ಸುಷ್ಮಾ ಸ್ವರಾಜ್.. ವಿವರಣೆ ನೀಡುವ ಅವಶ್ಯಕತೆ ಇಲ್ಲ. ಭಾರತೀಯ ಜನತಾ ಪಕ್ಷದ ಮೇರು ನಾಯಕಿ, ಕೇಂದ್ರ ಸರ್ಕಾರದ ಅದ್ವಿತೀಯ ವಿದೇಶಾಂಗ ಮಂತ್ರಿ, ಭಾರತ ಕಂಡಂತಹ ಶ್ರೇಷ್ಠ ರಾಜಕಾರಣಿ. ಅವರ ಬಗ್ಗೆ ಹೇಳಲು ಹೋದರೆ ಅದು ಮುಗಿಯುವುದೇ ಇಲ್ಲ. ಸುಷ್ಮಾ ಸ್ವರಾಜ್, ಅವರ ಹೆಸರಿನಲ್ಲಿ ಸ್ವರಾಜ್ ಇದೆ. ಹಾಗಾಗಿ ಅವರನ್ನು ಸುಷ್ಮಾ ತಾಯಿ ಎಂದು ಕರೆಯಬಹುದು ಅನ್ನಿಸುತ್ತದೆ. ನೂತನ ಸರ್ಕಾರದ ರಚನೆಯ ವೇಳೆ ಅವರು ಮಾಡಿದ ಭಾವನಾತ್ಮಕ ಟ್ವೀಟ್ ಬಹಳವಾಗಿ ಕಾಡುತ್ತಿದೆ. “ಪ್ರಧಾನ ಮಂತ್ರಿಯವರೇ, ಐದು ವರ್ಷಗಳ ಕಾಲ ನನಗೆ ವಿದೇಶಾಂಗ ಮಂತ್ರಿಯಾಗಿ ಭಾರತೀಯರ ಮತ್ತು ಅನಿವಾಸಿ ಭಾರತೀಯರ ಸೇವೆಯ ಭಾಗ್ಯವನ್ನು ಕರುಣಿಸಿದ್ದೀರಿ. ವೈಯಕ್ತಿಕವಾಗಿಯೂ ನಾನು ಇದರಿಂದ ಸಾಕಷ್ಟು ಗೌರವ ಪಡೆದಿದ್ದೇನೆ. ಇದಕ್ಕಾಗಿ ನಾನು ನಿಮಗೆ ಋಣಿಯಾಗಿರುತ್ತೇನೆ. ದೇವರಲ್ಲಿ ಪ್ರಾರ್ಥಿಸುವುದೆನೆಂದರೆ, ನಮ್ಮ ಸರ್ಕಾರ ನೂರ್ಕಾಲ ಬೆಳಗಲಿ.” ಇದೇನಾದರೂ ಅವರನ್ನು ಸಂಪುಟದಿಂದ ಅಲಕ್ಷಿಸಿದಾಗ ಆಡಿದ ಮಾತುಗಳಂತೆ ಇದೆಯೇ? ಖಂಡಿತ ಇಲ್ಲ. ಸುಷ್ಮಾ ಸ್ವರಾಜ್ರವರು ತಮ್ಮ ಸೇವೆಯ ನೆನಪು ಮತ್ತು ತನಗೆ ಸಂದ ಗೌರವದೊಂದಿಗೆ ಜೀವನಯಾತ್ರೆ ಮುಗಿಸಿದ್ದಾರೆ. ಆರೋಗ್ಯದ ಸಮಸ್ಯೆಯ ನಡುವೆಯೂ ವಿಶ್ವವೇ ಮೆಚ್ಚುವಂತೆ ಪದವಿ ನಿರ್ವಹಿಸಿದ ಅವರು ಬಯಸಿಯೇ ಈ ಸರ್ಕಾರದಿಂದ ದೂರ ಉಳಿದಿದ್ದರು. ಸಾಧಕರ ಜೀವನವೇ ಒಂದು ಸಂದೇಶ ಎಂಬ ಮಾತಿದೆ. ಸುಷ್ಮಾ ಸ್ವರಾಜ್ರವರ ಜೀವನವನ್ನು ಒಮ್ಮೆ ಮೆಲುಕು ಹಾಕೋಣ.
