“ಹೆಚ್ಚಿನವರಂತೆ ನಾವು ಕೂಡ ನಿರ್ಲಕ್ಷ್ಯದ ಬದುಕನ್ನು ಬದುಕುತ್ತಿದ್ದೆವು. ನಮಗೆ ಬೇಕಾದುದನ್ನು ಬೇಕಾಬಿಟ್ಟಿಯಾಗಿ ಮಾಡುತ್ತಿದ್ದೆವು, ಆದರೆ ನಮ್ಮ ಭೂಮಿಗೆ ಅದರಿಂದ ಎಷ್ಟು ಹಾನಿಯಾಗುತ್ತದೆ ಎಂಬ ಬಗ್ಗೆ ನಾವು ಚಿಂತೆ ಮಾಡುತ್ತಲೇ ಇರಲಿಲ್ಲ. ಮನುಷ್ಯನ ಪ್ರಭಾವದಿಂದ ಭೂಮಿ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ನಮಗೆ ಅರಿವಾಗಿದ್ದು 2018ರಲ್ಲಿ. ಅದು ನಮ್ಮ ಹಸಿರು ಪ್ರಯಾಣದ ಆರಂಭವಾಗಿತ್ತು” ಎಂದು ಹೇಳುತ್ತಾರೆ 30 ವರ್ಷದ ಬೆಂಗಳೂರು ನಿವಾಸಿ ಅಕ್ಷತಾ ಭದ್ರಣ್ಣ. ಆಕೆ ತಮ್ಮ ಪತಿ ರಾಹುಲ್ ಪಗಡ್ ಅವರೊಂದಿಗೆ 2018ರಿಂದ ‘ಡೊಪೊಲಾಜಿ’ ಎಂಬ ಜನರಿಗೆ ಹಸಿರು ಜೀವನ ವಿಧಾನದ ಪರಿಚಯವನ್ನು ನೀಡುವ ಪರಿಸರ ಸ್ನೇಹಿ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇಂಡೋನೇಷ್ಯಾದಿಂದ ಬೆಂಗಳೂರಿಗೆ ಬಂದಿದ್ದ ಈ ದಂಪತಿ ಬೇಕಾಬಿಟ್ಟಿಯಾಗಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಂಡು ಹೌಹಾರಿ ಹೋಗಿದ್ದರು. ಸ್ವತಃ ತಾವು ಬಳಸುತ್ತಿದ್ದ ಪ್ಲಾಸ್ಟಿಕ್ ಪ್ರಮಾಣಗಳನ್ನು ಕಂಡು ನೊಂದು ಕೊಂಡಿದ್ದರು. ತಾವೇ ಕಸದಬುಟ್ಟಿಗೆ ನಿತ್ಯ ಹಾಕುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಂಡು ಬೇಸರಗೊಂಡಿದ್ದ ದಂಪತಿ, ಅದೇ ವರ್ಷ 10-12 cm ಪ್ಲಾಸ್ಟಿಕ್ ಸ್ಟ್ರಾ ಮೂಗಿಗೆ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದ ಆಮೆಯ ಬಗೆಗಿನ ವೈರಲ್ ವೀಡಿಯೋ ಕಂಡು ನೊಂದುಕೊಂಡಿದ್ದರು. ಈ ಘಟನೆ ಅವರನ್ನು ಹಸಿರು ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿತು. ಕೊನೆಗೂ ಇವರು ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯವನ್ನು ಆರಂಭಿಸಲು ಮುಂದಾದರು. ಪ್ಲಾಸ್ಟಿಕ್ ಮಾಲಿನ್ಯದ ಬಗೆಗಿನ ವರದಿ, ವೀಡಿಯೋಗಳನ್ನು ನೋಡಲಾರಂಭಿಸಿದರು, ಬೆಂಗಳೂರಿನ ತಮ್ಮ ಮನೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು, ಪರಿಸರ ಸ್ನೇಹಿಯನ್ನಾಗಿ ಪರಿವರ್ತಿಸಲು ದೃಢ ಸಂಕಲ್ಪ ತೊಟ್ಟರು. ಎಂಜಿನಿಯರಿಂಗ್ ಮಾಡಿದ ಅಕ್ಷತಾ ಅವರಿಗೆ, 7 ವರ್ಷಗಳ ಕಾಲ ವಿವಿಧ ಸಂಸ್ಥೆಗಳಲ್ಲಿ ದುಡಿದ ಅನುಭವವಿದೆ.
