ಜನಜೀವನವನ್ನು, ಪ್ರಾಣಿ ಸಂಕುಲವನ್ನು ಅಪಾಯಕ್ಕೆ ದೂಡಿ ಆರ್ಭಟಿಸಿದ್ದ ಮಳೆರಾಯ ಈಗ ಶಾಂತನಾಗಿದ್ದಾನೆ. ಆತನ ಆರ್ಭಟದಿಂದಾಗಿ ಈಗಾಗಲೇ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಮನೆ ಮಠವನ್ನು ಕಳೆದುಕೊಂಡಿದ್ದಾರೆ. ಎಷ್ಟು ಪ್ರಾಣಿ ಪಕ್ಷಿಗಳ ಪ್ರಾಣಪಕ್ಷಿ ಹಾರಿ ಹೋಯಿತು ಎಂಬುದಕ್ಕೆ ಲೆಕ್ಕವೇ ಇಲ್ಲ. ಪ್ರಸ್ತುತ ಮಳೆ ಕಡಿಮೆಯಾದರೂ ಕೂಡ ಜಲಾವೃತಗೊಂಡಿದ್ದ ಪ್ರದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ಪರಿಹಾರ ಕಾರ್ಯಗಳು ಚುರುಕುಗೊಂಡಿದ್ದು, ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ನೆಲೆ ಕಲ್ಪಿಸುವ ಸಲುವಾಗಿ ಅವಿರತ ಪ್ರಯತ್ನಗಳು ಮುಂದುವರೆದಿದೆ.
ಪ್ರವಾಹಕ್ಕೆ ಸಿಕ್ಕಿ ನಲುಗಿದ ಪ್ರದೇಶಗಳು ಸಹಜ ಸ್ಥಿತಿಗೆ ಮರಳಲು ಇನ್ನೂ ತಿಂಗಳುಗಟ್ಟಲೆ ಸಮಯವೇ ಬೇಕಿದೆ. ಪ್ರವಾಹ ಬಂದ ತಕ್ಷಣ ಪ್ರಾಣಹಾನಿ, ಆಸ್ತಿಪಾಸ್ತಿಗೆ ಹಾನಿ, ಬೆಳೆಗಳ ನಾಶ, ಜಾನುವಾರುಗಳ ನಷ್ಟ ಸಂಭವಿಸುತ್ತದೆ ಎಂಬುದು ಎಲ್ಲಿರಿಗೂ ತಿಳಿದಿರುವ ಸಂಗತಿ. ಆದರೆ ಪ್ರವಾಹ ಬಂದು ಹೋದ ಬಳಿಕ ರೋಗಗಳು ಹರಡುತ್ತವೆ. ಪ್ರವಾಹದಿಂದ ರಕ್ಷಿಸಲ್ಪಟ್ಟವರು ರೋಗಗಳಿಂದ ಸಾವಿಗೀಡಾಗಬಹುದಾದ ಸಂಭವಗಳೂ ಇರುತ್ತವೆ. ಈ ನಿಟ್ಟಿನಲ್ಲಿ ನಾವು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಪ್ರವಾಹದ ನಂತರದ ಸ್ವಚ್ಛಗೊಳಿಸುವಿಕೆಯ ಕಾರ್ಯ ಅಷ್ಟು ಸುಲಭದ ಮಾತಲ್ಲ. ಎಲ್ಲಿಂದಲೋ ಬಂದ ಕೊಳಚಿ, ಪ್ರಾಣಿ ಪಕ್ಷಿಗಳ, ಮನುಷ್ಯರ, ಸರಿಸೃಪಗಳು ಕೊಳೆತ ಶವಗಳು ನಮ್ಮ ಮನೆಯನ್ನು, ನಮ್ಮ ಪರಿಸರವನ್ನು ಬಂದು ಸೇರಿಕೊಳ್ಳುತ್ತವೆ. ನೆರೆ ನೀರಿನೊಂದಿಗೆ ಒಳಚರಂಡಿ ಹಾಗೂ ಮೋರಿ ನೀರು ಕೂಡ ಹರಿದು ದುರ್ವಾಸನೆಯನ್ನು ಬೀರುತ್ತವೆ. ಮಾತ್ರವಲ್ಲ ನೀರಿನೊಂದಿಗೆ ಹಾವು, ಮೀನುಗಳು ತೇಲಿ ಬರುತ್ತವೆ. ಮಣ್ಣು