ಫೆಬ್ರವರಿ 14, 1952 ರಲ್ಲಿ ಹರಿಯಾಣದ ಅಂಬಾಲದಲ್ಲಿ ಜನಿಸಿದರು. ಮೂಲತಃ ಅವಿಭಜಿತ ಭಾರತದ ಲಾಹೋರ್ ಮೂಲದವರಾದ ತಂದೆ ಹರ್ದೇವ್ ಶರ್ಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು. ಹಾಗಾಗಿ ರಾಷ್ಟ್ರೀಯ ಚಿಂತನೆಗಳು ರಕ್ತಗತವಾಗಿ ಬಂದಿದ್ದವು. ಬಾಲ್ಯವನ್ನು ಅಂಬಾಲದಲ್ಲಿ ಕಳೆದ ಸುಷ್ಮಾ ಸ್ವರಾಜ್ರವರು ಸಂಸ್ಕೃತ ಮತ್ತು ರಾಜ್ಯಶಾಸ್ತ್ರಗಳ ಪದವಿಯನ್ನು ಅಲ್ಲಿಯೇ ಪಡೆದರು. ನಂತರ ನ್ಯಾಯಶಾಸ್ತ್ರದ ಪದವಿಯನ್ನು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪಡೆದರು. 1973 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಉತ್ತಮ ವಾಗ್ಮಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಹರಿಯಾಣದ ಭಾಷಾ ಇಲಾಖೆಯಿಂದ ಸತತ ಮೂರು ವರ್ಷ ರಾಜ್ಯ ಮಟ್ಟದ ಉತ್ತಮ ಹಿಂದಿ ವಾಗ್ಮಿ ಪ್ರಶಸ್ತಿ ಪಡೆದಿದ್ದರು. ಮೊದಲೇ ಹೇಳಿದಂತೆ ಸಂಘದ ಹಿನ್ನೆಲೆಯವರಾದ್ದರಿಂದ ರಾಷ್ಟ್ರೀಯ ಚಿಂತನೆ ಮತ್ತು ಮೌಲ್ಯಗಳತ್ತ ಆಕರ್ಷಿತರಾಗಿದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿಗೆ ಸೇರುವುದರೊಂದಿಗೆ ರಾಜಕೀಯ ಜೀವನ ಶುರುವಾಯಿತು. ಆದರೆ ಸುಷ್ಮಾ ಸ್ವರಾಜ್ ಅವರಿಗೆ ಭಾರತ ಕಂಡಂತಹ ಶ್ರೇಷ್ಠ, ಪ್ರಾಮಾಣಿಕ ಸಮಾಜವಾದಿ ಜಾರ್ಜ್ ಫರ್ನಾಂಡಿಸ್ರ ನಿಕಟವರ್ತಿ ಸ್ವರಾಜ್ ಕೌಶಾಲ್ ಪತಿಯಾಗಿ ಸಿಕ್ಕಿದ್ದು ಹಾಲು ಜೇನು ಸೇರಿದಂತೆ ಆಗಿತ್ತು. ಈ ಸಂದರ್ಭದಲ್ಲಿ ಫರ್ನಾಂಡಿಸ್ರ ಬಳಗಕ್ಕೆ ಸೇರಿದ ಸುಷ್ಮಾ ಸ್ವರಾಜ್ ತುರ್ತು ಪರಿಸ್ಥಿತಿಯ ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡು ರಾಷ್ಟ್ರ ಮಟ್ಟದ ನಾಯಕಿಯಾದರು. ಅವರ ರಾಜಕೀಯ ಜೀವನ ಒಂದು ಸಾಗರದಷ್ಟಿದೆ. ಅಂಬಾಲದಿಂದ ಹರಿಯಾಣ ಸರ್ಕಾರಕ್ಕೆ 1977 ರಲ್ಲಿ ಪಾದಾರ್ಪಣೆ ಮಾಡಿದವರು ಮತ್ತೆ ಹಿಂತಿರುಗಿ ನೋಡುವ ಪ್ರಸಂಗ ಬರಲಿಲ್ಲ.
