ಶ್ರೀನಗರ: ಹುತಾತ್ಮ ಯೋಧ ಔರಂಗಜೇಬ್ ಅವರ ಇಬ್ಬರು ತಮ್ಮಂದಿರು ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ. ಅಣ್ಣನ ತ್ಯಾಗ ಮತ್ತು ಶೌರ್ಯದಿಂದ ಪ್ರೇರಿತಗೊಂಡು ಇವರಿಬ್ಬರು ಸೇನೆ ಸೇರಿದ್ದಾರೆ.
ಔರಂಗಜೇಬ್ ಸೋದರರಾದ ಮೊಹಮ್ಮದ್ ತಾರೀಖ್ ಮತ್ತು ಮೊಹಮ್ಮದ್ ಶಬ್ಬೀರ್ ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ ಎಂಬುದಾಗಿ ಅವರ ತಂದೆ ಹಾಗೂ ಮಾಜಿ ಯೋಧ ಮೊಹಮ್ಮದ್ ಹನೀಫ್ ತಿಳಿಸಿದ್ದಾರೆ. ದೇಶವನ್ನು ಮತ್ತು ದೇಶವಾಸಿಗಳನ್ನು ರಕ್ಷಣೆ ಮಾಡಿ ಸೇವೆ ಸಲ್ಲಿಸುವ ಸಲುವಾಗಿ ಸೇನೆಯನ್ನು ಅವರು ಸೇರಿಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಇಬ್ಬರೂ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ದೇಶಭಕ್ತಿ ಮತ್ತು ಶ್ರದ್ಧೆಯ ಯೋಧನಾಗಿದ್ದ ಔರಂಗಜೇಬ್ ಅವರ ಸಾವು ಈ ಇಬ್ಬರಿಗೂ ಸೇನೆ ಸೇರಲು ಪ್ರೇರಣೆ ನೀಡಿದೆ.
ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಔರಂಗಜೇಬ್ ಅವರನ್ನು ಅಪಹರಿಸಿದ್ದ ಉಗ್ರರು ಬಳಿಕ ಅವರನ್ನು ಕೊಂದು ಹಾಕಿದ್ದರು. ಈದ್ ಹಬ್ಬದ ಪ್ರಯುಕ್ತ ಅವರು ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು, ತಲೆಗೆ ಮತ್ತು ಕುತ್ತಿಗೆಗೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. 4ನೇ ಜಮ್ಮು ಮತ್ತು ಕಾಶ್ಮೀರ ಲೈಟ್ ಇಂಫಾಟ್ರಿಯ ಯೋಧ ಆಗಿದ್ದ ಇವರು, ಶೋಪಿಯಾನ್ ಶಾದಿಮಾರ್ಗ್ನ 44 ರಾಷ್ಟ್ರೀಯ ರೈಫಲ್ ಕ್ಯಾಂಪ್ಗೆ ನಿಯೋಜಿತರಾಗಿದ್ದರು. ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಔರಂಗಜೇಬ್ ಅವರಿಗೆ ಮರಣೋತ್ತರ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿದೆ.
ಅವರ ಸಾವಿನ ನಂತರ ಅವರ ಸೋದರರೂ ಸೇನೆಗೆ ಸೇರಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅದರಂತೆ ಅವರೀಗ ಸೇನೆಯನ್ನು ಸೇರ್ಪಡೆಗೊಂಡಿದ್ದು ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.