ನವದೆಹಲಿ: ಪ್ರಸ್ತುತ ಜರುಗುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನವನ್ನು 10 ದಿನಗಳವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನರೇಂದ್ರ ಮೋದಿ ಸರ್ಕಾರದ ಮಹತ್ವದ ವಿಧೇಯಕಗಳು ಚರ್ಚೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಹಾಗೂ ಮಸೂದೆಗಳನ್ನು ಅಂಗೀಕಾರಗೊಳಿಸುವ ನಿಟ್ಟಿನಲ್ಲಿ ಅಧಿವೇಶನವನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಈ ಹಿಂದಿನ ವರದಿಗಳು ಬಜೆಟ್ ಅಧಿವೇಶನ ಮೂರರಿಂದ ಐದು ದಿನಗಳವರೆಗೆ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೀಗ 10 ದಿನಗಳವರೆಗೆ ಅಧಿವೇಶನವನ್ನು ವಿಸ್ತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗೆಗಿನ ಅಂತಿಮ ನಿರ್ಧಾರ ಶೀಘ್ರದಲ್ಲೇ ಘೋಷಣೆಯಾಗಲಿದೆ.
ಈ ಹಿಂದೆ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನ ಮಂತ್ರಿಗಳು, ಅಧಿವೇಶನ ವಿಸ್ತರಣೆಯ ಸಾಧ್ಯತೆಯ ಬಗ್ಗೆ ಸಂಸತ್ ಸದಸ್ಯರಿಗೆ ತಿಳಿಸಿದ್ದರು. ಈ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಅವರು ಸಂಸದರಿಗೆ ತಿಳಿಸಿದ್ದರು.
ಬಜೆಟ್ ಅಧಿವೇಶನ ಜೂನ್ 17ರಂದು ಆರಂಭಗೊಂಡಿದೆ. ಇದು ಎರಡನೇಯ ಅವಧಿಯ ಮೋದಿ ಸರ್ಕಾರದ ಮೊದಲ ಅಧಿವೇಶನವಾಗಿದೆ. ಮೋದಿ ಸೇರಿದಂತೆ ಇತರ ಸದಸ್ಯರು ಸಂಸದರಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದರು. ಈ ಅಧಿವೇಶನದಲ್ಲಿ ಸ್ಪೀಕರ್ ಆಗಿ ಓಂ ಬಿರ್ಲಾ ಅವರನ್ನು ನೇಮಕ ಮಾಡಲಾಗಿದೆ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ್ದರು. 2019-20ರ ಸಾಲಿನ ಕೇಂದ್ರ ಬಜೆಟ್ ಅನ್ನೂ ಮಂಡಿಸಲಾಗಿದೆ.
ಈ ಅಧಿವೇಶನದಲ್ಲೇ ದೇಶದ ಮೊದಲ ಪೂರ್ಣಾವಧಿಯ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆಗೊಳಿಸಿದ್ದಾರೆ.
ಜುಲೈ 26ರಂದು ಬಜೆಟ್ ಕೊನೆಯಾಗಬೇಕಿತ್ತು. ಆದರೀಗ ಸರ್ಕಾರ ಬಜೆಟ್ ಅವಧಿಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.