ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯ ಅಂಗೀಕಾರ ಆಧುನಿಕ ಭಾರತದ ಸಂಸದೀಯ ಇಚ್ಛಾಶಕ್ತಿಯನ್ನು ಪುನಃಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಇತಿಹಾಸ ಪುಟಗಳಲ್ಲಿ “ಹೀರೋ” ಆಗಿ ಹೊರಹೊಮ್ಮಿದ್ದಾರೆ. ಇಸ್ಲಾಮಿಕ್ ನಾಗರಿಕತೆಯಲ್ಲಿ ಶ್ರೇಷ್ಠ ಸಾಮಾಜಿಕ ಸುಧಾರಣೆಯನ್ನು ತಂದವರು ಎಂಬ ಕೀರ್ತಿಯನ್ನು ಅವರು ಪಡೆದುಕೊಳ್ಳಲಿದ್ದಾರೆ. ದೀರ್ಘಕಾಲದಿಂದ ಅಂಗೀಕಾರಕ್ಕಾಗಿ ಕಾಯುತ್ತಿದ್ದ ಈ ಸಾಮಾಜಿಕ ಸುಧಾರಣೆಯನ್ನು ಅವರು ಪ್ರತಿಪಕ್ಷಗಳ ಧೀರ್ಘ ಮನವೊಲಿಸುವಿಕೆಯ ಪ್ರಯತ್ನಗಳ ಮೂಲಕ ಸಾಕಾರ ಮಾಡಿಕೊಂಡಿದ್ದಾರೆ. ಭಾರತವು ಮೋದಿಯವರ ನಾಯಕತ್ವದಲ್ಲಿ, ಸಾಮಾಜಿಕ ಸುಧಾರಣೆಗಳನ್ನು ಪ್ರಾರಂಭಿಸುವುದರಲ್ಲಿ ಏಷ್ಯಾದ ನಾಯಕ ಎನಿಸಿಕೊಳ್ಳುವಂತಾಗಿದೆ.
ತ್ರಿವಳಿ ತಲಾಖ್ ನಿಷೇಧಿಸುವ ಕಾಯ್ದೆ ಕೇವಲ ಮಹಿಳೆಯರ ಸಬಲೀಕರಣವಲ್ಲ, ಮಹಿಳೆಯರಿಗೆ ಬೇಕಾಬಿಟ್ಟಿಯಾಗಿ ವಿಚ್ಛೇಧನ ನೀಡುವ ಮುಸ್ಲಿಂ ಪುರುಷರಿಗೆ ಇದು ನಿಯಂತ್ರಣವೂ ಆಗಿದೆ. ಯಾಕೆಂದರೆ ಈ ಕಾನೂನನ್ನು ಉಲ್ಲಂಘಿಸುವವರು ಕ್ರಿಮಿನಲ್ ಕಾರ್ಯವಿಧಾನದ ಸಂಹಿತೆಯ ವ್ಯಾಪ್ತಿಗೆ ಬರುತ್ತಾರೆ. ಅಪರಾಧ ಎಸಗಿದ ಆಧಾರದಲ್ಲಿಯೇ ಅವರಿಗೆ ಶಿಕ್ಷೆಯನ್ನು ನೀಡಲಾಗುತ್ತದೆ.
ಸರ್ಕಾರವು 2018ರ ಸೆಪ್ಟೆಂಬರ್ ಮತ್ತು 2019 ರ ಫೆಬ್ರವರಿಯಲ್ಲಿ ಎರಡು ಬಾರಿ ತ್ರಿವಳಿ ತಲಾಖ್ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಸುಗ್ರೀವಾಜ್ಞೆ, 2019 ರ ಪ್ರಕಾರ, ತ್ರಿವಳಿ ತಲಾಖ್ ಕಾನೂನುಬಾಹಿರ ಮತ್ತು ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ. ತನ್ನ ಹೆಂಡತಿಗೆ ತ್ರಿವಳಿ ತಲಾಖ್ ನೀಡಿದ ಗಂಡನಿಗೆ 3 ವರ್ಷಗಳ ಜೈಲು ಶಿಕ್ಷೆಯನ್ನು ಇದರಡಿ ವಿಧಿಸಬಹುದಾಗಿದೆ.