1977 ರಲ್ಲಿ ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಹರಿಯಾಣದ ಜನತಾ ಪಕ್ಷದ ಸರ್ಕಾರದಲ್ಲಿ ಸಚಿವೆಯಾದರು. ಹರಿಯಾಣದ ಅತಿ ಕಿರಿಯ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. 1979 ರಲ್ಲಿ ಹರಿಯಾಣದಲ್ಲಿ ಜನತಾ ಪಕ್ಷದ ರಾಜ್ಯಾಧ್ಯಕ್ಷೆಯಾದರು. 1987 ರಲ್ಲಿ ಮತ್ತೆ ಶಿಕ್ಷಣ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. 1996 ರಲ್ಲಿ ದಕ್ಷಿಣ ದೆಹಲಿ ಕ್ಷೇತ್ರದಿಂದ ಗೆದ್ದು ವಾಜಪೇಯಿಯವರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ನಿಭಾಯಿಸಿದರು. 1998 ರಲ್ಲಿ ದೆಹಲಿಯ ಮೊದಲ ಮಹಿಳಾ ಮತ್ತು ಒಟ್ಟಾರೆ ಐದನೆಯ ಮುಖ್ಯಮಂತ್ರಿಯಾಗಿದ್ದರು. ಅಲ್ಲಿ ಪಕ್ಷ ಚುನಾವಣೆ ಸೋತ ನಂತರ ಕೇಂದ್ರ ಸರ್ಕಾರಕ್ಕೆ ಮರಳಿದರು. 12 ನೆಯ ಲೋಕಸಭೆಗೆ ದಕ್ಷಿಣ ದೆಹಲಿ ಕ್ಷೇತ್ರದಿಂದ ಆಯ್ಕೆಯಾಗಿ, ಮಾಹಿತಿ ಮತ್ತು ಪ್ರಸಾರ ಖಾತೆ ಜೊತೆಗೆ ದೂರಸಂಪರ್ಕ ಖಾತೆಯನ್ನು ಪಡೆದರು. ಈ ಸಂದರ್ಭದಲ್ಲಿ ಅವರು ಮಾಡಿದ ಒಂದು ಕಾರ್ಯವನ್ನು ಸಿನಿಮಾ ರಂಗ ಇಂದಿಗೂ ನೆನೆಯುತ್ತದೆ. ಅದೇನೆಂದರೆ ಚಲನಚಿತ್ರ ಕ್ಷೇತ್ರವನ್ನು ಒಂದು ಉದ್ಯಮ ಎಂದು ಪ್ರಕಟಿಸಿದರು. ಇದರಿಂದ ಹಲವಾರು ಸಿನಿಮಾ ತಯಾರಕರಿಗೆ ಬ್ಯಾಂಕ್ ಸಾಲ ದೊರೆಯುವಂತಾಯಿತು. 1999 ರಲ್ಲಿ ಒಂದು ಮಹತ್ವದ ಘಟನೆ ನಡೆಯಿತು. 