ಪ್ಲಾಸ್ಟಿಕ್ ಕಟ್ಲರಿಗಳ ಬಳಕೆಯನ್ನು ತ್ಯಜಿಸುವ ಮೂಲಕ ಅವರು ತಮ್ಮ ಹಸಿರು ಪ್ರಯಾಣವನ್ನು ಪ್ರಾರಂಭಿಸಿದರು. ಪ್ಲಾಸ್ಟಿಕ್ ಕಟ್ಲರಿಯನ್ನು ಅವರು ಸಾಂಪ್ರದಾಯಿಕ ಉಕ್ಕಿನ ಕಟ್ಲರಿಗೆ ಬದಲಾಯಿಸಿದ್ದಾರೆ. ನಿಧಾನವಾಗಿ ಅವರು ಬಿದಿರಿನ ಹಲ್ಲುಜ್ಜುವ ಬ್ರಷ್ಗೆ ಬದಲಾದರು, ಪ್ಲಾಸ್ಟಿಕ್ ಬ್ರಶ್ಗೆ ಗುಡ್ ಬೈ ಅಂದರು. ತಮ್ಮ ಮನೆಯ ಅಲಂಕಾರಿಕ ವಸ್ತುಗಳನ್ನು ಸಹ ಅವರು ಪರಿಸರ ಸ್ನೇಹಿ ವಿಧಾನಕ್ಕೆ ಬದಲಾಯಿಸಿದ್ದಾರೆ. ಮನೆಯಲ್ಲಿನ ಹಸಿ ಕಸವನ್ನು ಮಿಶ್ರಗೊಬ್ಬರವನ್ನಾಗಿ ಮಾಡಲು ಪ್ರಾರಂಭಿಸಿದರು. ಶಾಪಿಂಗ್ ಅನ್ನೂ ಬುದ್ದಿವಂತಿಕೆಯಿಂದ ಮಾಡಲು ಆರಂಭಿಸಿದ ಈ ದಂಪತಿ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ಹೊಂದಿರುವ ಅಥವಾ ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟ ಯಾವುದೇ ವಸ್ತುಗಳನ್ನು ತಮ್ಮ ಮನೆಗೆ ಕಟ್ಟುನಿಟ್ಟಾಗಿ ತರುವುದೇ ಇಲ್ಲ. ಇದರಿಂದಾಗಿ ಅವರ ಮನೆಯ ತಿಂಗಳ ತ್ಯಾಜ್ಯ ಶೇ. 80 ರಷ್ಟು ಕಡಿಮೆಯಾಗಿದೆ.
ತಮ್ಮ ಮನೆಯನ್ನು ಹಸಿರಿಗೆ ಪರಿವರ್ತಿಸಿಕೊಂಡ ಈ ದಂಪತಿಗೆ, ಭಾರತದಲ್ಲಿ ಪರಿಸರ ಸ್ನೇಹಿ ಜೀವನವನ್ನು ಆಧರಿಸುವುದು ತುಂಬಾ ದುಬಾರಿ ಎಂಬ ಅರಿವಾಗಿತ್ತು. ಸಾಂಪ್ರದಾಯಿಕ ವಸ್ತುಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಸಿರು ಅಥವಾ ಪರಿಸರ ಸ್ನೇಹಿ ಉತ್ಪನ್ನಗಳು ತುಂಬಾ ದುಬಾರಿಯಾಗಿದ್ದವು.
