ಸಿಡ್ನಿ: ಭಾರತೀಯ ಮೂಲದ ಆಸ್ಟ್ರೇಲಿಯನ್ ರಾಜಕಾರಣಿ ದೀಪಕ್ ರಾಜ್ ಗುಪ್ತಾ ಅವರು ಮಂಗಳವಾರ ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ (ಎಸಿಟಿ) ಲೆಜಿಸ್ಲೇಟಿವ್ ಅಸೆಂಬ್ಲಿಯ ಸದಸ್ಯರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು. ಭಗವದ್ಗೀತೆಯ ಮೇಲೆ ಅವರು ಪ್ರಮಾಣವಚನವನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು.
ಗುಪ್ತಾ ಅವರು, ಆಸ್ಟ್ರೇಲಿಯಾದ ಗುಂಗಾಹ್ಲಿನ್ ಕ್ಷೇತ್ರದ ಶಾಸಕರಾಗಿ ಪವಿತ್ರ ಭಗವದ್ಗೀತೆಯ ಪ್ರತಿಯನ್ನು ಕೈಯಲ್ಲಿಟ್ಟುಕೊಂಡು ಪ್ರಮಾಣ ವಚನ ಸ್ವೀಕರಿಸಿದರು. ಎಸಿಟಿಯಲ್ಲಿ ಲೇಬರ್ ಪಾರ್ಟಿಯ ಮೊದಲ ಭಾರತೀಯ ಮೂಲದ ಆಸ್ಟ್ರೇಲಿಯನ್ ಸಂಸದ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ದೀಪಕ್ ರಾಜ್ ಗುಪ್ತಾ, ತಮ್ಮ ವಿದ್ಯಾಭ್ಯಾಸವನ್ನು ನಡೆಸುವುದಕ್ಕಾಗಿ ಚಂಡೀಗಢದ ರೆಸ್ಟೋರೆಂಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಕಾರುಗಳನ್ನು ತೊಳೆಯುತ್ತಿದ್ದರು. ಇಂದು ಅವರು ಆಸ್ಟ್ರೇಲಿಯಾದಲ್ಲಿ ಸಂಸದರಾಗಿ ನೇಮಕವಾಗಿದ್ದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.
ಅವರು 1989 ರಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಧ್ಯಯನ ಮಾಡಲು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದರು ಮತ್ತು 1991 ರಲ್ಲಿ ಅವರಿಗೆ ಅಲ್ಲಿ ಪಿಆರ್ ನೀಡಲಾಯಿತು.
ದೀಪಕ್ ರಾಜ್ ಗುಪ್ತಾ ಅವರು ಆಸ್ಟ್ರೇಲಿಯಾದಲ್ಲಿ ಸಂಸದನಾಗಿರುವುದಕ್ಕೆ ಚಂಡೀಗಢದಲ್ಲಿರುವ ಅವರ ಕುಟುಂಬ ಅತೀವ ಸಂತಸವನ್ನು ವ್ಯಕ್ತಪಡಿಸಿದೆ. ನಿಜಕ್ಕೂ ಇದು ನಮಗೆ ರೋಮಾಂಚನಕಾರಿಯಾದ ಸಂಗತಿ ಎಂದು ಅವರ ಸಹೋದರ ಅನಿಲ್ ರಾಜ್ ಹೇಳಿಕೊಂಡಿದ್ದಾರೆ.
ಕ್ಯಾನ್ಬೆರಾದ ನಾಲ್ಕನೇ ನಗರವಾದ ಗುಂಗಾಹ್ಲಿನ್ ಕ್ಷೇತ್ರಕ್ಕೆ 2016 ರಲ್ಲಿ ನಡೆದ ಚುನಾವಣೆಯಲ್ಲಿ ದೀಪಕ್ ರನ್ನರ್ ಅಪ್ ಆಗಿದ್ದರು. ಲೇಬರ್ ಪಕ್ಷದ ವಿಜೇತರು ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ, ದೀಪಕ್ ಅವರನ್ನು ಅಸೆಂಬ್ಲಿಗೆ ನಾಮನಿರ್ದೇಶನ ಮಾಡಲಾಗಿದೆ.
ಎಸಿಟಿ ಅಸೆಂಬ್ಲಿಯಲ್ಲಿ ಭಗವದ್ಗೀತೆಯನ್ನು ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದ ಮೊದಲ ಚುನಾಯಿತ ಸದಸ್ಯ ಎಂಬ ಹೆಗ್ಗಳಿಕೆ ದೀಪಕ್ ಗುಪ್ತಾ ಅವರದ್ದಾಗಿದೆ. ಆಸ್ಟ್ರೇಲಿಯನ್-ಭಾರತೀಯ ಸಮುದಾಯದ ಸಕ್ರಿಯ ನಾಯಕರೂ ಆಗಿರುವ ಅವರು, ಭಾರತೀಯ ಸಮುದಾಯಕ್ಕೆ ಸಲ್ಲಿಸಿದ ಸೇವೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.