ಹಾಗೂ ಕಸಕಡ್ಡಿಗಳೂ ಕೊಚ್ಚಿ ಬರುತ್ತವೆ. ಇವುಗಳನ್ನು ಸ್ವಚ್ಛಗೊಳಿಸುವುದೇ ದೊಡ್ಡ ದುಸ್ಸಾಹಸವಾಗಿ ಪರಿಣಮಿಸುತ್ತದೆ. ಸಕಾಲಿಕವಾಗಿ ಇದನ್ನು ಸೂಕ್ತವಾದ ರೀತಿಯಲ್ಲಿ ಸ್ಚಚ್ಛಗೊಳಿಸದೇ ಹೋದರೆ ಹಲವು ಸೋಂಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇವುಗಳಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳು ಎಲ್ಲೆಡೆಯೂ ಪಸರಿಸಿ ರೋಗ ರುಜಿನಗಳು ಹರಡುವಂತೆ ಮಾಡುತ್ತವೆ. ನೆರೆಯಿಂದ ಸಂಭವಿಸುವ ಕೊಚ್ಚೆಗಳು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಪರಿಣಾಮ ಡೆಂಗೆ, ಚಿಕೂನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಹಾಗೂ ಚರ್ಮ ರೋಗಗಳೂ ಕಾಣಿಸಿಕೊಳ್ಳುತ್ತವೆ.
ಹೀಗಾಗಿ ಪ್ರವಾಹ ಬಂದು ಹೋದ ಬಳಿಕ ನಾಗರಿಕರು ಎಚ್ಚೆತ್ತುಕೊಂಡು ಶುದ್ಧೀಕರಣ ಕಾರ್ಯವನ್ನು ಅತ್ಯಂತ ಸುರಕ್ಷಿತವಾದ ವಿಧಾನದಲ್ಲಿ ಕೈಗೊಳ್ಳಬೇಕಾಗುತ್ತದೆ. ಕೊಳೆತ ಶವಗಳನ್ನು ತೆರವು ಮಾಡುವುದರಿಂದ ಹಿಡಿದು ಕಸಕಡ್ಡಿ, ತಾಜ್ಯಗಳನ್ನು ನಿರ್ಮೂಲನೆ ಮಾಡುವ ಕಾರ್ಯವನ್ನು ತ್ವರಿತಗತಿಯಲ್ಲಿ ಅತ್ಯಂತ ಸುರಕ್ಷಿತವಾದ ವಿಧಾನವನ್ನು ಅನುಸರಿಸಿ ಮಾಡಬೇಕಿದೆ. ಬಾವಿ ಇತ್ಯಾದಿ ಕುಡಿಯುವ ನೀರಿನ ಮೂಲಗಳಿಗೆ ಕೆಟ್ಟ ನೀರು ಸೇರಿದ್ದರೆ ಅಂತಹ ನೀರನ್ನು ಶುದ್ಧೀಕರಣಗೊಳಿಸದ ವಿನಃ ಕುಡಿಯಲೇ ಬಾರದು. ನೆರೆಯ ನೀರಿನಿಂದ ಒದ್ದೆಯಾದ ಆಹಾರ ಸಾಮಾಗ್ರಿಗಳನ್ನೂ ಬಳಸದಿರುವುದೇ ಒಳಿತು. ಪಾತ್ರೆ ಪಗಡೆಗಳನ್ನು, ಬಳಕೆಯ ವಸ್ತುಗಳನ್ನು ಸೂಕ್ತವಾಗಿ ಸ್ವಚ್ಛಗೊಳಿಸಿದ ಬಳಿಕವೇ ಬಳಸಿಕೊಳ್ಳಬೇಕು. ಮನೆ, ಪರಿಸರದ ಸುತ್ತಮುತ್ತ ನೀರು ನಿಂತಿದ್ದರೆ ತಕ್ಷಣ ಅದನ್ನು ಹರಿಯುವಂತೆ ಮಾಡಬೇಕು, ಇಲ್ಲವಾದರೆ ಅದು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಾಡಾಗಬಹುದು.
ಮಕ್ಕಳು ಮತ್ತು ವಯೋವೃದ್ಧರ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಾಂಕ್ರಾಮಿಕ ರೋಗಗಳಿಗೆ ಅವರು ತುತ್ತಾಗುವ ಸಂಭವಗಳು ಹೆಚ್ಚಿರುತ್ತವೆ. ಮನೆ ಮಂದಿ ಕುಡಿಯುವ ನೀರಿನ ಮೇಲೆ ನಿಗಾ ಇಟ್ಟಿರುವುದು ಇನ್ನೂ ಅಗತ್ಯ. ಕೆಟ್ಟ ಬ್ಯಾಕ್ಟೀರಿಯಾಗಳು ನಾವು ಬಳಸಬಹುದಾದ ಪ್ರತಿಯೊಂದು ವಸ್ತುವಿನ ಮೇಲೂ ಇರಬಹುದಾದ ಸಾಧ್ಯತೆ ಇರುವುದರಿಂದ ಮುಂಜಾಗೃತೆ ವಹಿಸುವುದು ಅತ್ಯಂತ ಅನಿವಾರ್ಯವಾಗುತ್ತದೆ.
ಪ್ರವಾಹಗಳು ದೈಹಿಕವಾಗಿ ಮನಷ್ಯನನ್ನು ಕುಗ್ಗಿಸುವುದು ಮಾತ್ರವಲ್ಲ, ಮಾನಸಿಕವಾಗಿಯೂ ಕುಗ್ಗಿಸುತ್ತದೆ. ಮನೆ ಮಠ, ಬಂಧು ಬಾಂಧವರನ್ನು ಕಳೆದುಕೊಂಡ ಅನೇಕ ಮಂದಿ ಖಿನ್ನತೆಗೆ ಜಾರುವ ಸಂಭವಗಳೂ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಹೆಗಲು ಕೊಡಬೇಕಾದುದು ಎಲ್ಲರ ಕರ್ತವ್ಯವಾಗುತ್ತದೆ. ಶೈಕ್ಷಣಿಕ ಜೀವನ ಹಾಳಾಯಿತೆಂದೋ, ತನ್ನವರನ್ನು ಕಳೆದುಕೊಂಡೆನೆಂದೋ ಅಥವಾ ಜೀವಮಾನದಲ್ಲಿ ಗಳಿಸಿದ್ದನ್ನೆಲ್ಲಾ ಕಳೆದುಕೊಂಡೆನೆಂದೋ ಜಿಗುಪ್ಸೆಗೆ ಒಳಗಾದರೆ ಜೀವನ ನರಕವಾಗುತ್ತದೆ. ಪ್ರಕೃತಿಗೆ ಎದುರಾಗಿ ಯಾವುದೂ ಇಲ್ಲ ಎಂಬುದು ನಿಜ, ನಮ್ಮನ್ನು ಕ್ಷಣ ಮಾತ್ರದಲ್ಲೇ ಧೂಳಿಪಟ ಮಾಡುವ ಸಾಮರ್ಥ್ಯ ಅದಕ್ಕಿದೆ. ಆದರೆ ಮನುಷ್ಯನ ಆತ್ಮಸ್ಥೈರ್ಯಕ್ಕೆ ಶೂನ್ಯದಿಂದ ಅರಮನೆಯನ್ನು ಕಟ್ಟುವಷ್ಟು ಸಾಮರ್ಥ್ಯವಿದೆ. ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡರೂ ನಾವು ಬದುಕಬಲ್ಲೆವು ಮತ್ತು ಬದುಕಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.