ಅಕ್ಷತಾ ಮತ್ತು ರಾಹುಲ್ ಅವರ ಹಸಿರು ಪ್ರಯಾಣವು ಬೆಂಗಳೂರಿನ ತಮ್ಮ ಹೊಸ ಮನೆಯನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ರಚಿಸಲು ನಿರ್ಧರಿಸಿದಾಗಲೇ ಪ್ರಾರಂಭವಾಯಿತು. ಒಂದು ಸಾಮಾನ್ಯ ಪ್ಲಾಸ್ಟಿಕ್ ಟೂತ್ ಬ್ರಷ್ ಬೆಲೆ ರೂ. 15 ನಿಂದ 20 ರೂ, ಆದರೆ ಅದಕ್ಕೆ ಪರ್ಯಾಯವಾಗಿರುವ ಪರಿಸರ ಸ್ನೇಹಿ ಬಿದಿರಿನ ಕುಂಚಕ್ಕೆ ರೂ. 200. ಈ ಅಂತರವನ್ನು ನಿವಾರಿಸಲು ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಸಾಮಾನ್ಯ ಮನುಷ್ಯನ ಉತ್ಪನ್ನವನ್ನಾಗಿ ಮಾಡಲು ಅವರು ಬಯಸಿದ್ದರು. ಇದಕ್ಕಾಗಿ ಡೊಪೊಲಾಜಿ ಉದ್ಯಮವನ್ನು ಆರಂಭಿಸಿದರು. ಇದನ್ನು 2018 ರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭಿಸಿದರು. ಈ ಉದ್ಯಮಕ್ಕಾಗಿ ತಮ್ಮ ಬಳಿ ಇದ್ದ ಎಲ್ಲಾ ಉಳಿತಾಯವನ್ನು ಹಾಕಿದರು.
ಆರಂಭದಲ್ಲಿ ಉದ್ಯಮ ತುಸು ಸಂಕಷ್ಟಕ್ಕೀಡಾಯಿತು. ಬಳಿಕ ಅಗ್ಗದ ದರ ಬಿದಿರಿನಿಂದ ಮಾಡಿದ ಟೂತ್ ಬ್ರಶ್ಗಳನ್ನು ಇವರು ಖರೀದಿ ಮಾಡಲು ಆರಂಭಿಸಿದರು. ಅದನ್ನು ತಮ್ಮ ಸೊಸೈಟಿ ಸಮಾರಂಭಗಳಿಗೆ ತೆಗದುಕೊಂಡು ಹೋದರು. ಅಲ್ಲಿ ಎರಡು ಗಂಟೆಯೊಳಗೆ ಅವರ ಪರಿಸರ ಸ್ನೇಹಿ ಬ್ರಶ್ಗಳು ಮಾರಾಟವಾಗುತ್ತಿದ್ದವು.
ಇವರಿಬ್ಬರೂ ತಮ್ಮ ಪರಿಸರ ಸ್ನೇಹಿ ವಸ್ತುಗಳನ್ನು ಸಣ್ಣ ಉತ್ಪಾದಕರಿಂದ ಖರೀದಿ ಮಾಡುತ್ತಾರೆ ಮತ್ತು ಅದನ್ನು ತಮ್ಮ ಆನ್ ಲೈನ್ ಮತ್ತು ಆಫ್ ಲೈನ್ ವೇದಿಕೆಯಲ್ಲಿ ಮಾರಾಟ ಮಾಡುತ್ತಾರೆ. ಈ ಸಂದರ್ಭದಲ್ಲಿ ದಂಪತಿ ಪೇಪರಿನಿಂದ ಪೆನ್ಸಿಲ್ ಮಾಡುವ ಬಗ್ಗೆ ಅರಿತುಕೊಂಡರು. ಇದರಿಂದ ಪ್ರೇರಣೆಯನ್ನು ಪಡೆದುಕೊಂಡು ಪೇಪರ್ ಮೂಲಕ ಪೆನ್ಸಿಲ್ ತಯಾರು ಮಾಡುವುದನ್ನು ಕಲಿತರು. ಪೆನ್ಸಿಲ್ ತಯಾರಿಕೆಗೆ ಮರಗಳನ್ನು ಬಳಸಲಾಗುತ್ತಿದೆ, ಹೀಗಾಗಿ ಪೇಪರಿನಿಂದ ಪೆನ್ಸಿಲ್ ಮಾಡಿದರೆ ಹಲವು ಮರಗಳನ್ನು ಉಳಿಸಬಹುದು ಎಂಬುದು ಈ ದಂಪತಿಯ ಅಭಿಪ್ರಾಯ.
