ಬೆಳಗಾವಿ: ಮಹಾಮಳೆಗೆ ಕರ್ನಾಟಕದ ಅರ್ಧ ಭಾಗ ತತ್ತರಿಸಿ ಹೋಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು, ಕೊಡಗು, ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿಯವರೆಗೆ ಮಹಾಮಳೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೊಡುಗೆ ಜಿಲ್ಲೆಯಲ್ಲಿ ನಿನ್ನೆಗಿಂತಲೂ ಇಂದು ಮಳೆಯ ಆರ್ಭಟ ಜೋರಾಗಿದೆ. ಭಾಗಮಂಡಲದಲ್ಲಿ ಜಲದಿಗ್ಬಂಧನವಾಗಿದ್ದು, ಅಕ್ಷರಶಃ ದ್ವೀಪದಂತೆ ಗೋಚರಿಸುತ್ತಿದೆ. ಪ್ರವಾಹ ಪರಿಸ್ಥಿತಿ ಇಲ್ಲಿ ತಲೆದೋರಿದ್ದು ಗ್ರಾಮಗಳಿಗೆ ಕತ್ತಲೆ ಆವರಿಸಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಕರಡಿಗೋಡು, ನಾಪೋಕ್ಲು, ಭೇತ್ರಿ ಭಾಗದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಆ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.
ಇನ್ನು ಯಾದಗಿರಿ ಜಿಲ್ಲೆಯಲ್ಲೂ ಪ್ರವಾಹ ಏರ್ಪಟ್ಟಿದೆ. ಕೃಷ್ಣಾ ಕಣಿವೆಯಲ್ಲಿ ಎಡಬಿಡದೆ ಮಳೆಯಾಗುತ್ತಿರುವ ಪರಿಣಾಮ ಸುರಪುರ ಸೇರಿದಂತೆ ಹಲವು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಹ ಭೀತಿಯಲ್ಲಿವೆ.
ಬೆಳಗಾವಿಯಲ್ಲೂ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ, ಬೆಳಗಾವಿ ಮತ್ತು ಚಿಕ್ಕೋಡಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಗೋಖಾಕ್ ತಾಲೂಕಿನ ಕೊಣ್ಣೂರು ಪಟ್ಟಣ ಮುಳುಗಡೆಯಾಗಿದೆ.
ಇನ್ನೂ ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳ ನಡುವೆ ಸಂಪರ್ಕವನ್ನು ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ಮಾರ್ಗದ ಛಾರ್ಮಾಡಿ ಘಾಟಿಯಲ್ಲಿ 9 ಕಡೆ ಭೂಕುಸಿತ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಎರಡು ದಿನ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಕಾರವಾರ ಜಿಲ್ಲೆಯಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು, ಕಾಳಿ ನದಿ ಉಕ್ಕಿ ಹರಿಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.