ಸುಬ್ರಹ್ಮಣ್ಯ: ಅಡಿಕೆಗೆ ದರ ನಿಗದಿ ಮಾಡಲು ಕ್ಯಾಂಪ್ಕೋಗೆ ಈಗ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಡೀ ಅಡಿಕೆ ಬೆಳೆಯ ಶೇ.25 ರಷ್ಟೂ ಅಡಿಕೆ ಕ್ಯಾಂಪ್ಕೋಗೆ ಬರುತ್ತಿಲ್ಲ. ಬೆಳೆಗಾರರ ಸಂಪೂರ್ಣ ಸಹಕಾರದಿಂದ ಇಡೀ ಅಡಿಕೆ ಬೆಳೆಯ ಶೇ.50 ರಷ್ಟು ಕ್ಯಾಂಪ್ಕೋಗೆ ಬಂದರೆ ದರ ನಿಗದಿ ಮಾಡಲು ಸಾಧ್ಯವಿದೆ. ಆದರೆ ಈಗ ಅಡಿಕೆ ಬೆಲೆ ಸ್ಥಿರೀಕರಣಕ್ಕೆ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.
ಅವರು ಗುರುವಾರ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದೊಂದಿಗೆ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರದ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಕ್ಯಾಂಪ್ಕೋ ಅಡಿಕೆ ಖರೀದಿಯನ್ನು ನಿರಂತರ ಮಾಡುತ್ತಿದೆ. ಕ್ಯಾಂಪ್ಕೋ ಸಂಸ್ಥೆಯು ಬೆಳೆಗಾರರ ಇನ್ಸೂರೆನ್ಸ್ ಇದ್ದಂತೆ ಎಂದು ಭಾವಿಸಿ ಅಡಿಕೆ ಮಾರಾಟ ಮಾಡಬೇಕು. ಯಾರಿಗಾದರೂ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುವ ಅಡಿಕೆ ಖರೀದಿದಾರರಿಗೇ ಅಡಿಕೆ ಮಾರಾಟ ಮಾಡಿ ಎಂದ ಅವರು ಒಂದು ಕೆಜಿ ಅಡಿಕೆಗೆ 24 ರೂಪಾಯಿ ತೆರಿಗೆ ಹಾಗೂ 13 ರೂಪಾಯಿ ವೆಚ್ಚ ತಗಲುತ್ತದೆ. ಆದರೆ ಖಾಸಗಿ ವ್ಯಾಪಾರಿಗಳು ಬಿಳಿಚೀಟಿ ವ್ಯವಹಾರ ನಡೆಸಿ ಈ ತೆರಿಗೆ ತಪ್ಪಿಸಿ ಮಾರಾಟ ಮಾಡುತ್ತಾರೆ.
ಒಂದು ವೇಳೆ ಇಲ್ಲಿ ವಂಚನೆಯಾದರೆ ಯಾವುದೇ ದಾಖಲೆಗಳು ಇರುವುದಿಲ್ಲ. ಈ ಬಗ್ಗೆ ಬೆಳೆಗಾರರು ಎಚ್ಚರ ವಹಿಸಬೇಕು ಎಂದರು. ಅಡಿಕೆ ಧಾರಣೆ ಏರಿಕೆಗೆ ಕಳೆದ ಹಲವಾರು ಸಮಯಗಳಿಂದ ಕ್ಯಾಂಪ್ಕೋ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಅಡಿಕೆ ಉಪಯೋಗ ನಿಷೇಧ ಮಾಡುವುದಿಲ್ಲ ಎಂದು ಈಗಾಗಲೇ ಪ್ರಧಾನಮಂತ್ರಿಗಳು ಭರವಸೆ ನೀಡಿದ್ದಾರೆ. ಆಮದು ಅಡಿಕೆಗೆ ಕಡಿವಾಣ ಬಿದ್ದಿದೆ. ಅದರ ಜೊತೆಗೆ ಈಗ ಚೀನಾದ ಜೊತೆ ಮಾತುಕತೆ ನಡೆಯುತ್ತಿದೆ. ಹಸಿ ಅಡಿಕೆ ಖರೀದಿಗೆ ಚೀನಾ ಉತ್ಸಾಹ ತೋರಿದೆ. ಇದೆಲ್ಲಾ ಈಡೇರಿದರೆ ಅಡಿಕೆ ಬೆಳೆಗಾರಿಗೆ ಉತ್ತಮ ಧಾರಣೆ ಲಭ್ಯವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕ್ಯಾಂಪ್ಕೋ ಎಂ.