ಹರಿಯಾಣದ ಅಂಬಾಲ ಜಿಲ್ಲೆಯ ಬಾರಾ ಗ್ರಾಮದ ಸರಪಂಚ್ ಆಗಿರುವ ವಿಕಾಸ್ ಬೆಹ್ಗಲ್ ಅವರು, ನೀರಿನ ಸಂರಕ್ಷಣೆಯ ಪ್ರಯತ್ನದಲ್ಲಿ ಇತರರಿಗೆ ಮಾದರಿ ಎನಿಸಿದ್ದಾರೆ. ನೀರನ್ನು ಸಂರಕ್ಷಣೆ ಮಾಡುವಲ್ಲಿ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಮತ್ತು ದುರ್ಬಳಕೆಯನ್ನು ತಪ್ಪಿಸುವ ಮೂಲಕ ಅಂತರ್ಜಲವನ್ನು ವೃದ್ಧಿಸುವಲ್ಲಿನ ಇವರ ಪ್ರಯತ್ನಗಳು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಸರ್ಕಾರದ ಜಲ ಕ್ರಾಂತಿ ಅಭಿಯಾನದಡಿ ಬಾರಾ ಗ್ರಾಮದಲ್ಲಿ ಲಿಫ್ಟ್ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಅಳವಡಿಸುವಲ್ಲಿ ಬೆಹ್ಗಲ್ ಪಾತ್ರ ಮಹತ್ವದ್ದಾಗಿದೆ. ಅದಕ್ಕೂ ಮಿಗಿಲಾಗಿ ಸರಪಂಚ್ ಆಗಿರುವ ಬೆಹ್ಗಲ್ ಅವರು, ತನ್ನ ಸ್ವಂತ ಜಮೀನಿನಲ್ಲಿ ಭತ್ತವನ್ನು ಬಿತ್ತಲು ನೇರ ಬೀಜದ ಅಕ್ಕಿ (direct seeded rice) ತಂತ್ರವನ್ನು ಬಳಸಿದ್ದಾರೆ. ಅಲ್ಲದೇ, ಸಾಂಪ್ರದಾಯಿಕ ವಿಧಾನದ ಬದಲು ಭತ್ತಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ಗೆ ಭೇಟಿ ನೀಡಿದ್ದು ಅವರನ್ನು ನೀರಿನ ಸಂರಕ್ಷಣೆಯ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸಿದೆ. ಜಲಗಾಂವ್ ಅಕ್ಷರಶಃ ನೀರಿನ ಅಭಾವಕ್ಕೊಳಗಾಗಿತ್ತು, ನಾಲ್ಕು ದಿನಗಳಿಗೊಮ್ಮೆ ಅಲ್ಲಿನ ಜನರಿಗೆ ನೀರು ಪೂರೈಕೆಯಾಗುತ್ತಿತ್ತು. ಅದು ಕೂಡ ಕೆಲವೇ ಗಂಟೆಗಳ ಕಾಲ ಮಾತ್ರ. ಅಡುಗೆಗೆ ಮತ್ತು ಕುಡಿಯುವುದಕ್ಕೆ ಮಾತ್ರ ಇಲ್ಲಿನ ಜನ ಈ ನೀರನ್ನು ಬಳಸುತ್ತಿದ್ದರು. ಅಷ್ಟಕ್ಕೆ ಮಾತ್ರ ಈ ನೀರು ಸಾಕಾಗುತ್ತಿತ್ತು. ಹೀಗಾಗಿ ಇಲ್ಲಿನ ಜನರು ಮಳೆ ನೀರು ಕೊಯ್ಲಿನಲ್ಲಿ ನಿರತರಾಗಿದ್ದರು. ತಮ್ಮಿಂದಾದಷ್ಟು ಮಳೆ ನೀರನ್ನು ಸಂಗ್ರಹಿಸಿ ಇಡುತ್ತಿದ್ದರು. ಇದನ್ನು ಇತರ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದರು. ಇದು ಬೆಹ್ಗಲ್ ಅವರನ್ನು ಪ್ರೇರೇಪಿಸಿತ್ತು. 1994ರಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಅಧ್ಯಯನವನ್ನು ಅವರು ಆರಂಭಿಸಿದರು. ಅವರ ಗ್ರಾಮದಲ್ಲಿ ಅಂತರ್ಜಲದ ಮಟ್ಟ 80-100 ಅಡಿ ಇತ್ತು, ಅದು ಈಗ 350 ಅಡಿಗೆ ಇಳಿದಿದೆ ಎಂಬುದು ಅವರಿಗೆ ಮತ್ತಷ್ಟು ಆತಂಕವನ್ನು ತಂದಿತ್ತು.
ನೀರಿನ ಸಮರ್ಪಕವಾದ ಬಳಕೆಗಾಗಿ ಅವರು ಲಿಫ್ಟ್ ನೀರಾವರಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಮುಂದಾದರು. ಕೃಷಿ ಮತ್ತು ನೀರಾವರಿ ಇಲಾಖೆಗಳ ಅಧಿಕಾರಗಳ ಮಾರ್ಗದರ್ಶನವನ್ನು ಪಡೆದುಕೊಂಡು ಸೋಲಾರ್ ಮೂಲಕ ಲಿಫ್ಟ್ ನೀರಾವರಿಯನ್ನು ಅಳವಡಿಸಿದರು. ಪಂಚಾಯತ್ ಭೂಮಿಯಲ್ಲಿ ಈ ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಯಿತು ಮತ್ತು 5.04 ಲಕ್ಷ ಲೀಟರ್ ಸಂಗ್ರಹವಾಗುವ ನೀರಿನ ಟ್ಯಾಂಕ್ ಅನ್ನು ಸ್ಥಾಪನೆ ಮಾಡಲಾಯಿತು. ಈ ಒಂದೇ ಪ್ರಾಜೆಕ್ಟ್ 34 ಹೆಕ್ಟರ್ ಕೃಷಿ ಭೂಮಿಗೆ ನೀರನ್ನು ಒದಗಿಸುತ್ತದೆ. ಇದಕ್ಕೆ ಅಳವಡಿಸಲಾದ ಸೋಲಾರ್ ಸಾಮರ್ಥ್ಯ 5.5 ಕಿಲೋವ್ಯಾಟ್. ಸೋಲಾರ್ ಪಂಪ್ ಸಾಮರ್ಥ್ಯ 5 ಹಾರ್ಸ್ ಪವರ್.
