ಕೊಳಕನ್ನು ನೋಡಿಯೂ ನೋಡದಂತೆ ಹೋಗುವುದು ಹಲವರಿಗೆ ಸಾಮಾನ್ಯ ಸಂಗತಿಯೇ ಆಗಿರಬಹುದು, ಆದರೆ ಚೆನ್ನೈ ಮೂಲದ ಪರಿಸರವಾದಿ ಅರುಣ್ ಕೃಷ್ಣಮೂರ್ತಿ ಅವರು ಸ್ಥಳಿಯ ಕೆರೆಗೆ ಕ್ವಿಂಟಾಲ್ಗಟ್ಟಲೆ ತ್ಯಾಜ್ಯಗಳು ಸೇರುತ್ತಿರುವುದನ್ನು ನೋಡಿ ಗೂಗಲ್ ಸಂಸ್ಥೆಯಲ್ಲಿನ ಕೈತುಂಬಾ ವೇತನ ಸಿಗುವ ಕೆಲಸವನ್ನೇ ತ್ಯಜಿಸಿದ್ದಾರೆ. ಕೆಲಸವನ್ನು ತ್ಯಜಿಸಿ ಕೆರೆಗಳನ್ನು ಮಾಲಿನ್ಯ ಮುಕ್ತವನ್ನಾಗಿಸುವಲ್ಲಿ ಕಾರ್ಯೋನ್ಮುಖಗೊಂಡಿರುವ ಅವರು ಇದುವರೆಗೆ 14 ರಾಜ್ಯಗಳ 93 ನೀರಿನ ಮೂಲಗಳಾದ ಕೆರೆ, ಕೊಳಗಳನ್ನು ಪುನರುಜ್ಜೀವನಗೊಳಿಸಿದ್ದಾರೆ.
ಸಮುದಾಯ ನೇತೃತ್ವದ ಆಂದೋಲನವೊಂದು, ಲಾಭರಹಿತ ವನ್ಯಜೀವಿ ಸಂರಕ್ಷಣೆ ಮತ್ತು ಆವಾಸಸ್ಥಾನ ಪುನಃಸ್ಥಾಪನೆ ಸಮೂಹವಾದ ಎನ್ವಿರಾನ್ಮೆಂಟಲಿಸ್ಟ್ ಫೌಂಡೇಶನ್ ಆಫ್ ಇಂಡಿಯಾ (ಇಎಫ್ಐ) ಆಗಿ ರೂಪುಗೊಂಡಿದೆ. 2007 ರಲ್ಲಿ ಇದು ಪ್ರಾರಂಭವಾದಾಗಿನಿಂದ, ಕೆರೆಗಳು ಮತ್ತು ಕೊಳಗಳಿಂದ ಕಸ ಮತ್ತು ಹಾನಿಕಾರಕ ತ್ಯಾಜ್ಯಗಳನ್ನು ತೆಗೆದುಹಾಕುವ ಕೆಲಸವನ್ನು ಇದು ಮಾಡುತ್ತಲೇ ಬಂದಿದೆ. ಈ ಮೂಲಕ ಪ್ರಕೃತಿಯ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾದ ಅಂಶಗಳನ್ನು ಪುನಃಶ್ಚೇತನಗೊಳಿಸುತ್ತಿದೆ. ಈ ಸಂಸ್ಥೆಯ ಮೂಲಕ ಕೃಷ್ಣಮೂರ್ತಿ ಪರಿಸರ ಸಂರಕ್ಷಣೆಯ ತಮ್ಮ ಕಾರ್ಯವನ್ನು ಸಕ್ರಿಯಗೊಳಿಸಿದ್ದಾರೆ.
ಜಲಮೂಲಗಳ ಮೇಲಿನ ಕೃಷ್ಣಮೂರ್ತಿಯವರ ಪ್ರೀತಿಯು ಎಳೆಯ ವಯಸ್ಸಿನಲ್ಲೇ ಪ್ರಾರಂಭವಾಯಿತು, ಸುತ್ತಲೂ ಕೆರೆ ಕೊಳಗಳಿರುವ ಪರಿಸರದಲ್ಲಿ ಅವರು ಬೆಳೆದಿದ್ದು ಇದಕ್ಕೆ ಕಾರಣ. ಪರಿಸರವಾದಿಯಾಗಿ ಅವರು ತಮ್ಮ ವೈಭವೋಪೇತ ಜೀವನವನ್ನು ತ್ಯಜಿಸಿದ್ದಾರೆ ಮತ್ತು ಕಪ್ಪೆಗಳು, ಮೀನುಗಳು, ಪಕ್ಷಿಗಳು ಮತ್ತು ಹಸಿರಿನಿಂದ ಶುದ್ಧವಾದ ಸರೋವರಗಳನ್ನು ನೋಡಲು, ಅದರೊಂದಿಗೆಯೇ ಬೆಳೆಯಲು, ಅದನ್ನು ಸಂರಕ್ಷಿಸಲು ಜೀವನವನ್ನು ಮುಡುಪಾಗಿಡಲು ಅವರು ದೃಢನಿಶ್ಚಯ ಮಾಡಿದ್ದಾರೆ.