13 ನೆಯ ಲೋಕಸಭೆಗೆ ಸುಷ್ಮಾ ಅವರು ಕರ್ನಾಟಕದ ಬಳ್ಳಾರಿಯಿಂದ ಸೋನಿಯಾ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿದರು. ಅದು 1951-52 ರಿಂದಲೂ ಕಾಂಗ್ರೆಸ್ನ ಭದ್ರಕೋಟೆ. ಕನ್ನಡದಲ್ಲಿ ಭಾಷಣ ಮಾಡಿ, ಮನ ಗೆದ್ದ ಸುಷ್ಮಾ ಸ್ವರಾಜ್ ಅವರು ಕೇವಲ ಹನ್ನೆರಡು ದಿನದ ಪ್ರಚಾರದಲ್ಲಿ 358000 ಮತಗಳ ಪಡೆದು, 7% ಮತಗಳ ಅಂತರದಲ್ಲಿ ಸೋತರು. ಇದು ಅವರಿಗಿದ್ದ ಅದಮ್ಯ ಜನರ ವಿಶ್ವಾಸದ ಗುರುತಾಗಿತ್ತು. 2009 ರಲ್ಲಿ ವಿಧಿಶಾ ಕ್ಷೇತ್ರದಿಂದ ಗೆದ್ದು, ಎಲ್ ಕೆ ಅಡ್ವಾಣಿಯವರ ಅನುಪಸ್ಥಿತಿಯಲ್ಲಿ ಯಶಸ್ವಿಯಾಗಿ ವಿರೋಧ ಪಕ್ಷವನ್ನು ಮುನ್ನಡೆಸಿದರು. 2014 ರಲ್ಲಿ ಮತ್ತೆ ವಿಧಿಶಾ ಕ್ಷೇತ್ರದಿಂದ ಗೆದ್ದು, ನರೇಂದ್ರ ಮೋದಿಯವರ ಸಂಪುಟದಲ್ಲಿ ವಿದೇಶಾಂಗ ಖಾತೆ ನಿರ್ವಹಿಸಿದರು. ಇಂದಿರಾ ಗಾಂಧಿ ನಂತರ ಭಾರತದ ಎರಡನೆಯ ಮಹಿಳಾ ವಿದೇಶಾಂಗ ಸಚಿವೆಯಾದರು. ನಂತರ ಅವರು ಮಾಡಿದ ನಿರ್ವಹಣೆ ಹಾಗೂ ಬದಲಾವಣೆಗಳು ಅಮೋಘ ಎನಿಸುತ್ತವೆ.
* ಅಂತರಾಷ್ಟ್ರೀಯ ಸಮಸ್ಯೆಗಳೊಂದಿಗೆ ಭಾರತೀಯರ ಸಮಸ್ಯೆಗಳಿಗೆ ಟ್ವಿಟರ್ ಮೂಲಕ ಮುಟ್ಟಿ, ಪರಿಹರಿಸಿದ್ದು.
* ಹನ್ನೊಂದು ಬಾರಿ ಸುಷ್ಮಾ ಸ್ವರಾಜ್ ಮತ್ತು ಅವರ ಸಚಿವಾಲಯ ಕಟ್ಟುಪಾಡುಗಳನ್ನು ಮುರಿದು ನೆರವಿನ ಹಸ್ತ ಚಾಚಿದ್ದಾರೆ.
* ಜರ್ಮನಿಯಲ್ಲಿ ಪಾಸ್ಪೋರ್ಟ್ ಮತ್ತು ಹಣ ಕಳೆದುಕೊಂಡ ಮಹಿಳೆಗೆ ಸಹಾಯ ಮಾಡಿದ್ದು.
* ಅನಾರೋಗ್ಯ ಪೀಡಿತ ಹಲವು ದೇಶಗಳ ನಾಗರೀಕರಿಗೆ, ಪಾಕಿಸ್ತಾನಿ ಪ್ರಜೆಗಳಿಗೂ ವೀಸಾ ನೀಡಿದ್ದು.
* ಪಾಕಿಸ್ತಾನದ ಕುರಿತು ನೋಡುವುದಾದರೆ, ಕೆಲವು ನಿರ್ದಿಷ್ಟ ದಾಖಲೆಗಳಿಗೆ ಬದಲಾಗಿ ಪೋಲೀಸ್ ವಿಚಾರಣೆ ಇಲ್ಲದೆಯೂ ಪಾಸ್ಪೋರ್ಟ್ ನೀಡಿದ್ದರು. ಪಾಕಿಸ್ತಾನದ ಕಾರ್ಯದರ್ಶಿಗಳ ಜೊತೆ ಮಾತುಕತೆ ಸ್ಥಗಿತಗೊಳಿಸಿದರು.
