್ನ ಪ್ರಸಾದಕ್ಕೆ ಜಿಐ ಟ್ಯಾಗ್ ಅನ್ನು ಪಡೆದುಕೊಂಡಿದೆ.
ಪಳನಿಯ ಅರುಲ್ಮಿಗು ದಂಡಾಯುಥಪಾಣಿ ಸ್ವಾಮಿ ತಿರುಕೋಯಿಲ್ ದೇಗುಲದ ಜಂಟಿ ಆಯುಕ್ತ / ಕಾರ್ಯನಿರ್ವಾಹಕ ಅಧಿಕಾರಿ ಅವರು ಜಿಐ ಟ್ಯಾಗ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ದೇಗುಲದ ಪಂಚಾಮೃತವನ್ನು ಬಾಳೆಹಣ್ಣು, ಬೆಲ್ಲ, ಹಸುವಿನ ತುಪ್ಪ, ಜೇನುತುಪ್ಪ ಮತ್ತು ಏಲಕ್ಕಿಯ ಐದು ನೈಸರ್ಗಿಕ ಪದಾರ್ಥಗಳಿಂದ ತಯಾರು ಮಾಡಲಾಗುತ್ತದೆ. ಖರ್ಜೂರ ಮತ್ತು ಸಕ್ಕರೆಯನ್ನೂ ಪರಿಮಳ ಮತ್ತು ಸಿಹಿಗಾಗಿ ಸೇರಿಸಲಾಗುತ್ತದೆ.
ಪಂಚಾಮೃತ ಒಂದು ಅಭಿಷೇಕ ಪ್ರಸಾದವಾಗಿದ್ದು, ಇದನ್ನು ಅರೆ ಘನ ರೂಪದಲ್ಲಿ ಸಿದ್ಧಪಡಿಸಲಾಗುತ್ತದೆ. ಇದು ರುಚಿಯಲ್ಲಿ ಸಿಹಿಯಾಗಿರುತ್ತದೆ. ಪಳನಿ ಬೆಟ್ಟಗಳಲ್ಲಿರುವ ಅರುಲ್ಮಿಗು ದಂಡಾಯುಥಪಾಣಿ ಸ್ವಾಮಿ ದೇವಾಲಯದ ಪ್ರಧಾನ ದೇವರಾದ ದಂಡಾಯುಥಪಾಣಿ ಸ್ವಾಮಿಗೆ ನೀಡುವ ಮುಖ್ಯ ಅರ್ಪಣೆಗಳಲ್ಲಿ ಒಂದಾಗಿದೆ.
ಈ ಪಂಚಾಮೃತವನ್ನು ಸಿದ್ಧಪಡಿಸುವಾಗ ಒಂದೇ ಒಂದು ಹನಿ ನೀರನ್ನೂ ಬಳಸಲಾಗುವುದಿಲ್ಲ. ಇದು ಇದಕ್ಕೆ ಅರೆ ಘನ ರೂಪ ಮತ್ತು ಅದ್ಭುತವಾದ ರುಚಿಯನ್ನು ನೀಡುತ್ತದೆ. ಯಾವುದೇ ಕೃತಕ ಬಣ್ಣ ಅಥವಾ ರಾಸಾಯನಿಕಗಳನ್ನು ಇದಕ್ಕೆ ಬಳಸುವುದಿಲ್ಲ.
ಈಗಾಗಲೇ ತಮಿಳುನಾಡಿನ ತಂಜಾವೂರಿನ ವೀಣೆ, ಮಧುರೈ ಮಲ್ಲಿಗೆ, ನೀಲಗಿರಿ ಚಹಾ ಎಲೆಗಳು ಮತ್ತು ಈರೋಡ್ನ ಅರಿಶಿನಕ್ಕೆ ಜಿಐ ಟ್ಯಾಗ್ ಸಿಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.