ಗೂಗಲ್ನಲ್ಲಿದ್ದ ದೊಡ್ಡ ಉದ್ಯೋಗವನ್ನು ತೊರೆಯುವುದು ನನಗೇನೂ ಕಷ್ಟದ ಕೆಲಸವಾಗಿರಲಿಲ್ಲ ಎಂದು ಕೃಷ್ಣಮೂರ್ತಿ ಹೇಳುತ್ತಾರೆ. ಯಾಕೆಂದರೆ ಜೀವನದಲ್ಲಿ ಅವರು ಮಾಡಿದ ಯಾವುದೇ ನಿರ್ಧಾರವೂ ಅನಿಶ್ಚಿತತೆಯನ್ನು ಹೊಂದಿರಲಿಲ್ಲ. ಸ್ವಚ್ಛ ಮತ್ತು ಹಸಿರು ವಾತಾವರಣಕ್ಕಾಗಿ ಜಲಮೂಲಗಳನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಅವರು ಪ್ರಾರಂಭಿಸಿದ್ದಾರೆ. ಚೆನ್ನೈನಲ್ಲಿನ ಜಲಮೂಲಗಳನ್ನು ಸಂರಕ್ಷಿಸಲು ಆರಂಭಿಸಿದಾಗ ಅವರಿಗೆ ಸ್ಥಳೀಯ ಪಂಚಾಯತ್ನಿಂದ ಬೆಂಬಲ ವ್ಯಕ್ತವಾಯಿತು. ನಂತರ ಅವರ ಪ್ರಯತ್ನಗಳನ್ನು ಇತರ ನಗರಗಳಿಗೂ ವಿಸ್ತರಿಸಿದರು. ಅಂದಿನಿಂದ ಈ ಯುವ ಪರಿಸರ ಉತ್ಸಾಹಿ ಎಂದಿಗೂ ಹಿಂತಿರುಗಿ ನೋಡಲೇ ಇಲ್ಲ.
“ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುತ್ತೇವೆ. ನಾವು ಯಾವುದೇ ಹಣವನ್ನು ಪಡೆಯುವುದಿಲ್ಲ, ಆದರೆ ಅನುಮತಿಗಳು ಮತ್ತು ಅನುಮೋದನೆಗಳಿಗಾಗಿ ಸರ್ಕಾರವನ್ನು ಅವಲಂಬಿಸಿದ್ದೇವೆ. ದೇಶಾದ್ಯಂತ ಜಲಮೂಲ ಸಂರಕ್ಷಣೆ, ಪ್ರಕೃತಿ ಸಂರಕ್ಷಣೆಯ ಬಗ್ಗೆ ಸಕಾರಾತ್ಮಕ ಟ್ರೆಂಡ್ ಇದೆ, ಹೀಗಾಗಿ ಸಿಹಿನೀರಿನ ಕೆರೆಗಳು ಮತ್ತು ಕೊಳಗಳನ್ನು ಪುನರುಜ್ಜೀವನಗೊಳಿಸುವ ನಮ್ಮಂತಹ ಸಮುದಾಯ ಗುಂಪುಗಳನ್ನು ಸಜ್ಜುಗೊಳಿಸಲು ಆಡಳಿತವು ಬಹಳ ಉತ್ಸುಹುಕತೆಯನ್ನು ತೋರಿಸುತ್ತಿದೆ “ಎಂದು ಕೃಷ್ಣಮೂರ್ತಿ ಹೇಳುತ್ತಾರೆ.