* ವಿದೇಶೀ ಹೂಡಿಕೆಯ ವಿಚಾರದಲ್ಲಿ, 55 ಬಿಲಿಯನ್ ಡಾಲರ್ ಮೊತ್ತವನ್ನು ಭಾರತಕ್ಕೆ ತಂದರು. ಇದರಿಂದ 43% ಹೂಡಿಕೆ ಹೆಚ್ಚಳವಾಯಿತು.
* ಸಾರ್ಕ್ ದೇಶಗಳ ನಡುವಿನ ದಕ್ಷಿಣ ಚೀನಾ ಸಮುದ್ರ ವಿವಾದ, ತೀಸ್ತಾ ಒಪ್ಪಂದ ವಿಚಾರದಲ್ಲಿ ಉತ್ತಮ ನಿರ್ವಹಣೆ ತೋರಿದರು.
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸ್ಥಾನ ಭದ್ರ ಪಡಿಸಲು ಪ್ರಯತ್ನ ಮಾಡಿದರು. ಚೀನಾವನ್ನು ಸುಮ್ಮನಾಗಿಸಿದರು.
* ದಕ್ಷಿಣ ಏಷ್ಯಾದ ದೇಶಗಳ ನಡುವೆ ಬಾಂಧವ್ಯ ಬೆಸೆಯಲು ಪೂರ್ವದತ್ತ ನೀತಿಗೆ ಹಲವಾರು ದೇಶಗಳಿಗೆ ಭೇಟಿ ನೀಡಿದರು.
ಇನ್ನೂ ಮೊದಲಾದ ಹಲವು ಸಾಧನೆಗಳ ತೋರಿದ ಸುಷ್ಮಾ ಸ್ವರಾಜ್ ಅವರು ಹಲವಾರು ದಾಖಲೆಗಳ ಹೊಂದಿದ್ದಾರೆ. ಅವುಗಳನ್ನು ನೋಡೋಣ.
* 1977 ರಲ್ಲಿ ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಹರಿಯಾಣದ ಜನತಾ ಪಕ್ಷದ ಸರ್ಕಾರದಲ್ಲಿ ಅತೀ ಕಿರಿಯ ಸಚಿವೆಯಾದರು.
* ಎರಡೇ ವರ್ಷದಲ್ಲಿ ಹರಿಯಾಣದಲ್ಲಿ ಜನತಾ ಪಕ್ಷದ ರಾಜ್ಯಾಧ್ಯಕ್ಷೆಯಾದರು.
* ಬಿಜೆಪಿಯ ಮೊದಲ ಮಹಿಳಾ ವಕ್ತಾರರು, ಮುಖ್ಯಮಂತ್ರಿ, ಕೇಂದ್ರ ಸಚಿವೆ, ಕಾರ್ಯದರ್ಶಿ, ವಿಪಕ್ಷ ಅಧ್ಯಕ್ಷೆ, ಮಹಿಳಾ ವಿದೇಶಾಂಗ ಸಚಿವೆ.
* 2019 ರಲ್ಲಿ ನೇಪಾಳದ ಭೂಕಂಪದ ವೇಳೆ ತೋರಿದ ಸಹಾಯಕ್ಕಾಗಿ, ಸ್ಪೇನ್ ದೇಶದ “Grand Cross of Order Of Civil Merit” ಗೌರವ ಪಡೆದರು.
* ಅಮೇರಿಕಾದ ಪ್ರಸಿದ್ಧ ಪತ್ರಿಕೆ US Wall Street Journal ಇಂದ “ಭಾರತದ ಅತ್ಯಂತ ಪ್ರೀತಿ ಪಾತ್ರ” ಹೆಗ್ಗಳಿಕೆಗೆ ಪಾತ್ರರಾದರು.