ಮೋದಿ ಸರ್ಕಾರದ ಮೊದಲ ಅವಧಿಯಲ್ಲೂ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿಂದಾಗಿ ಅಂಗೀಕರಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರ ಪುನರಾಯ್ಕೆಯಾದ ಬಳಿಕ ಮತ್ತೊಮ್ಮೆ ಲೋಕಸಭೆಯಲ್ಲಿ ಮಸೂದೆಯನ್ನು ಅನಾಯಾಸವಾಗಿ ಮಂಡನೆಗೊಳಿಸಲಾಗಿತ್ತು. ಮಂಗಳವಾರ ರಾಜ್ಯಸಭೆಯಲ್ಲೂ ಕೆಲ ಪ್ರತಿಪಕ್ಷಗಳ ಬೆಂಬಲದೊಂದಿಗೆ ಮಸೂದೆ ಅಂಗೀಕಾರವನ್ನು ಪಡೆದುಕೊಂಡಿದೆ.
ಸಂಸದೀಯ ನಿಯಮಗಳ ಪ್ರಕಾರ, ಲೋಕಸಭೆ ವಿಸರ್ಜನೆಯಾದರೆ ನೇರವಾಗಿ ರಾಜ್ಯಸಭೆಯಲ್ಲಿ ಮಂಡಿಸಲಾದ ಮಸೂದೆ ಅಂತ್ಯವಾಗುವುದಿಲ್ಲ. ಆದರೆ ಮಸೂದೆಯನ್ನು ಮೊದಲು ಲೋಕಸಭೆಯಲ್ಲಿ ಮಂಡನೆಗೊಂಡು ಬಳಿಕ ರಾಜ್ಯಸಭೆಗೆ ಹೋಗಿದ್ದ ಪಕ್ಷದಲ್ಲಿ, ಲೋಕಸಭೆ ವಿಸರ್ಜನೆಯಾದ ತಕ್ಷಣ ಮಸೂದೆಯೂ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ. ತ್ರಿವಳಿ ತಲಾಖ್ ಮಸೂದೆಯಲ್ಲೂ ಆಗಿದ್ದು ಅದೇ. ಮೋದಿ ಸರ್ಕಾರವು ಹೊಸ ಮಸೂದೆಯನ್ನು ಮತ್ತೆ ತರಬೇಕಾಯಿತು. ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿದರು. ನಂತರ ಮಸೂದೆಯನ್ನು ರಾಜ್ಯಸಭೆಗೆ ವರ್ಗಾಯಿಸಲಾಯಿತು. ಒಂದು ವೇಳೆ ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತವಿಲ್ಲದೇ ಇರುತ್ತಿದ್ದರೆ ಮಸೂದೆ ಅಲ್ಲೇ ಸಿಲುಕಿ ಹಾಕಿಕೊಳ್ಳುತ್ತಿತ್ತು.
ಪ್ರಸ್ತಾಪಿತ ಕಾಯ್ದೆಯಲ್ಲಿ ತಂದ ಬದಲಾವಣೆಗಳು ಇವು:
ಮಸೂದೆಯ ಹೊಸ ಕರಡು ಪ್ರಕಾರ, ಸುಗ್ರೀವಾಜ್ಞೆಯ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ. ಸಂತ್ರಸ್ಥ ಹೆಂಡತಿಯಿಂದ ಕಾರಣಗಳನ್ನು ಕೇಳಿದ ನಂತರ ಮ್ಯಾಜಿಸ್ಟ್ರೇಟ್ ಆರೋಪಿಗೆ ಕಾರಣಗಳ ಆಧಾರದ ಮೇಲೆ ಜಾಮೀನು ನೀಡುವ ಅಧಿಕಾರವಿದೆ. ಮದುವೆಯನ್ನು ಸಮನ್ವಯಗೊಳಿಸುವ ಹಕ್ಕೂ ಅವರಿಗೆ ಇದೆ.
ಮಸೂದೆಯ ಪ್ರಕಾರ, ಮ್ಯಾಜಿಸ್ಟ್ರೇಟ್ ನಿರ್ಧರಿಸುವವರೆಗೂ ಮಗು ತಾಯಿಯ ವಶದಲ್ಲಿರುತ್ತದೆ. ಆರೋಪಿ ಅವನಿಗೆ ತಕ್ಕಂತೆ ಬದುಕಬಹುದು. ಸಂತ್ರಸ್ಥ ಹೆಂಡತಿ ಅಥವಾ ಅವಳ ಕುಟುಂಬದ ಸದಸ್ಯರು ಎಫ್ಐಆರ್ ಹಾಕಿದಾಗ ಮಾತ್ರ ಮೂರು ತ್ರಿವಳಿ ತಲಾಖ್ ಅಪರಾಧವನ್ನು ಗುರುತಿಸಬಹುದು.
