ನವದೆಹಲಿ: ಈದ್ ಅಲ್ ಅಧಾ (ಬಕ್ರೀದ್) ಹಬ್ಬದ ಸಂದರ್ಭದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸುವ ಸಲುವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೋಮವಾರ ಕಾಶ್ಮೀರ ಕಣಿವೆಯಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.
ಜಮ್ಮು ಮತ್ತು ಕಾಶ್ಮೀರದಾದ್ಯಂತ ಈದ್-ಅಲ್-ಅಧಾವನ್ನು ಶಾಂತಿಯುತವಾಗಿ ಆಚರಿಸಲಾಗಿದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗಿದೆ. ದೋವಲ್ ಅವರು ದಕ್ಷಿಣ ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ್ದಾರೆ. ವೈಮಾನಿಕ ಸಮೀಕ್ಷೆಯ ಮೂಲಕ ಕಣಿವೆಯಲ್ಲಿ ಎಲ್ಲವೂ ಸುಸ್ಥಿತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಕಳೆದ ಸೋಮವಾರ 370 ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ದೋವಲ್ ವಹಿಸಿಕೊಂಡಿದ್ದಾರೆ. ಅವರು ಕಣಿವೆಯಲ್ಲಿ ಕೇವಲ ಭದ್ರತಾ ಕ್ರಮಗಳನ್ನು ಪರಿಶೀಲನೆ ನಡೆಸುವುದು ಮಾತ್ರವಲ್ಲದೆ ಸ್ಥಳೀಯರೊಂದಿಗೆ ಮಾತುಕತೆಗಳನ್ನು ನಡೆಸಿ ಅವರ ಅಗತ್ಯತೆಗಳು ಮತ್ತು ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
370 ನೇ ವಿಧಿಯನ್ನು ರದ್ದುಪಡಿಸಿದ ಒಂದು ವಾರದ ಬಳಿಕ, ಈದ್-ಅಲ್-ಅಧಾ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವ ಸಲುವಾಗಿ ಅನೇಕ ಜನರು ಇಲ್ಲಿನ ವಿವಿಧ ಮಸೀದಿಗಳಿಗೆ ತೆರಳುವ ಸಲುವಾಗಿ ಮನೆಗಳಿಂದ ಹೊರಬಂದಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ಶಾಂತವಾಗಿದೆ ಎಂಬುದನ್ನು ದೃಢಪಡಿಸಿದೆ.
ಬಾರಾಮುಲ್ಲಾದ ಜಮಾ ಮಸೀದಿಯಲ್ಲಿ ಕನಿಷ್ಠ 10,000 ಜನರು ಪ್ರಾರ್ಥನೆ ಸಲ್ಲಿಸಿದರೆ, ಶ್ರೀನಗರ, ಶೋಪಿಯಾನ್, ಅನಂತ್ನಾಗ್, ಬುಡ್ಗಾಮ್ ಮತ್ತು ಬಂಡೀಪೋರ್ನ ಮಸೀದಿಗಳಲ್ಲಿ ಅನೇಕ ಜನರು ಪ್ರಾರ್ಥನೆಗಳನ್ನು ಸಲ್ಲಿಕೆ ಮಾಡಿದ್ದಾರೆ. “ಜಮ್ಮು ಮತ್ತು ಕಾಶ್ಮೀರದಲ್ಲಿ ಈದ್ ದಿನ ಪ್ರಾರ್ಥನೆ ಮಾಡಲು ಅನೇಕ ಜನರು ಮಸೀದಿಗಳಲ್ಲಿ ಜಮಾಯಿಸಿದ್ದಾರೆ. ಶ್ರೀನಗರ ಮತ್ತು ಶೋಪಿಯಾನ್ನ ಪ್ರಮುಖ ಮಸೀದಿಗಳಲ್ಲಿ ಪ್ರಾರ್ಥನೆಗಳು ಶಾಂತಿಯುತವಾಗಿ ಮುಕ್ತಾಯಗೊಂಡಿವೆ. 4500 ಕ್ಕೂ ಹೆಚ್ಚು ಜನರು ಈದ್ಗಾ ಜಮ್ಮುವಿನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ” ಎಂದು ಗೃಹ ಸಚಿವಾಲಯದ ಮಾಹಿತಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.