ಅವರ ಕೆಲಸದಿಂದ ಪ್ರೇರಿತರಾಗಿ, ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಪರಿಸರ ಸಂರಕ್ಷಣಾ ಪರಿಣತರವರೆಗಿನ ಜನರು ಅವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ. “ಭಾರತ ಮತ್ತು ಅದರ ಪರಿಸರಕ್ಕಾಗಿ ಇಎಫ್ಐ ಜೊತೆ ಸ್ವಯಂಸೇವಕರು” ಎಂಬ ಘೋಷಣೆಯೊಂದಿಗೆ ಜನರು ಅವರ ಕಾರ್ಯಕ್ಕೆ ಕೈಜೋಡಿಸಲು ಇತರರಿಗೆ ಕರೆ ನೀಡುತ್ತಾರೆ. ಚೆನ್ನೈನ ಎಗತೂರ್ ಕೊಳ, ಕಿನಾತುಕಾಡವು ಕೊಳಗಳು, ಟುಟಿಕೋರಿಯಲ್ಲಿನ ಪೀ ಕುಲಂ ಸೇರಿದಂತೆ ಇತರ ಹಲವಾರು ಜಲಮೂಲಗಳಲ್ಲಿನ ಕಸ, ಆಕ್ರಮಣಕಾರಿ ಕಳೆಗಳನ್ನು ತೆರವುಗೊಳಿಸಿ ಅದನ್ನು ಪುನಃಶ್ಚೇತನಗೊಳಿಸುವಲ್ಲಿ ಈ ಸಂಸ್ಥೆಯು ಇದುವರೆಗೆ ಯಶಸ್ವಿಯಾಗಿದೆ.
ಪುನಃಸ್ಥಾಪನೆ ಪ್ರಯತ್ನಗಳನ್ನು ಮೋಜುಗೊಳಿಸಲು ಮತ್ತು ಮಕ್ಕಳಿಗಾಗಿ ಆಕರ್ಷಕವಾಗಿ ಮಾಡಲು, ಇಎಫ್ಐ ‘ಸೈಕ್ಲೇಕ್ಸ್’ ಎಂಬ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಿದೆ. ಇದು ವಾರಾಂತ್ಯ ಆಧಾರಿತ ಸೈಕಲ್ ಪ್ರವಾಸವಾಗಿದ್ದು, ಕೊಳ, ಕೆರೆಗಳಿಗೆ ಭೇಟಿ ನೀಡುವ ಅವಕಾಶವನ್ನು ಇಲ್ಲಿ ಮಾಡಿಕೊಡಲಾಗುತ್ತದೆ. ನೈಸರ್ಗಿಕ ಅದ್ಭುತಗಳ ಆಂತರಿಕ ಗುಣಲಕ್ಷಣಗಳನ್ನು ಮಕ್ಕಳಿಗೆ ತಿಳಿಸುವ ಉದ್ದೇಶ ಈ ಪ್ರವಾಸದ ಹಿಂದಿದೆ. ತಮ್ಮ ಫಿಟ್ನೆಸ್ ಕಾಳಜಿಯನ್ನು ಪರಿಸರದೊಂದಿಗೆ ಅನಾವರಣಗೊಳಿಸಲು ಬಯಸುವವರಿಗೂ ಇದು ಉತ್ತಮ ಪ್ರವಾಸವಾಗಿದೆ.
ಇಎಫ್ಐನ ಮತ್ತೊಂದು ಸೃಜನಶೀಲ ಮತ್ತು ಸಂವಾದಾತ್ಮಕ ಕಾರ್ಯಕ್ರಮವೆಂದರೆ ‘ವಾಲ್-ಇ’ – ಜಾಗೃತಿ ಮೂಡಿಸುವ ಗೋಡೆ ಪೇಂಟಿಂಗ್ ಕಾರ್ಯ. ಇದರ ಮೂಲಕ ಸ್ವಯಂಸೇವಕರು ಭಾರತದ ವನ್ಯಜೀವಿಗಳು ಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಜೀವವೈವಿಧ್ಯತೆಯ ಮಾಹಿತಿಯನ್ನು ಒಳಗೊಂಡಿರುವ ಚಿತ್ರಗಳನ್ನು ಸಾರ್ವಜನಿಕ ಗೋಡೆಗಳಲ್ಲಿ ಬಿಡಿಸುತ್ತಾರೆ.
ಜಾಗೃತಿ ಬೆಳೆಯುತ್ತಿದ್ದಂತೆ, ಹೆಚ್ಚು ಹೆಚ್ಚು ಜನರು ಮತ್ತು ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಬೆಂಬಲಿಸಲು ಆರಂಭಿಸಿದ್ದಾರೆ. ಸರ್ಕಾರದ ಮಾರ್ಗದರ್ಶನದ ಹೊರತಾಗಿ, ಇವರ ಪ್ರಯತ್ನಗಳಿಗೆ ದಿ ಹಿಂದೂಜಾ ಫೌಂಡೇಶನ್, ದಿ ಮುರುಗಪ್ಪ ಗ್ರೂಪ್, ಶ್ರೀರಾಮ್ ಗ್ರೂಪ್ ಸೇರಿದಂತೆ ಪಾಲುದಾರ ಸಂಸ್ಥೆಗಳು ಹಣ ಮತ್ತು ಸ್ವಯಂಸೇವಕರ ಮೂಲಕ ಬೆಂಬಲ ನೀಡುತ್ತಾ ಬರುತ್ತಿವೆ.
