ನವದೆಹಲಿ: 17 ನೇ ಲೋಕಸಭೆಯ ಮೊದಲ ಅಧಿವೇಶನವು ಫಲದಾಯಕತೆ ಮತ್ತು ಮಸೂದೆಗಳ ಅಂಗೀಕಾರದ ವಿಷಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತದೆ ಎಂದು ಗುರುವಾರ ನವದೆಹಲಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸತ್ತಿನಲ್ಲಿ ಪರಿಚಯಿಸಲಾದ ಎಲ್ಲಾ 36 ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
36 ಮಸೂದೆಗಳಲ್ಲಿ 23 ಮಸೂದೆಗಳನ್ನು ಶುಕ್ರವಾರ ಉಭಯ ಸದನಗಳಲ್ಲಿ ಅಂಗೀಕರಿಸಲಾಗುವುದು ಎಂದು ಜೋಶಿ ಭರವಸೆ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರ 36 ಮಸೂದೆಗಳನ್ನು ಪರಿಚಯಿಸಿದೆ.
“ನಾವು ಎಲ್ಲಾ ಮಸೂದೆಗಳನ್ನು ಅಂಗೀಕರಿಸಲು ಬಯಸುತ್ತೇವೆ. ಈ ಅಧಿವೇಶನದ ಅಂತ್ಯದ ವೇಳೆಗೆ, ಆಗಸ್ಟ್ 7 ರಂದು ಈ ಅಧಿವೇಶನವು ಮಸೂದೆಗಳ ಅಂಗೀಕಾರ ಮತ್ತು ಕಾರ್ಯನಿರ್ವಹಿಸಿದ ಅವಧಿಯ ವಿಷಯಲ್ಲಿ ಇತಿಹಾಸವನ್ನು ಸೃಷ್ಟಿಸಲಿದೆ ಎಂದು ನಾನು ಭಾವಿಸಿದ್ದೇನೆ. 17 ನೇ ಲೋಕಸಭೆಯ ಮೊದಲ ಅಧಿವೇಶನವು ಇತಿಹಾಸದಲ್ಲಿ ಹೆಚ್ಚಿನ ಫಲದಾಯಕತೆಯನ್ನು ಪಡೆದ ಅಧಿವೇಶನ ಎಂದು ಪರಿಗಣಿಸಲ್ಪಡಲಿದೆ. ಇದು ಹೊಸ ದಾಖಲೆಯನ್ನೇ ಸೃಷ್ಟಿಸುತ್ತದೆ” ಎಂದು ಜೋಶಿ ಹೇಳಿದ್ದಾರೆ.
ಸಂಸತ್ತಿನ ಎಲ್ಲ ಪಕ್ಷಗಳ ಸಂಸದರಿಗೆ ಧನ್ಯವಾದ ತಿಳಿಸಿದ ಅವರು, ವಿರೋಧ ಪಕ್ಷಗಳ ಸಹಕಾರದೊಂದಿಗೆ ಮಸೂದೆಗಳನ್ನು ಅಂಗೀಕರಿಸಲಾಗುತ್ತದೆ ಎಂದಿದ್ದಾರೆ.
“ಪ್ರತಿಪಕ್ಷಗಳ ಸಹಕಾರದಿಂದ ದಾಖಲೆ ಸಂಖ್ಯೆಯ ಮಸೂದೆಗಳ ಅಂಗೀಕಾರ ಸಾಧ್ಯವಿದೆ. ಮುಂದಿನ ಎರಡು-ಮೂರು ದಿನಗಳವರೆಗೆ ಅದೇ ಸಹಕಾರವನ್ನು ನಾವು ನಿರೀಕ್ಷಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಾವು ಸದನಗಳನ್ನು ನಿರ್ವಹಿಸಲು ಸಮರ್ಥರಾಗಿದ್ದೇವೆ” ಎಂದು ಹೇಳಿದ್ದಾರೆ.
ಲೋಕಸಭೆಗೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳುತ್ತಿದೆ. ಪ್ರತಿಪಕ್ಷಗಳ ಬಲ ಅಲ್ಲಿ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ. “ಆದರೆ ನಾವು ಮಾತುಕತೆಯ ಮೂಲಕ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ಕೆಳಮನೆಯಾದ ಲೋಕಸಭೆಯು ಗುರುವಾರ ಮೂರು ಮಸೂದೆಗಳನ್ನು ಅಂಗೀಕರಿಸಿದೆ. ಅವೆಂದರೆ – ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2019; ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ತಿದ್ದುಪಡಿ) ಮಸೂದೆ 2019, ಮತ್ತು ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಮಸೂದೆ 2019.
ಮೂರು ಮಸೂದೆಗಳಾದ – ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ 2019, ಅಣೆಕಟ್ಟು ಸುರಕ್ಷತಾ ಮಸೂದೆ 2019 ಮತ್ತು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2019 – ಅನ್ನು ಲೋಕಸಭೆಯು ಶುಕ್ರವಾರ ಕೈಗೆತ್ತಿಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.