2019ರಲ್ಲಿ ಈ ದಂಪತಿ ಚೀನಾದಿಂದ ಪೆನ್ಸಿಲ್ ಮೇಕಿಂಗ್ ಮೆಶಿನ್ ಅನ್ನು ಖರೀದಿ ಮಾಡಿದ್ದು, ಪರಿಸರ ಸ್ನೇಹಿ ಪೆನ್ಸಿಲ್ ತಯಾರಿಸಲು ಪ್ರಾರಂಭಿಸಿದ್ದಾರೆ. ನ್ಯೂಸ್ ಪೇಪರ್ ಅನ್ನು ಇವರು 18×18 cm ಆಗಿ ಕಟ್ ಮಾಡುತ್ತಾರೆ, ಬಳಿಕ ಅದನ್ನು ರೋಲ್ ಮಾಡುತ್ತಾರೆ. ರೋಲಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡುವಾಗ ಮೆಶಿನ್ ಲೆಡ್ಗಳನ್ನು ಸಂಪರ್ಕಿಸುತ್ತದೆ. ಬಳಿಕ 30 ನಿಮಿಷ ಅದನ್ನು ಒಣಗಲು ಬಿಡುತ್ತಾರೆ, ಬಳಿಕ 1 ಗಂಟೆ ಬೇಯಿಸುತ್ತಾರೆ. ಕೊನೆಯ ಹಂತವಾಗಿ ಪಾಲಿಶ್ ಮತ್ತು ಮೃದುಗೊಳಿಸುತ್ತಾರೆ.
ಅಕ್ಷತ ಮತ್ತು ರಾಹುಲ್ ಅವರ ಡೊಪೊಲಾಜಿಯಲ್ಲಿ ಈ ಪೆನ್ಸಿಲ್ ಒಂದು ಪ್ಯಾಕಿಗೆ ರೂ.50ಕ್ಕೆ ಸಿಗುತ್ತದೆ. ರೂ.120 ನೀಡಿದರೆ 10 ಕಲರ್ ಪೆನ್ಸಿಲ್ ಪ್ಯಾಕ್ ಸಿಗುತ್ತದೆ. ಅವರು ಸೃಷ್ಟಿಸಿರುವ ಸೋಶಿಯಲ್ ಮೀಡಿಯಾ ವೇದಿಕೆಯಲ್ಲೂ ಆನ್ ಲೈನ್ ಮೂಲಕ ಇದನ್ನು ಖರೀದಿ ಮಾಡಬಹುದಾಗಿದೆ.
ಲೆಡ್, ಈರುಳ್ಳಿ, ಕೊತ್ತಂಬರಿ ಬೀಜ ಬಳಸಿ ಇವರು ಸೀಡ್ ಪೆನ್ಸಿಲ್ ಅನ್ನೂ ತಯಾರಿಸುತ್ತಾರೆ, ಇದನ್ನು ಬಿಸಾಕಿದಾಗ ಇದು ಗಿಡವಾಗಿ ಬೆಳೆಯುತ್ತದೆ.
ಇಲ್ಲಿಯವರೆಗೆ, ದಂಪತಿಗಳು 20,000 ಕ್ಕೂ ಹೆಚ್ಚು ಪರಿಸರ ಸ್ನೇಹಿ ಪೆನ್ಸಿಲ್ಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಆ ಮೂಲಕ 6,000 ಹಳೆಯ ಪತ್ರಿಕೆಗಳನ್ನು ಮರುಬಳಕೆ ಮಾಡಿದ್ದಾರೆ. ಪೆನ್ಸಿಲ್ಗಳ ಜೊತೆಗೆ ಅವರು ಮಾರಿಗೋಲ್ಡ್ ಮತ್ತು ಜಾಸ್ಮಿನ್ ಹೂವಿನ ಬೀಜಗಳೊಂದಿಗೆ ಮರುಬಳಕೆಯ ಬೀಜದ ಕಾಗದವನ್ನು ತಯಾರಿಸುತ್ತಿದ್ದಾರೆ ಮತ್ತು ಆಮಂತ್ರಣ ಪತ್ರಗಳನ್ನು ತಯಾರಿಸುತ್ತಿದ್ದಾರೆ.
ಇತರ ಲೇಖನ ಸಾಮಗ್ರಿಗಳನ್ನು ತಯಾರಿಸುವ ಮೂಲಕ ತಮ್ಮ ಉದ್ಯಮವನ್ನು ವಿಸ್ತರಿಸಲು ಅವರು ಯೋಜಿಸಿದ್ದಾರೆ. ಪ್ರಸ್ತುತ, ದಂಪತಿಗಳು ಟೆಟ್ರಾ ಪ್ಯಾಕ್ ತ್ಯಾಜ್ಯಗಳಿಂದ ಶಾರ್ಪನರ್ಗಳನ್ನು ಮತ್ತು ಮರುಬಳಕೆಯ ರೂಲರ್ಸ್ಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.