ಗ್ರೇಟರ್ ನೊಯ್ಡಾ: ಗ್ರೇಟರ್ ನೊಯ್ಡಾದಲ್ಲಿನ ‘ಪಾಕಿಸ್ಥಾನ ವಾಲಿ ಗಲಿ’ ಕಾಲೋನಿಯ ಜನರು ತಮ್ಮ ಕಾಲೋನಿಯ ಹೆಸರನ್ನು ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಕಾಲೋನಿಯ ಹೆಸರಿನಿಂದಾಗಿ ನಮಗೆ ಸರ್ಕಾರದಿಂದ ಸಿಗುವ ಮೂಲಸೌಕರ್ಯಗಳು ಲಭ್ಯವಾಗುತ್ತಿಲ್ಲ ಎಂದು ಇಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ.
ಪಾಕಿಸ್ಥಾನ ಮತ್ತು ಭಾರತದ ವಿಭಜನೆಯ ವೇಳೆ ಪಾಕಿಸ್ಥಾನದಿಂದ ಬಂದ ಜನರು ಈ ಕಾಲೋನಿಯಲ್ಲಿ ನೆಲೆನಿಂತರು. ಈ ಹಿನ್ನಲೆಯಲ್ಲಿ ಈ ಕಾಲೋನಿಗೆ ‘ಪಾಕಿಸ್ಥಾನ ವಾಲಿ ಗಲಿ’ ಎಂದು ಹೆಸರಿಸಲಾಗಿದೆ.
“ನಮ್ಮ ಪೂರ್ವಜರು ಪಾಕಿಸ್ಥಾನದಿಂದ ಬಂದು ಇಲ್ಲಿ ನಿಂತಿರುವುದು ನಮ್ಮ ತಪ್ಪಲ್ಲ. ನಾವು ಭಾರತೀಯರು. ನಮ್ಮ ಹಿರಿಯರು ಅನೇಕ ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾರೆ. ಆದರೆ ನಮ್ಮ ಆಧಾರ್ ಕಾರ್ಡಿನಲ್ಲೂ ‘ಪಾಕಿಸ್ಥಾನ ವಾಲಿ ಗಲಿ’ ಎಂದೇ ಇದೆ. ನಾವು ಈ ದೇಶದ ಭಾಗವಾಗಿದ್ದೇವ. ಆದರೂ ಪಾಕಿಸ್ಥಾನ ಹೆಸರಿನಿಂದಾಗಿ ಈ ದೇಶದಿಂದ ಪ್ರತ್ಯೇಕಗೊಂಡಂತೆ ಬದುಕುತ್ತಿದ್ದೇವೆ” ಎಂದು ಇಲ್ಲಿನ ಜನರು ನೋವು ತೋಡಿಕೊಂಡಿದ್ದಾರೆ.
ನಮಗೆ ಉದ್ಯೋಗ ಬೇಕು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು ಎಂದು ಇವರು ಮನವಿ ಮಾಡಿಕೊಂಡಿದ್ದಾರೆ.
“ಆಧಾರ್ ಕಾರ್ಡ್ ತೋರಿಸಿದ ನಂತರವೂ ನಮಗೆ ಉದ್ಯೋಗ ದೊರಕುತ್ತಿಲ್ಲ. ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ನಾವು ಹಣ ಖರ್ಚು ಮಾಡುತ್ತೇವೆ ಆದರೂ ಅವರಿಗೆ ಉದ್ಯೋಗ ಸಿಗುತ್ತಿಲ್ಲ. ನಮಗೆ ತುಂಬಾ ತೊಂದರೆಯಾಗಿದೆ. ಈ ಕಾಲೋನಿ ಹೆಸರನ್ನು ಬದಲಾಯಿಸಿ ನಮಗೆ ಉದ್ಯೋಗ ಒದಗಿಸಿ ಎಂದು ನಾವು ಪ್ರಧಾನಿ ಮತ್ತು ಮುಖ್ಯಮಂತ್ರಿಯನ್ನು ವಿನಂತಿಸುತ್ತೇವೆ “ಎಂದು ಕಾಲೋನಿ ನಿವಾಸಿ ಭೂಪೇಶ್ ಕುಮಾರ್ ಹೇಳಿದ್ದಾರೆ.
ಇನ್ನೊಬ್ಬ ನಿವಾಸಿ ಮಾತನಾಡಿ, “ನಾವು ಬೇರೆ ದೇಶಕ್ಕೆ ಸೇರಿದವರಂತೆ ಜನರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ನಮ್ಮ ಕಾಲೋನಿಗೆ “ಪಾಕಿಸ್ಥಾನ ವಾಲಿ ಗಲಿ ” ಎಂದು ಹೆಸರಿಟ್ಟಿರುವುದು ಇದಕ್ಕೆ ಕಾರಣ. ನಮಗೆ ಮೋದಿ ಅವರ ಬಗ್ಗೆ ಅಪಾರ ನಿರೀಕ್ಷೆಗಳಿವೆ ಮತ್ತು ನಮ್ಮ ಧ್ವನಿಯನ್ನು ಅವರು ಆಲಿಸಿ ಕ್ರಮಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ” ಎಂದಿದ್ದಾರೆ.
ಕಾಲೋನಿಯಲ್ಲಿ ಸುಮಾರು 60-70 ನಿವಾಸಿಗಳಿದ್ದು, ಎಲ್ಲರೂ ತಮ್ಮ ಕಾಲೋನಿಯ ಹೆಸರು ಬದಲಾಗಬೇಕು ಎಂದು ಒಕ್ಕೊರಲ ಮನವಿಯನ್ನು ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.