ಬಾರಾ ಗ್ರಾಮದಲ್ಲಿ ಮತ್ತೊಂದು ನೀರಾವರಿ ಯೋಜನೆಯ ಕಾಮಗಾರಿಯೂ ನಡೆಯುತ್ತಿದ್ದು, ಬಹುತೇಕ ಅಂತಿಮ ಘಟ್ಟದಲ್ಲಿ ಇದೆ, ಈ ಋತುವಿನಲ್ಲೇ ಅದರ ಪ್ರಾಯೋಗಿಕ ಬಳಕೆ ನಡೆಯಲಿದೆ. ಇದು ಬರದ 131 ಹೆಕ್ಟರ್ ಕೃಷಿ ಭೂಮಿಗೆ ನೀರುಣಿಸಲಿದೆ. ಇದರ ವಾಟರ್ ಟ್ಯಾಂಕ್ ಸಾಮರ್ಥ್ಯ 23.37 ಲಕ್ಷ ಲೀಟರ್. ಈ ಪ್ರಾಜೆಕ್ಟ್ ವೆಚ್ಚ ರೂ.1.11 ಕೋಟಿ.
ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ತಮ್ಮ ಗ್ರಾಮಕ್ಕೆ ತಂದಿರುವ ಬೆಹ್ಗಲ್ ಅವರು, ಭತ್ತದ ಬೀಜ ಬಿತ್ತಲು direct seeded rice ವ್ಯವಸ್ಥೆಯನ್ನೂ ಯಶಸ್ವಿಯಾಗಿ ಪರಿಚಯಿಸಿದ್ದಾರೆ. ತನ್ನ ಹಳ್ಳಿಯ ಇತರ ರೈತರಿಗೆ ಒಂದು ಉದಾಹರಣೆಯಾಗಲು ಅವರು ತನ್ನ 1 ಎಕರೆ ಪ್ರದೇಶದಲ್ಲಿ ಭತ್ತವನ್ನು ಬಿತ್ತನೆ ಮಾಡುವ ಡಿಎಸ್ಆರ್ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು 1 ಲಕ್ಷ ರೂ.ಗಳ ವೆಚ್ಚದಲ್ಲಿ ಹನಿ-ನೀರಾವರಿ ವ್ಯವಸ್ಥೆಯನ್ನು ಸಹ ಸ್ಥಾಪಿಸಿದ್ದಾರೆ.
ಸಾಂಪ್ರದಾಯಿಕ ಭತ್ತದ ಬೀಜ ಬಿತ್ತನೆಯ ಕಾರ್ಯದಲ್ಲಿ ಅಧಿಕ ಪ್ರಮಾಣ ನೀರು ವ್ಯರ್ಥವಾಗುತ್ತದೆ ಮತ್ತು ಡಿಎಸ್ ಆರ್ ತಂತ್ರವು ನೀರಿನ ಉಳಿತಾಯವನ್ನು ಮಾಡುತ್ತದೆ. ಈ ವ್ಯವಸ್ಥೆ ಅತ್ಯುತ್ತಮವಾದ ಫಲಿತಾಂಶವನ್ನು ನೀಡಿರುವ ಹಿನ್ನಲೆಯಲ್ಲಿ ಅವರು ಇತರ ಗ್ರಾಮಸ್ಥರಿಗೂ ಈ ವ್ಯವಸ್ಥೆಯನ್ನು ಅಳವಡಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ.
ಬೆಹ್ಗಲ್ ಮಾಡಿರುವ ಪ್ರಯತ್ನಗಳಿಗೆ ಭಾರೀ ಜನ ಮೆಚ್ಚುಗೆಗಳು ವ್ಯಕ್ತವಾಗಿದೆ. “ಬಾರಾ ಗ್ರಾಮದ ಸರಪಂಚ್ ಯುವ, ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ ಮತ್ತು ನವೀನ ಚಿಂತನೆಗಳನ್ನು ಮಾಡಬಲ್ಲವರಾಗಿದ್ದಾರೆ. ನೀರಿನ ಸಂರಕ್ಷಣೆಯಲ್ಲಿ ಇತರ ರೈತರಿಗೆ ಮಾದರಿ ಎನಿಸಿದ್ದಾರೆ. ಅವರು ಸಾಧಿಸಿದ ಕಾರ್ಯಗಳು ಮೈಲಿಗಲ್ಲುಗಳಾಗಿವೆ.
ಅವರು ಅಳವಡಿಸಿದ ನೀರಿನ ಸಂರಕ್ಷಣಾ ಪದ್ಧತಿಗಳನ್ನು ಜಿಲ್ಲೆ, ರಾಜ್ಯ, ದೇಶಗಳಲ್ಲಿ ಅಳವಡಿಸುವ ಸಗತ್ಯವಿದೆ” ಎಂದು ಅಂಬಾಲದ ಕೃಷಿ ನಿರ್ದೇಶಕ ಡಾ.ಗಿರೀಶ್ ನಾಗ್ಪಾಲ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.