* ಭಾರತದ “ಉತ್ತಮ ಸಂಸದೀಯ ಪಟು” ಗೌರವ ಪಡೆದ ಏಕೈಕ ಮಹಿಳಾ ಸಂಸದೆ.
ಸುಷ್ಮಾ ಸ್ವರಾಜ್ರವರು ಅಧಿಕಾರ ವಹಿಸಿಕೊಂಡಾಗ, ಒಂದು ಹೆಣ್ಣು ಏನು ತಾನೆ ಮಾಡಿಯಾರು? ಮೋದಿಯವರಿಗೆ ಕೈಗೊಂಬೆ ಬೇಕಿತ್ತು ಅಂದವರು ಎಷ್ಟೋ ಜನ. ಭಾರತೀಯ ವಿದೇಶಾಂಗ ಇಲಾಖೆಯನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದವರು ಸುಷ್ಮಾ ಸ್ವರಾಜ್. ಟ್ವಿಟರ್ ಅನ್ನು ಇವರಷ್ಟು ಪರಿಣಾಮಕಾರಿಯಾಗಿ ಬಳಸಿದವರು ಇಲ್ಲವೇನೋ. ಸಾಮಾಜಿಕ ಜಾಲತಾಣದಿಂದ ಹಿಡಿದು ವಿದೇಶಿ ಬಾಂಧವ್ಯದ ತನಕ ಎಲ್ಲವನ್ನೂ ದೇಶದ ಹಿತಕ್ಕಾಗಿ ಬಳಸಿ, ಭಾರತವನ್ನು ವಿಶ್ವಗುರು ಮಾಡಲು ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ನಿಖರತೆ, ಪ್ರಾಮಾಣಿಕತೆ ಮತ್ತು ಆ ಧೈರ್ಯ ಅದ್ಬುತ. ಇಂತಹ ರಾಜಕಾರಣಿಯ ಪಡೆದ ಭಾರತೀಯರು ಧನ್ಯ. ಮನೆತನದ ಹೆಸರಿನಲ್ಲಿ, ಯಾರಿಗೂ ಸಲಾಮು ಹೊಡೆದು ಅವರು ದೆಹಲಿಯ ಸಂಸತ್ತಿಗೆ ಬಂದು ನಿಂತಿದ್ದಲ್ಲ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ಹಿಡಿದು, ವಿದೇಶಾಂಗ ಇಲಾಖೆಯ ತನಕ ತಮ್ಮ ಛಾಪನ್ನು ಮೂಡಿಸಿದ್ದಾರೆ. ಪ್ರಸ್ತುತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಅವರು, ಆದೇ ಕಾರಣದಿಂದ ಚುನಾವಣೆಯಿಂದ ದೂರ ಉಳಿದಿದ್ದರು. ನಿವೃತ್ತಿಯ ವಯಸ್ಸು ಮೀರಿ ಎಷ್ಟೋ ಕಾಲವಾದರೂ ಪ್ರಧಾನಿ ಹುದ್ದೆಗೆ ತಡಕಾಡುವ, ಕುಟುಂಬ ಪ್ರೇಮ ಮೆರೆಯುವ ರಾಜಕಾರಣಿಗಳ ನಡುವೆ ಅವರು ತೀರ ಭಿನ್ನರಾಗಿ ನಿಲ್ಲುತ್ತಾರೆ. ಇದು ಒಬ್ಬ ಶ್ರೇಷ್ಠ ರಾಜಕಾರಣಿಯ ಹಿರಿಮೆಯಾಗಿದೆ.
ಇಂದು ಸುಷ್ಮಾ ನಮ್ಮೊಂದಿಗೆ ಇಲ್ಲ, ಆದರೆ ಅವರು ಬಿಟ್ಟು ಹೋದ ನೆನಪುಗಳು, ಅವರು ನೀಡಿದ ಸೇವೆ, ಮಾಡಿದ ಸಾಧನೆಗಳು ಸದಾ ಚಿರಂತನವಾಗಿ ಉಳಿಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.