ಹೈದರಾಬಾದ್: 21 ವರ್ಷದ ಅಮ್ಗೋತ್ ತುಕಾರಾಮ್ ಯುರೋಪ್ ಖಂಡದ ಅತ್ಯುನ್ನತ ಶಿಖರ ಮತ್ತು ವಿಶ್ವದ ಪ್ರಮುಖ ಶಿಖರವಾದ ಮೌಂಟ್ ಎಲ್ಬ್ರಸ್ ಅನ್ನು ಅತ್ಯಂತ ಯಶಸ್ವಿಯಾಗಿ ಹತ್ತಿದ್ದಾರೆ.
ರಷ್ಯಾದಲ್ಲಿ ಇರುವ ಮೌಂಟ್ ಎಲ್ಬ್ರಸ್ ಶಿಖರವು ಸಮುದ್ರ ಮಟ್ಟಕ್ಕಿಂತ 18,510 ಅಡಿ (5,642 ಮೀಟರ್) ಎತ್ತರದಲ್ಲಿದೆ.
ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯ ಯಾಚರಾಮ್ ಮಂಡಲದ ತೆಕೆಲಪಲ್ಲಿ ತಾಂಡಾ ಗ್ರಾಮದ ಮೂಲದವರಾದ ತುಕಾರಾಮ್ ಜುಲೈ 20 ರಂದು ತಮ್ಮ ಶಿಖರವನ್ನೇರುವ ಕಾರ್ಯವನ್ನು ಪ್ರಾರಂಭಿಸಿದರು ಮತ್ತು ಜುಲೈ 27 ರಂದು ಎಲ್ಬ್ರಸ್ನ ತುತ್ತ ತುದಿಯನ್ನು ಏರಿದ್ದಾರೆ.
ಇವರು 2018ರ ಜುಲೈ 22ರಂದು ಮೌಂಟ್ ಕಿಲಿಮಂಜಾರೊ ಮತ್ತು 2019ರ ಮೇ 22ರಂದು ಮೌಂಟ್ ಎವರೆಸ್ಟ್ ಅನ್ನು ಹತ್ತಿದ್ದಾರೆ. ಅದರ ನಂತರ ಇದೀಗ ಮೌಂಟ್ ಎಲ್ಬ್ರಸ್ ತುದಿಯನ್ನು ಏರಿದ ಸಾಧನೆಯನ್ನು ಮಾಡಿದ್ದಾರೆ. “ನಾನು ಜುಲೈ 27ರ ಬೆಳಿಗ್ಗೆ 7.45 ಕ್ಕೆ ಮೌಂಟ್ ಎಲ್ಬ್ರಸ್ ಅನ್ನು ಯಶಸ್ವಿಯಾಗಿ ಹತ್ತಿದ್ದೇನೆ. ಇದು ತುಂಬಾ ಸವಾಲಿನ ಕೆಲಸವಾಗಿತ್ತು, ಇದರಲ್ಲಿ ಯಶಸ್ಸನ್ನು ಕಾಣಲು ನನಗೆ ಸಾಧ್ಯವಾಗುದಿಲ್ಲ ಎಂದು ಭಾವಿಸಿದ್ದೆ. ಆದರೆ ಸಾಧ್ಯವಾಯಿತು” ಎಂದು ತುಕಾರಾಂ ಹೇಳಿಕೊಂಡಿದ್ದಾರೆ.
ಕೆಟ್ಟ ಹವಾಮಾನದಿಂದಾಗಿ ಅವರು ಶಿಖರ ಹತ್ತುವುದನ್ನು ವಿಳಂಬ ಮಾಡಿಕೊಳ್ಳಬೇಕಾಗಿ ಬಂತು. ಎರಡು ಮೂರು ದಿನಗಳ ಕಾಲ ಪರ್ವತದ ಶಿಬಿರದಲ್ಲಿ ಕಾಲ ಕಳೆಯಬೇಕಾಯಿತು. ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾದ ನಂತರ ಅವರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಪರ್ವತಾರೋಹಣವನ್ನು ಪೂರ್ಣಗೊಳಿಸಿದ್ದಾರೆ.
ತನ್ನ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುವುದು ತನ್ನ ಉದ್ದೇಶವಾಗಿತ್ತು ಎಂದು ಈ ಹೆಮ್ಮೆಯ ಪರ್ವತಾರೋಹಿ ಹೇಳಿಕೊಂಡಿದ್ದಾರೆ. ಪರ್ವತಾರೋಹಣಕ್ಕೆ ಆರ್ಥಿಕ ಸಮಸ್ಯೆಯನ್ನು ಎದುರಿಸಿರುವ ಇವರಿಗೆ ತೆಲಂಗಾಣದ ಐಎಎಸ್ ಅಧಿಕಾರಿ ನೆರವು ನೀಡಿದ್ದಾರೆ.
“ನನ್ನ ರಾಷ್ಟ್ರವನ್ನು ಹೆಮ್ಮೆ ಪಡಿಸುವುದು ನನ್ನ ಗುರಿ. ತೆಲಂಗಾಣದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ನನ್ನ ಪರ್ವತಾರೋಹಣಕ್ಕೆ ಆರ್ಥಿಕವಾಗಿ ಸಹಾಯ ಮಾಡಿದರು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.