ವಾರಣಾಸಿ: ತಮಿಳೇತರರಿಗೆ ತಮಿಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಕಲಿಸಲು ಸಹಾಯಕವಾಗುವಂತೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭಾಷಾ ಪ್ರಯೋಗಾಲಯ (ಲ್ಯಾಂಗ್ವೇಜ್ ಲ್ಯಾಬ್) ಅನ್ನು ಸ್ಥಾಪನೆ ಮಾಡುತ್ತಿದೆ ತಮಿಳುನಾಡು. ತಮಿಳುನಾಡಿನ ಸಂಸ್ಕೃತಿ ಮತ್ತು ತಮಿಳು ಅಧಿಕೃತ ಭಾಷಾ ಸಚಿವ ಕೆ ಪಾಂಡಿಯರಾಜನ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ತಮಿಳು ಭಾಷೆಯನ್ನು ಎರಡನೇ ಭಾಷೆಯಾಗಿ ಆಯ್ಕೆ ಮಾಡುವ ವಿದ್ಯಾರ್ಥಿಗಳ ಬೋಧನಾ ಮತ್ತು ಹಾಸ್ಟೆಲ್ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಭಾರತದ ಅತ್ಯಂತ ಹಳೆಯ ಆಧುನಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಮದನ್ ಮೋಹನ್ ಮಾಳವಿಯಾ ಅವರ ನಾಯಕತ್ವದಲ್ಲಿ ಈ ವಿಶ್ವವಿದ್ಯಾಲಯವನ್ನು 1916 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿದೆ. ಇದು ‘ಏಷ್ಯಾದ ಅತಿದೊಡ್ಡ ವಸತಿ ವಿಶ್ವವಿದ್ಯಾಲಯ’ ಎಂಬ ಟ್ಯಾಗ್ ಅನ್ನು ಗಳಿಸಿದೆ, 30,000 ಕ್ಕೂ ಹೆಚ್ಚು ವಸತಿ ವಿದ್ಯಾರ್ಥಿಗಳು ಇಲ್ಲಿ ವಿವಿಧ ವಿಷಯಗಳಲ್ಲಿ ಅಧ್ಯಯನವನ್ನು ನಡೆಸುತ್ತಿದ್ದಾರೆ.
ತಮಿಳುನಾಡು ಸರ್ಕಾರವು ಇಲ್ಲಿ ಭಾಷಾ ಪ್ರಯೋಗಾಲಯವನ್ನು ಸ್ಥಾಪನೆ ಮಾಡಲು 9ಲಕ್ಷ ರೂಗಳನ್ನು ನೀಡಲಿದೆ, ಅಲ್ಲದೆ, ಫಿಜಿ ಮತ್ತು ಬ್ರಿಟಿಷ್ ಗಯಾನಾದ ತಮಿಳು ಭಾಷಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವ್ಯಾಕರಣ ಮತ್ತು ಸಾಹಿತ್ಯದ ಮೂಲಕ ತಮಿಳು ಕಲಿಕೆಯ ಬಗ್ಗೆ ತರಬೇತಿ ನೀಡಲು 30 ಲಕ್ಷ ರೂ.ಗಳನ್ನು ನೀಡಲಿದೆ.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಮೂಲಕ ‘ತಿರುಕ್ಕುರಲ್’ಗೆ “ವಿಶ್ವ ಪುಸ್ತಕ”ದ ಮಾನ್ಯತೆಯನ್ನು ತಂದುಕೊಡಲು ಪ್ರಯತ್ನಿಸಲಾಗುವುದು ಎಂದು ಪಾಂಡಿಯರಾಜನ್ ಹೇಳಿದ್ದಾರೆ.
2017 ರಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ತಮಿಳು ಪೀಠವನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ 10 ಕೋಟಿ ರೂ.ಗಳನ್ನು ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.