ಕೃಷ್ಣಮೂರ್ತಿಯವರ ಜಲಸಂಪನ್ಮೂಲಗಳ ಪುನಃಸ್ಥಾಪನೆ ಪ್ರಯತ್ನಗಳಿಗಾಗಿ ಎಂಟರ್ಪ್ರೈಸ್ 2012ನಲ್ಲಿ ರೋಲೆಕ್ಸ್ ಅವಾರ್ಡ್ ದೊರೆತಿದೆ. ಇದು ಭೂಮಿಯಲ್ಲಿನ ಜೀವನವನ್ನು ಸುಧಾರಿಸುವ, ಜ್ಞಾನವನ್ನು ವಿಸ್ತರಿಸುವ, ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ಪ್ರಸ್ತಾಪಿಸುವ ಅಥವಾ ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ನವೀನ ಯೋಜನೆಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಬೆಂಬಲಿಸುವ ಉದ್ದೇಶಕ್ಕಾಗಿ ನೀಡುವ ಅವಾರ್ಡ್ ಆಗಿದೆ.
ನೈಸರ್ಗಿಕ ಜಲಮೂಲಗಳ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಅವರಿಗೆ ಶಿಕ್ಷಣ ನೀಡುವುದು ಕಾರ್ಯಕರ್ತರಿಗೆ ಕಠಿಣವೆಂದು ಸಾಬೀತಾಗಿದೆ. “ಶುದ್ಧನೀರಿನ ಮೂಲವನ್ನು ಸಂರಕ್ಷಿಸುವ ಅಗತ್ಯವನ್ನು ಅರ್ಥ ಮಾಡಿಸುವುದು ಮತ್ತು ಸ್ಥಳೀಯ ಸಮುದಾಯವನ್ನು ಮನವೊಲಿಸುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ನಾವು ನಮ್ಮ ಕಾರ್ಯದಲ್ಲಿ ಸ್ಥಳೀಯ ಸಮುದಾಯವನ್ನು ತೊಡಗಿಸಿಕೊಂಡರೆ, ನಂತರ ನಾವು ನೀರಿನ ಮೂಲದ ಬಗ್ಗೆ ಚಿಂತಿಸಬೇಕಾಗಿಲ್ಲ. ಮಾಲಿನ್ಯ, ಅತಿಕ್ರಮಣಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ನಿರ್ಮೂಲನೆ ಮಾಡಬಹುದು” ಎಂದು ಅವರು ಹೇಳುತ್ತಾರೆ.
ನೈಸರ್ಗಿಕ ಸೌಂದರ್ಯವನ್ನು ಸಂರಕ್ಷಿಸಲು ಪ್ರತಿಯೊಬ್ಬರಿಗೂ ಸಂದೇಶವನ್ನು ನೀಡುವ ಕೃಷ್ಣಮೂರ್ತಿಯವರು, “ಭಾರತದ ಪರಿಸರವು ಆಕರ್ಷಕವಾಗಿದೆ, ನಮ್ಮ ರಾಷ್ಟ್ರದ ನೈಸರ್ಗಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದನ್ನು ನಾವು ಕಲಿಯಬೇಕು ಮತ್ತು ಅದರ ಸಕಾಲಿಕ ಸಂರಕ್ಷಣೆಯತ್ತ ಕೆಲಸ ಮಾಡುವುದನ್ನು ಪ್ರಾರಂಭಿಸಬೇಕು” ಎನ್ನುತ್ತಾರೆ.
ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ, ಪುಣೆ, ಹೈದರಾಬಾದ್, ಕೊಯಮತ್ತೂರು, ಪುದುಚೇರಿ, ತಿರುವನಂತಪುರಂ, ಬೆಂಗಳೂರು, ತಿರುನೆಲ್ವೇಲಿ ಮತ್ತು ಅಹಮದಾಬಾದ್ ಮುಂತಾದ ನಗರಗಳಲ್ಲಿ ಪ್ರಭಾವ ಬೀರಿರುವ ಇಎಫ್ಐ ಪ್ರಸ್ತುತ 39 ಸಕ್ರಿಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಶೀಘ್ರದಲ್ಲೇ ವಿಜಯವಾಡ, ಮೈಸೂರು ಮತ್ತು ಕನ್ಯಾಕುಮಾರಿಯಲ್ಲಿ ಪೂರ್ಣ ಸಮಯದ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.