ಡಿ. ಸುರೇಶ್ ಕುಮಾರ್ ಭಂಡಾರಿ ಮಾತನಾಡಿ, ಕ್ಯಾಂಪ್ಕೋ ವತಿಯಿಂದ 180ಕ್ಕೂ ಅಧಿಕ ಕಡೆಗಳಲ್ಲಿ ಅಡಿಕೆ ಖರೀದಿ ನಡೆಯುತ್ತಿದೆ. ವಾರದ 6 ದಿನವೂ ಅಡಿಕೆ ಹಾಗೂ ರಬ್ಬರ್, ಕೊಕೋ ಖರೀದಿ ಮಾಡುವ ಮೂಲಕ ಬೆಳೆಗಾರರಿಗೆ ಪ್ರಯೋಜನವಾಗುವ ರೀತಿಯಲ್ಲಿ ಪ್ರಯತ್ನವಾಗುತ್ತಿದೆ ಎಂದರು. ಪೈಪೋಟಿ ನಡುವೆ ಧಾರಣೆ ಸ್ಥಿರತೆಗೆ ಪ್ರಯತ್ನ ಮಾಡಲಾಗುತ್ತಿದೆ. ಒಂದು ಕೇಂದ್ರದ ಮೂಲಕ ವರ್ಷಕ್ಕೆ ಕನಿಷ್ಟ 5 ಸಾವಿರ ಕ್ವಿಂಟಾಲ್ ಅಡಿಕೆ ಖರೀದಿಯಾಗಬೇಕಾಗಿದೆ. ಈ ನಿಟ್ಟನಲ್ಲಿ ಎಲ್ಲಾ ಕೃಷಿಕರ ಸಹಕಾರ ಅಗತ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್, ಸಹಕಾರಿ ಸಂಘದ ಸಹಯೋಗದೊಂದಿಗೆ ವಾರದ ಎಲ್ಲಾ ದಿನವೂ ಅಡಿಕೆ ಖರೀದಿ ನಡೆಸುವ ಮೂಲಕ ಬೆಳೆಗಾರರಿಗೆ ಉತ್ತಮ ಹಾಗೂ ಸ್ಥಿರವಾದ ಧಾರಣೆ ಲಭ್ಯವಾಗುವಂತೆ ಪ್ರಯತ್ನವಾಗಿದೆ. ಮುಂದೆ ಎಲ್ಲಾ ಕೃಷಿಕರ ಸಹಕಾರ ಅಗತ್ಯವಿದೆ ಎಂದರು.
ಕೃಷಿಕರ ಪರವಾಗಿ ಪಿ.ಆರ್.ಪದ್ಮನಾಭ ಮಾತನಾಡಿ, ಕ್ಯಾಂಪ್ಕೋದಂತಹ ಸಹಕಾರಿ ಸಂಘದ ಮೂಲಕ ಅಡಿಕೆ ಧಾರಣೆ ಸ್ಥಿರವಾಗಲು ಹಾಗೂ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಮುಂದೆಯೂ ಖಾಸಗಿ ಖರೀದಿದಾರರೊಂದಿಗೆ ಪೈಪೋಟಿಗೆ ಇಳಿದು ಖರೀದಿ ನಡೆಸುವಂತಾಗಲಿ ಎಂದರು.
ಇದೇ ಸಂದರ್ಭದಲ್ಲಿ ಪ್ರಥಮವಾಗಿ ಅಡಿಕೆ ಮಾರಾಟ ಮಾಡಿದ ಕೃಷಿಕ ಕಿಶೋರ್ ಕುಮಾರ್ ಪೈಕ ಅವರಿಗೆ ಕ್ಯಾಂಪ್ಕೋ ಅಧ್ಯಕ್ಷರು ನಗದು ಬಹುಮಾನ ನೀಡಿದರು.
ವೇದಿಕೆಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ರಾಧಾಕೃಷ್ಣ ಕೋಟೆ, ಸಂಜೀವ ಮಟಂದೂರು, ಕ್ಯಾಂಪ್ಕೋ ಎಜಿಎಂ ಗೋಪಾಲಕೃಷ್ಣ ಆರಿಗ, ಕ್ಯಾಂಪ್ಕೋ ಮಾರುಕಟ್ಟೆ ಅಧಿಕಾರಿ ಲೋಕೇಶ್ ಕೆ.ಎಂ, ಕ್ಯಾಂಪ್ಕೋ ಸುಳ್ಯ ಶಾಖಾಧಿಕಾರಿ ಜಯರಾಮ ಶೆಟ್ಟಿ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷೆ ಮಂಜುಳಾ ಮುತ್ಲಾಜೆ ಉಪಸ್ಥಿತರಿದ್ದರು.
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ಸ್ವಾಗತಿಸಿ ಕಾರ್ಯನಿರ್ವಹಣಾಧಿಕಾರಿ ಶರತ್ ವಂದಿಸಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.