ಪ್ರಸ್ತಾವಿತ ಕಾಯ್ದೆಯಲ್ಲಿ 11 ಷರತ್ತುಗಳಿವೆ. ಮುನ್ನುಡಿಯಲ್ಲಿ ‘ವಿವಾಹಿತ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಮತ್ತು ವಿಚ್ಛೇದನವನ್ನು ತಲಾಖ್ ಎಂದು ಮೂರಿ ಬಾರಿ ಉಚ್ಚರಿಸುವುದರ ಮೂಲಕ ನೀಡುವುದನ್ನು ನಿಷೇಧಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕವಾದ ವಿಷಯಗಳನ್ನು ಒದಗಿಸುವುದು’. ಮೂರನೇ ಅಧ್ಯಾಯವು ಎಂಟು ಷರತ್ತುಗಳನ್ನು ಒಳಗೊಂಡಿದೆ.
ಎರಡನೇ ಅಧ್ಯಾಯವು ‘ತಲಾಖ್’ ಅನ್ನು ಅನೂರ್ಜಿತ ಮತ್ತು ಕಾನೂನುಬಾಹಿರ ಎಂದು ಘೋಷಿಸುತ್ತದೆ. ಯಾವುದೇ ರೂಪದಲ್ಲಿ ತಲಾಖ್ ಅನ್ನು ಉಚ್ಚರಿಸುವ ಮುಸ್ಲಿಂ ಪತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಇದು ಪ್ರತಿಪಾದಿಸುತ್ತದೆ.
ಮೂರನೆಯ ಅಧ್ಯಾಯವು ವಿವಾಹಿತ ಮುಸ್ಲಿಂ ಮಹಿಳೆಯರ ಹಲವಾರು ಹಕ್ಕುಗಳನ್ನು ವಿವರಿಸುತ್ತದೆ, ಉದಾಹರಣೆಗೆ ಮ್ಯಾಜಿಸ್ಟ್ರೇಟ್ ನಿರ್ಧರಿಸಿದಂತೆ ಜೀವನಾಧಾರ ಭತ್ಯೆ, ಅಪ್ರಾಪ್ತ ಮಕ್ಕಳ ಪಾಲನೆ ಹಕ್ಕು ಮಹಿಳೆಯರಿಗೆ ನೀಡುವುದು, ಈ ಕಾಯಿದೆಯಡಿ ಮಾಡಿದ ಅಪರಾಧವನ್ನು ಗುರುತಿಸುವುದು, ಜಾಮೀನು ನೀಡುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್ಗೆ ನೀಡುವುದು ಇತ್ಯಾದಿ.
ವಿಶ್ವದ ಎರಡನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಅತ್ಯಂತ ಸಾಂಪ್ರದಾಯವಾದಿ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ಹಳೆಯ ಪದ್ಧತಿಯೊಂದರ ಸಾಮಾಜಿಕ ಸುಧಾರಣೆ ಎಂದು ಈ ಕಾಯ್ದೆಯ ಮುನ್ನುಡಿಯಲ್ಲಿ ಬರೆಯಲಾಗಿದೆ.
ಒಟ್ಟಾರೆಯಾಗಿ ಸುದೀರ್ಘ ಸಮಯದಿಂದ ಭಾರೀ ಚರ್ಚೆಗಳನ್ನು ಹುಟ್ಟು ಹಾಕಿದ್ದ ತ್ರಿವಳಿ ತಲಾಖ್ ಮಸೂದೆಯನ್ನು ಉಭಯ ಸದನಗಳಲ್ಲೂ ಅಂಗೀಕರಿಸುವಲ್ಲಿ ಮೋದಿ ಸರ್ಕಾರ ಯಶಸ್ಸನ್ನು ಪಡೆದುಕೊಂಡಿದೆ. ಅಲ್ಪಸಂಖ್ಯಾತರ ರಕ್ಷಕರು ಎಂದು ಹೇಳಿಕೊಳ್ಳುವ ಪಕ್ಷಗಳು ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದು ನಿಜಕ್ಕೂ ದುರಾದೃಷ್ಟಕರ. ಅವರಿಗೆ ಮುಸ್ಲಿಂ ವೋಟ್ ಬ್ಯಾಂಕ್ ಬೇಕೇ ಹೊರತು ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಯಲ್ಲ. ಆದರೆ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಮೂಲಕ ಅವರಿಗೆ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.