ಶ್ರೀನಗರ: ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಜರುಗಲಿದೆ. ಮೂರು ದಿನಗಳ ಸಮಾವೇಶ ಅಕ್ಟೋಬರ್ 12 ರಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹೂಡಿಕೆದಾರರ ಸಮಾವೇಶವು ಜಮ್ಮು ಕಾಶ್ಮೀರದಲ್ಲಿ ಅಕ್ಟೋಬರ್ 12 ಮತ್ತು ಅಕ್ಟೋಬರ್ 14 ರ ನಡುವೆ ನಡೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ (ವಾಣಿಜ್ಯ ಮತ್ತು ಕೈಗಾರಿಕೆ) ಎನ್. ಕೆ. ಚೌಧರಿ ಅವರು ತಿಳಿಸಿದ್ದಾರೆ. “ಹೂಡಿಕೆದಾರರ ಸಮಾವೇಶವನ್ನು ಅಕ್ಟೋಬರ್ 12 ರಿಂದ ಅಕ್ಟೋಬರ್ 14 ರವರೆಗೆ ಆಯೋಜಿಸಲು ಜಮ್ಮು ಕಾಶ್ಮೀರ ನಿರ್ಧರಿಸಿದೆ. ಇದು ಇಲ್ಲಿ ನಡೆಯುವ ಮೊದಲ ಜಾಗತಿಕ ಸಮಾವೇಶವಾಗಿದೆ. ಸಮಾವೇಶದ ಉದ್ಘಾಟನಾ ಕಾರ್ಯಕ್ರಮವು ಅಕ್ಟೋಬರ್ 12 ರಂದು ಶ್ರೀನಗರದಲ್ಲಿ ನಡೆಯಲಿದೆ” ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸುವುದು ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶವು ಹೊಂದಿರುವ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿಕ್ಕ ಒಂದು ಅವಕಾಶವಾಗಿದೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರದ ಜನರಿಗೆ ಈಗ ಶಾಂತಿ ಮತ್ತು ಸಮೃದ್ಧಿಯನ್ನು ಆನಂದಿಸಲು ಅಪಾರ ಅವಕಾಶಗಳಿವೆ ಎಂದು ಹೇಳಿದ್ದರು.
370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಕೆಲವು ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿದರೆ, ಇದು ಪ್ರಗತಿಯ ಹಾದಿಯಲ್ಲಿನ ತಡೆಯನ್ನು ನಿವಾರಿಸುತ್ತದೆ ಮತ್ತು ಇಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುತ್ತದೆ ಎಂದು ಕೇಂದ್ರವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಹಾಯ ಮಾಡಲು ಹಲವಾರು ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸಲು ಕೇಂದ್ರ ನಿರ್ಧರಿಸಿದೆ. ಕೇಂದ್ರ ಸಚಿವಾಲಯಗಳಿಗೆ ಕೇಂದ್ರಾಡಳಿತ ಪ್ರದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಮತ್ತು ಅಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವ ಯೋಜನೆಗಳನ್ನು ಗುರುತಿಸುವಂತೆ ಕೋರಲಾಗಿದೆ. ಯೋಜಿತ ಹೂಡಿಕೆದಾರರ ಸಮಾವೇಶವು ಹೆಚ್ಚಿನ ಉದ್ಯೋಗಾವಕಾಶಗಳತ್ತ ಸಾಗುವ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.